ಧಾರವಾಡ: ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಆದೇಶ ವಾಪಸ್ ಪಡೆಯದಿದ್ದಲ್ಲಿ ಹೋರಾಟಕ್ಕೆ ಮಠಾಧೀಶರ ನಿರ್ಧಾರ
ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಆದೇಶವನ್ನು ವಾಪಸ್ ಪಡೆಯದಿದ್ದಲ್ಲಿ ಹೋರಾಟ ನಡೆಸಲು ಮಠಾಧೀಶರ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಕುರಿತು ಇಂದು ಧಾರವಾಡದಲ್ಲಿ ನಡೆದ ಮಠಾಧೀಶರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಧಾರವಾಡ: ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಆದೇಶವನ್ನು ವಾಪಸ್ ಪಡೆಯದಿದ್ದಲ್ಲಿ ಹೋರಾಟ ನಡೆಸಲು ಮಠಾಧೀಶರ ಸಭೆಯಲ್ಲಿ ನಿರ್ಧರಿಸಲಾಗಿದೆ. ಧಾರವಾಡದಲ್ಲಿ ನಡೆದ ಮಠಾಧೀಶರ ಸಭೆಯಲ್ಲಿ ಆದೇಶ ವಾಪಸ್‌ಗೆ ಸರ್ಕಾರಕ್ಕೆ ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಗಿದೆ. ಇಂದು (ಡಿ.04) ಧಾರವಾಡದಲ್ಲಿ ಬಸವ ಧರ್ಮ ಪೀಠ ಅಡಿಯ ಆರು ಪೀಠಾಧಿಪತಿಗಳ ನೇತೃತ್ವದಲ್ಲಿ ಅಕ್ಕಮಹಾದೇವಿ ಅನುಭಾವ ಪೀಠದಲ್ಲಿ ಸಭೆ ನಡೆಸಲಾಯಿತು. ಹದಿನೈದಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದರು. ಕೂಡಲ ಸಂಗಮ ಬಸವ ಧರ್ಮಪೀಠದ ಶ್ರೀ ಗಂಗಾದೇವಿ ಮಾತಾಜಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮೊಟ್ಟೆ ವಿತರಿಸುವ ಆದೇಶ ವಾಪಸ್ ಪಡೆಯುವಂತೆ ಸರ್ಕಾರಕ್ಕೆ ಆಗ್ರಹಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಆದೇಶ ವಾಪಸ್ ಪಡೆಯದಿದ್ದಲ್ಲಿ ಮುಂದೆ ಹೋರಾಟ ನಡೆಸಲು ನಿರ್ಧಾರಿಸಲಾಗಿದೆ.
ಶಾಲೆಗಳಲ್ಲಿ ಮೊಟ್ಟೆ ವಿತರಣೆಯನ್ನು ಸರ್ಕಾರ ಕೈಗೊಂಡಿದ್ದೇಕೆ? ಶಿಕ್ಷಣ ಇಲಾಖೆ ಅಪೌಷ್ಟಿಕತೆ, ರಕ್ತಹೀನತೆ ಹೊಂದಿರುವ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲು ಮುಂದಾಗಿದ್ದು, ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡಲು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿತ್ತು. 7 ಜಿಲ್ಲೆಗಳ ಶಾಲಾ ಮಕ್ಕಳಿಗೆ ಬೇಯಿಸಿದ ಮೊಟ್ಟೆ ವಿತರಣೆಗೆ ಮಾಡಲಾಗುತ್ತಿದ್ದು ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದೆ. ಆದರೆ ಇದಕ್ಕೆ ಹಲವು ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ.
ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ವಿರೋಧವೇಕೆ? ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ನೀಡುವ ಯೋಜನೆಗೆ ರಾಷ್ಟ್ರೀಯ ಲಿಂಗಾಯತ ಧರ್ಮ, ಮಹಾ ಸಭಾ ಬಸವ ಮಂಟಪದ ಜಗದ್ಗುರುಗಳು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಕೋಳಿ ಮೊಟ್ಟೆ ಸಂಪೂರ್ಣವಾಗಿ ಮಾಂಸಾಹಾರವಾಗಿದೆ. ಮೊಟ್ಟೆ ಕೊಡುವುದರಿಂದ ಧಾರ್ಮಿಕ ನಂಬಿಕೆಗೆ ಧಕ್ಕೆ ಆಗುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಸರ್ವಸಮ್ಮತ ಆಹಾರವನ್ನು ನೀಡಬೇಕು. ಶಾಲೆಯಲ್ಲಿ ಮೊಟ್ಟೆ ಕೊಡುವುದರಿಂದ ಸಸ್ಯಹಾರಿ, ಮಾಂಸಹಾರಿ ಎಂಬ 2 ಗುಂಪು ರಚನೆಯಾಗತ್ತೆ. ಹೀಗಾಗಿ ಸರ್ಕಾರ ತಕ್ಷಣ ಈ ಆದೇಶವನ್ನು ಹಿಂಪಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ನಿರ್ಧಾರ ವಾಪಸ್ ತೆಗೆದುಕೊಳ್ಳದೇ ಇದ್ದರೆ ಹೋರಾಟ ನಡೆಸಲು ಇಂದಿನ ಮಠಾಧೀಶರ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇದನ್ನೂ ಓದಿ:
ಒಮಿಕ್ರಾನ್ನಿಂದ ದಕ್ಷಿಣ ಆಫ್ರಿಕಾದಲ್ಲಿ ಸೋಂಕಿತರ ಪ್ರಮಾಣ ಆರು ಪಟ್ಟು ಹೆಚ್ಚಳ: ಭಾರತದಲ್ಲಿ ಹೆಚ್ಚಾಗುತ್ತಿದೆ ಆತಂಕ