ಭರವಸೆ ಈಡೇರಿಸದ ಸರ್ಕಾರ: ಮತ್ತೆ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ ಸಾರಿಗೆ ನೌಕರರು
Freedom Park Chalo: 4 ನಿಗಮದ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ. ಫ್ರೀಡಂಪಾರ್ಕ್ನಲ್ಲಿ ಸಮಾಲೋಚನೆ ಸಭೆ ಮಾಡುತ್ತೇವೆ. ಸಭೆಯಲ್ಲಿ ಮುಷ್ಕರದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಆನಂದ್ ತಿಳಿಸಿದರು.
ಬೆಂಗಳೂರು: ಈ ಹಿಂದೆ ನಾವು ಪ್ರತಿಭಟನೆ ನಡೆಸಿದ್ದಾಗ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು. ಆದರೆ ಈವರೆಗೆ ಒಂದೂ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಸಾರಿಗೆ ನೌಕರರು ಆರೋಪಿಸಿದ್ದಾರೆ. ಸರ್ಕಾರದ ವಿರುದ್ಧ ಮತ್ತು ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದ್ದಾರೆ. ಸಾರಿಗೆ ನೌಕರರ ಒಂದು ಬೇಡಿಕೆಯನ್ನೂ ಸರ್ಕಾರ ಈಡೇರಿಸಿಲ್ಲ. ಹೀಗಾಗಿ ಮಾರ್ಚ್ 2ಕ್ಕೆ ಫ್ರೀಡಂಪಾರ್ಕ್ ಚಲೋಗೆ ಕರೆ ನೀಡಲಾಗಿದೆ ಎಂದು ಬಿಎಂಟಿಸಿ ನೌಕರರ ಸಂಘದ ಅಧ್ಯಕ್ಷ ಆನಂದ್ ತಿಳಿಸಿದ್ದಾರೆ.
KSRTC, BMTC ಸೇರಿ ರಾಜ್ಯದ ನಾಲ್ಕೂ ನಿಗಮಗಳ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ. ಫ್ರೀಡಂಪಾರ್ಕ್ನಲ್ಲಿ ಸಮಾಲೋಚನೆ ಸಭೆ ಮಾಡುತ್ತೇವೆ. ಸಭೆಯಲ್ಲಿ ಮುಷ್ಕರದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಆನಂದ್ ತಿಳಿಸಿದರು.
ಡಿಸೆಂಬರ್ನಲ್ಲಿ ನಾವು 4 ದಿನಗಳ ಕಾಲ ಬಸ್ ನಿಲ್ಲಿಸಿ ಮುಷ್ಕರ ನಡೆಸಿದ್ದೆವು. ಆಗ ಸರ್ಕಾರ ನಮ್ಮ 9 ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಇಲ್ಲಿಯವರೆಗೆ ಯಾವುದೇ ಒಂದು ಬೇಡಿಕೆಯನ್ನ ಈಡೇರಿಸಿಲ್ಲ. ಕೇವಲ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನ ನೀಡುತ್ತಿದ್ದಾರೆ. ನಾವು ಸರ್ಕಾರಕ್ಕೆ ಕೊಟ್ಟಿದ್ದ 3 ತಿಂಗಳ ಗಡುವು ಮುಗಿಯುತ್ತ ಬಂದಿದೆ. ಆದರೆ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮಾರ್ಚ್ 2 ರಂದು ಫ್ರೀಡಂಪಾರ್ಕ್ ಚಲೋಗೆ ಕರೆ ನೀಡಿದ್ದೇವೆ ಎಂದು ಹೇಳಿದ್ದಾರೆ.
ಸಾರಿಗೆ ನೌಕರರಿಗೆ ಸರ್ಕಾರ ನೀಡಿದ್ದ ಭರವಸೆಗಳು 1. ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ. 2. ಕೋವಿಡ್ ಸೋಂಕು ತಗುಲಿದ ನಿಗಮದ ನೌಕರರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ಸರ್ಕಾರಿ ನೌಕರರು ನೀಡಿದಂತೆ 30 ಲಕ್ಷ ರೂ. ಪರಿಹಾರ ನೀಡಲಾಗುವುದು. 3. ಅಂತರ್ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರಚಿಸಲು ತೀರ್ಮಾನಿಸಲಾಗಿದೆ. 4. ತರಬೇತಿಯಲ್ಲಿರುವ ನೌಕರರನ್ನು ತರಬೇತಿ ಅವಧಿಯನ್ನು 02 ವರ್ಷದಿಂದ 01 ವರ್ಷಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. 5. ನಿಗಮದಲ್ಲಿ ಹೆಚ್.ಆರ್.ಎಂ.ಎಸ್ (ಮಾನವ ಸಂಪನ್ಮೂಲ) ವ್ಯವಸ್ಥೆಯನ್ನು ಜಾರಿ ಗೊಳಿಸಲಾಗುವುದು. 6. ಸಿಬ್ಬಂದಿಯು ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆಯನ್ನು (ಬಾಟಾ) ಕೊಡಲು ತೀರ್ಮಾನಿಸಲಾಗಿದೆ. 7. ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆಯನ್ನು ರೂಪಿಸಲಾಗುವುದು. 8. ಎನ್.ಐ.ಎನ್.ಸಿ (ನಾಟ್ ಇಶ್ಯೂಡ್-ನಾಟ್ ಕಲೆಕ್ಟೆಡ್) ಪದ್ಧತಿ ಬದಲಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುವುದು. 9. ವೇತನ ವಿಷಯಕ್ಕೆ ಸಂಬಂಧಿಸಿದಂತೆ ತೀರ್ಮಾನಿಸುವ ಸಂದರ್ಭದಲ್ಲಿ ಸಾರಿಗೆ ನೌಕರರು ಹಲವಾರು ಬೇಡಿಕೆಗಳನ್ನು ಇಟ್ಟಿದ್ದು, ಅದರಲ್ಲಿ 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಪರಿಗಣಿಸುವಂತೆ ಕೋರಲಾಗಿತ್ತು.
ಈ ಬೇಡಿಕೆಗಳ ಬಗ್ಗೆ ಸರ್ಕಾರವು ಆರ್ಥಿಕ ಅಂಶಗಳನ್ನು ಪರಿಗಣಿಸಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿತ್ತು. ಆದರೆ ಸರ್ಕಾರ ನೀಡಿರುವ ಹೇಳಿರುವ ಯಾವ ಬೇಡಿಕೆಗಳು ಈಡೇರಿಲ್ಲ ಎಂದು ಸಾರಿಗೆ ನೌಕರರು ಇದೀಗ ಆರೋಪಿಸಿದ್ದು, ಮಾರ್ಚ್ 2ಕ್ಕೆ ಫ್ರೀಡಂಪಾರ್ಕ್ ಚಲೋ ನಡೆಸಿ, ಮುಂದಿನ ಹೋರಾಟದ ರೂಪುರೂಷೆಗಳನ್ನು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ
ಸರಿಯಾಗಿ ಸಂಬಳ ಸಿಗದೆ, ಕಿಡ್ನಿ ಮಾರಾಟಕ್ಕೆ ಮುಂದಾದ ಸಾರಿಗೆ ಸಂಸ್ಥೆ ಉದ್ಯೋಗಿ
Published On - 6:24 pm, Sun, 28 February 21