ಇಸ್ರೋದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ!
ಇಸ್ರೋದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೂವತ್ತಕ್ಕೂ ಹೆಚ್ಚು ಯುವಕ-ಯುವತಿಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರೋಪಿಯನ್ನು ಗದಗದಲ್ಲಿ ಬಂಧಿಸಲಾಗಿದೆ. ವಿಜಯಪುರ ಮೂಲದ ಈರಣ್ಣ ಬಡಿಗೇರ್ ಇನ್‌ಸ್ಟಾಗ್ರಾಂ ಮೂಲಕ ವಂಚನೆ ಎಸಗಿದ್ದು, ಆತನಿಂದ ಮೋಸ ಹೋದ ಯುವಕರೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಮುಖ್ಯಾಂಶಗಳು
- ಇಸ್ರೋ ಉದ್ಯೋಗ ಕೊಡಿಸುವುದಾಗಿ ಹೇಳಿ ಮೂವತ್ತಕ್ಕೂ ಹೆಚ್ಚು ಜನರಿಗೆ ಲಕ್ಷಾಂತರ ವಂಚನೆ.
- ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ಯುವಕ ಯುವತಿಯರಿಗೆ ಜಾಲ ಹೆಣೆದ ಖತರ್ನಾಕ್.
- ಸಾಲ ತೀರಿಸಲು ಮೋಸಕ್ಕಿಳಿದ ವಿಜಯಪುರ ಮೂಲದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸಂತ್ರಸ್ತರು.
ಗದಗ, ಆಗಸ್ಟ್ 29: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ISRO) ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕ-ಯುವತಿಯರಿಗೆ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಖತರ್ನಾಕ್ ಆಸಾಮಿಯನ್ನು ಗದಗ ಶಹರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯಪುರ ಮೂಲದ ಡಿಪ್ಲೋಮಾ ವಿದ್ಯಾರ್ಥಿ ಈರಣ್ಣ ಬಡಿಗೇರ್ ಬಂಧಿತ ಆರೋಪಿಯಾಗಿದ್ದು, ಈತನಿಂದ ಮೋಸ ಹೋದ ಯುವಕರೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
30ಕ್ಕೂ ಹೆಚ್ಚು ಮಂದಿಗೆ ಟೋಪಿ!
ಆರೋಪಿ ಈರಣ್ಣ ಇನ್‌ಸ್ಟಾಗ್ರಾಂನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ, ತಾನು ಇಸ್ರೋದಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದ. ಕೆಲಸದ ಆಸೆಯಲ್ಲಿದ್ದ ಯುವಕ-ಯುವತಿಯರನ್ನು ಗುರಿಯಾಗಿಸಿಕೊಂಡು, ಜಾಬ್ ಆಫರ್ ನೀಡುವುದಾಗಿ ನಂಬಿಸಿ ಫೋನ್ ಪೇ ಮೂಲಕ ಲಕ್ಷಾಂತರ ರೂಪಾಯಿ ಹಣ ಹಾಕಿಸಿಕೊಂಡು ವಂಚಿಸಿದ್ದಾನೆ. ಈವರೆಗೆ 30ಕ್ಕೂ ಹೆಚ್ಚು ಮಂದಿ ಈತನ ಬಲೆಗೆ ಬಿದ್ದು ಹಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ
ವಂಚಕನ ಮೊಬೈಲ್ ಫೋನ್ ಪರಿಶೀಲಿಸಿದ ಪೊಲೀಸರಿಗೆ ಶಾಕ್ ಕಾದಿತ್ತು. ಮೊಬೈಲ್‌ನಲ್ಲಿ ಅನೇಕ ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು, ಉದ್ಯೋಗದ ನೆಪದಲ್ಲಿ ಯುವತಿಯರನ್ನೂ ಈತ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಆತನ ಬ್ಯಾಗ್‌ನಲ್ಲಿ ನಿರೋಧ್ ಪ್ಯಾಕೆಟ್‌ಗಳು ಪತ್ತೆಯಾಗಿರುವುದು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
ಸಾಲ ತೀರಿಸಲು ವಂಚನೆ ಹಾದಿ!
ಸಾಲದಿಂದಾಗಿ ಈ ಕೃತ್ಯ ಎಸಗಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ. “ನಾನು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದೆ, ಅದನ್ನು ತೀರಿಸಲು ಈ ದಾರಿ ತುಳಿದೆ” ಎಂದು ಆತ ಒಪ್ಪಿಕೊಂಡಿದ್ದಾನೆ. ಈ ವಂಚನೆ ಜಾಲದ ಹಿನ್ನೆಲೆಯಲ್ಲಿ ಇನ್ನೆಷ್ಟು ಮಂದಿ ಭಾಗಿಯಾಗಿದ್ದಾರೆ ಹಾಗೂ ಯುವತಿಯರ ಶೋಷಣೆ ನಡೆದಿದೆಯೇ ಎಂಬ ಕೋನದಲ್ಲಿ ಗದಗ ಶಹರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




