ಧರ್ಮಸ್ಥಳ ಪ್ರಕರಣಕ್ಕೆ ಅಧಿಕೃತವಾಗಿ ED ಎಂಟ್ರಿ, ತನಿಖೆ ಶುರುವಾಗಿದ್ದು ಎಲ್ಲಿಂದ ಗೊತ್ತಾ?
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಮಾಸ್ಕ್ ಮ್ಯಾನ್ ಚಿನ್ನಯ್ಯ ಮಾಡಿರುವ ಆರೋಪ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಂಬಂಧ ಎಸ್ಐಟಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ಬಲವಾದ ಕುರುಹುಗಳು ಪತ್ತೆಯಾಗಿಲ್ಲ. ಹೀಗಾಗಿ ಆರೋಪ ಮಾಡಿರುವ ಮಾಸ್ಕ್ ಮ್ಯಾನ್ ನನ್ನೇ ಎಸ್ಐಟಿ ಬಂಧಿಸಿ ವಿಚಾರಣೆಗೊಳಪಡಿಸಿದೆ. ಈ ನಡುವೆ ಇದೀಗ ಈ ಪ್ರಕರಣದಲ್ಲಿ ಅಧಿಕೃತವಾಗಿ ಇಡಿ(ನಿರ್ದೇಶನಾಲಯ) ಪ್ರವೇಶ ಮಾಡಿದೆ.

ಬೆಂಗಳೂರು/ಮಂಗಳೂರು, (ಸೆಪ್ಟೆಂಬರ್ 02): ಧರ್ಮಸ್ಥಳ ಪ್ರಕರಣಕ್ಕೆ (Dharmasthala Case) ಸಂಬಂಧಿಸಿದಂತೆ ವಿದೇಶದಿಂದ ಹಣಕಾಸು ವ್ಯವಹಾರ ನಡೆದಿದೆರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಧರ್ಮಸ್ಥಳದ ವಿರುದ್ಧ ನಡೆದ ಷಡ್ಯಂತ್ರವನ್ನು ಸಿಬಿಐ ಅಥವಾ ಎನ್‍ಐಎ ಸಂಸ್ಥೆಯಿಂದ ತನಿಖೆ ನಡೆಸಿದರೆ ಮಾತ್ರ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ಮತ್ತೊಂದೆಡೆ ರಾಜ್ಯ ಸರ್ಕಾರ ಎಸ್ಐಟಿ ತನಿಖೆ ಸಾಕು ಎನ್ನುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ( Enforcement Directorate (ED) ತನಿಖೆಗೆ ಎಂಟ್ರಿಯಾಗಿದೆ. ವಿದೇಶಿ NGO ಗಳಿಂದ ಹಣ ಫಂಡಿಂಗ್ ಆಗಿದೆಯಾ ಎಂಬ ಅನುಮಾನ ಹಿನ್ನೆಲೆಯಲ್ಲಿ ಒಡನಾಡಿ ಹಾಗೂ ಸಂವಾದ ಸಂಸ್ಥೆಗಳ ಅಕೌಂಟ್ ಗಳ ಬಗ್ಗೆ ಇಡಿ ಮಾಹಿತಿ ಸಂಗ್ರಹ ಮಾಡುವ ಕೆಲಸ ಆರಂಭಿಸಿದೆ. ಹೀಗಾಗಿ ಕೆಲ ಅಕೌಂಟ್ ಗಳ ಮಾಹಿತಿ ನೀಡುವಂತೆ ಬ್ಯಾಂಕ್ಗೆ ಇಡಿ ಪತ್ರದ ಮೂಲಕ ಮನವಿ ಮಾಡಿದೆ.
ಕಾನೂನು ಬಾಹಿರವಾಗಿ ಹಣ ಬಂದಿರುವ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು, ಕಳೆದ 5 ವರ್ಷಗಳ ಟ್ರಾನ್ಸ್ಕ್ಷನ್ ನೀಡುವಂತೆ ಕೆಲ ಬ್ಯಾಂಕ್‌ಗಳಿಗೆ ಪತ್ರ ಬರೆದಿದೆ. ವಿದೇಶದಿಂದ ಹಣ ಬಂದಿರುವ ಕುರಿತು ಮಾಹಿತಿ ಹಾಗೂ ಅದಕ್ಕೆ ಸಂಬಂಧಿಸಿದ ಪ್ರತಿಗಳು, ವಿದೇಶದಿಂದ ಹಣ ಬಂದರೆ ಅದಕ್ಕೆ ಕಾರಣವೇನು ಎಂಬುದನ್ನು ತಿಳಿಸುವಂತೆ ಬ್ಯಾಂಕ್ ಗಳಿಗೆ ಇಡಿ ಅಧಿಕಾರಿಗಳು ಪತ್ರದ ಮೂಲಕ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಚಿನ್ನಯ್ಯನಿಗೆ ಎಸ್ಐಟಿ ಗ್ರಿಲ್: ‘ಬುರುಡೆ’ ಕೊಟ್ಟಿದ್ದೇ ಜಯಂತ್! ಮತ್ತಷ್ಟು ಸ್ಫೋಟಕ ಸಂಗತಿ ಬಹಿರಂಗ
ಧರ್ಮಸ್ಥಳ ಕುರಿತು ಸಾಕಷ್ಟು ಅಪಪ್ರಚಾರ ಮಾಡಲಾಗಿದೆ. ಶವಗಳನ್ನು ಹೂತಿಡಲಾಗಿದೆ ಎನ್ನುವ ಸುದ್ದಿಗಳು ಕೂಡ ಹರಿದಾಡಿದ್ದವು. ಎಸ್ಐಟಿ ಪರಿಶೀಲನೆ ಮಾಡಿದಾಗ ಒಂದೋ, ಎರಡೋ ಬುರುಡೆ, ಮೂಳೆಗಳು ಪತ್ತೆ ಆಗಿದ್ದವು. ಮಾಸ್ಕ್ಮ್ಯಾನ್ ತೋರಿಸಿದ ಎಲ್ಲ ಕಡೆಯೂ ಮೂಳೆಗಳು ಏನು ಸಿಕ್ಕಿರಲಿಲ್ಲ. ಇದಾದ ಮೇಲೆ ತನಿಖೆ ಚುರುಕು ಪಡೆಯುತ್ತಿದ್ದಂತೆ ವಿದೇಶಗಳಿಂದ ಫಂಡಿಂಗ್ ಆಗಿರುವ ಆರೋಪಗಳು ಕೇಳಿ ಬಂದಿದ್ದವು. ಈ ದೂರು ಆಧರಿಸಿ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಒಂದು ವೇಳೆ ಭಾರೀ ಪ್ರಮಾಣದಲ್ಲಿ ಹಣ ವರ್ಗಾವಣೆಯಾಗಿರುವುದು ಇಡಿ ತನಿಖೆಯಲ್ಲಿ ಕಂಡುಬಂದರೆ ಹಲವರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.
ಕೋಟ ಶ್ರೀನಿವಾಸ ಪೂಜಾರಿ ಪತ್ರ
ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಯೂಟ್ಯೂಬರ್ಗಳಿಗೆ ವಿದೇಶಗಳಿಂದ ಹಣ ಸಂದಾಯವಾಗುತ್ತಿದೆ ಎಂಬ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯದಿಂದ ತನಿಖೆ ಮಾಡಿಸಬೇಕು ಎಂದು ಕೋರಿ ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಕೇಂದ್ರ ಗೃಹ ಸಚಿವ ಅಮಿತ್ ಶಾಗೆ (Amit Shah) ಪತ್ರ ಬರೆದಿದ್ದರು. ಧರ್ಮಸ್ಥಳ ದೇವಸ್ಥಾನಕ್ಕೆ ದೇಶ ವಿದೇಶಗಳಿಂದದ ಭಕ್ತರು ಬರುತ್ತಾರೆ. ಹೀಗಾಗಿ ದೇಗುಲದ ಪಾವಿತ್ರ್ಯತೆ ಉಳಿಸಬೇಕಿದೆ. ದೇವಾಲಯದ ಗೌರವಕ್ಕೆ ಧಕ್ಕೆ ಆಗಬಾರದು. ಅವರಿಗೆ ವಿದೇಶದಿಂದ ಹಣ ಬಂದ ಬಗ್ಗೆ ದೂರುಗಳು ಕೇಳಿಬಂದಿವೆ. ಹೀಗಾಗಿ ಇ.ಡಿ ಮೂಲಕ ತನಿಖೆ ನಡೆಸಲು ನಾನು ಒತ್ತಾಯ ಮಾಡಿದ್ದೇನೆ. ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ನಾನು ವ್ಯಕ್ತಿಗತವಾಗಿ ಪತ್ರ ಬರೆದಿಲ್ಲ. ಕರ್ನಾಟಕ ಸರ್ಕಾರ ಎಸ್ಐಟಿ ಮೂಲಕ ತನಿಖೆಗೆ ಸೂಚಿಸಿದ್ದಕ್ಕೆ ಸ್ವಾಗತವಿದೆ. ಆದರೆ, ಅನಾಮಧೇಯ ಭೀಮನಿಂದ ದಾರಿ ತಪ್ಪಿಸುವ ಕೆಲಸ ಆಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದರು.
Published On - 3:05 pm, Tue, 2 September 25



