ಜನೌಷಧಿ ಕೇಂದ್ರಗಳ ಸ್ಥಗಿತ: ಕೇಂದ್ರಕ್ಕೆ ಸ್ಪಷ್ಟನೆ ನೀಡಿದ ದಿನೇಶ್ ಗುಂಡೂರಾವ್

ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿ 1417 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಸಕ್ರಿಯವಾಗಿವೆ. ಈ ನಿರ್ಧಾರವು ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ದೊರೆಯುವಂತೆ ಮಾಡುವುದು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ದುರುಪಯೋಗವನ್ನು ತಡೆಯಲು ತೆಗೆದುಕೊಳ್ಳಲಾಗಿದೆ ಎಂದು ಸಚಿವ ದಿನೇಶ್​ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ

ಜನೌಷಧಿ ಕೇಂದ್ರಗಳ ಸ್ಥಗಿತ: ಕೇಂದ್ರಕ್ಕೆ ಸ್ಪಷ್ಟನೆ ನೀಡಿದ ದಿನೇಶ್ ಗುಂಡೂರಾವ್
ಸಚಿವ ದಿನೇಶ್​ ಗುಂಡೂರಾವ್​
Edited By:

Updated on: Aug 06, 2025 | 8:58 PM

ಬೆಂಗಳೂರು, ಆಗಸ್ಟ್​ 06: ಕರ್ನಾಟಕದಲ್ಲಿನ ಜನೌಷಧಿ (Janaushadhi Center) ಕೇಂದ್ರಗಳನ್ನು ಮುಚ್ಚಿಸಿಲ್ಲ. ಸರ್ಕಾರಿ ಆಸ್ಪತ್ರೆಗಳ ಆವರಣಗಳಲ್ಲಿ ಇರುವ ಜನಷೌಧಿ ಕೇಂದ್ರಗಳನ್ನು ಮಾತ್ರ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ 1417 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಕರ್ನಾಟಕವು ದೇಶದಲ್ಲಿ ಅಗ್ರಸ್ಥಾನದಲ್ಲಿದೆ. ಇವುಗಳಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿನ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕೇವಲ 184 ಜನೌಷಧಿ ಕೇಂದ್ರಗಳು ಮಾತ್ರ ಇವೆ. ಮತ್ತು ಉಳಿದವು ಸರ್ಕಾರಿ ಆಸ್ಪತ್ರೆ ಆವರಣದ ಹೊರಗೆ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ (Dinesh Gundu Rao)​ ಹೇಳಿದರು.

ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರಿಗೆ ಸಚಿವ ದಿನೇಶ್​ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಆವರದಲ್ಲಿ ಇರುವ ಜನಷೌಧಿ ಕೇಂದ್ರಗಳನ್ನು ನಿರ್ಬಂಧೀಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧಿಗಳು ದೊರೆಯುವಂತೆ ಮಾಡುವ ನಿಮ್ಮ ಕಾಳಜಿಯನ್ನು ನಾನು ಶ್ಲಾಘಿಸುತ್ತೇನೆ. ಕರ್ನಾಟಕ ಸರ್ಕಾರವು ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಅಗತ್ಯ ಔಷಧಿಗಳ ಪಟ್ಟಿಯ (EML) ಪ್ರಕಾರ ಎಲ್ಲಾ ಅಗತ್ಯ ಔಷಧಿಗಳನ್ನು ಉಚಿತವಾಗಿ ಪೂರೈಸುತ್ತಿದೆ ಎಂದು ಗೌರವಪೂರ್ವಕವಾಗಿ ಸ್ಪಷ್ಟಪಡಿಸಲು ಬಯಸುತ್ತೇನೆ.

ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತವಾಗಿ ಸಿಗುವ ಔಷಧಿಗಳನ್ನು ನಿರಾಕರಿಸುವ ಯಾವುದೇ ಸಾಧ್ಯತೆಯನ್ನು ತಪ್ಪಿಸಲು, ಸರ್ಕಾರಿ ವೈದ್ಯರು ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸುವ ಔಷಧಿಗಳಿಗೆ ಮಾತ್ರ ಪ್ರಿಸ್ಕ್ರಿಪ್ಷನ್‌ಗಳನ್ನು ಸೀಮಿತಗೊಳಿಸುವಂತೆ ರಾಜ್ಯ ಸರ್ಕಾರ ರಾಜ್ಯ ಸರ್ಕಾರವು ನಿರ್ದೇಶಿಸಿದೆ ಎಂದು ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಿಗೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್ ಮೂಲಕ ಅಗತ್ಯವಿರುವ ಎಲ್ಲಾ ಔಷಧಿಗಳನ್ನು ನಿಯಮಿತವಾಗಿ ಪೂರೈಸಲಾಗುತ್ತದೆ. ಇದಲ್ಲದೆ, ಆಸ್ಪತ್ರೆಗಳಿಗೆ ಸಾಕಷ್ಟು ಹಣವನ್ನು ಒದಗಿಸಲಾಗಿದೆ ಮತ್ತು ಯಾವುದೇ ಔಷಧಿಗಳ ಕೊರತೆಯ ಸಂದರ್ಭದಲ್ಲಿ, ಸ್ಥಳೀಯವಾಗಿ ಔಷಧಿಗಳನ್ನು ಖರೀದಿಸಲು ಈ ಹಣವನ್ನು ಬಳಸಬೇಕೆಂದು ಅವರಿಗೆ ಸ್ಥಾಯಿ ಸೂಚನೆಗಳನ್ನು ನೀಡಲಾಗಿದೆ. ಸರ್ಕಾರಿ ಸೌಲಭ್ಯಗಳಿಗೆ ಭೇಟಿ ನೀಡುವ ರೋಗಿಗಳಿಗೆ ಅಗತ್ಯ ಔಷಧಿಗಳು ಸಂಪೂರ್ಣವಾಗಿ ಉಚಿತವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವುದು ಈ ಪ್ರಯತ್ನದ ಉದ್ದೇಶವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಜನೌಷಧ ಕೇಂದ್ರ ಸ್ಥಗಿತಕ್ಕೆ ಹೈಕೋರ್ಟ್ ತಡೆ, ರಾಜ್ಯ ಸರ್ಕಾರಕ್ಕೆ ಹಿನ್ನಡೆ

ಔಷಧಿಗಳನ್ನು ಖರೀದಿಸಲು ರೋಗಿಗಳನ್ನು ವಾಣಿಜ್ಯ ಅಂಗಡಿಗಳಿಗೆ ಕಳುಹಿಸುವ ಮತ್ತು ಅವರಿಗೆ ಉಚಿತವಾಗಿ ಪೂರೈಸಲಾಗುವ ಔಷಧಿಗಳನ್ನು ನಿರಾಕರಿಸುವ ಯಾವುದೇ ಸಾಧ್ಯತೆಗಳನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪತ್ರ ಬರೆದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Wed, 6 August 25