ಮತದಾರರಿಗೆ ಆಮಿಷ, ಬೆದರಿಕೆ ಆರೋಪ: ಎಫ್ಐಆರ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಡಿಕೆ ಶಿವಕುಮಾರ್
ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ದಾಖಲಾಗಿರುವ ಎಫ್ಐಆರ್ ಪ್ರಶ್ನಿಸಿ ಡಿಸಿಎಂ ಡಿಕೆ ಶಿವಕುಮಾರ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮತದಾರರಿಗೆ ಬೆದರಿಕೆ ಹಾಕಿರುವ ಮತ್ತು ಆಮಿಷವೊಡ್ಡಿರುವ ಬಗ್ಗೆ ಅವರ ವಿರುದ್ಧ ಬಿಜೆಪಿ ಆರೋಪ ಮಾಡಿತ್ತು. ಬಿಜೆಪಿ ನೀಡಿದ್ದ ದೂರಿನ ಆಧಾರದಲ್ಲಿ ಬೆಂಗಳೂರಿನ ಆರ್ಎಂಸಿ ಯಾರ್ಡ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಬೆಂಗಳೂರು, ಏಪ್ರಿಲ್ 23: ಮತದಾರರಿಗೆ ಬೆದರಿಕೆ ಹಾಕಿರುವ ಮತ್ತು ಆಮಿಷವೊಡ್ಡಿರುವ ಆರೋಪದಲ್ಲಿ ತಮ್ಮ ವಿರುದ್ಧ ಬೆಂಗಳೂರಿನ ಆರ್ಎಂಸಿ ಯಾರ್ಡ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದನ್ನು ಪ್ರಶ್ನಿಸಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮಂಗಳವಾರ ಹೈಕೋರ್ಟ್ (Karnataka High Court) ಮೆಟ್ಟಿಲೇರಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಪರ ರಾಜರಾಜೇಶ್ವರಿ ನಗರದ ಅಪಾರ್ಟ್ಮೆಂಟೊಂದರಲ್ಲಿ ಮತಯಾಚನೆ ಮಾಡಿದ್ದ ಡಿಕೆ ಶಿವಕುಮಾರ್ ಮತದಾರರಿಗೆ ಬೆದರಿಕೆ ಹಾಕಿ ಅವರನ್ನು ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿತ್ತು. ನಂತರ ಆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಡಿಕೆ ಶಿವಕುಮಾರ್ ವಿರುದ್ಧ ಲಂಚ ಮತ್ತು ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಬಳಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.
ಹಕ್ಕುಪತ್ರ, ಕಾವೇರಿ ನೀರು ಬೇಕಿದ್ದರೆ ನಮಗೆ ಮತ ನೀಡಿ ಎಂದಿದ್ದ ಡಿಕೆಶಿ
ರಾಜರಾಜೇಶ್ವರಿ ನಗರದ ಅಪಾರ್ಟ್ಮೆಂಟೊಂದರಲ್ಲಿ ಮತಯಾಚನೆ ಮಾಡಲು ತೆರಳಿದ್ದ ಡಿಕೆ ಶಿವಕುಮಾರ್, ನಾನು ಇಲ್ಲಿಗೆ ಬ್ಯುಸಿನೆಸ್ ಡೀಲ್ ಮಾಡಲು ಬಂದಿದ್ದೇನೆ. ನಿಮಗೆ ಅಪಾರ್ಟ್ಮೆಂಟ್ ಪಕ್ಕದ ಸಿಎ ಸೈಟ್ ಬೇಕೆಂದು ಕೇಳಿದ್ದೀರಿ. ನೀವು ನಮಗೆ ಮತ ಹಾಕಿದ 2-3 ತಿಂಗಳಲ್ಲಿ ನಿಮಗೆ ಹಸ್ತಾಂತರಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಆಮಿಷವೊಡ್ಡಿದ್ದರು ಎಂದು ಬಿಜೆಪಿ ಆರೋಪಿಸಿತ್ತು.
ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲು
ಕಾವೇರಿ ನೀರು ಸಂಪರ್ಕ ದೊರೆಯದಿರುವುದು ನಿಮ್ಮ ಇನ್ನೊಂದು ಸಮಸ್ಯೆ. ಈ ಎರಡೂ ಸಮಸ್ಯೆಗಳನ್ನು ಬಗೆಹರಿಸಿಕೊಟ್ಟರೆ ನೀವೇನು ಕೊಡುತ್ತೀರಿ? ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಆಡಳಿತ, ಜಲ ಸಂಪನ್ಮೂಲ ಖಾತೆ ಎಲ್ಲವೂ ನನ್ನ ಕೈಯಲ್ಲೇ ಇದೆ. ಹೀಗಾಗಿ ನಾನೇ ಈ ಕೆಲಸವನ್ನು ನಿಮಗೆ ಮಾಡಿಕೊಡಬೇಕಾಗುತ್ತದೆ ಎಂದು ಡಿಕೆ ಶಿವಕುಮಾರ್ ಮತದಾರರನ್ನು ಉದ್ದೇಶಿಸಿ ಹೇಳಿರುವುದು ಬಿಜೆಪಿ ಟ್ವೀಟ್ ಮಾಡಿದ ವಿಡಿಯೋದಲ್ಲಿ ಕಂಡುಬಂದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ