ಯಶ್ ಫ್ಯಾನ್ಸ್ ಸಾವು ಪ್ರಕರಣ: ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ, ಅಭಿಮಾನಿಗಳ ಮನೆಗಳಿಗೆ ಯಶ್ ಭೇಟಿ?
ಹುಟ್ಟು ಹಬ್ಬದ ಪ್ರಯುಕ್ತ ನಟ ಯಶ್ ಅವರ ಕಟೌಟ್ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ ಅಭಿಮಾನಿಗಳು ಮೃತಪಟ್ಟಿದ್ದರು. ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ಸರ್ಕಾರ ಘೋಷಿಸಿದೆ ಎಂದು ಗದಗ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.
ಬೆಂಗಳೂರು/ಗದಗ, ಜನವರಿ 08: ಹುಟ್ಟು ಹಬ್ಬದ ಪ್ರಯುಕ್ತ ನಟ ಯಶ್ (Yash) ಅವರ ಕಟೌಟ್ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ (Electric Shock) ಅಭಿಮಾನಿಗಳು ಮೃತಪಟ್ಟಿದ್ದರು. ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ಸರ್ಕಾರ ಘೋಷಿಸಿದೆ ಎಂದು ಗದಗ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ (HK Patil) ತಿಳಿಸಿದರು. ಇನ್ನು ಮೃತಪಟ್ಟ ಅಭಿಮಾನಿಗಳ ಮನೆಗೆ ಇಂದು (ಜ.08) ಸಂಜೆ 4 ಗಂಟೆಗೆ ನಟ ಯಶ್ ಭೇಟಿ ನೀಡಲಿದ್ದಾರೆ ಎಂದು ಟಿವಿ9 ಡಿಜಿಟಲ್ಗೆ ಯಶ್ ಆಪ್ತ ಮೂಲಗಳು ತಿಳಿಸಿವೆ.
ನಟ ಯಶ್ ವಿಶೇಷ ವಿಮಾನದ ಮೂಲಕ ಮಧ್ಯಾಹ್ನ ಮೂರು ಗಂಟೆಗೆ ಹುಬ್ಬಳ್ಳಿಗೆ ಬರುವ ಸಾಧ್ಯತೆ ಇದೆ. ಇಲ್ಲಿಂದ ಸಂಜೆ ನಾಲ್ಕು ಗಂಟೆಗೆ ರಸ್ತೆ ಮಾರ್ಗವಾಗಿ ಸೂರಣಗಿಗೆ ಹೋಗಲಿದ್ದಾರೆ.
ಏನಿದು ಘಟನೆ
ಇಂದು ರಾಕಿಂಗ್ ಸ್ಟಾರ್ ಯಶ್ ಬರ್ತ್ಡೇ. ಹೀಗಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಯಶ್ ಬರ್ತ್ಡೇ ಬ್ಯಾನರ್ ನಿಲ್ಲಿಸುವಾಗ ವಿದ್ಯುತ್ ಪ್ರವಹಿಸಿ ಮೂವರು ಯಶ್ ಅಭಿಮಾನಿಗಳು ಮೃತಪಟ್ಟಿದ್ದರು. ಹನಮಂತ ಹರಿಜನ (21), ಮುರಳಿ ನಡವಿನಮನಿ (20), ನವೀನ್ ಗಾಜಿ (19) ಮೃತ ದುರ್ದೈವಿಗಳು. ಮಂಜುನಾಥ್ ಹರಿಜನ, ಪ್ರಕಾಶ ಮ್ಯಾಗೇರಿ, ದೀಪಕ ಹರಿಜನ ಎಂಬುವರಿಗೆ ಗಂಭೀರ ಗಾಯಗಳಾಗಿವೆ.
ಇದನ್ನೂ ಓದಿ: ಯಶ್ ಹುಟ್ಟುಹಬ್ಬಕ್ಕಾಗಿ ಕಟೌಟ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಬಲಿಯಾದ ಯುವಕರ ಸಾವಿಗೆ ಯಾರು ಜವಾಬ್ದಾರರು?
ಯಶ್ ಬರ್ತ್ಡೇ ಆಚರಿಸಲು ಇವರು ಸಿದ್ಧತೆ ಮಾಡಿಕೊಂಡಿದ್ದರು. ನೀಲಗಿರಿ ತೋಪಿಗೆ ಬ್ಯಾನರ್ ಕಟ್ಟಿ ಮೇಲೆತ್ತುವಾಗ ವಿದ್ಯುತ್ ತಗುಲಿದೆ. ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ.
ಮೃತರ ಕುಟುಂಬಕ್ಕೆ ಸಾಂತ್ವನ ಹೇಳಬೇಕು, ಪಟ್ಟು ಹಿಡಿದ ಅಭಿಮಾನಿಗಳು
ಸೂರಣಗಿ ಗ್ರಾಮಕ್ಕೆ ನಟ ಯಶ್ ಬರಬೇಕೆಂದು ಎಂಬ ಆಗ್ರಹ ಕೇಳಿ ಬಂದಿದೆ. ‘ಯಶ್ ನಮ್ಮೂರಿಗೆ ಬರಬೇಕು. ಬಂದು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಬೇಕು’ ಎಂದು ಮೃತ ಯುವಕರ ಗೆಳೆಯ ಪ್ರಕಾಶ ಮ್ಯಾಗೇರಿ ಆಗ್ರಹಿಸಿದ್ದಾರೆ. ಆಸ್ಪತ್ರೆಗೆ ಶಾಸಕ ಚಂದ್ರು ಲಮಾಣಿ ಭೇಟಿ ನೀಡಿ ಗಾಯಾಳುಗಳ ಜೊತೆ ಮಾತನಾಡಿದ್ದಾರೆ. ಮೃತರ ಕುಟುಂಬಗಳಿಗೆ ಅವರು ಸಾಂತ್ವನ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:43 pm, Mon, 8 January 24