ಟ್ರಾಫಿಕ್ ಫೈನ್ ಶೇ 50ರ ರಿಯಾಯಿತಿಯಿಂದ ಅಪಾಯವೆಂದ ತಜ್ಞರು: ಕಾರಣ ಏನು ಗೊತ್ತೇ?
ಸಂಚಾರ ದಂಡದಲ್ಲಿ ಶೇ 50 ರ ರಿಯಾಯಿತಿ ನೀಡುವ ಕ್ರಮಕ್ಕೆ ಪರ-ವಿರೋಧ ವ್ಯಕ್ತವಾಗಿದೆ. ಈ ಕ್ರಮದಿಂದ ರಸ್ತೆ ಸುರಕ್ಷತೆಗೆ ಅಪಾಯವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ರಿಯಾಯಿತಿಯಿಂದ ನಿಯಮ ಉಲ್ಲಂಘನೆಗೆ ಪ್ರೋತ್ಸಾಹ ನೀಡಿದಂತಾಗಲಿದೆ ಎಂಬುದು ಅವರ ವಾದ. ಸರ್ಕಾರವು ರಸ್ತೆ ಸುರಕ್ಷತಾ ಶಿಕ್ಷಣದತ್ತ ಗಮನ ಹರಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಬೆಂಗಳೂರು, ಆಗಸ್ಟ್ 25: 2023ರಲ್ಲಿ ನೀಡಿದಂತೆ ಈ ಬಾರಿಯೂ ಕರ್ನಾಟಕ ಸಾರಿಗೆ ಇಲಾಖೆ ಟ್ರಾಫಿಕ್ ಫೈನ್ಗೆ (Traffic Fine Discount) ಶೇ 50 ರಿಯಾಯಿತಿ ನೀಡಿ ಪಾವತಿ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕ್ರಮದ ಬಗ್ಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದರೆ, ಇಂಥ ಕ್ರಮಗಳಿಂದ ರಸ್ತೆ ಸುರಕ್ಷತೆಗೆ ಅಪಾಯ ಎದುರಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಸ್ತೆ ಸುರಕ್ಷತೆಯ ಬಗ್ಗೆ ಖಾತರಿಪಡಿಸುವಂಥ ಕ್ರಮಗಳನ್ನು ಕೈಗೊಳ್ಳುವ ಬದಲು ಸರ್ಕಾರವು, ‘ರಿಯಾಯಿತಿ ಸಿಗುತ್ತದೆ ಕಾಯಿರಿ’ ಎಂಬ ಸಂದೇಶವನ್ನು ವಾಹನ ಸವಾರರಿಗೆ ಕೊಟ್ಟಂತಾಗುತ್ತದೆ. ಸಂಚಾರ ನಿಯಮಗಳ ಉಲ್ಲಂಘನೆಗೆ ಪ್ರೋತ್ಸಾಹ ನೀಡಿದಂತಾಗಲಿದೆ ಎಂಬ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸಂಚಾರ ನಿಯಮಗಳ ಉಲ್ಲಂಘನೆಯ ದಂಡದಲ್ಲಿ ಶೇ 50 ರ ರಿಯಾಯಿತಿ ನೀಡುವುದರಿಂದ ತಪ್ಪು ಸಂದೇಶ ಕೊಟ್ಟಂತಾಗುತ್ತದೆ ಎಂದು ಟ್ರಾಫಿಕ್ ತಜ್ಞ ಪ್ರೊ. ಎಂಎನ್ ಶ್ರೀಹರಿ ಅಭಿಪ್ರಾಯಪಟ್ಟಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ದಂಡವನ್ನು ಸಂಗ್ರಹಿಸುವ ಬದಲು ಸರ್ಕಾರವು ನಿಯಮ ಉಲ್ಲಂಘಿಸುವವರಿಗೆ ಕೊಡುಗೆಗಳನ್ನು ನೀಡುತ್ತಿದೆ, ಇದು ಕಾನೂನುಬಾಹಿರ. ಕಾನೂನು ಉಲ್ಲಂಘಿಸುವ ಯಾರಿಗೂ ರಿಯಾಯಿತಿಗಳನ್ನು ನೀಡಬಾರದು, ದಂಡ ವಿಧಿಸಬೇಕು ಎಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ ಎಂದು ಅವರು ಹೇಳಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆಗೆ ಪ್ರೋತ್ಸಾಹ ಎಂದ ತಜ್ಞರು
ದಂಡದಲ್ಲಿ ರಿಯಾಯಿತಿ ನೀಡುವಂಥ ಕ್ರಮಗಳು ನಿಯಮಗಳನ್ನು ಉಲ್ಲಂಘಿಸಲು ಮತ್ತಷ್ಟು ಪ್ರೋತ್ಸಾಹಿಸುತ್ತವೆ. ಅಷ್ಟೇ ಅಲ್ಲದೆ, ಕಾನೂನು ಮತ್ತು ನಿಯಮಗಳ ಭಯವನ್ನು ಕಡಿಮೆ ಮಾಡುತ್ತದೆ. ರಿಯಾಯಿತಿಗಳನ್ನು ನೀಡುವ ಬದಲು, ಸರ್ಕಾರವು ರಸ್ತೆ ಸುರಕ್ಷತೆಯ ಬಗ್ಗೆ ಉಲ್ಲಂಘಿಸುವವರಿಗೆ ಶಿಕ್ಷಣ ನೀಡುವತ್ತ ಗಮನಹರಿಸಬೇಕು ಎಂದು ಎಂಎನ್ ಶ್ರೀಹರಿ ಹೇಳಿದ್ದಾರೆ.
ಯಾವಾಗ ಬೇಕಿದ್ದರೂ ದಂಡ ಪಾವತಿಸಬಹುದು. ದಂಡ ಪಾವತಿ ಮಾಡದೇ ಬಾಕಿ ಇಟ್ಟುಕೊಂಡರೆ ಮುಂದೊಂದು ದಿನ ಡಿಸ್ಕೌಂಟ್ ದೊರೆಯಬಹುದು ಎಂದು ವಾಹನ ಚಾಲಕರು ಭಾವಿಸಬಹುದು. ಅಷ್ಟೇ ಅಲ್ಲದೆ, ದಂಡದಲ್ಲಿನ ರಿಯಾಯಿತಿಯು ಪುನರಾವರ್ತಿತ ನಿಯಮ ಉಲ್ಲಂಘನೆಗಳಿಗೆ ಪ್ರೋತ್ಸಾಹಿಸಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಶೇ 50ರ ರಿಯಾಯಿತಿಯೊಂದಿಗೆ ಟ್ರಾಫಿಕ್ ಫೈನ್ ಆನ್ಲೈನ್, ಆಫ್ಲೈನ್ ಮೂಲಕ ಪಾವತಿಸುವ ಸುಲಭ ವಿಧಾನ ಇಲ್ಲಿದೆ
ದಂಡದಲ್ಲಿ ರಿಯಾಯಿತಿ ನೀಡುವ ಕ್ರಮವು ದೀರ್ಘಾವಧಿಯಲ್ಲಿ ಒಳ್ಳೆಯದಲ್ಲದಿದ್ದರೂ ಅನೇಕ ನಾಗರಿಕರಿಗೆ, ವಿಶೇಷವಾಗಿ ಹೆಚ್ಚಿನ ದಂಡದಿಂದ ಬಳಲುತ್ತಿರುವವರಿಗೆ ಒಂದು ಬಾರಿಗೆ ಆರ್ಥಿಕ ಪರಿಹಾರವನ್ನು ಒದಗಿಸುವ ಮೂಲಕ ಸಹಾಯ ಮಾಡಲಿದೆ ಎಂದು ಹಿರಿಯ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಡೆಲಿವರಿ ಬಾಯ್ಸ್, ಆಟೋ ರಿಕ್ಷಾ ಚಾಲಕರು ಮತ್ತು ಕ್ಯಾಬ್ ಚಾಲಕರು ಹೆಚ್ಚಾಗಿ ಸಂಚಾರ ನಿಯಮ ಉಲ್ಲಂಘಿಸುವವರಲ್ಲಿ ಸೇರಿದ್ದಾರೆ. ಅವರು ನಿಯಮಗಳನ್ನು ಉಲ್ಲಂಘಿಸಿ ದಂಡದ ಶೇ 50 ಮಾತ್ರ ಪಾವತಿಸುತ್ತಾರೆ ಮತ್ತು ನಂತರ ಅಪರಾಧವನ್ನು ಪುನರಾವರ್ತಿಸುತ್ತಾರೆ. ಇದು ಕೆಲವೊಮ್ಮೆ ಇತರ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಗಾಯಗಳಾಗುವುದು ಮತ್ತು ಸಾವುನೋವುಗಳಿಗೆ ಕಾರಣವಾಗುತ್ತವೆ ಎಂದು ಅವರು ಹೇಳಿದ್ದಾರೆ.




