
ಬಳ್ಳಾರಿ, ಜುಲೈ 22: ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಜನ ಕಂಗೆಟ್ಟಿದ್ದು, ಕುಟುಂಬ ಸಮೇತ ಗುಳೆ ಹೊರಟಿದ್ದಾರೆ. ಜಿಲ್ಲೆಯ ನೂರಾರು ತಾಂಡಾ ಹಾಗೂ ಹಳ್ಳಿಗಳ ಸಾವಿರಾರು ಜನ ತಂಡೋಪ ತಂಡವಾಗಿ ಊರುಬಿಡುತ್ತಿದ್ದು, ಇದು ಜಿಲ್ಲೆಯಲ್ಲಿನ ಭೀಕರ ಬರಗಾಲಕ್ಕೆ ಹಿಡಿದ ಕೈಗನ್ನಡಿಯಂತಿದೆ. ಮನೆಯಲ್ಲಿ ಹಿರಿ ಜೀವಗಳು ಹಾಗೂ ಪುಟಾಣಿ ಮಕ್ಕಳನ್ನ ಬಿಟ್ಟು ಉಳಿದವರೆಲ್ಲ ಹೊಟ್ಟೆ ತುಂಬಿಸಿಕೊಳ್ಳಲು ಅನ್ಯ ಊರುಗಳತ್ತ ಮುಖ ಮಾಡಿದ್ದಾರೆ.
ಬರದ ಛಾಯೆ ಹಿನ್ನೆಲೆ ತಾಂಡಾಗಳಿಂದಲೇ ಅತೀ ಹೆಚ್ಚು ಜನ ಗುಳೆ ಹೊರಟಿದ್ದಾರೆ. ಸ್ಥಳೀಯರು ಹೇಳುವಂತೆ ಬಳ್ಳಾರಿ ಜಿಲ್ಲೆಯಲ್ಲಿರುವ 20 ತಾಂಡಾಗಳಿಂದ 3,000ಕ್ಕೂ ಹೆಚ್ಚು ಜನ ಮತ್ತು ವಿಜಯನಗರ ಜಿಲ್ಲೆಯಲ್ಲಿನ 120 ತಾಂಡಾಗಳಿಂದ 10,000ಕ್ಕೂ ಹೆಚ್ಚು ಮಂದಿ ಊರು ತೊರೆದಿದ್ದಾರೆ. ಬೆಂಗಳೂರು, ಗೋವಾ, ಮಹಾರಾಷ್ಟ್ರ ಹೀಗೆ ಬೇರೆ ಬೇರೆ ಕಡೆ ಉದ್ಯೋಗ ಅರಸಿ ಹೊರಟಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಜಿಲ್ಲಾಡಳಿತವಾಗಲಿ ಅಧಿಕಾರಿಗಳಾಗಲೀ ಇನ್ನೂ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರಗಾಲದ ಛಾಯೆ; ಕೆರೆಗಳು ಬರಡು, ಬೆಳೆ ಒಣಗಿ ಅನ್ನದಾತ ಕಂಗಾಲು!
ಮಳೆ ಇಲ್ಲದೆ ಕೃಷಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಿಲ್ಲ. ಇದುವರೆಗೂ ಬಿತ್ತನೆ ಕಾರ್ಯವೂ ಆರಂಭವಾಗಿಲ್ಲ. ಇತ್ತ ಉದ್ಯೋಗ ಖಾತ್ರಿ ಯೋಜನೆಗಳಡಿಯೂ (ಈಗಿನ ವಿಬಿ ಜಿ ರಾಮ್ ಜಿ) ಸಮರ್ಪಕವಾಗಿ ಕೆಲಸ ಸಿಗುತ್ತಿಲ್ಲ. ಉದ್ಯೋಗ ಕೊಡಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದ್ದು, ಅಧಿಕಾರಿಗಳ ಕಿವಿ ಹಿಂಡಿ ಸ್ಥಳೀಯವಾಗಿ ಕೆಲಸ ಕೊಡಿಸಬೇಕಿದ್ದ ಜನಪ್ರತಿನಿಧಿಗಳೂ ಮೌನಕ್ಕೆ ಜಾರಿದ್ದಾರೆ. ಹೀಗಾಗಿ ಇಲ್ಲೇ ಇದ್ದರೆ ಮುಂದೆ ಉಪವಾಸ ಇರಬೇಕಾದ ಸ್ಥಿತಿ ಬರಲಿದೆ ಎಂಬ ಕಾರಣಕ್ಕೆ ಊರು ತೊರೆಯೋದು ಇಲ್ಲಿನವರಿಗೆ ಅನಿವಾರ್ಯ ಎಂಬುದು ಸಾರ್ವಜನಿಕರ ಮಾತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.