Tv9 Digital Live | ಕರ್ನಾಟಕ ಸರ್ಕಾರ ಘೋಷಿಸಿದ ಪ್ಯಾಕೇಜ್ ಎಷ್ಟು ಉಪಯೋಗವಾಗಲಿದೆ? ಇಲ್ಲಿದೆ ಮಾಹಿತಿ
ಚರ್ಚೆಯಲ್ಲಿ ಅರ್ಥಶಾಸ್ತ್ರಜ್ಞರಾದ ಪ್ರೊ.ಎಸ್.ಆರ್.ಕೇಶವ್, ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಮತ್ತು ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಭಾಗವಹಿಸಿದ್ದರು. ಆ್ಯಂಕರ್ ಹರಿಪ್ರಸಾದ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಹೀಗಾಗಿ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಅನಿವಾರ್ಯವಾಗಿ ಲಾಕ್ಡೌನ್ ಘೋಷಿಸಿದೆ. ರಾಜ್ಯದ್ಯಂತ ಲಾಕ್ಡೌನ್ ಜಾರಿಯಾದ ಕಾರಣ ಬಡವರು, ಕೃಷಿಕರು, ಕೂಲಿ ಕಾರ್ಮಿಕರ ಪರಿಸ್ಥಿತಿ ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ. ಕೆಲಸವಿಲ್ಲದೆ ಜೀವನ ನಡೆಸುವುದೇ ಕಷ್ಟ ಎನ್ನುವ ಮಟ್ಟಿಗೆ ಜನರ ಬದುಕು ನಡೆಯುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ನಿನ್ನೆ (ಮೇ 19) 1,250 ಕೋಟಿಯ ಪ್ಯಾಕೇಜ್ ಘೋಷಿಸಿದೆ. ಘೋಷಿಸಿದ ಪ್ಯಾಕೇಜ್ ಸಾಕೆ? ಎನ್ನುವ ಪ್ರಶ್ನೆಗಳನ್ನು ಆಧಾರವಾಗಿಸಿಕೊಂಡು ಟಿವಿ9 ಕನ್ನಡ ಡಿಜಿಟಲ್ ಲೈವ್ನಲ್ಲಿ ಚರ್ಚಿಸಲಾಗಿದೆ.
ಈ ಚರ್ಚೆಯಲ್ಲಿ ಅರ್ಥಶಾಸ್ತ್ರಜ್ಞರಾದ ಪ್ರೊ.ಎಸ್.ಆರ್.ಕೇಶವ್, ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಮತ್ತು ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಭಾಗವಹಿಸಿದ್ದರು. ಆ್ಯಂಕರ್ ಹರಿಪ್ರಸಾದ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಘೋಷಣೆಯಾಗಿರುವ ಪ್ಯಾಕೇಜ್ ಯಾವ ಸ್ವರೂಪದಲ್ಲಿ ನೆರವಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರವಿಕುಮಾರ್, ನಮ್ಮ ರಾಜ್ಯದಲ್ಲಿ ಸರಿ ಸುಮಾರು 21 ಲಕ್ಷ ಕಟ್ಟಡ ಕಾರ್ಮಿಕರಿದ್ದಾರೆ. ಬೀದಿ ಬದಿಯ ವ್ಯಾಪಾರಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಇದ್ದಾರೆ. ಆಟೋ ಚಾಲಕರು, ಕ್ಯಾಬ್ ಚಾಲಕರು ಕೂಡಾ 20 ಲಕ್ಷದ ವರೆಗೆ ಇದ್ದಾರೆ. ಈ ಎಲ್ಲಾ ಕಾರ್ಮಿಕರಿಗೆ ಒಂದು ವರ್ಷದ ಹಿಂದೆ 5,000 ಪ್ಯಾಕೇಜ್ ಕೊಟ್ಟಿದ್ದೇವೆ. ಕೊರೊನಾ ಮುಂದುವರೆದ ಕಾರಣ ಮತ್ತೆ ಪ್ಯಾಕೇಜ್ನ ಕೊಡಬೇಕಾಗಿದೆ. ಆದರೆ ಸರ್ಕಾರದ ಆದಾಯ ಹೆಚ್ಚಾಗಿಲ್ಲ. ಪ್ರವಾಹ, ಪ್ರಕೃತಿ ವಿಕೋಪದಿಂದ ಸರ್ಕಾರ ಆರ್ಥಿಕ ಒತ್ತಡದಲ್ಲಿದೆ. ಈ ಸಂದರ್ಭದಲ್ಲಿ ಸರ್ಕಾರ ಶ್ರಮಿಕರ ವರ್ಗದ ಕೈ ಹಿಡಿಯುವ ಕೆಲಸವನ್ನು ಮಾಡಿದೆ. ಸರ್ಕಾರದ ಪ್ಯಾಕೇಜ್ ಶ್ರಮಿಕ ವರ್ಗದ ಸಂಪೂರ್ಣ ಹೊಟ್ಟೆ ತುಂಬಿಸಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಹದಗೆಟ್ಟ ಆರ್ಥಿಕ ಪರಿಸ್ಥಿತಿ ನಡುವೆ ಜನರ ಕೈ ಹಿಡಿಯುವ ಕೆಲಸವನ್ನು ಮಾಡಿದೆ. ಈ ಬಗ್ಗೆ ವಿರೋಧ ಪಕ್ಷದವರು ಅರ್ಥಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಚರ್ಚೆಯ ಮುಂದಿನ ಭಾಗವಾಗಿ ಮಾತನಾಡಿದ ಆರ್ಥಿಕ ಅರ್ಥ ಶಾಸ್ತ್ರಜ್ಞ ಪ್ರೊ.ಎಸ್.ಆರ್.ಕೇಶವ್, 2020-21 ರ ಬಜೆಟ್ ಎಸ್ಟಿಮೇಟ್ ಪ್ರಕಾರ 1,72,402 ಕೋಟಿ ರೂ ಆದಾಯ ಬರುತ್ತದೆ ಎಂದು ಲೆಕ್ಕ ಹಾಕಿಕೊಂಡಿದ್ದೇವೆ. ಇದರಲ್ಲಿ ಸಾಲ ಮಾಡಬೇಕಾಗಿರುವುದು 59,240 ಕೋಟಿ ರೂ. ಆದರೆ ಈ ಬಾರಿ 1,72,402 ಕೋಟಿ ರೂ ಆದಾಯ ಬರಲ್ಲ. ಕಾರಣ ಒಂದು ತಿಂಗಳು ಲಾಕ್ಡೌನ್ ಹೋಗಿದೆ. ಇನ್ನು ಮುಂದುವರೆಯುವ ಸಾಧ್ಯತೆಯಿದೆ. ಹೀಗಾಗಿ ಈ ಆರ್ಥಿಕ ಪರಿಸ್ಥಿತಿಯಲ್ಲಿ ಘೋಷಣೆಯಾಗಿರುವ ಪ್ಯಾಕೇಜ್ ಸಣ್ಣ ಮಟ್ಟದಲ್ಲಾದರೂ ಜನರಿಗೆ ಅನುಕೂಲವಾಗುತ್ತದೆ. ಸಾಲ ಮಾಡಿರುವವರಿಗೆ ಈ ಪ್ಯಾಕೇಜ್ ಅನುಕೂಲವಾಗಲ್ಲ. ಆರ್ಥಿಕ ಪರಿಸ್ಥಿಯ ದೃಷ್ಟಿಯಲ್ಲಿ ಈ ಪ್ಯಾಕೇಜ್ ಸರಿಯಾಗಿದೆ. ಆದರೆ ಇಂತಹ ಪ್ಯಾಕೇಜ್ನ ಘೋಷಿಸುವಾಗ ಯಾವುದಾದರೊಂದು ಮಾನದಂಡವನ್ನು ಅನುಸರಿಸಬೇಕು. ಇದರಿಂದ ಜನರಿಗೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.
ಇನ್ನು ಈ ಬಗ್ಗೆ ಮಾತನಾಡಿದ ಯು.ಟಿ.ಖಾದರ್ ಕಷ್ಟ ಕಾಲದಲ್ಲಿ ಜನರ ನೆರವಿಗೆ ನಿಲ್ಲುವುದು ಸರ್ಕಾರದ ಜವಾಬ್ದಾರಿ. ಸರ್ಕಾರದ ಪ್ಯಾಕೇಜ್ನಲ್ಲಿ ಕೆಲವರಿಗೆ ಅನುಕೂಲವಾಗುತ್ತದೆ. ಇದನ್ನು ಸ್ವಾಗತಿಸುತ್ತೇವೆ. ಶಿಕ್ಷಕರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಯನ್ನು ಫ್ರಂಟ್ ಲೈನ್ ವಾರಿಯರ್ ಎಂದು ಸರ್ಕಾರ ಘೋಷಿಸಬೇಕು. ಕೊರೊನಾ ಕಡಿಮೆ ಮಾಡಬೇಕೆಂದರೆ ಆರೋಗ್ಯ ಸಿಬ್ಬಂದಿಯಿಂದ ಮಾತ್ರ ಸಾಧ್ಯವಾಗಿಲ್ಲ. ಶಿಕ್ಷಕರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಯ ಕಾರ್ಯವೂ ಅಷ್ಟೇ ಮಹತ್ವದ್ದಾಗಿದೆ. ಸರ್ಕಾರ ಕೇವಲ ಪ್ಯಾಕೇಜ್ನ ಘೋಷಿಸಿದರೆ ಸಾಕಾಗುವುದಿಲ್ಲ. ಜೊತೆಗೆ ಫಲಾನುಭವಿಗಳಿಗೆ ಇದರ ಲಾಭವನ್ನು ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ
ಕೊವಿಡ್ ಲಸಿಕೆ ವಿಚಾರದಲ್ಲಿ ಗೋಲ್ಮಾಲ್ ಮಾಡಿದ್ರಾ ನಯನತಾರಾ? ಫೋಟೋ ತೆರೆದಿಟ್ಟ ಅಸಲಿ ಕಥೆ ಇಲ್ಲಿದೆ
ಎರಡು ವರ್ಷದ ನನ್ನ ಮಗನನ್ನು ನನ್ನೊಟ್ಟಿಗೆ ಕರೆದೊಯ್ಯಲು ಅನುಮತಿ ಕೊಡಿ: ಸಾನಿಯಾ ಮಿರ್ಜಾ