ಉಚಿತ ಕೊಟ್ಟು ಸಾರ್ವಜನಿಕರ ದರೋಡೆ: ರಾಜ್ಯ ಸರ್ಕಾರ ಹಾಕುವ ಪ್ರತಿಯೊಂದು ತೆರಿಗೆಯ ಪಕ್ಕಾ ಲೆಕ್ಕ ಕೊಟ್ಟ ಪ್ರಲ್ಹಾದ್ ಜೋಶಿ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಬಸ್, ವಿದ್ಯುತ್, ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ವಾರ್ಷಿಕ ₹60,000 ಕೋಟಿ ಸಂಗ್ರಹಿಸುತ್ತಿರುವುದನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ. ಪೆಟ್ರೋಲ್-ಡೀಸೆಲ್ ಮೇಲೆ ಕೇಂದ್ರಕ್ಕಿಂತ ರಾಜ್ಯವೇ ಹೆಚ್ಚಿನ ತೆರಿಗೆ ವಿಧಿಸುತ್ತಿದೆ ಎಂದು ಅಂಕಿ-ಅಂಶಗಳ ಸಮೇತ ಸ್ಪಷ್ಟಪಡಿಸಿದ್ದಾರೆ. ಸಿಎಂ ಶಿವಕುಮಾರ್ ಅವರ ಹೇಳಿಕೆಯನ್ನು ತಳ್ಳಿಹಾಕಿ, ಹಬ್ಬಗಳ ಸಮಯದಲ್ಲಿ ಜನಸಾಮಾನ್ಯರಿಗೆ ಸರ್ಕಾರ 'ದಿವಾಳಿ ಗಿಫ್ಟ್' ನೀಡಿದೆ ಎಂದು ವಾಗ್ದಾಳಿ ನಡೆಸಿದರು.

ಉಚಿತ ಕೊಟ್ಟು ಸಾರ್ವಜನಿಕರ ದರೋಡೆ: ರಾಜ್ಯ ಸರ್ಕಾರ ಹಾಕುವ ಪ್ರತಿಯೊಂದು ತೆರಿಗೆಯ ಪಕ್ಕಾ ಲೆಕ್ಕ ಕೊಟ್ಟ ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ
Image Credit source: Tv9 kannada
Edited By:

Updated on: Nov 07, 2026 | 6:15 PM

ಹುಬ್ಬಳ್ಳಿ, ನ.7: ಬಸ್​​ ದರ ಏರಿಕೆಯಾದ ಬೆನ್ನಲ್ಲೆ, ಸಿಎಂ ಡಿಕೆ ಶಿವಕುಮಾರ್​ ಅವರು ಕೇಂದ್ರ ಪೆಟ್ರೋಲ್​​ ಹಾಗೂ ಡಿಸೇಲ್ ಬೆಲೆ ಜಾಸ್ತಿ ಮಾಡಿದೆ ಆ ಕಾರಣಕ್ಕೆ ನಾವು ಬಸ್​​ ದರವನ್ನು ಹೆಚ್ಚು ಮಾಡಿದ್ದೇವೆ ಅವರಲ್ಲಿ ಕಡಿಮೆ ಮಾಡಲು ಹೇಳಿ, ನಾವು ಕೂಡ ಕಡಿಮೆ ಮಾಡುತ್ತೇವೆ ಎಂಬ ಹೇಳಿಕೆ ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸುದ್ದಿಗೋಷ್ಠಿಯನ್ನು ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಧಿಸಿರುವ ಪೆಟ್ರೋಲ್​​ ಹಾಗೂ ಡಿಸೇಲ್ ದರದ ಬಗ್ಗೆ ಮಾಹಿತಿ ನೀಡಿದ್ದಾರೆ.

“ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದೇವೆ ಎಂದು ಹೇಳಿಕೊಂಡು ರಾಜ್ಯದ ಕಾಂಗ್ರೆಸ್ ಸರ್ಕಾರವು ಬೆಲೆ ಏರಿಕೆ ಹಾಗೂ ವಿವಿಧ ಶುಲ್ಕಗಳ ಹೆಚ್ಚಳದ ಮೂಲಕ ಸಾರ್ವಜನಿಕರಿಂದ ವಾರ್ಷಿಕ ಬರೋಬ್ಬರಿ 60,000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ದರೋಡೆ ಮಾಡುತ್ತಿದೆ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಬ್ಬಗಳ ಸಮಯದಲ್ಲೇ ಹಾಲು, ಬಸ್ ದರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಬೆಲೆ ಹೆಚ್ಚಿಸಿ ಸರ್ಕಾರ ಜನಸಾಮಾನ್ಯರಿಗೆ ‘ದಿವಾಳಿ ಗಿಫ್ಟ್’ ನೀಡಿದೆ ಎಂದು ವ್ಯಂಗ್ಯವಾಡಿದರು.

Loading...

ಇಲ್ಲಿದೆ ನೋಡಿ ವಿಡಿಯೋ:

Pralhad Joshi On Price Hike: ಬಸ್ ​ದರ ಏರಿಕೆಯಿಂದ ಸರ್ಕಾರಕ್ಕೆ ಸಾವಿರ ಕೋಟಿ ಬರುತ್ತೆ|#Tv9D

ಬೆಲೆ ಏರಿಕೆಯಿಂದ ಸರ್ಕಾರ ಸಂಗ್ರಹಿಸುತ್ತಿರುವ ಹಣ ಎಷ್ಟು?

ಪ್ರಲ್ಹಾದ್ ಜೋಶಿ ಅವರು ನೀಡಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ ರಾಜ್ಯ ಸರ್ಕಾರ ವಿವಿಧ ಇಲಾಖೆಗಳು ಹಾಗೂ ಸೇವೆಗಳ ಮೇಲೆ ದರ ಹೆಚ್ಚಿಸಿ ಸಂಗ್ರಹಿಸುತ್ತಿರುವ ವಾರ್ಷಿಕ ಮೊತ್ತ ಎಷ್ಟು ಎಂಬುದನ್ನು ತಿಳಿಸಿದ್ದಾರೆ.

ವಿದ್ಯುತ್ ದರ (2 ಬಾರಿ ಹೆಚ್ಚಳ): ₹12,000 ಕೋಟಿ ಹೆಚ್ಚುವರಿ ಸಂಗ್ರಹ.

ಏಕ ಶುಲ್ಕ ನಿವೇಶನ ಶುಲ್ಕ ಹೆಚ್ಚಳ: ₹15,000 ಕೋಟಿ.

ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ: ₹6,000 ಕೋಟಿ.

ಮದ್ಯದ ಮೇಲಿನ ಅಬಕಾರಿ ಸುಂಕ: ₹4,500 ಕೋಟಿ.

ವಾಹನ ನೋಂದಣಿ (EV ಸೇರಿ %15 ತೆರಿಗೆ ಏರಿಕೆ): ₹3,712 ಕೋಟಿ.

ಆಸ್ತಿ ಸ್ಟ್ಯಾಂಪ್ ಡ್ಯೂಟಿ ಏರಿಕೆ (1% ರಿಂದ 2%): ₹3,000 ಕೋಟಿ.

ಆಸ್ತಿಗಳ ಗೈಡೆನ್ಸ್ ವ್ಯಾಲ್ಯೂ ಹೆಚ್ಚಳ: ₹2,000 ಕೋಟಿ.

ಕೆಎಸ್‌ಆರ್‌ಟಿಸಿ ಬಸ್ ದರ ಹೆಚ್ಚಳ: ₹1,000 ಕೋಟಿ.

ಪಂಚಾಯಿತಿ ಇ-ಖಾತಾ ಶುಲ್ಕ: ₹1,000 ಕೋಟಿ.

ನಮ್ಮ ಮೆಟ್ರೋ ದರ ಹೆಚ್ಚಳ: ₹450 ಕೋಟಿ.

ವೃತ್ತಿಪರ ತೆರಿಗೆ ಹಾಗೂ ಶೈಕ್ಷಣಿಕ ಶುಲ್ಕ: ₹27 ಕೋಟಿ.

ಇದನ್ನೂ ಓದಿ: ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಸಚಿವ ಪ್ರಲ್ಹಾದ್​ ಜೋಶಿ ಕಿಡಿ

ಪೆಟ್ರೋಲ್-ಡೀಸೆಲ್ ಮೇಲಿನ ರಾಜ್ಯ ತೆರಿಗೆಯೇ ಕೇಂದ್ರಕ್ಕಿಂತ ದುಪ್ಪಟ್ಟು

ಪೆಟ್ರೋಲ್ ಮೇಲೆ ಕೇಂದ್ರದ ತೆರಿಗೆ ಕೇವಲ 10.90 ರೂ.ಇದ್ದರೆ, ರಾಜ್ಯ ಸರ್ಕಾರದ ತೆರಿಗೆ 26 ರೂ. ಇದೆ. ಡೀಸೆಲ್ ಮೇಲೆ ಕೇಂದ್ರದ ತೆರಿಗೆ 7.80 ರೂ. ಇದ್ದರೆ, ರಾಜ್ಯ ಸರ್ಕಾರ 21.17 ರೂ. ತೆರಿಗೆ ವಿಧಿಸುತ್ತಿದೆ. ಕೇಂದ್ರ ಸರ್ಕಾರ ಯುದ್ಧದ ಪರಿಸ್ಥಿತಿಯಲ್ಲಿ 3 ಹೆಚ್ಚಿಸಿದ್ದನ್ನು ಹೊರತುಪಡಿಸಿ ದರ ಏರಿಸಿಲ್ಲ. ವಿಮಾನ ಇಂಧನ ಮೇಲಿನ ತೆರಿಗೆಯೂ ದೇಶದಲ್ಲೇ ಕರ್ನಾಟಕದಲ್ಲೇ ಗರಿಷ್ಠ ಮಟ್ಟದಲ್ಲಿದೆ” ಎಂದು ಸ್ಪಷ್ಟಪಡಿಸಿದರು. ಇಷ್ಟೇ ಅಲ್ಲದೆ, ಗಣಿ ರಾಯಲ್ಟಿ, ಕಟ್ಟಡ ದಂಡ, ಜನನ-ಮರಣ ನೋಂದಣಿ ಶುಲ್ಕ, ಕೆಎಸ್‌ಆರ್‌ಟಿಸಿ ಲಗೇಜ್ ದರ ಹಾಗೂ ಟ್ರಾನ್ಸ್‌ಫಾರ್ಮರ್ ವೈಫಲ್ಯದ ದುರಸ್ತಿ ವೆಚ್ಚವನ್ನು 25,000 ರೂ. ದಿಂದ ನೇರವಾಗಿ 3 ರಿಂದ 5 ರೂ. ಲಕ್ಷ ರೂಪಾಯಿಗಳಿಗೆ ಏರಿಸಿ ಬಡವರ ಜೇಬಿಗೆ ಕನ್ನ ಹಾಕಲಾಗುತ್ತಿದೆ ಎಂದು ಜೋಶಿ ಕಳವಳ ವ್ಯಕ್ತಪಡಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Loading...
Unable to load recommendations.
Follow Us