
ಬೆಂಗಳೂರು, ಜೂನ್ 3: ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಜತೆ ಉಪಮುಖ್ಯಮಂತ್ರಿ ಸ್ಥಾನಗಳ ಕುರಿತ ಹಲವು ದಿನಗಳ ಚರ್ಚೆಗಳಿಗೆ ಕೊನೆಗೂ ತೆರೆಬಿದ್ದಿದೆ. ಕಾಂಗ್ರೆಸ್ ಹೈಕಮಾಂಡ್‌ನ ಅಂತಿಮ ನಿರ್ಧಾರದ ಪ್ರಕಾರ, ಡಾ. ಜಿ. ಪರಮೇಶ್ವರ್ (Dr. G Parameshwara) ಅವರನ್ನು ರಾಜ್ಯದ ಏಕೈಕ ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ. ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆರಂಭದಲ್ಲಿ, ಒಂದಕ್ಕಿಂತ ಹೆಚ್ಚು ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಒಬ್ಬರು, ಇಬ್ಬರು, ಮೂವರು ಅಥವಾ ನಾಲ್ಕು ಉಪಮುಖ್ಯಮಂತ್ರಿಗಳಿರಬಹುದು ಎಂಬ ಊಹಾಪೋಹಗಳು ಪ್ರಚಲಿತದಲ್ಲಿದ್ದವು. ಒಂದು ಹಂತದಲ್ಲಿ, ಕೇರಳ ಮಾದರಿಯಂತೆ ಉಪಮುಖ್ಯಮಂತ್ರಿ ಸ್ಥಾನವೇ ಬೇಡ ಎಂಬ ನಿರ್ಧಾರಕ್ಕೆ ಬರುವ ಆಲೋಚನೆಯೂ ಇತ್ತು. ಆದರೆ, ತಡರಾತ್ರಿವರೆಗೂ ನಡೆದ ಸುದೀರ್ಘ ಚರ್ಚೆಗಳು ಹಾಗೂ ಬೆಳಗ್ಗೆ ನಡೆದ ಪರಾಮರ್ಶೆಗಳ ನಂತರ ಹೈಕಮಾಂಡ್ ಡಾ. ಪರಮೇಶ್ವರ್ ಅವರಿಗೆ ಮಾತ್ರ ಡಿಸಿಎಂ ಸ್ಥಾನ ನೀಡಲು ತೀರ್ಮಾನಿಸಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಡಿಕೆ ಶಿವಕುಮಾರ್ ಏಕೈಕ ಉಪಮುಖ್ಯಮಂತ್ರಿಯಾಗಿದ್ದರು. ಈಗ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿರುವ ಸಂದರ್ಭದಲ್ಲಿ ಡಾ. ಪರಮೇಶ್ವರ್ ಡಿಸಿಎಂ ಆಗುತ್ತಿದ್ದಾರೆ ಎನ್ನಲಾಗಿದೆ.
ಡಾ. ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಹೈಕಮಾಂಡ್ ಕೆಲವು ಉದ್ದೇಶಗಳನ್ನು ಈಡೇರಿಸಲು ಯೋಚಿಸಿದೆ. ಏಕೈಕ ಶಕ್ತಿ ಕೇಂದ್ರ ಉದಯಿಸುವುದನ್ನು ತಡೆಯುವುದು ಒಂದು ಪ್ರಮುಖ ಕಾರಣ. ಜೊತೆಗೆ, ಡಾ. ಪರಮೇಶ್ವರ್ ಅವರ ದೀರ್ಘಕಾಲದ ಅನುಭವವನ್ನು ಸರ್ಕಾರದ ಕಾರ್ಯಗಳಲ್ಲಿ ಬಳಸಿಕೊಳ್ಳುವ ಉದ್ದೇಶವೂ ಇದೆ. ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆಯನ್ನು ಪರೋಕ್ಷವಾಗಿ ಪರಮೇಶ್ವರ್ ಅವರು ಉತ್ತಮವಾಗಿ ನಿಭಾಯಿಸಬಲ್ಲರು ಎಂಬ ಲೆಕ್ಕಾಚಾರವೂ ಹೈಕಮಾಂಡ್‌ನಲ್ಲಿದೆ. ಸಿದ್ದರಾಮಯ್ಯ ಕೂಡ ಡಾ. ಪರಮೇಶ್ವರ್ ಅವರ ಹೆಸರನ್ನು ಡಿಸಿಎಂ ಸ್ಥಾನಕ್ಕೆ ಬಲವಾಗಿ ಬೆಂಬಲಿಸಿದ್ದಾರೆ.
ಡಾ. ಪರಮೇಶ್ವರ್ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡಿರಲಿಲ್ಲ. ಸಿದ್ದರಾಮಯ್ಯ ಜೊತೆ ದೆಹಲಿಗೆ ತೆರಳಿದ್ದರೂ, ಸ್ಥಾನಕ್ಕಾಗಿ ಒತ್ತಾಯ ಮಾಡದೆ, ಹೈಕಮಾಂಡ್ ತನ್ನ ಅರ್ಹತೆಯ ಆಧಾರದ ಮೇಲೆ ಸ್ಥಾನ ನೀಡಿದರೆ ಮಾತ್ರ ಎಂಬ ನಿಲುವನ್ನು ಹೊಂದಿದ್ದರು ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಜತೆ 14 ಮಂದಿ ಪ್ರಮಾಣವಚನ ಸಾಧ್ಯತೆ: ಸಂಭಾವ್ಯ ಸಚಿವರ ಫೈನಲ್ ಲಿಸ್ಟ್ ಲಭ್ಯ
ಮತ್ತೊಂದೆಡೆ, ಡಿಕೆ ಶಿವಕುಮಾರ್ ನಿವಾಸದ ಬಳಿ ಅಭಿಮಾನಿಗಳು ಮತ್ತು ಕಾರ್ಯಕರ್ತರ ಗಿಜಿಗುಡುತ್ತಿದ್ದರೂ, ಡಾ. ಪರಮೇಶ್ವರ್ ನಿವಾಸದ ಬಳಿ ಯಾವುದೇ ಸಂಭ್ರಮಾಚರಣೆ ಅಥವಾ ಜನಸಂದಣಿ ಕಂಡುಬಂದಿಲ್ಲದೇ ಇರುವುದು ಸಹ ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:29 am, Wed, 3 June 26