ಕರ್ನಾಟಕದ ಇಂದಿರಾ ಗಾಂಧಿ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ನಿಧನ
ಕರ್ನಾಟಕದ ಇಂದಿರಾ ಗಾಂಧಿ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ (90) ಅವರು ಶನಿವಾರ ನಗರದ ಪಿ.ಜೆ.ಬಡಾವಣೆಯಲ್ಲಿರುವ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನಾಳೆ ಮಧ್ಯಾಹ್ನ 3 ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ದಾವಣಗೆರೆ, ಮಾರ್ಚ್ 16: ಕರ್ನಾಟಕದ ಇಂದಿರಾ ಗಾಂಧಿ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ (90) (Nagamma Keshavamurthy) ಅವರು ಶನಿವಾರ ನಗರದ ಪಿ.ಜೆ.ಬಡಾವಣೆಯಲ್ಲಿರುವ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನಾಳೆ ಮಧ್ಯಾಹ್ನ 3 ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಾಳೆ ದಾವಣಗೆರೆಯ ಪಿ.ಬಿ.ರಸ್ತೆಯ ವೈಕುಂಠಧಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಬೆಂಗಳೂರಿನ ಎಂ.ಎನ್ ರಾಮನ್ ಮತ್ತು ಸಾಕಮ್ಮ ದಂಪತಿಯ ಪುತ್ರಿ ನಾಗಮ್ಮ ಅವರು 1951ರಲ್ಲಿ ದಾವಣಗೆರೆ ಮೂಲದ ಉದ್ಯಮಿಯ ಪುತ್ರನನ್ನು ವಿವಾಹ ಮಾಡಿಕೊಂಡರು. ಇವರಿಗೆ ಪುತ್ರ ಡಾ. ಜಯಂತ್, ಸೊಸೆ ಹಾಗೂ ಮೊಮ್ಮಗಳು ಇದ್ದಾರೆ.
1972, 1978, 1989ರಲ್ಲಿ ಕಾಂಗ್ರೆಸ್ ಶಾಸಕಿಯಾಗಿ ಆಯ್ಕೆಯಾಗಿದ್ದರು. ಗುಂಡೂರಾವ್, ಬಂಗಾರಪ್ಪ, ಮೊಯ್ಲಿ ಸಂಪುಟದಲ್ಲಿ ಸಚಿವೆ ಆಗಿ ಸೇವೆ ಮಾಡಿದ್ದಾರೆ. ಬೃಹತ್ ಕೈಗಾರಿಕೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹಾಗೂ ವಿಧಾನಸಭೆಯ ಉಪಸಭಾಪತಿಯಾಗಿ ಸೇವೆ ಸಲ್ಲಿದ್ದಾರೆ. ಬಳ್ಳಾರಿ ಸಿದ್ದಮ್ಮ ಅವರ ಬಳಿಕ ದಾವಣಗೆರೆ ಜಿಲ್ಲೆಯ ಮಹಿಳಾ ಶಾಸಕಿ ನಾಗಮ್ಮ ಕೇಶವಮೂರ್ತಿ. ಗ್ರಾಮಾಂತರ ಪ್ರದೇಶದಲ್ಲಿ ಹೈಸ್ಕೂಲ್ ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಅದರಲ್ಲಿಯೂ ಪ್ರಮುಖವಾಗಿ 1 ರಿಂದ 4 ನೇ ತರಗತಿಯವರೆಗೆ ಕನ್ನಡ ಮಾಧ್ಯಮವನ್ನು ಕಡ್ಡಾಯವಾಗಿ ಬಳಸಬೇಕೆಂದು ಹೋರಾಡಿದವರು. ಪ್ರಾಥಮಿಕ ಶಾಲಾ ಹಂತದಲ್ಲಿ ಹೆಣ್ಣುಮಕ್ಕಳಿಗೆ 50% ಮೀಸಲಾತಿಯನ್ನು ಜಾರಿಗೊಳಿಸಿದರು. ಹೆಚ್ಚುವರಿಯಾಗಿ, ಅವರು ಹಲವಾರು ರಾಜ್ಯ ಮತ್ತು ವಲಯ ಮಟ್ಟದ ಶಿಕ್ಷಣ ಮಂಡಳಿಗಳಿಗೆ ಸಲಹಾ ಬೆಂಬಲಿಗರಾಗಿದ್ದರು.
ಇದನ್ನೂ ಓದಿ: ಜಿಎಂ ಸಿದ್ದೇಶ್ವರ್ ಸಾಧನೆ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆರ್ ಅಶೋಕ ಭಾಗಿಯಾದರೂ ಸ್ಥಳೀಯ ಬಿಜೆಪಿ ನಾಯಕರ ಗೈರು
ವನಿತಾ ಸಮಾಜದ ಮೂಲಕ ಮಹಿಳೆಯರ ಸೇವೆ, ರಾಜಕೀಯಕ್ಕಿಂತಲೂ ಸಮಾಜ ಸೇವೆಯಲ್ಲಿ ಹೆಸರು ಮಾಡಿದ್ದ ನಾಗಮ್ಮ ಕೇಶವಮೂರ್ತಿ ಅವರು, ವನಿತಾ ಸಮಾಜದ ಮೂಲಕ ವೃದ್ಧಾಶ್ರಮ, ಅನಾಥ ಮಹಿಳೆಯರಿಗೆ ಆಶ್ರಯರಾಗಿದ್ದರು.
ಕಾಂಗ್ರೆಸ್ ಪಕ್ಷದೊಳಗೆ ನಾಗಮ್ಮ ಅವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ರಾಜ್ಯ ಉಪಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಮಹಿಳಾ ಘಟಕದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ವನಿತಾ ಸಮಾಜದಂತಹ ಸಂಘಟನೆಗಳ ಮೂಲಕ ಅವರು ಸಕ್ರಿಯವಾಗಿ ಭಾಗವಹಿಸಿದ ಕಾರಣ ಸಾಮಾಜಿಕ ಕಲ್ಯಾಣಕ್ಕಾಗಿ ಅವರ ಬದ್ಧತೆಯು ರಾಜಕೀಯವನ್ನು ಮೀರಿ ಬೆಳೆಯಲು ಸಹಕಾರಿಯಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:42 pm, Sat, 16 March 24