ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಗೊಬ್ಬರ ಕೊರತೆಯ ಬರೆ: ಇಂದು ಕರ್ನಾಟಕದಾದ್ಯಂತ ಬಿಜೆಪಿ ಹೋರಾಟ

ಕೇಂದ್ರ ಸರ್ಕಾರ ಗೊಬ್ಬರ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪ. ಕೊಟ್ಟ ಗೊಬ್ಬರವನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಬಿಜೆಪಿ ತಿರುಗೇಟು. ಇವರಿಬ್ಬರ ಗೊಬ್ಬರ ಗುದ್ದಾಟದಲ್ಲಿ ರೈತ ಕಂಗಲಾಗಿದ್ದಾನೆ. ಕೊರತೆ ವಿಚಾರವಾಗಿ ಸಮರಕ್ಕಿಳಿದಿರುವ ನಾಯಕರು ಕೆಸರೆರಾಚಾಟದಲ್ಲಿ ತೊಡಗಿದ್ದಾರೆ. ಆದರೆ, ಮಳೆ ಬಿದ್ದ ಖುಷಿಯಲ್ಲಿ ಗೊಬ್ಬರ ಖರೀದಿಗೆ ಬಂದ ರೈತರಿಗೆ ಇನ್ನೂ ಗೊಬ್ಬರ ಸಿಕ್ಕಿಲ್ಲ. ಹೀಗಾಗಿ ಇಂದು ಬಿಜೆಪಿ ರೈತ ಮೋರ್ಚಾ ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾಗಿದೆ.

ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಗೊಬ್ಬರ ಕೊರತೆಯ ಬರೆ: ಇಂದು ಕರ್ನಾಟಕದಾದ್ಯಂತ ಬಿಜೆಪಿ ಹೋರಾಟ
ಗೊಬ್ಬರ ಕೊರತೆ, ಎಲ್ಲಿ ಹೋದರೂ ‘‘ನೋ ಸ್ಟಾಕ್’’ ಬೋರ್ಡ್
Updated By: Ganapathi Sharma

Updated on: Jul 28, 2025 | 7:40 AM

ಬೆಂಗಳೂರು, ಜುಲೈ 28: ಕರ್ನಾಟಕದಾದ್ಯಂತ (Karnataka) ಉತ್ತಮ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ ಇಳೆ ಕಂಗೊಳಿಸುತ್ತಿದೆ. ವರುಣನ ಕೃಪೆಗೆ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ಉತ್ಕೃಷ್ಟ ಬೆಳೆಯ ನಿರೀಕ್ಷೆಯಲ್ಲಿರುವ ರೈತ, ಈ ಬಾರಿ ಉತ್ತಮ ಫಸಲು ತೆಗೆಯುವ ಕನಸು ಹೊತ್ತು ಹೆಜ್ಜೆ ಇಟ್ಟಿದ್ದಾನೆ. ಹೀಗೆ ಹೆಜ್ಜೆ ಇಟ್ಟ ಅನ್ನದಾತನಿಗೆ ಗೊಬ್ಬರ ಕೊರತೆಯ (Fertilizer Shortage) ಕಲ್ಲು ಎದೆಗೆ ಬಡಿದಿದೆ. ಎಲ್ಲಿ ಹೋದರೂ ‘‘ನೋ ಸ್ಟಾಕ್’’ ಬೋರ್ಡ್.

ಕಾಂಗ್ರೆಸ್, ಬಿಜೆಪಿ ಮಧ್ಯೆ ಗೊಬ್ಬರ ಗುದ್ದಾಟ

ಮಳೆ ಬಂದ್ರೂ ಗೊಬ್ಬರವಿಲ್ಲ, ಬೆಳೆ ಕೈತಪ್ಪುವ ಭಯ, ಬಿತ್ತನೆ ಸಮಯ ಮುಗಿದು ಹೋಗುವ ಭೀತಿ. ಕೇಂದ್ರ ಗೊಬ್ಬರ ಪೂರೈಸಿದರೂ ರಾಜ್ಯ ಸರ್ಕಾರ ಕೊಡುತ್ತಿಲ್ಲವೇ? ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದಲೇ ಸರಬರಾಜು ಆಗುತ್ತಿಲ್ಲವೇ? ಏನೇನೂ ಮಾಹಿತಿ ಸಿಗದ ರೈತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಅನ್ನದಾತನ ಭಯಕ್ಕೆ ಆತ್ಮಸ್ಥೈರ್ಯ ತುಂಬಬೇಕಿದ್ದ ನಾಯಕರು ಕೊರತೆ ವಿಚಾರವಾಗಿ ಗೊಬ್ಬರ ಗುದ್ದಾಟದಲ್ಲಿ ತೊಡಗಿದ್ದಾರೆ. ಕೆಸೆರೆರಾಚಟದಲ್ಲಿ ನಿರತರಾಗಿದ್ದಾರೆ.

ರಸಗೊಬ್ಬರ ಪೂರೈಕೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಬರೆದಿರುವ ಪತ್ರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಿಗಿ ನಿಗಿ ಕೆಂಡವಾಗಿದ್ದಾರೆ. ಮಳೆ ಬರುವ ಮೊದಲೇ ಮೋದಿಗೆ ಪತ್ರ ಬರೆಯಬೇಕಿತ್ತು ಎಂದಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರುವ ಪರಮೇಶ್ವರ್, ಕೇಂದ್ರದಿಂದಲೇ ಗೊಬ್ಬರ ಪೂರೈಕೆಯಾಗಿಲ್ಲ ಎಂದಿದ್ದಾರೆ. ಇದಕ್ಕೆ ಪಂಚ್ ಕೊಟ್ಟ ವಿಜಯೇಂದ್ರ, ಎರಡೂವರೆ ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ

ರಾಜ್ಯ ಸರ್ಕಾರವೇ ಗೊಬ್ಬರ ಕೊರತೆಗೆ ಕಾರಣ ಎಂದು ಆರೋಪಿಸುತ್ತಿರುವ ಬಿಜೆಪಿ, ರೈತರ ಸಂಕಷ್ಟವನ್ನು ಮುಂದಿಟ್ಟು ಹೋರಾಟಕ್ಕೆ ಮುಂದಾಗಿದೆ. ಇಂದು ರಾಜ್ಯಾದ್ಯಂತ ಹೋರಾಟಕ್ಕಿಳಿಯಲಿದೆ. ಬಿಜೆಪಿ ರೈತ ಮೋರ್ಚಾದ ಕಾರ್ಯಕರ್ತರು ಜಿಲ್ಲೆ ಜಿಲ್ಲೆಯಲ್ಲೂ ಪ್ರತಿಭಟಿಸಲಿದ್ದಾರೆ.

ಕೊಪ್ಪಳ ತಾಲೂಕಿನ ಕುಣಕೇರಿ ತಾಂಡಾದ ರೈತ ಚಂದ್ರಪ್ಪ, ಗೊಬ್ಬರಕ್ಕೋಸ್ಕರ ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ‘ಟಿವಿ9’ ಮಾಡಿದ್ದ ವರದಿ ನೋಡಿದ ಬಿಜೆಪಿ ತಂಡ ಇಂದು ರೈತರ ಚಂದ್ರಪ್ಪ ಮನೆಗೆ ಭೇಟಿ ನೀಡಲಿದೆ. ರೈತ ಮೋರ್ಚಾ ರಾಜ್ಯಾಧ್ಯಕ್ಷ ಎಎಸ್ ಪಾಟೀಲ್ ನಡಹಳ್ಳಿ ನೇತೃತ್ವದ ನಿಯೋಗ ಭೇಟಿ ನೀಡಿ ರೈತನಿಗೆ ನ್ಯಾಯ ದೊರಕಿಸಿ ಕೊಡಲಿದೆ.

ಕಡ್ಡಾಯ ನಿಯಮವೇ ಗೊಬ್ಬರ ಕೊರತೆಗೆ ಕಾರಣವಾಯ್ತಾ?

ಅಂದಹಾಗೆ ಯೂರಿಯಾ ಜೊತೆ ನ್ಯಾನೋ ಯೂರಿಯಾ ಖರೀದಿ ಮಾಡಬೇಕೆಂಬ ಕಡ್ಡಾಯ ನಿಮಯವಿದೆ. ಆದರೆ, ರೈತರು ನ್ಯಾನೋ ಯೂರಿಯಾ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಯೂರಿಯಾವನ್ನು ನಾವು ಮಾರಾಟ ಮಾಡುತ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ನ್ಯಾನೋ ಯೂರಿಯಾ ಕಡ್ಡಾಯ ನಿಯಮ ಹಿಂಪಡೆಯಲು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಾದ್ಯಂತ ರಸಗೊಬ್ಬರದ ಬರ: ರೈತರು ಕಂಗಾಲು, ಎಲ್ಲಿಗೆ ಹೋಗಿ ಕೇಳಿದರೂ ‘ನೋ ಸ್ಟಾಕ್’ ಬೋರ್ಡ್

ಕಾರಣಗಳೇನೇ ಇರಲಿ, ಸಮಸ್ಯೆಯ ಮೂಲ ಕಾರಣವನ್ನು ನಾಯಕರು ಹುಡುಕಬೇಕಿದೆ. ಎಲ್ಲಿ ಸಮಸ್ಯೆ ಆಗಿದೆ ಎಂಬುದನ್ನು ಪತ್ತೆ ಹಚ್ಚಿ ಪರಿಹಾರ ನೀಡಬೇಕಿದೆ. ಆದರೆ ಇದ್ಯಾವುದಕ್ಕೂ ನಾಯಕರು ಮುಂದಾದಂತೆ ಕಾಣಿಸುತ್ತಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ