ಮನೆಗೆ ಬಂದು ಬಾಲಕನಿಗೆ ಇಂಜೆಕ್ಷನ್​​ ಚುಚ್ಚಿ ಹೋದ ಮುಸುಕುಧಾರಿಗಳು: ಗ್ರಾಮದಲ್ಲಿ ಆತಂಕ

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದಲ್ಲಿ 11 ವರ್ಷದ ಬಾಲಕನಿಗೆ ಮುಸುಕುಧಾರಿಗಳು ಇಂಜೆಕ್ಷನ್ ಚುಚ್ಚಿ ಪರಾರಿಯಾಗಿದ್ದಾರೆಂಬ ಆರೋಪ ಕೇಳಿಬಂದಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಆತಂಕ ಮನೆಮಾಡಿದ್ದು, ಬಾಲಕನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಸತ್ಯಾಸತ್ಯತೆ ಕುರಿತು ಕುಂದಗೋಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮನೆಗೆ ಬಂದು ಬಾಲಕನಿಗೆ ಇಂಜೆಕ್ಷನ್​​ ಚುಚ್ಚಿ ಹೋದ ಮುಸುಕುಧಾರಿಗಳು: ಗ್ರಾಮದಲ್ಲಿ ಆತಂಕ
ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)
Image Credit source: tv9 kannada
Edited By:

Updated on: May 22, 2026 | 3:05 PM

ಹುಬ್ಬಳ್ಳಿ, ಮೇ 22: ಮನೆಯಲ್ಲಿ ಆಟವಾಡಿಕೊಂಡಿದ್ದ ಬಾಲಕನಿಗೆ (Boy) ಅಪರಿಚಿತ ಮುಸುಕುಧಾರಿಗಳು ಇಂಜೆಕ್ಷನ್ (injection) ಚುಚ್ಚಿ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಧಾರವಾಡ (dharwad) ಜಿಲ್ಲೆಯ ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಣಿಕಂಠ ಗಾಣಿಗೇರ (11) ಎಂಬ ಬಾಲಕನಿಗೆ ಇಂಜೆಕ್ಷನ್ ಚುಚ್ಚಲಾಗಿದ್ದು, ಇದು ಸಹಜವಾಗಿ ಗ್ರಾಮೀಣ ಭಾಗದಲ್ಲಿ ಆತಂಕ ಮನೆ ಮಾಡಿದೆ. ಸದ್ಯ ಬಾಲಕನನ್ನು ಹುಬ್ಬಳ್ಳಿ ಕಿಮ್ಸ್​​ಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುಖ್ಯಾಂಶಗಳು

  • ಬಾಲಕನಿಗೆ ಇಂಜೆಕ್ಷನ್ ಚುಚ್ಚಿ ಮುಸುಕುಧಾರಿಗಳು ಎಸ್ಕೇಪ್​​
  • ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದಲ್ಲಿ ಆತಂಕ
  • ಕುಂದಗೋಳ ಪೊಲೀಸರಿಂದ ತನಿಖೆ ಆರಂಭ

ನಡೆದಿದ್ದೇನು?

ಬೈಕ್​​ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ಮುಸುಕುಧಾರಿಗಳು ಮಣಿಕಂಠ ಗಾಣಿಗೇರಗೆ ಇಂಜೆಕ್ಷನ್ ಚುಚ್ಚಿ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಸ್ವತಃ ಬಾಲಕ ಹೇಳುವ ಪ್ರಕಾರ, ‘ನಾನು ಮನೆಯಲ್ಲಿ ಆಟವಾಡುತ್ತಿದ್ದೆ. ಹೆತ್ತವರು ಕೆಲಸಕ್ಕೆ ಹೊಲಕ್ಕೆ ಹೋಗಿದ್ದರು. ಮಧ್ಯಾಹ್ನ ಊಟ ಮಾಡಿ ಮನೆಯಲ್ಲಿದ್ದಾಗ, ಇಬ್ಬರು ಮುಸುಕು ಹಾಕಿಕೊಂಡು ಬೈಕ್ ಮೇಲೆ ಬಂದಿದ್ದರು. ನಿಮ್ಮ ತಂದೆ-ತಾಯಿ ಎಲ್ಲಿ ಅಂತ ಕೇಳಿದರು. ನಾನು ಹೊಲಕ್ಕೆ ಹೋಗಿದ್ದಾರೆ ಅಂತ ಹೇಳಿದೆ. ಅವರಿಬ್ಬರು ಏಕಾಏಕಿ ನನ್ನ ಗಟ್ಟಿಯಾಗಿ ಹಿಡಿದರು. ನಾನು ಕಚ್ಚಲು ಮುಂದಾದೆ, ಆಗ ಬಾಯಿಯನ್ನು ಕೂಡ ಗಟ್ಟಿಯಾಗಿ ಹಿಡಿದು ನನ್ನ ಎಡಗೈಗೆ ಇಂಜೆಕ್ಷನ್ ಮಾಡಿ ಹೋದರು. ನಾನು ಸ್ವಲ್ಪ ಹೊತ್ತು ಮೂರ್ಛೆ ಹೋಗಿದ್ದೆ. ಸಂಜೆ ತಂದೆ-ತಾಯಿ ಮನೆಗೆ ಬರುತ್ತಿದ್ದಂತೆ ನಡೆದಿರುವ ಘಟನೆ ಬಗ್ಗೆ ಹೇಳಿದ್ದೇನೆ’ ಎಂದಿದ್ದಾನೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲೊಂದು ಕರುಳು ಹಿಂಡುವ ಘಟನೆ: ಮಗನ ಜೀವ ಉಳಿಸಲು ಕಿವಿಯೋಲೆ ಮಾರಿದ ತಾಯಿ

ಇನ್ನು ಪೋಷಕರು ಗ್ರಾಮದಲ್ಲಿ ಮಕ್ಕಳಿಗೆ ಯಾರಾದರೂ ಇಂಜೆಕ್ಷನ್ ಮಾಡಿದ್ದಾರಾ ಅಂತ ವಿಚಾರಿಸಿದ್ದಾರೆ. ಗ್ರಾಮದ ಬೇರೆ ಯಾವ ಮಕ್ಕಳಿಗೂ ಯಾರು ಇಂಜೆಕ್ಷನ್ ಮಾಡಿಲ್ಲ. ಇಂಜೆಕ್ಷನ್ ಮಾಡಲು ಯಾರು ಕೂಡ ಬಂದಿಲ್ಲ ಅಂತ ಗೊತ್ತಾಗಿದೆ. ಹೀಗಾಗಿ ಕೂಡಲೇ ಬಾಲಕನನ್ನು ಕುಂದಗೋಳ ಸರ್ಕಾರಿ ಆಸ್ಪತ್ರೆಗೆ ಹೆತ್ತವರು ಕರೆದುಕೊಂಡು ಹೋಗಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್​ಗೆ ಕರೆದುಕೊಂಡು ಬಂದು ದಾಖಲಿಸಿದ್ದಾರೆ.

ಬಾಲಕನಿಗೆ ಯಾರೋ ಅಪರಿಚಿತರು ಬಂದು ಇಂಜೆಕ್ಷನ್ ಮಾಡಿ ಹೋಗಿದ್ದಾರೆ ಅನ್ನೋ ಸುದ್ದಿ ನೆಲಗುಡ್ಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದೆ. ಹೆತ್ತವರು ತಮ್ಮ ಮಕ್ಕಳನ್ನು ಮನೆ ಹೊರಗಡೆ ಬಿಡಲು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ ಬಾಲಕನ ಮಾತುಗಳಲ್ಲಿ ಅನೇಕ ಅನುಮಾನಗಳು ಮೂಡಿವೆ. ಬಾಲಕ ಮಣಿಕಂಠ, ತನಗೆ ಇಂಜೆಕ್ಷನ್ ಮಾಡಿದ್ದಾರೆ ಅಂತ ಸ್ಪಷ್ಟವಾಗಿ ಹೇಳುತ್ತಿದ್ದಾನೆ. ಆದರೆ ಗ್ರಾಮದಲ್ಲಿ ಇಬ್ಬರು ಬೈಕ್ ಮೇಲೆ ಬಂದು ಬಾಲಕನಿಗೆ ಇಂಜೆಕ್ಷನ್ ಮಾಡಿದ್ದನ್ನು ಬೇರೆಯವರು ನೋಡಿಲ್ಲ. ಜೊತೆಗೆ ಬೇರೆ ಯಾವ ಮಕ್ಕಳಿಗೂ ಇಂಜೆಕ್ಷನ್ ಮಾಡಿಲ್ಲ. ಬಾಲಕನ ಕೈ ಮೇಲೆ ಇಂಜೆಕ್ಷನ್ ಮಾಡಿರುವ ಯಾವುದೇ ಗುರುತುಗಳು ಕೂಡ ಸ್ಪಷ್ಟವಾಗಿ ಕಾಣುತ್ತಿಲ್ಲ. ಈ ಬಗ್ಗೆ ಆತನ ಹೆತ್ತವರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.

ಹೆತ್ತವರು ಹೇಳಿದ್ದಿಷ್ಟು

‘ನಮ್ಮ ಮಗ ನನಗೆ ಇಂಜೆಕ್ಷನ್ ಮಾಡಿದ್ದಾನೆ ಅಂತ ಹೇಳಿದ್ದಾನೆ. ನಾವು ಆತನಿಗೆ ಅನೇಕ ಬಾರಿ ಕೇಳಿದರು ಅದನ್ನೇ ಹೇಳಿದ್ದಾನೆ. ಹೀಗಾಗಿ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದೇವೆ’ ಎಂದು ಮಣಿಕಂಠ ತಾಯಿ ಸುಜಾತಾ ಹೇಳಿದ್ದಾರೆ. ಇನ್ನು ಹುಬ್ಬಳ್ಳಿ ಕಿಮ್ಸ್ ವೈದ್ಯರು, ಬಾಲಕನ ಆರೋಗ್ಯದಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ. ಯಾವುದೇ ಇಂಜೆಕ್ಷನ್ ಮಾಡಿರುವ ಗುರುತುಗಳು ಸ್ಪಷ್ಟವಾಗಿ ಕಂಡಿಲ್ಲ. ಹೀಗಾಗಿ ಪರೀಕ್ಷೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಮಗುವಿನ ಹೊಟ್ಟೆಯಲ್ಲಿದ್ದ 25 ಸೆಂ.ಮೀ ಕೂದಲಿನ ಗುಡ್ಡೆ ಹೊರಗೆ ತೆಗೆದ ವೈದ್ಯರು!

ಇನ್ನು ಬಾಲಕನಿಗೆ ಇಂಜೆಕ್ಷನ್ ಮಾಡಿರುವ ಬಗ್ಗೆ ಅಸಲಿಯತ್ತು ತಿಳಿಯುವ ನಿಟ್ಟಿನಲ್ಲಿ ಕುಂದಗೋಳ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮತ್ತೊಂದಡೆ ಹುಬ್ಬಳ್ಳಿ ಕಿಮ್ಸ್​ನಲ್ಲಿ ಬಾಲಕನ ಬ್ಲಡ್ ಟೆಸ್ಟ್, ಎಕ್ಸ್ ರೇ ಕೂಡ ಮಾಡಲಾಗುತ್ತಿದೆ. ವೈದ್ಯಕೀಯ ವರದಿ ಮತ್ತು ಪೊಲೀಸರ ತನಿಖೆ ನಂತರವೇ, ಬಾಲಕನಿಗೆ ಯಾರಾದರು ಇಂಜೆಕ್ಷನ್ ಮಾಡಿದರಾ ಅಥವಾ ಈ ಘಟನೆ ಹಿಂದೆ ಬೇರೆ ಏನಾದರೂ ಉದ್ದೇಶ ಇದೆಯಾ ಅನ್ನೋದು ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Sanjayya Chikkamath

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ನಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಕೊಪ್ಪಳಕ್ಕೆ ಬಂದು ನಿಂತಿದೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Follow Us