ಕೋರ್ಟ್​ ತಡೆಯಾಜ್ಞೆ ಮಧ್ಯೆ ಚುನಾವಣೆ: ಕಾಂಗ್ರೆಸ್ ತೆಕ್ಕೆಗೆ ಗದಗ-ಬೆಟಗೇರಿ ನಗರಸಭೆ

ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಹೈಕೋರ್ಟ್‌ನ ತಡೆಯಾಜ್ಞೆ ಹೊರತಾಗಿಯೂ ಕಾಂಗ್ರೆಸ್‌ ಜಯಗಳಿಸಿದ್ದಾರೆ. ಕೋರ್ಟ್ ಆದೇಶ ಚುನಾವಣಾಧಿಕಾರಿಗಳಿಗೆ ತಲುಪುವಷ್ಟರಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲಾಗಿದೆ. ಇದು ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಕಾಂಗ್ರೆಸ್‌ ಗೆಲುವು ತಾತ್ಕಾಲಿಕ ಎಂದು ಸಂಸದ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

ಕೋರ್ಟ್​ ತಡೆಯಾಜ್ಞೆ ಮಧ್ಯೆ ಚುನಾವಣೆ: ಕಾಂಗ್ರೆಸ್ ತೆಕ್ಕೆಗೆ ಗದಗ-ಬೆಟಗೇರಿ ನಗರಸಭೆ
ಕೋರ್ಟ್​ ತಡೆಯಾಜ್ಞೆ ಮಧ್ಯೆ ಚುನಾವಣೆ: ಕಾಂಗ್ರೆಸ್ ತೆಕ್ಕೆಗೆ ಗದಗ-ಬೆಟಗೇರಿ ನಗರಸಭೆ
Updated By: ಗಂಗಾಧರ​ ಬ. ಸಾಬೋಜಿ

Updated on: Feb 28, 2025 | 5:43 PM

ಗದಗ, ಫೆಬ್ರವರಿ 28: ನಿಗದಿಯಂತೆ ಗದಗ ಬೆಟಗೇರಿ ನಗರಸಭೆ (gadag betageri municipality) ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಜಯಶಾಲಿಯಾಗಿದೆ. ಇದರ ಮಧ್ಯ ಹೈಕೋರ್ಟ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಗೆ ತಡೆಯಾಜ್ಞೆ ನಿಡಿ ಆದೇಶ ಹೊರಡಿಸಿದೆ. ಆದರೆ ಕೋರ್ಟ್​ ಆದೇಶ ಪ್ರತಿ ಚುನಾವಣಾಧಿಕಾರಿ ಕೈ ಸೇರದಿದ್ದರಿಂದ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಇದರಲ್ಲಿ ಕಾಂಗ್ರೆಸ್​ ಗೆದ್ದು ಬೀಗಿದೆ. ಕೋರ್ಟ್​ ತಡೆಯಾಜ್ಞೆ ನಡುವೆಯೇ ಗದಗ-ಬೆಟಗೇರಿ ನಗರಸಭೆ ಕಾಂಗ್ರೆಸ್ ತೆಕ್ಕೆಗೆ ಜಾರಿದ್ದು, ಇದಕ್ಕೆ ಬಿಜೆಪಿ ನಾಯಕರು ಆಕ್ರೋಶಗೊಂಡಿದ್ದಾರೆ. ಕಾಂಗ್ರೆಸ್​​ನ ಇಂದಿನ ಜಯ ಕೇವಲ ತಾತ್ಕಾಲಿಕ ಎಂದು ಎಂದು ಸಂಸದ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್​ನ ಕೃಷ್ಣಾ ಪರಾಪುರ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಶಕುಂತಲಾ ಅಕ್ಕಿ ಆಯ್ಕೆ ಆಗಿದ್ದಾರೆ. 17 ಕಾಂಗ್ರೆಸ್​ ಸದಸ್ಯರು, ಓರ್ವ ಶಾಸಕರ ಮತದಿಂದ ಅಭ್ಯರ್ಥಿಗಳು ಆಯ್ಕೆಗೊಂಡಿದ್ದಾರೆ.

ಇದನ್ನೂ ಓದಿ: ಗದಗ ಬೆಟಗೇರಿ ನಗರಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್: ಅಧಿಕಾರಕ್ಕೆ ಬಿಜೆಪಿ, ಕಾಂಗ್ರೆಸ್ ಪೈಪೋಟಿ

35 ಸಂಖ್ಯಾಬಲದ ನಗರಸಭೆಯಲ್ಲಿ 18 ಸದಸ್ಯರನ್ನ ಬಿಜೆಪಿ ಹೊಂದಿತ್ತು. ಮೂವರು ಸದಸ್ಯರನ್ನ ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನರ್ಹಗೊಳಿಸಿದ್ದರು. 15 ಸದಸ್ಯರ ಜತೆ ಚುನಾವಣೆಯಲ್ಲಿ ಸಂಸದ ಬೊಮ್ಮಾಯಿ ಭಾಗಿಯಾಗಿದ್ದರು. ಪ್ರಕ್ರಿಯೆ ತಡೆಯಾಜ್ಞೆ ನಡುವೆಯೇ ಚುನಾವಣೆ ನಡೆದಿರುವ ಬಗ್ಗೆ ಆರೋಪ ಹಿನ್ನೆಲೆ ಪ್ರಕ್ರಿಯೆ ಮಧ್ಯೆ ಚುನಾವಣೆ ಬಹಿಷ್ಕರಿಸಿ ಸಂಸದ ಬೊಮ್ಮಾಯಿ ಹೊರಬಂದಿದ್ದಾರೆ.

ಕಾಂಗ್ರೆಸ್ ವಿರುದ್ಧ ಸಂಸದ ಬಸವರಾಜ ಬೊಮ್ಮಾಯಿ ಆಕ್ರೋಶ

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಸಂಸದ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ್ದಾರೆ. ಬಿಜೆಪಿ ಮೂರು ಸದಸ್ಯರ ಸದಸ್ಯತ್ವ ಕಾನೂನು ಬಾಹಿರವಾಗಿ ರದ್ದು ಮಾಡಿದ್ದಾರೆ. ಬಿಜೆಪಿಯ ಮೂರು ಜನರಿಗೆ ಮತ ಹಾಕದಂತೆ ನೋಡಿಕೊಂಡಿದ್ದಾರೆ. ಕೋರ್ಟ್ ಕೂಡ ಚುನಾವಣೆ ಮುಂದೂಡಿಕೆ ಮಾಡಲು ಆದೇಶ ನೀಡಿದೆ. ಚುನಾವಣಾ ಅಧಿಕಾರಿ ಗಂಗಪ್ಪ ಇಮೇಲ್ ಬಂದ್ ಮಾಡಿಕೊಂಡು ಕುಳಿತ್ತಿದ್ದರು. ಎಲ್ಲ ಕಮನ್ಯೋಕೇಶನ್ ಬಂದ್ ಮಾಡಿದ್ದರು ಎಂದು ಕಿಡಿಕಾರಿದ್ದಾರೆ.

ಚುನಾವಣಾ ಅಧಿಕಾರಿ ಸಚಿವ ಎಚ್​​.ಕೆ ಪಾಟೀಲ್ ನಿರ್ದೇಶನಂತೆ ನಡೆದುಕೊಂಡಿದ್ದಾರೆ. ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಚುನಾವಣೆ ನಡೆಸಿದ್ದಾರೆ. ಅದು ನ್ಯಾಯಾಂಗ ನಿಂದನೆ ಆಗುತ್ತದೆ, ಚುನಾವಣೆ ಅಧಿಕಾರಿ ಕೋರ್ಟ್ ಆದೇಶ ತಿರಸ್ಕಾರ ‌ಮಾಡಿದ್ದಾರೆ. ಕಾನೂನು ಪಾಲನೆ ಮಾಡಿಲ್ಲ. ಈ ಚುನಾವಣೆ ವಿರುದ್ಧ ಕೋರ್ಟ್ ಮೊರೆ ಹೋಗುತ್ತೇವೆ. ಕಾನೂನು ಬಾಹಿರವಾದ ಜಯವಾಗಿದ್ದು, ನಾವು ಚುನಾವಣೆ ಬಹಿಷ್ಕಾರ ಮಾಡಿದ್ದೇವೆ. ಚುನಾವಣೆ ಯಂತ್ರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಸಂವಿಧಾನದ ವಿರುದ್ಧವಾಗಿ ಚುನಾವಣೆ ನಡೆಸಿದ್ದಾರೆ. ನಾವು ಚುನಾವಣಾ ಅಧಿಕಾರಿ ವಿರುದ್ಧ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಹೇಳಿದ್ದಾರೆ.

ಚುನಾವಣೆ ಕಾನೂನು ರೀತಿಯಲ್ಲಿಯಾಗಿದೆ: ಸಚಿವ ಎಚ್​​ಕೆ ಪಾಟೀಲ್

ಚುನಾವಣೆ ಬಳಿಕ ಸಚಿವ ಎಚ್​​ಕೆ ಪಾಟೀಲ್ ಹೇಳಿಕೆ ನೀಡಿದ್ದು, ಅಧ್ಯಕ್ಷರಾಗಿ ಕೃಷ್ಣಾ ಪರಾಪೂರ ಹಾಗೂ ಉಪಾಧ್ಯಕ್ಷೆ ಶಕುಂತಲಾ ಅಕ್ಕಿ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂದು ನಡೆದ ಚುನಾವಣೆಯಲ್ಲಿ ಅವರಿಗೆ ಜಯ ಸಿಕ್ಕಿದೆ ಎಂದರು.

ಇದು ಕಾನೂನು ಬಾಹಿರ ಚುನಾವಣೆ ಆರೋಪ ವಿಚಾರವಾಗಿ ಮಾತನಾಡಿದ್ದು, ಬಿಜೆಪಿಯವರು ಹಾಗೂ ನಾವು ಕೂಡ ಚುನಾವಣಾ ರೂಂ ಗೆ ಹೋಗಿದ್ದೇವೆ. 2 ಗಂಟೆಗೆ ಚುನಾವಣಾ ಅಧಿಕಾರಿ ಬಾಗಿಲು ಹಾಕಿಸಿ, ಚುನಾವಣಾ ಪ್ರಕ್ರಿಯೆ ಆರಂಭ ಮಾಡಿದ್ದರು. ಚುನಾವಣಾ ಪ್ರತಿಕ್ರಿಯೆ ನಡೆದಾಗ, ಬಿಜೆಪಿಯವರ ಸಭಾ ತ್ಯಾಗ ಮಾಡಿದರು. 2:30 ವರಿಗೆ ಅವರೆ ಬಾಗಿಲು ತೆಗೆದು ಹೋಗಿದ್ದಾರೆ. ಚುನಾವಣಾ ಆರಂಭವಾದ ಮೇಲೆ ಯಾರು ನಿಲ್ಲಿಸುತ್ತಾರೆ ಎಂದಿದ್ದಾರೆ.

ಚುನಾವಣೆ ಕಾನೂನು ರೀತಿಯಲ್ಲಿಯಾಗಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ದೋಷ ಹುಡುಕುವ ಅಗತ್ಯ ಇಲ್ಲ. ಚುನಾವಣಾ ಅಧಿಕಾರಿ ಮೇಲ್ ಕೂಡ ಪರಿಶೀಲನೆ ನಡೆಸಿದ್ದಾರೆ. ಆದರೆ ಆ ಸಮಯದಲ್ಲಿ ಯಾವ ಮೇಲ್ ಬಂದಿಲ್ಲ ಅಂತಾ ಹೇಳಿದ್ದಾರೆ ಎಂದರು.

ಇದನ್ನೂ ಓದಿ: ಬೆಳೆ ವಿಮೆಯಲ್ಲಿ ಭಾರಿ ಅಕ್ರಮದ ಅನುಮಾನ: ಮಧ್ಯವರ್ತಿಗಳ ಮೂಲಕ ವಿಮೆ ಮಾಡಿದ ರೈತರಿಗಷ್ಟೇ ಹಣ ಜಮೆ

ಮೂರು ಸದಸ್ಯರ ಅಮಾನತು ಮಾಡುವಲ್ಲಿ ಸಚಿವರ ಪಾತ್ರ ಆರೋಪ ವಿಚಾರವಾಗಿ ಮಾತನಾಡಿ, ನಾವು ಆಗಲಿ, ನಮ್ಮ ಪಕ್ಷದವರಾಗಲಿ ಸದಸ್ಯತ್ವ ರದ್ದು ಮಾಡಲು ಹೋಗಿಲ್ಲ. ಅವರ ಮಾಡಿರುವ ಕೃತ್ಯಗಳಿಂದ ಅವರ ಸದಸ್ಯತ್ವ ರದ್ದಾಗಿದೆ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಟಿಡಿಆರ್​ ವಿಚಾರದಲ್ಲಿ ಸುಪ್ರೀಂಕೋರ್ಟ್​ಗೆ ಹಾಜರಾಗಿದ್ದೇವೆ. ವಿಶೇಷ ಸೂಚನೆಗಳನ್ನು ಕೊಟ್ಟಿದ್ದಾರೆ. ನಮ್ಮ ಸರ್ಕಾರ ಯಾವುದೇ ಕಾರಣಕ್ಕೆ ಟಿಡಿಆರ್​ ಮುಖಾಂತರ ರಾಜ್ಯದ ದೊಡ್ಡ ಆರ್ಥಿಕ ಭಾಗ ಯಾವುದೇ ದೊಡ್ಡ ವ್ಯಕ್ತಿಗೆ ಹೋಗಲು ಬಿಡಲ್ಲ. ಹಾಗೂ ಜಾಸ್ತಿ ಬೆಲೆಯನ್ನ ಕೊಡಲು ಆಗುದಿಲ್ಲವೆಂದು ಸುಪ್ರೀಂಕೋರ್ಟ್​ಗೆ ತಿಳಿಸಿದ್ದೇವೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.