ವಿದ್ಯಾರ್ಥಿ ಸಾಹಿಲ್ ಸಾವು ರಾಜಕೀಯ ವೇದಿಕೆಯಾಗಬಾರದು: ಅಮಾನತುಗೊಂಡ ಡೀನ್ ಪರ ನಿಂತ ಐಐಟಿ ಬಾಂಬೆ ವಿದ್ಯಾರ್ಥಿ ಪ್ರತಿನಿಧಿಗಳು
ಐಐಟಿ ಬಾಂಬೆ ವಿದ್ಯಾರ್ಥಿ ಪ್ರತಿನಿಧಿಗಳು ಪ್ರೊ. ದುಲ್ಲಾ ಬೆಂಬಲಿಸಿ, ಸಾಹಿಲ್ ಸಾವನ್ನು ರಾಜಕೀಯಗೊಳಿಸುವುದನ್ನು ವಿರೋಧಿಸಿದ್ದಾರೆ. ಶೈಕ್ಷಣಿಕ ಅಕ್ರಮಗಳನ್ನು ಸಮರ್ಥಿಸುವುದಿಲ್ಲ, ಆದರೆ ಡೀನ್ ಅವರನ್ನು ಮೊದಲೇ ಅಪರಾಧಿ ಎಂದು ಪರಿಗಣಿಸಿಲ್ಲ ಎಂದಿದ್ದಾರೆ. ಸಂಸ್ಥೆಯ ವ್ಯವಸ್ಥೆಗಳ ಮರುಪರಿಶೀಲನೆಗೆ ಕರೆ ನೀಡಿದ್ದು, ಬಾಹ್ಯ ಹಸ್ತಕ್ಷೇಪವಿಲ್ಲದೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ. ಇದು ಕ್ಯಾಂಪಸ್‌ನಲ್ಲಿ ಶಾಂತಿಯನ್ನು ಪುನರ್ಸ್ಥಾಪಿಸುವ ನಿರೀಕ್ಷೆ.

ಮುಂಬೈ, ಸೆಪ್ಟೆಂಬರ್ 22: ಬಿ.ಟೆಕ್ ವಿದ್ಯಾರ್ಥಿ ಸಾಹಿಲ್ ರವೀಂದ್ರ ವಕೋಡ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭುಗಿಲೆದ್ದಿದ್ದ ಪ್ರತಿಭಟನೆಗಳ ನಡುವೆಯೇ, ಐಐಟಿ ಬಾಂಬೆಯ ವಿದ್ಯಾರ್ಥಿ ಪ್ರತಿನಿಧಿಗಳ ಮಂಡಳಿ ಮಹತ್ವದ ಹಾಗೂ ಅಧಿಕೃತ ಸ್ಪಷ್ಟನೆ ಬಿಡುಗಡೆ ಮಾಡಿದೆ. “ನಾವು ಯಾವುದೇ ಕಾರಣಕ್ಕೂ ಪರೀಕ್ಷಾ ಅಕ್ರಮಗಳನ್ನು ಸಮರ್ಥಿಸುವುದಿಲ್ಲ ಮತ್ತು ಅಮಾನತುಗೊಂಡಿರುವ ಪ್ರೊಫೆಸರ್ ಸೂರ್ಯನಾರಾಯಣ್ ದುಲ್ಲಾ ಅವರನ್ನು ಮೊದಲೇ ತಪ್ಪಿತಸ್ಥರೆಂದು ನಾವು ಪರಿಗಣಿಸಿಲ್ಲ” ಎಂದು ಸ್ಪಷ್ಟಪಡಿಸಿರುವ ವಿದ್ಯಾರ್ಥಿಗಳು, ಈ ದುರಂತ ಘಟನೆಯನ್ನು ಯಾರೂ ಬಾಹ್ಯ ರಾಜಕೀಯ ಹಿತಾಸಕ್ತಿಗಳಿಗಾಗಿ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಎಚ್ಚರಿಸಿದ್ದಾರೆ.
ಪರೀಕ್ಷಾ ಅಕ್ರಮಕ್ಕೆ ಸಮರ್ಥನೆಯಿಲ್ಲ: ವಿದ್ಯಾರ್ಥಿ ಸಮುದಾಯವು ಯಾವುದೇ ಶೈಕ್ಷಣಿಕ ಅಕ್ರಮ, ನಕಲು ಅಥವಾ ಚೀಟಿಂಗ್ ಅನ್ನು ಎಂದಿಗೂ ಬೆಂಬಲಿಸುವುದಿಲ್ಲ ಅಥವಾ ಸಹಿಸುವುದಿಲ್ಲ. ಕ್ಯಾಂಪಸ್‌ನಲ್ಲಿ ನಡೆದ ಪ್ರತಿಭಟನೆಯು ಅಕ್ರಮವನ್ನು ಸಮರ್ಥಿಸಿಕೊಳ್ಳಲು ನಡೆಸಿದ್ದಲ್ಲ ಎಂದು ವಿದ್ಯಾರ್ಥಿ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಸಂಸ್ಥೆಯ ವ್ಯವಸ್ಥೆಗಳ ಮರುಪರಿಶೀಲನೆ: ಸಹಪಾಠಿ ಸಾಹಿಲ್ ಅವರ ಸಾವು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಟನೆಯಾಗಿದೆ. ಸಂಸ್ಥೆಯ ಆಡಳಿತಾತ್ಮಕ ವ್ಯವಸ್ಥೆ, ವಿದ್ಯಾರ್ಥಿ ನಿರ್ವಹಣೆ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆಗಳನ್ನು ಆತ್ಮಾವಲೋಕನ ಮಾಡಿಕೊಳ್ಳಲು ಈ ಘಟನೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಹೇಳಿದ್ದಾರೆ.
ಪ್ರೊ. ದುಲ್ಲಾ ಪರ ಸ್ಪಷ್ಟ ನಿಲುವು: ಎಫ್‌ಐಆರ್ ದಾಖಲಾಗಿ ಅಮಾನತುಗೊಂಡಿರುವ ಡೀನ್ ಪ್ರೊ. ಸೂರ್ಯನಾರಾಯಣ್ ದುಲ್ಲಾ ಅವರ ಕುರಿತು ಮಾತನಾಡಿದ ವಿದ್ಯಾರ್ಥಿಗಳು, “ನಾವು ಎಂದಿಗೂ ಅವರನ್ನು ಮೊದಲೇ ಅಪರಾಧಿ ಎಂದು ಬಿಂಬಿಸಿಲ್ಲ. ಅವರು ನಮ್ಮ ಬೋಧಕ ಸಮುದಾಯದ ಗೌರವಾನ್ವಿತ ಸದಸ್ಯರಾಗಿದ್ದು, ಅವರ ಪರವಾಗಿ ನಾವು ನಿಲ್ಲುತ್ತೇವೆ. ಪೊಲೀಸ್ ತನಿಖೆಯು ಯಾವುದೇ ಪೂರ್ವಾಗ್ರಹವಿಲ್ಲದೆ ನಿಷ್ಪಕ್ಷಪಾತವಾಗಿ ನಡೆಯಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಾಹ್ಯ ರಾಜಕೀಯ ಪ್ರವೇಶಕ್ಕೆ ವಿರೋಧ: ಸಾಹಿಲ್ ಅವರ ದುರಂತ ಸಾವನ್ನು ಕ್ಯಾಂಪಸ್‌ನ ಹೊರಗಿನ ರಾಜಕೀಯ ಪಕ್ಷಗಳು, ಬಾಹ್ಯ ಸಂಘಟನೆಗಳು ಅಥವಾ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವೇದಿಕೆಯನ್ನಾಗಿ ಬಳಸಿಕೊಳ್ಳಬಾರದು ಎಂದು ವಿದ್ಯಾರ್ಥಿ ಪ್ರತಿನಿಧಿಗಳು ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ.
ಮತ್ತಷ್ಟು ಓದಿ: ಐಐಟಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ಆರೋಪಿ ಪ್ರೊಫೆಸರ್‌ಗೆ ಬೋಧಕರ ವೇದಿಕೆ, ಹಳೆಯ ವಿದ್ಯಾರ್ಥಿಗಳಿಂದ ಬೆಂಬಲ
ವಿವಾದಕ್ಕೆ ಕಾರಣವಾದ ಹಿನ್ನೆಲೆ: ಮಿಡ್-ಸೆಮಿಸ್ಟರ್ ಪರೀಕ್ಷೆಯಲ್ಲಿ ಮೊಬೈಲ್ ಮೂಲಕ ಚಾಟ್‌ಜಿಪಿಟಿ ಬಳಸಿ ನಕಲು ಮಾಡಿದ ಆರೋಪದ ಬೆನ್ನಲ್ಲೇ ಸಾಹಿಲ್ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸಾಹಿಲ್ ಕುಟುಂಬವು ಜಾತಿ ತಾರತಮ್ಯದ ದೂರು ನೀಡಿದ ನಂತರ ಪೊಲೀಸರು ಪ್ರೊ. ದುಲ್ಲಾ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪೋಸ್ಟ್
IMPORTANT: IIT Bombay Students Representatives issue statement on death by suicide of Sahil Wakode.
* We do not stand for or condone cheating or any form of academic misconduct.
*Loss of our fellow student is deeply tragic event that has compelled us to reflect on the systems… pic.twitter.com/paekn6bxL8
— Padmaja Joshi (@PadmajaJoshi) September 22, 2026
ಫ್ಯಾಕಲ್ಟಿ ಮತ್ತು ವಿದ್ಯಾರ್ಥಿಗಳ ಒಮ್ಮತ: ಆರಂಭದಲ್ಲಿ ಆಡಳಿತ ಮತ್ತು ಡೀನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ 18 ಬೇಡಿಕೆಗಳನ್ನು ಮುಂದಿಟ್ಟಿದ್ದ ವಿದ್ಯಾರ್ಥಿ ಸಂಘಟನೆಯೇ ಇದೀಗ ಪ್ರೊಫೆಸರ್ ಬೆಂಬಲಕ್ಕೆ ನಿಂತಿರುವುದು ಗಮನಾರ್ಹ. ಐಐಟಿ ಬಾಂಬೆ ಫ್ಯಾಕಲ್ಟಿ ಫೋರಮ್ ಕೂಡ ಪ್ರೊಫೆಸರ್ ಅವರು ನಿಯಮಾವಳಿಗಳಂತೆಯೇ ಕರ್ತವ್ಯ ನಿರ್ವಹಿಸಿದ್ದರು ಎಂದು ಸಮರ್ಥಿಸಿಕೊಂಡಿತ್ತು.
ಕ್ಯಾಂಪಸ್ ಶಾಂತಿಯತ್ತ ಹೆಜ್ಜೆ: ವಿದ್ಯಾರ್ಥಿ ಪ್ರತಿನಿಧಿಗಳ ಈ ಪ್ರಬುದ್ಧ ಹೇಳಿಕೆಯು, ಜಾತಿ ರಾಜಕೀಯ ಅಥವಾ ಬಾಹ್ಯ ರಾಜಕೀಯ ಹಸ್ತಕ್ಷೇಪದಿಂದ ಉದ್ವಿಗ್ನಗೊಂಡಿದ್ದ ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವಿನ ಕಂದಕವನ್ನು ಕಡಿಮೆ ಮಾಡಲು ನೆರವಾಗುವ ನಿರೀಕ್ಷೆಯಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




