
ಬೆಂಗಳೂರು, ಆಗಸ್ಟ್ 24: ನಕಲಿ ಔಷಧ (Fake Medicine) ದಂಧೆ ಬಯಲಾಗಿರುವ ಬೆನ್ನಲ್ಲೇ, ಅಸಲಿ ಔಷಧ ಯಾವುದು, ನಕಲಿ ಔಷಧ ಯಾವುದು ಎಂಬುದನ್ನು ಪತ್ತೆಹಚ್ಚುವುದೇ ವೈದ್ಯರು ಹಾಗೂ ಔಷಧ ಮಾರಾಟ ಕ್ಷೇತ್ರದಲ್ಲಿರುವವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಸಲಿ ಔಷಧದಂತೆ ಕಾಣುವ ರೀತಿಯಲ್ಲಿ ನಕಲಿ ಉತ್ಪನ್ನಗಳನ್ನು ಸಿದ್ಧಪಡಿಸಿರುವುದರಿಂದ ಸಾಮಾನ್ಯ ಪರಿಶೀಲನೆಯಿಂದ ಅವುಗಳನ್ನು ಗುರುತಿಸುವುದು ಸುಲಭವಲ್ಲ ಎನ್ನಲಾಗುತ್ತಿದೆ.
ನಕಲಿ ಔಷಧಗಳ ಪ್ಯಾಕಿಂಗ್ ಹಾಗೂ ಲೇಬಲಿಂಗ್‌ನಲ್ಲಿ ಕೂಡ ಅಸಲಿ ಉತ್ಪನ್ನವನ್ನು ಹೋಲುವಂತೆ ನಿಖರತೆ ಕಾಯ್ದುಕೊಳ್ಳಲಾಗಿದೆ. ಬ್ಯಾಚ್ ನಂಬರ್ ಸೇರಿದಂತೆ ಔಷಧದ ಪ್ರಮುಖ ವಿವರಗಳಲ್ಲೂ ನಕಲು ಮಾಡಿರುವ ಸಾಧ್ಯತೆ ಇರುವುದರಿಂದ ಡ್ರಗಿಸ್ಟ್‌ಗಳು, ಕೆಮಿಸ್ಟ್‌ಗಳು ಹಾಗೂ ಫಾರ್ಮಸಿಸ್ಟ್‌ಗಳಿಗೂ ಅನುಮಾನಾಸ್ಪದ ಉತ್ಪನ್ನಗಳನ್ನು ಗುರುತಿಸುವುದು ಸವಾಲಾಗಿದೆ.
ಔಷಧದ ಪ್ಯಾಕೆಟ್ ಅಥವಾ ಬಾಟಲಿಯನ್ನು ಮೇಲ್ನೋಟಕ್ಕೆ ಪರಿಶೀಲಿಸುವುದರಿಂದ ಮಾತ್ರ ಅದು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಕಷ್ಟವಾಗಬಹುದು. ಪ್ಯಾಕಿಂಗ್, ಲೇಬಲ್ ಮತ್ತು ಬ್ಯಾಚ್ ವಿವರಗಳು ಅಸಲಿ ಔಷಧದ ಮಾದರಿಯಲ್ಲೇ ಇರುವುದರಿಂದ ಹೆಚ್ಚಿನ ಮಟ್ಟದ ಪರಿಶೀಲನೆ ಅಗತ್ಯವಾಗುತ್ತದೆ.
ನಕಲಿ ಔಷಧವನ್ನು ಖಚಿತವಾಗಿ ಗುರುತಿಸಲು ಪ್ರಯೋಗಾಲಯ ಪರೀಕ್ಷೆಯ ಅಗತ್ಯವೂ ಎದುರಾಗಬಹುದು. ಇದರಿಂದ ಒಂದೆಡೆ ನಕಲಿ ಔಷಧ ಜಾಲವನ್ನು ಪತ್ತೆಹಚ್ಚುವುದು ಕಷ್ಟವಾಗಿದ್ದರೆ, ಮತ್ತೊಂದೆಡೆ ಇಂತಹ ಔಷಧಗಳು ರೋಗಿಗಳ ಕೈಗೆ ತಲುಪದಂತೆ ತಡೆಯುವುದು ಅಧಿಕಾರಿಗಳಿಗೆ ಮತ್ತಷ್ಟು ಸವಾಲಾಗಿದೆ.
ನಕಲಿ ಔಷಧ ಮತ್ತು ಅಸಲಿ ಔಷಧದ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗದ ಪರಿಸ್ಥಿತಿ ರೋಗಿಗಳ ಸುರಕ್ಷತೆ ಕುರಿತು ಆತಂಕ ಹೆಚ್ಚಿಸಿದೆ. ವೈದ್ಯರ ಸಲಹೆಯಂತೆ ಔಷಧ ಸೇವಿಸಿದರೂ ಅದು ನಕಲಿಯಾಗಿದ್ದರೆ ಚಿಕಿತ್ಸೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಔಷಧ ಪೂರೈಕೆ ವ್ಯವಸ್ಥೆಯಲ್ಲಿ ಕಟ್ಟುನಿಟ್ಟಿನ ನಿಗಾ ಅಗತ್ಯವಾಗಿದೆ.
ನಕಲಿ ಔಷಧಗಳ ಹಾವಳಿ ತಡೆಯಲು ತಂತ್ರಜ್ಞಾನ ಆಧಾರಿತ ಭದ್ರತಾ ವ್ಯವಸ್ಥೆ ರೂಪಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ರಾಜ್ಯದಲ್ಲಿ ಮಾರಾಟವಾಗುವ ಔಷಧಗಳಿಗೆ ಹಾಲೋಗ್ರಾಂ ಮತ್ತು QR ಕೋಡ್‌ನಂತಹ ಗುರುತುಗಳನ್ನು ಅಳವಡಿಸುವಂತೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ಮನವಿ ಮಾಡಿದೆ.
ಪ್ರತಿಯೊಂದು ಔಷಧಕ್ಕೂ ವಿಶಿಷ್ಟ ಹಾಲೋಗ್ರಾಂ ಅಥವಾ QR ಕೋಡ್‌ನಂತಹ ಡಿಜಿಟಲ್ ಗುರುತು ನೀಡಿದರೆ ಅದರ ಅಸಲಿತನ ಪರಿಶೀಲಿಸಲು ಗ್ರಾಹಕರು ಹಾಗೂ ಔಷಧ ಮಾರಾಟಗಾರರಿಗೆ ನೆರವಾಗಬಹುದು ಎಂಬುದು IMAಯ ಅಭಿಪ್ರಾಯ. ಇಂತಹ ವ್ಯವಸ್ಥೆಯಿಂದ ನಕಲಿ ಉತ್ಪನ್ನಗಳಿಗೆ ಅಸಲಿ ಔಷಧದಂತೆಯೇ ನಿಖರವಾಗಿ ಲೇಬಲ್ ಅಳವಡಿಸುವುದು ಮತ್ತಷ್ಟು ಕಷ್ಟವಾಗಲಿದೆ.
ಇತ್ತೀಚೆಗೆ ಪತ್ತೆಯಾಗಿರುವ ನಕಲಿ ಔಷಧ ಜಾಲದ ಹಿನ್ನೆಲೆಯಲ್ಲಿ, ಔಷಧ ತಯಾರಿಕೆಯಿಂದ ಹಿಡಿದು ಆಸ್ಪತ್ರೆ ಹಾಗೂ ಫಾರ್ಮಸಿಗಳಲ್ಲಿ ರೋಗಿಗಳಿಗೆ ತಲುಪುವವರೆಗಿನ ಸಂಪೂರ್ಣ ಪೂರೈಕೆ ಸರಪಳಿಯನ್ನು ತಂತ್ರಜ್ಞಾನದ ಮೂಲಕ ನಿಗಾ ವಹಿಸುವ ಅಗತ್ಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:16 am, Mon, 24 August 26