ಪ್ರಧಾನ ಮಂತ್ರಿ ಆತ್ಮನಿರ್ಭರ ಯೋಜನೆಯ ದುರುಪಯೋಗ; ಹಣ ಪಡೆದು ನಕಲಿ ಬೀದಿ ವ್ಯಾಪಾರಸ್ಥರನ್ನು ಸೃಷ್ಟಿ ಮಾಡಿರುವ ಆರೋಪ
ನಗರಸಭೆ ಅಧಿಕಾರಿಗಳ ಪ್ರಕಾರ ಗದಗ ಜಿಲ್ಲೆಯಲ್ಲಿ 3376 ಬೀದಿ ಬದಿ ವ್ಯಾಪಾರಸ್ಥರು ಇದ್ದಾರೆ. ಬ್ಯಾಂಕ್ನಲ್ಲಿ ಸಧ್ಯಕ್ಕೆ 1380 ಕ್ಕೂ ಅಧಿಕ ಜನ ಸರ್ಕಾರ ನೀಡಿರುವ 10 ಸಾವಿರ ಪಡೆದಿದ್ದಾರೆ. ಆದರೆ ಇದರಲ್ಲಿ ಶೇಕಡಾ 80 ರಷ್ಟು ನಕಲಿ ಬೀದಿ ಬದಿ ವ್ಯಾಪಾರಸ್ಥರು ಇದ್ದಾರೆ ಎನ್ನುವುದು ವ್ಯಾಪಾರಸ್ಥರ ಆರೋಪ.
ಗದಗ: ಆತ್ಮನಿರ್ಭರ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ. ಲಾಕ್ಡೌನ್ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಬೀದಿ ವ್ಯಾಪಾರಸ್ಥರು ಈ ಯೋಜನೆಯ ಲಾಭ ಪಡೆದು, ಸ್ವಾವಲಂಬಿ ಜೀವನ ಮಾಡಬೇಕು ಎನ್ನುವುದು ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ್ ಯೋಜನೆಯ ಉದ್ದೇಶ. ಆದರೆ, ಗದಗ ಜಿಲ್ಲೆಯಲ್ಲಿ ಈ ಯೋಜನೆ ಸರಿಯಾದ ರೀತಿಯಲ್ಲಿ ನಿರ್ವಹಣೆಯಾಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಬೀದಿ ವ್ಯಾಪಾರಿಗಳಿಗೆ ಸೇರಬೇಕಿದ್ದ ಕೇಂದ್ರ ಸರ್ಕಾರದ ಕೋಟ್ಯಾಂತರ ಹಣ ಈಗ ಅಧಿಕಾರಿಗಳ ಪಾಲಾಗಿದ್ದು, ಇದು ಸಹಜವಾಗಿಯೇ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕೊರೊನಾದಿಂದಾಗಿ ಇಡಿ ದೇಶವೇ ನಲುಗಿ ಹೋಗಿದೆ. ಅದೆಷ್ಟೋ ಬಡ ಜೀವಗಳು ಒಪ್ಪತ್ತಿನ ಊಟಕ್ಕೂ ಪರದಾಡಿದ್ದಾರೆ. ಅದರಲ್ಲೂ ಲಾಕ್ಡೌನ್ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಬದುಕು ಮೂರಾಬಟ್ಟೆಯಾಗಿದೆ. ಹೀಗಾಗಿ ಬೀದಿ ಬದಿ ವ್ಯಾಪಾರಸ್ಥರ ಆರ್ಥಿಕ ವ್ಯವಸ್ಥೆ ಸುಧಾರಣೆ, ಸ್ವಾವಲಂಬನೆಯ ಬದುಕಿಗೆ ಆಸರೆಯಾಗಲೀ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಯೋಜನೆ ಜಾರಿ ಮಾಡಿದ್ದಾರೆ. ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಸ್ಥರಿಗೆ ಬಡ್ಡಿ ರಹಿತ 10 ಸಾವಿರ ಸಾಲ ನೀಡುವ ಮೂಲಕ ಬೀದಿ ಬದಿ ವ್ಯಾಪಾರಸ್ಥರಿಗೆ ಸಹಾಯ ಮಾಡುವುದು ಆತ್ಮನಿರ್ಭರ ಯೋಜನೆ ಉದ್ದೇಶ. ಆದರೆ ಗದಗ ಜಿಲ್ಲೆಯಲ್ಲಿ ಈ ಯೋಜನೆ ಸರಿಯಾಗಿ ಉಪಯೋಗವಾಗಿಲ್ಲ ಎಂದು ಭಾಗದ ಬೀದಿ ಬದಿ ವ್ಯಾಪಾರಸ್ಥರು ಆರೋಪಿಸಿದ್ದಾರೆ.
ಗದಗ ನಗರಸಭೆ ಸಮುದಾಯ ಸಂಘಟನಾಧಿಕಾರಿ ವಿಜಯಲಕ್ಷ್ಮಿ ಹಿರೇಮಠ ನಕಲಿ ಬೀದಿ ಬದಿ ವ್ಯಾಪಾರಸ್ಥರನ್ನು ಸೃಷ್ಟಿ ಮಾಡಿ, ಸರ್ಕಾರದ ಹಣ ನುಂಗಿದ್ದಾರೆ ಎನ್ನುವುದು ಸದ್ಯ ಕೇಳಿ ಬಂದಿರುವ ಆರೋಪ. ಬ್ಯೂಟಿ ಪಾರ್ಲರ್, ಇಲೆಕ್ಟ್ರಿಕಲ್ ಅಂಗಡಿ ಮಾಲೀಕರು, ಕಟ್ಟಡ ಕಾರ್ಮಿಕರು ಸೇರಿದಂತೆ ನಕಲಿ ಜನರ ಹೆಸರು ಸೇರಿಸಿ ಹಣ ಲಪಟಾಯಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿ, ತಪ್ಪಿತಸ್ಥ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಈ ಭಾಗದ ವ್ಯಾಪರಸ್ಥರು ಒತ್ತಾಯಿಸಿದ್ದಾರೆ.
ನಗರಸಭೆ ಅಧಿಕಾರಿಗಳ ಪ್ರಕಾರ ಗದಗ ಜಿಲ್ಲೆಯಲ್ಲಿ 3376 ಬೀದಿ ಬದಿ ವ್ಯಾಪಾರಸ್ಥರು ಇದ್ದಾರೆ. ಬ್ಯಾಂಕ್ನಲ್ಲಿ ಸಧ್ಯಕ್ಕೆ 1380 ಕ್ಕೂ ಅಧಿಕ ಜನ ಸರ್ಕಾರ ನೀಡಿರುವ 10 ಸಾವಿರ ಪಡೆದಿದ್ದಾರೆ. ಆದರೆ ಇದರಲ್ಲಿ ಶೇಕಡಾ 80 ರಷ್ಟು ನಕಲಿ ಬೀದಿ ಬದಿ ವ್ಯಾಪಾರಸ್ಥರು ಇದ್ದಾರೆ ಎನ್ನುವುದು ವ್ಯಾಪಾರಸ್ಥರ ಆರೋಪ.
ಮಹಿಳಾ ಅಧಿಕಾರಿಯ ಹಣದ ದಾಹಕ್ಕೆ ನಿಜವಾದ ಬೀದಿ ಬದಿ ವ್ಯಾಪಾರಸ್ಥರಿಗೆ ಮೋಸ ಆಗಿದೆ. ಇದೇ ವಿಚಾರವಾಗಿ ತಿಂಗಳ ಹಿಂದೆ ಆತ್ಮನಿರ್ಭರ ಯೋಜನೆ ವ್ಯವಹಾರ ಬಗ್ಗೆ ತನಿಖೆ ಮಾಡುವಂತೆ ಒತ್ತಾಯಿಸಿ ಗದಗ ಡಿಸಿ ಸುಂದರೇಶಬಾಬು ಅವರಿಗೆ ಬೀದಿ ಬದಿ ವ್ಯಾಪಾರಸ್ಥರು ದೂರು ನೀಡಿದ್ದರು. ಹೀಗಾಗಿ ಅವರು ತನಿಖೆ ಮಾಡಿದ ವರದಿ ನೀಡುವಂತೆ ಜೂನ್ 9 ರಂದು ಯೋಜನಾ ನಿರ್ದೇಶಕ ಹಾಗೂ ನಗರಸಭೆ ಆಯುಕ್ತರಿಗೆ ಪತ್ರ ಬರೆದಿದ್ದರು. ಆದರೆ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಈ ಭಾಗದ ಬೀದಿ ಬದಿ ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಸಂಕಷ್ಟದಲ್ಲಿ ಇರುವ ಬೀದಿ ಬದಿ ವ್ಯಾಪಾರಸ್ಥರ ನೆರವಿಗೆ ಬಂದಿದೆ. ಆದರೆ ಅಧಿಕಾರಿಗಳ ಹಣದ ದಾಹ ಮತ್ತೆ ಇವರನ್ನು ಬೀದಿಯಲ್ಲೇ ನರಳಾಡುವಂತೆ ಮಾಡಿದೆ. ಆದಷ್ಟು ಬೇಗ ಈ ಬಗ್ಗೆ ಅಧಿಕಾರಿಗಳು ಎಚ್ಛೇತ್ತುಕೊಂಡು, ನಿಜವಾಗಿ ಈ ಆತ್ಮನಿರ್ಭರ ಯೋಜನೆಗೆ ಯಾರು ಅರ್ಹರು ಅಂತವರ ನೆರವಿಗೆ ನಿಲ್ಲಬೇಕಿದೆ ಎನ್ನುವುದು ನಮ್ಮ ಆಶಯ.
ಬೀದಿ ಬದಿ ವ್ಯಾಪಾರಿಗಳ ಖಾತೆಗೆ ಹಣ ವರ್ಗಾವಣೆ; ಡಿಬಿಟಿ ಮೂಲಕ ಜಮೆಗೆ ಸಿಎಂ ಯಡಿಯೂರಪ್ಪ ಚಾಲನೆ
Published On - 3:45 pm, Wed, 14 July 21