ಕರ್ನಾಟಕದಲ್ಲಿ ಮುಂದಿನ ಐದಾರು ದಿನ ಭಾರೀ ಮಳೆ: ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಮುಂಗಾರು ಆಗಮನಕ್ಕೂ ಮುನ್ನೇ ಕರ್ನಾಟಕದಲ್ಲಿ ವರುಣನ ಅಬ್ಬರ ಜೋರಾಗಿದೆ. ರಾಜ್ಯ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಅದರಲ್ಲೂ ಬೆಂಗಳೂರಿನ ಸುರಿದ ಭಾರೀ ಮಳೆಯಿಂದಾಗಿ ಎಲ್ಲೆಡೆ ನೀರು ನುಗ್ಗಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಈ ನಡುವೆ ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದೆ. ಹಾಗಾದರೆ, ಇನ್ನೂ ಎಷ್ಟು ದಿನ ಮಳೆ? ಎಲ್ಲೆಲ್ಲಿ ಎನ್ನುವ ವಿವರ ಈ ಕೆಳಗಿನಂತಿದೆ.

ಕರ್ನಾಟಕದಲ್ಲಿ ಮುಂದಿನ ಐದಾರು ದಿನ ಭಾರೀ ಮಳೆ: ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
Rainfall

Updated on: May 22, 2025 | 9:17 PM

ಬೆಂಗಳೂರು, (ಮೇ 22): ಕರ್ನಾಟಕದಲ್ಲಿ (Karnataka) ಪೂರ್ವ ಮುಂಗಾರು ಮಳೆ ಭರ್ಜರಿಯಾಗಿದ್ದು, ವರುಣನ ಜನ ತತ್ತರಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ (Bengaluru) ಭಾನುವಾರ ಸುರಿದ ಒಂದೇ ಒಂದು ಮಳೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸದ್ಯ ಎರಡು ದಿನದಿಂದ ಮಳೆರಾಯ ಬಿಡುವು ನೀಡಿದ್ದಾನೆ ಎನ್ನುವಷ್ಟರಲ್ಲಿ ಹವಾಮಾನ ಇಲಾಖೆ ಮತ್ತೆ ಮಳೆ ಎಚ್ಚರಿ ಕೊಟ್ಟಿದ್ದು, ರಾಜ್ಯದಲ್ಲಿ ಮುಂದಿನ ಐದಾರು ದಿನಗಳ ಕಾಲ ಮಳೆಯಾಗಲಿದೆ ಎಂದು ಮುನ್ಸೂಚನೆ (rainfall forecast )ನೀಡಿದೆ.

ರಾಜ್ಯದಲ್ಲಿ ಮುಂದಿನ  ಐದಾರು ದಿನಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇಂದಿನಿಂದ ಮೇ 28ರ ತನಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಮೇತ ಮಳೆಯಾಗಲಿದೆ ಎಂದು ತಿಳಿಸಿದೆ. ಇನ್ನು ಬೆಂಗಳೂರಿನಲ್ಲಿ ಮಳೆ ಪ್ರಮಾಣ ಕಡಿಮೆ ಇದ್ದು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ಮಲೆನಾಡಿನಲ್ಲಿ ಭಾರಿ ಮಳೆಯಾಗೋ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಇಂದಿನಿಂದ ಮೆ.26ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮೇ 22-24ರವರೆಗೆ ಕೊಂಕಣ ಮತ್ತು ಗೋವಾದಲ್ಲಿ ಮತ್ತು ಮೇ 24 ರಂದು ಕರಾವಳಿ ಕರ್ನಾಟಕದಾದ್ಯಂತ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಮೇ 28 ರವರೆಗೆ ಕೇರಳ ಮತ್ತು ಕರ್ನಾಟಕದಾದ್ಯಂತ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ದಕ್ಷಿಣ ಪರ್ಯಾಯ ದ್ವೀಪದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ (ಗಂಟೆಗೆ 40-50 ಕಿಲೋಮೀಟರ್) ಇರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಧಾರಾಕಾರ ಮಳೆ ಹಿನ್ನೆಲೆ ಉಡುಪಿ, ಉತ್ತರ ಕನ್ನಡ ಜಿಲ್ಲಾಡಳಿತ ಮೀನುಗಾರಿಕೆಯನ್ನ ಸಂಪೂರ್ಣ ನಿಷೇಧಿಸಿದೆ. ಆಳಸಮುದ್ರಕ್ಕೆ ಹೋಗಿದ್ದ ಭಾರಿ ಗಾತ್ರದ ಬೋಟುಗಳು ವಾಪಸು ಬರುತ್ತಿವೆ. ಈಗಾಗಲೇ ಕೆಲವು ದಡದಲ್ಲಿ ಲಂಗರು ಹಾಕಿವೆ. ಮೀನುಗಾರಿಕಾ ಋತು ತಿಂಗಳ ಅಂತ್ಯದವರೆಗೂ ಇತ್ತು ಆದ್ರೆ ಮಳೆಯಿಂದಾಗಿ ಅವಧಿಗೂ ಮುನ್ನ ಮೀನುಗಾರಿಕಾ ಋತು ಅಂತ್ಯಗೊಂಡಿದೆ.

ಕಾಫಿನಾಡಿನಲ್ಲಿ ಐದು ದಿನಗಳ ಕಾಲ‌ ಆರೆಂಜ್ ಅಲರ್ಟ್

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು, ಮೇ 23 ರಿಂದ ಮೇ 27 ರ ವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕಳೆದ‌ 15 ದಿನಗಳಿಂದ ಧಾರಾಕಾರವಾಗಿ ಸುರಿದು ಎರಡು ದಿನಗಳ ಕಾಲ‌ ಬಿಡುವು ನೀಡಿದೆ. ಆದ್ರೆ, ಹವಾಮಾನ ಇಲಾಖೆ ಮುಂದಿನ ಐದು ದಿನ ಭಾರಿ ಮಳೆಯಾಗುವ ಸೂಚನೆ ನೀಡಿದೆ. ಮಲೆನಾಡು ಭಾಗ ಸೇರಿದಂತೆ ಬಯಲುಸೀಮೆ ಭಾಗದಲ್ಲೂ ಭಾರಿ ಮಳೆಯಾಗುವ ಸೂಚನೆ ನೀಡಿದ್ದು,, ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಹೈ ಅಲರ್ಟ್ ಘೋಷಿಸಲಾಗಿದೆ.

ಇನ್ನು ಭಾರೀ ಮಳೆ ಹಿನ್ನೆಲೆಯಲ್ಲಿ ಕಾರ್ಯ ಸ್ಥಾನ ಬಿಟ್ಟು ತೆರಳದಂತೆ ಮೆಸ್ಕಾಂ ಸಿಬ್ಬಂದಿಗಳು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಅಲ್ಲದೇ ಸ್ಥಳೀಯರು ,ಪ್ರವಾಸಿಗರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us