
ಬೆಂಗಳೂರು, ಆಗಸ್ಟ್ 31: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಹಿ ತಿಂಡಿ (Sweet food), ಬೇಕರಿ ಹಾಗೂ ವಿವಿಧ ಆಹಾರ ಉತ್ಪನ್ನಗಳ ತಯಾರಿಕಾ ಘಟಕಗಳ ಮೇಲೆ ಇಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಾಗೂ ಎಫ್‌ಡಿಎ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಆ ಮೂಲಕ ಶಾಕ್ ನೀಡಲಾಗಿದೆ. ಇನ್ನು ಈ ವಿಶೇಷ ಕಾರ್ಯಾಚರಣೆ ವೇಳೆ ಸುಮಾರು 5 ಲಕ್ಷ 99 ಸಾವಿರ ರೂ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.
5 ಲೀಟರ್ ಎಕ್ಸ್‌ಪೈರಿ ಆಗಿದ್ದ ನಂದಿನಿ ಮೊಸರು, 6 ಕೆಜಿ ಕಳಪೆ ಕೋವಾ, 10 ಕೆಜಿ ಚಾಕೊಲೇಟ್ ಫ್ಲೇವರ್ ಹಾಗೂ 5 ಕೆಜಿ ರಸಗುಲ್ಲಾ. ತಪ್ಪು ಲೇಬಲಿಂಗ್ ಹೊಂದಿದ್ದ ಚಾಕೊಲೇಟ್‌ಗಳು, ಕೇಕ್ ಅಲಂಕಾರ ಪದಾರ್ಥಗಳು ಹಾಗೂ ತಪ್ಪು ಬ್ರಾಂಡಿಂಗ್ ಮಾಡಲಾಗಿದ್ದ 60 ಕೆಜಿ ಬಾಳೆಕಾಯಿ ಚಿಪ್ಸ್ ಮತ್ತು ಚಕ್ಕುಲಿ ಮಸಾಲಾ. 360 ಕೆಜಿ ರೆಡಿ-ಟು-ಈಟ್ ಸೆವೇರಿಯಸ್, 196 ಕೆಜಿ ಸೋನ್‌ಪಾಪಡಿ, 4 ಕೆಜಿ ಕೋಕೋ ಪೌಡರ್ ಮತ್ತು 4.5 ಕೆಜಿ ಕ್ರಾಕ್ಡ್ ಕೋಕೋ ಪೀಸ್‌ಗಳು ಪತ್ತೆ ಆಗಿವೆ.
ಒಟ್ಟು 16 ಆಹಾರ ತಯಾರಿಕಾ ಘಟಕಗಳಿಗೆ ದಿಢೀರ್ ಭೇಟಿ ಮಾಡಿದ ಅಧಿಕಾರಿಗಳಿಗೆ ಹಲವೆಡೆ ಕನಿಷ್ಠ ಸ್ವಚ್ಛತೆಯೂ ಇಲ್ಲದೆ ಅತ್ಯಂತ ಕಳಪೆ ವಾತಾವರಣದಲ್ಲಿ ತಿಂಡಿ-ತಿನಿಸುಗಳನ್ನು ತಯಾರಿಸುತ್ತಿರುವುದು ಕಂಡುಬಂದಿದೆ. FSSAI ಸುರಕ್ಷತಾ ಮಾನದಂಡಗಳನ್ನು ಗಾಳಿಗೆ ತೂರಿದ್ದ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಇಲಾಖೆ ಸಜ್ಜಾಗಿದೆ. ಒಟ್ಟು 16 ವಿವಿಧ ಆಹಾರ ಮಾದರಿಗಳನ್ನು ಸಂಗ್ರಹಿಸಿ ನಿಖರ ಗುಣಮಟ್ಟ ಹಾಗೂ ಕಲಬೆರಕೆ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು: ಹಬ್ಬಕ್ಕೂ 14 ದಿನ ಮುಂಚಿತವಾಗಿಯೇ ತಪಾಸಣೆ ಶುರು
ಎಣ್ಣೆ, ಮರುಬಳಕೆಯ ತಾಜಾ ಎಣ್ಣೆ, ಬೆಲ್ಲ, ಕಡಲೆ, ಜಿಲೇಬಿ, ಕೋವಾ ಮತ್ತು ಟೀ ಪೌಡರ್ ಸೇರಿದಂತೆ ಹಲವು ಪದಾರ್ಥಗಳ ಸ್ಯಾಂಪಲ್‌ಗಳನ್ನು ತಜ್ಞರ ಪರೀಕ್ಷೆಗೆ ಕಳುಹಿಸಲಾಗಿದೆ. ಲ್ಯಾಬ್ ವರದಿ ಬಂದ ಬಳಿಕ ಕಲಬೆರಕೆ ಸಾಬೀತಾದರೆ ಸಂಬಂಧಪಟ್ಟ ಘಟಕಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕಾನೂನು ಹೋರಾಟ ನಡೆಸುವುದಾಗಿ ಆಹಾರ ಸುರಕ್ಷತಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.