ಕೇಂದ್ರದ ಅನುದಾನ ವಿಚಾರದಲ್ಲಿ ತಾರತಮ್ಯವಾಗಿದೆ: ಸಿಟಿ ರವಿ ಹೇಳಿಕೆಗೆ ಸಚಿವ ಸಂತೋಷ್​ ಲಾಡ್​ ತಿರುಗೇಟು

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸಂತೋಷ್​ ಲಾಡ್, ಕೇಂದ್ರದ ಅನುದಾನ ವಿಚಾರದಲ್ಲಿ ತಾರತಮ್ಯವಾಗಿದೆ. ಆ ಬಗ್ಗೆ ಚರ್ಚೆ ಮಾಡಲಿ ಎಂದು ಮಾಜಿ ಸಚಿವ ಸಿಟಿ.ರವಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಕೇಂದ್ರ ಸರ್ಕಾರ ಮೊದಲು‌ ದೇಶದ ಸಾಲದ‌ ಬಗ್ಗೆ ಶ್ವೇತ ಪತ್ರವನ್ನ ಹೊರಡಿಸಬೇಕು ಎಂದು ಕಿಡಿಕಾರಿದ್ದಾರೆ.

ಕೇಂದ್ರದ ಅನುದಾನ ವಿಚಾರದಲ್ಲಿ ತಾರತಮ್ಯವಾಗಿದೆ: ಸಿಟಿ ರವಿ ಹೇಳಿಕೆಗೆ ಸಚಿವ ಸಂತೋಷ್​ ಲಾಡ್​ ತಿರುಗೇಟು
ಸಚಿವ ಸಂತೋಷ್​ ಲಾಡ್
Edited By:

Updated on: Jan 15, 2024 | 3:30 PM

ಹುಬ್ಬಳ್ಳಿ, ಜನವರಿ 15: ಕೇಂದ್ರದ ಅನುದಾನ ವಿಚಾರದಲ್ಲಿ ತಾರತಮ್ಯವಾಗಿದೆ. ಆ ಬಗ್ಗೆ ಚರ್ಚೆ ಮಾಡಲಿ ಎಂದು ಮಾಜಿ ಸಚಿವ ಸಿಟಿ.ರವಿ ಹೇಳಿಕೆಗೆ ಸಚಿವ ಸಂತೋಷ್​ ಲಾಡ್​ (Santosh Lad) ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2014 ರಲ್ಲಿ 55 ಲಕ್ಷ ಕೋಟಿ‌ ರೂ. ಇದ್ದ ಸಾಲ ಇಂದು 205 ಲಕ್ಷ ಕೋಟಿ‌ ರೂ. ಆಗಿದೆ. ಕೇಂದ್ರ ಸರ್ಕಾರ ಮೊದಲು‌ ದೇಶದ ಸಾಲದ‌ ಬಗ್ಗೆ ಶ್ವೇತ ಪತ್ರವನ್ನ ಹೊರಡಿಸಬೇಕು. ಕೇಂದ್ರದಿಂದ ಇನ್ನೂ ಬರ ಪರಿಹಾರವೇ ಬಂದಿಲ್ಲ. ಸಿಟಿ.ರವಿ ಆ ಬಗ್ಗೆ ಚರ್ಚೆ ಮಾಡಲಿ ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರಗಳ‌ ತೆರಿಗೆ ಹಣವೇ ಕೇಂದ್ರಕ್ಕೆ ಹೋಗುತ್ತೆ

ಕೇಂದ್ರ ಸರ್ಕಾರಕ್ಕೆ ಹಣ ಎಲ್ಲಿಂದ ಹೋಗುತ್ತದೆ. ರಾಜ್ಯ ಸರ್ಕಾರಗಳ‌ ತೆರಿಗೆ ಹಣವೇ ಕೇಂದ್ರಕ್ಕೆ ಹೋಗುತ್ತೆ. ಪ್ರತಿಯೊಂದು ಕೇಳಬೇಕಿರುವುದು ನಮ್ಮ‌ ಹಕ್ಕು. ಅವರು ಯಾಕೆ ದಾನ‌ಕೊಟ್ಟ ಹಾಗೆ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಅನಂತಕುಮಾರ್ ಹೆಗಡೆಗೆ ಮಾನಸಿಕ ಸ್ಥಿಮಿತ ಇಲ್ಲ: ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ

ಬಜೆಟ್ ಗಾತ್ರದ ಮೇಲೆ ನಮಗೆ ಅನುದಾನ‌ ನಿಗದಿಯಾಗುತ್ತೆ. ನಾವು ಎಷ್ಟು ಕೊಡುತ್ತಿದ್ದೇವೆ ನಮಗೆ ಎಷ್ಟು ಬರುತ್ತಿದೆ ಅನ್ನೋದೇ ನಮ್ಮ‌ ಪ್ರಶ್ನೆ. ಇದು ಸಿಟಿ ರವಿ ಅವರಿಗೆ ಗೊತ್ತಿಲ್ಲ, ಅದರ ಬಗ್ಗೆ ಉತ್ತರ ನೀಡಲಿ. ಪ್ರತಿ ವರ್ಷ ಎಲ್ಲ‌ ಸರ್ಕಾರದ ಅವಧಿಯಲ್ಲೂ‌ ಆದಾಯ ಹೆಚ್ಚಾಗುತ್ತೆ. ಸಿಟಿ ರವಿಯವರು ಈ ಬಗ್ಗೆ ಚರ್ಚೆ ಮಾಡಲಿ ಎಂದು ಹೇಳಿದ್ದಾರೆ.

ರಾಮ‌ಮಂದಿರದ ಬಗ್ಗೆ ಇಷ್ಟೊಂದು ಪ್ರಚಾರ ಯಾಕೆ?

ರಾಮ‌ಮಂದಿರ ಭೇಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಯೂಟರ್ನ್ ವಿಚಾರವಾಗಿ ಮಾತನಾಡಿದ ಅವರು, ಅಭಿಪ್ರಾಯಗಳನ್ನ ಯಾವ ರೀತಿಯಾದರೂ ವ್ಯಕ್ತಪಡಿಸಬಹುದು. ಇದರಲ್ಲಿ ಯೂಟರ್ನ್ ಹೊಡೆಯವು ಪ್ರಮೇಯವಿಲ್ಲ. ಬಿಜೆಪಿಯವರು ನೂರಾರು ಹೇಳಿಕೆ‌ ನೀಡಿ ಯೂಟರ್ನ್ ಹೊಡೆಯುತ್ತಾರೆ. ರಾಮ‌ಮಂದಿರದ ಬಗ್ಗೆ ಇಷ್ಟೊಂದು ಪ್ರಚಾರ ಯಾಕೆ? ಚುನಾವಣೆ ಮುಗಿಯುವವರೆಗೂ ಮಾತ್ರ ಈ ಪ್ರಚಾರ. ದೇಶದ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ‌ ನಾವು ಸಿದ್ಧರಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯ ರಾಮಲಲ್ಲಾ ಪೂಜೆಗೆ ಧರ್ಮಸ್ಥಳ ಬೆಳ್ಳಿ ಪರಿಕರಗಳು ರವಾನೆ

ರಾಮ‌ಮಂದಿರಕ್ಕೆ ಶಂಕರಾಚಾರ್ಯರು ಬಹಿಷ್ಕಾರ ಹಾಕಿದ್ದಾರೆ ಅದನ್ನು ಮೀರಿ ಬಿಜೆಪಿಯವರಿದ್ದಾರಾ? ಈ ಬಗ್ಗೆ ಯಾಕೆ ಚರ್ಚೆಗಳಾಗುತ್ತಿಲ್ಲ? ಕೇಂದ್ರದಲ್ಲಿ ಅವರಿಗೆ ಅಧಿಕಾರವಿದೆ ಅದನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಭಿವೃದ್ದಿ ಪರವಾಗಿ ಮಾತನಾಡುವುದು ಬಿಟ್ಟು ಕೇವಲ‌ ರಾಮ ಮಂದಿರವೇ ಚರ್ಚೆ ಆಗುತ್ತಿದೆ.

2014ರ ಚೀನಾ ಜಿಡಿಪಿ ಬಗ್ಗೆ ಚರ್ಚೆ ಮಾಡಲಿ‌ ನೋಡೋಣ. ಸದ್ಯದ ನಮ್ಮ ಜಿಡಿಪಿ ಬಗ್ಗೆ ವಿಚಾರ ಮಾಡಲಿ. ಹತ್ತು ವರ್ಷದಲ್ಲಿ ನಮ್ಮ ಜಿಡಿಪಿ‌ ಎಷ್ಟು‌ ಹಿಂದೆ ಉಳಿದಿದೆ. ಕೇಂದ್ರ ಸರ್ಕಾರ ಯಾವ ದೇಶದ ವಿರುದ್ಧ ಸ್ಪರ್ಧೆ ಮಾಡುತ್ತೆ. ನೇಪಾಳ, ಬಾಂಗ್ಲಾ ದೇಶದ ವಿರುದ್ಧ ಸ್ಪರ್ಧೆ ಮಾಡುತ್ತಾರಾ? ಜಿಡಿಪಿ ಬಗ್ಗೆ, ದೇಶದ ಆರ್ಥಿಕ ಸ್ಥಿತಿಗತಿ ಬಗ್ಗೆ ಯಾಕೆ ಅವರು ಚರ್ಚೆ ಮಾಡುತ್ತಿಲ್ಲ. ಚರ್ಚೆಗೆ ವೇದಿಕೆ ಸಿದ್ಧಪಡಿಸಲಿ‌ ನಾವು ಚರ್ಚೆಗೆ ಸಿದ್ಧ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.