ಗದಗ ಸರ್ಕಾರಿ ಶಾಲೆಯ ಪುಟಾಣಿ ವಿಜ್ಞಾನಿಗಳ ಕಮಾಲ್; ಕೇಂದ್ರದ ‘ಇನ್‌ಸ್ಪೈರ್ ಅವಾರ್ಡ್’ಗೆ ಇಬ್ಬರು ವಿದ್ಯಾರ್ಥಿಗಳ ಆವಿಷ್ಕಾರ ಆಯ್ಕೆ!

ಗದಗ ನಗರದ ಎಸ್.ಎಮ್.ಕೆ ನಗರದ ಪಿಎಂ ಶ್ರೀ ಸರ್ಕಾರಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಆಕಾಶ್ ಪಾಟೀಲ್ ಹಾಗೂ ದಾವಲ್ ಸಾಬ್ ರೂಪಿಸಿದ ಎರಡು ವಿಭಿನ್ನ ಆವಿಷ್ಕಾರಗಳು ಕೇಂದ್ರ ಸರ್ಕಾರದ ಪ್ರತಿಷ್ಠಿತ 'ಇನ್‌ಸ್ಪೈರ್ ಅವಾರ್ಡ್' ಸ್ಪರ್ಧೆಗೆ ಆಯ್ಕೆಯಾಗಿವೆ. ಬಿಸಿಯೂಟದ ಗುಣಮಟ್ಟ ಪರೀಕ್ಷಿಸುವ ಯಂತ್ರ ಹಾಗೂ ಶಾಲಾ ವಲಯಕ್ಕೆ ಆಟೋಮ್ಯಾಟಿಕ್ ಸ್ಪೀಡ್ ಬ್ರೇಕರ್ ಮಾದರಿಗಳನ್ನು ತಯಾರಿಸಿ ಸರ್ಕಾರಿ ಶಾಲೆಯ ಮಕ್ಕಳು ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ.

ಗದಗ ಸರ್ಕಾರಿ ಶಾಲೆಯ ಪುಟಾಣಿ ವಿಜ್ಞಾನಿಗಳ ಕಮಾಲ್; ಕೇಂದ್ರದ ‘ಇನ್‌ಸ್ಪೈರ್ ಅವಾರ್ಡ್’ಗೆ ಇಬ್ಬರು ವಿದ್ಯಾರ್ಥಿಗಳ ಆವಿಷ್ಕಾರ ಆಯ್ಕೆ!
ಗದಗ ಸರ್ಕಾರಿ ಶಾಲೆಯ ಪುಟಾಣಿ ವಿಜ್ಞಾನಿಗಳ ಕಮಾಲ್
Edited By:

Updated on: Oct 02, 2026 | 12:47 PM

ಮುಖ್ಯಾಂಶಗಳು

  • ಗದಗ ಪಿಎಂ ಶ್ರೀ ಶಾಲೆಯ ವಿದ್ಯಾರ್ಥಿಗಳ ಎರಡು ಮಾದರಿಗಳು ಆಯ್ಕೆ.
  • ಆಹಾರದ ಸುರಕ್ಷತೆ ಹಾಗೂ ಹಾನಿಕಾರಕ ಅಂಶ ಪತ್ತೆಗೆ ಸೆನ್ಸಾರ್ ವ್ಯವಸ್ಥೆ.
  • ಮಕ್ಕಳ ಸುರಕ್ಷತೆಗಾಗಿ ವಾಹನಗಳ ವೇಗ ನಿಯಂತ್ರಿಸುವ ಸ್ವಯಂಚಾಲಿತ ತಂತ್ರಜ್ಞಾನ.

ಗದಗ, ಅಕ್ಟೋಬರ್ 02: ಇತ್ತೀಚೆಗೆ ಹಲವು ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಪರೆದಾಡುತ್ತಿವೆ. ಪಾಲಕರೂ ಸಹ ತಮ್ಮ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿಯೇ ಹೆಚ್ಚಿನ ಸೌಲಭ್ಯ, ಒಳ್ಳೆಯ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದು ನಂಬಿ ಪ್ರೈವೆಟ್ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ಆದರೆ ಈ ನಂಬಿಕೆಯನ್ನು ಸುಳ್ಳಾಗಿಸುವಂತೆ ಗದಗ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ಎಸ್.ಎಮ್.ಕೆ ನಗರದ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಸಮಾಜಕ್ಕೆ ಉಪಯುಕ್ತವಾದ ಅದ್ಭುತ ತಂತ್ರಜ್ಞಾನ ರೂಪಿಸಿ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ.

ಮಿಡ್ ಡೇ ಮೀಲ್ ಸೇಫ್ಟಿ ಚೆಕ್ ಫಾರ್ ಸ್ಕೂಲ್

ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ಆಕಾಶ್ ಪಾಟೀಲ್ ಹಾಗೂ ದಾವಲ್ ಸಾಬ್ ರೂಪಿಸಿದ ಎರಡು ವಿಭಿನ್ನ ಆವಿಷ್ಕಾರಗಳು ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ಇನ್‌ಸ್ಪೈರ್ ಅವಾರ್ಡ್’ ಸ್ಪರ್ಧೆಗೆ ಆಯ್ಕೆಯಾಗಿವೆ. ಮೊದಲ ಆವಿಷ್ಕಾರ ಮಿಡ್ ಡೇ ಮೀಲ್ ಸೇಫ್ಟಿ ಚೆಕ್ ಫಾರ್ ಸ್ಕೂಲ್. ಅಂದರೆ, ಮಕ್ಕಳಿಗೆ ನೀಡುವ ಬಿಸಿಯೂಟ ಸುರಕ್ಷಿತವಾಗಿದೆಯೇ, ಆಹಾರ ಪದಾರ್ಥಗಳಲ್ಲಿ ಯಾವುದೇ ಹಾನಿಕಾರಕ ಅಂಶಗಳಿವೆಯೇ ಎಂಬುದನ್ನು ಪತ್ತೆಹಚ್ಚಲು ಈ ಮಾದರಿ ರೂಪಿಸಲಾಗಿದೆ. ಆಹಾರ ಪದಾರ್ಥಗಳು ಹಾಳಾಗಿರುವ ಸಂದರ್ಭದಲ್ಲಿ ಉತ್ಪತ್ತಿಯಾಗುವ ಅನಿಲಗಳನ್ನು ಸೆನ್ಸರ್ ಮೂಲಕ ಪತ್ತೆಹಚ್ಚುವ ರೀತಿಯಲ್ಲಿ ಮಾದರಿಯನ್ನು ರೂಪಿಸಲಾಗಿದೆ. ಅಂದರೆ ಮಕ್ಕಳಿಗೆ ನೀಡುವ ಬಿಸಿಯೂಟದ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಮುನ್ನೆಚ್ಚರಿಕೆ ನೀಡುವ ಪ್ರಯತ್ನ ಇದಾಗಿದೆ.

ಸ್ಕೂಲ್ ಝೋನ್ ಆಟೋಮ್ಯಾಟಿಕ್ ಸ್ಪೀಡ್ ಬ್ರೇಕರ್

ಇನ್ನೊಂದು ಆವಿಷ್ಕಾರ ಸ್ಕೂಲ್ ಝೋನ್ ಆಟೋಮ್ಯಾಟಿಕ್ ಸ್ಪೀಡ್ ಬ್ರೇಕರ್. ಶಾಲಾ ಆವರಣದ ಬಳಿ ವಾಹನಗಳ ವೇಗದಿಂದ ಮಕ್ಕಳಿಗೆ ಅಪಾಯವಾಗಬಾರದು ಅನ್ನೋ ಉದ್ದೇಶದಿಂದ ಈ ಮಾದರಿ ಸಿದ್ಧಪಡಿಸಲಾಗಿದೆ. ಸೆನ್ಸರ್‌ಗಳ ಮೂಲಕ ರಸ್ತೆ ಮೇಲೆ ಮಕ್ಕಳು ಅಥವಾ ಜನರ ಚಲನವಲನವನ್ನು ಗುರುತಿಸುವ ವ್ಯವಸ್ಥೆ. ಮಕ್ಕಳು ರಸ್ತೆ ದಾಟುವ ಸಂದರ್ಭದಲ್ಲಿ ರೆಡ್ ಸಿಗ್ನಲ್ ನೀಡುವ ವ್ಯವಸ್ಥೆ. ಅಗತ್ಯವಿದ್ದಾಗ ಆಟೋಮ್ಯಾಟಿಕ್ ಆಗಿ ಸ್ಪೀಡ್ ಬ್ರೇಕರ್ ಕಾರ್ಯನಿರ್ವಹಿಸುವ ಮಾದರಿ ಇದಾಗಿದೆ. ಮತ್ತು ರಸ್ತೆ ಮೇಲೆ ಜನರ ಚಲನವಲನ ಇಲ್ಲದಾಗ ಮತ್ತೆ ಸಾಮಾನ್ಯ ಸ್ಥಿತಿಗೆ ಬರುವಂತೆ ವಿನ್ಯಾಸಗೊಳಿಸಲಾಗಿದೆ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಆಲೋಚನೆ. ಶಾಲೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ. ಸಮಾಜದ ಸುರಕ್ಷತೆ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ. ಇದೇ ಕಾರಣಕ್ಕೆ ಈ ಇಬ್ಬರು ವಿದ್ಯಾರ್ಥಿಗಳ ಆವಿಷ್ಕಾರಗಳು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿವೆ.

ಮಕ್ಕಳ ಪ್ರತಿಭೆಗೆ ಶಿಕ್ಷಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟೇ ಅಲ್ಲ ಶಿಕ್ಷಣ ಇಲಾಖೆ ಹಾಗೂ ಗದಗ ಜಿಲ್ಲೆಯ ಶಿಕ್ಷಣ ಪ್ರೇಮಿಗಳಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಗದಗ ಜಿಲ್ಲೆಯ ಜನರಿಂದಲೂ ಮಕ್ಕಳ ಸಾಧನೆಗೆ ಅಭಿನಂದನೆ ದೊರೆತಿವೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಅವಕಾಶ ಸಿಕ್ಕರೆ ಅವರು ಏನನ್ನಾದರೂ ಸಾಧಿಸಬಲ್ಲರು ಎನ್ನುವುದಕ್ಕೆ ಈ ಆವಿಷ್ಕಾರಗಳೇ ಜೀವಂತ ಸಾಕ್ಷಿಯಾಗಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಂಜೀವ ಕುಮಾರ್​ ಪಾಂಡ್ರೆ, ಗದಗ

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
Loading...
Unable to load recommendations.
Follow Us