
ಬೆಂಗಳೂರು, (ಮೇ 18): ಮಧ್ಯ ಪ್ರಾಚ್ಯ ಸಂಘರ್ಷ ಜಗತ್ತಿನಾದ್ಯಂತ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ. ಯುದ್ಧದ ಭೀತಿಯಿಂದಾಗಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ (Petrol And Diesel) ಮತ್ತು ಎಲ್‌ಪಿಜಿ ಬೆಲೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಂಧನ ದರ ಹೆಚ್ಚಳವಾಗಲಿದೆ ಎನ್ನಲಾಗತ್ತಿದೆ.ಇನ್ನೊಂದೆಡೆ ಇರಾಕ್-ಇಸ್ರೆಲ್ ಯುದ್ಧದದಿಂದಾಗಿ ಇಂಧನ ಪೂರೈಕೆ ಕಡಿಮೆಯಾಗುತ್ತಿರುವ ಹಿನ್ನೆಲೆ ಪ್ರಧಾನಿ ಮೋದಿ (Narendra Modi) ಮಿತವ್ಯಯ ಜೀವನಶೈಲಿಗೆ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಪಂಜಾಬ್ನಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಮಿತಿ ಹೇರಲಾಗಿದೆ. ದ್ವಿಚಕ್ರ ವಾಹನಗಳಿಗೆ 500 ರೂಪಾಯಿ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 1500ರವರೆಗೆ ಇಂಧನ ಮಿತಿ ಹೇರಲಾಗಿದ್ದು, ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದೆ. ಹೀಗಾಗಿ ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕ ಸ್ಪಷ್ಟನೆ ನೀಡಿದ್ದು, ಕರ್ನಾಟಕದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ದಾಸ್ತಾನು ಲಭ್ಯವಿದೆ. ಆತಂಕದಿಂದ ಇಂಧನ ಖರೀದಿಸದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕರಾದ (IOCL, BPCL ಮತ್ತು HPCL) ಸಿದ್ಧಾರ್ಥ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದು, ರಾಜ್ಯದ ಎಲ್ಲಾ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ನ ಸಾಕಷ್ಟು ದಾಸ್ತಾನು ಸಂಪೂರ್ಣವಾಗಿ ಲಭ್ಯವಿದೆ ಎಂದು ಸಾರ್ವಜನಿಕರಿಗೆ ಅಧಿಕೃತವಾಗಿ ಭರವಸೆ ನೀಡಿದ್ದಾರೆ.
ಟರ್ಮಿನಲ್ ಗಳು ಮತ್ತು ಡಿಪೋಗಳಿಂದ ಹಿಡಿದು ಸ್ಥಳೀಯ ಚಿಲ್ಲರೆ ಮಾರಾಟ ಮಳಿಗೆಗಳವರೆಗಿನ ಸಂಪೂರ್ಣ ಇಂಧನ ಪೂರೈಕೆ ಸರಪಳಿಯು ಯಾವುದೇ ಅಡೆತಡೆಯಿಲ್ಲದೆ, ಸಾಮಾನ್ಯ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಂಧನ ಪೂರೈಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ರಾಜ್ಯಾದ್ಯಂತ ಮರುಪೂರಣ ಕಾರ್ಯಾಚರಣೆಗಳು ಸುಗಮವಾಗಿ ಸಾಗುತ್ತಿವೆ. ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಕರ್ನಾಟಕದ ಗ್ರಾಹಕರ ದೈನಂದಿನ ಇಂಧನ ಅಗತ್ಯಗಳನ್ನು ಪೂರೈಸಲು ಸಂಪೂರ್ಣವಾಗಿ ಸಜ್ಜಾಗಿವೆ ಎಂದು ಹೇಳಿದ್ದಾರೆ.
ಸಾರ್ವಜನಿಕರು ನಿಶ್ಚಿಂತರಾಗಿರಲು ಮತ್ತು ತಮ್ಮ ಸಾಮಾನ್ಯ ಇಂಧನ ಬಳಕೆಯನ್ನು ಮುಂದುವರಿಸಲು ಸಲಹೆ ನೀಡಲಾಗಿದೆ. ಕರ್ನಾಟಕದ ಜನರಿಗೆ ನಿರಂತರ ಇಂಧನ ಪೂರೈಕೆಯನ್ನು ಖಚಿತಪಡಿಸಲು ತೈಲ ಮಾರುಕಟ್ಟೆ ಕಂಪನಿಗಳು (OMCs) ಸಂಪೂರ್ಣವಾಗಿ ಬದ್ಧವಾಗಿವೆ ಮತ್ತು ಸಿದ್ಧವಾಗಿವೆ. ಅದರಂತೆ, ಸಾರ್ವಜನಿಕರು ಆತಂಕದಿಂದ ಇಂಧನ ಖರೀದಿಸುವುದು ಅಥವಾ ಅತಿಯಾಗಿ ಇಂಧನವನ್ನು ಸಂಗ್ರಹಿಸಿಟ್ಟುಕೊಳ್ಳುವುದನ್ನು ಮಾಡಬಾರದು. ಇಡೀ ಪ್ರದೇಶದಾದ್ಯಂತ ತಡೆರಹಿತ ಇಂಧನ ಲಭ್ಯತೆಗಾಗಿ ತೈಲ ಉದ್ಯಮವು ಲಾಜಿಸ್ಟಿಕ್ಸ್, ದಾಸ್ತಾನು ಚಲನೆ ಮತ್ತು ಚಿಲ್ಲರೆ ಕಾರ್ಯಾಚರಣೆಗಳನ್ನು ನಿಕಟವಾಗಿ ಸಂಯೋಜಿಸುವುದನ್ನು ಮುಂದುವರಿಸಿದೆ ಎಂದು ತಿಳಿಸಿದ್ದಾರೆ.
Published On - 5:27 pm, Mon, 18 May 26