ಲಿಕ್ಕರ್ ಪ್ರಮೋಟ್ ಮಾಡುವ ರೀತಿಯಲ್ಲಿ ಸರ್ಕಾರಿ ಅಧಿಕಾರಿ ರೀಲ್ಸ್; ಇನ್ಸ್ಟಾಗ್ರಾಮ್ನಲ್ಲಿ ವೀಡಿಯೋ ವೈರಲ್!
ಗದಗ ಜಿಲ್ಲೆಯ ಆಹಾರ ಸುರಕ್ಷತಾ ಅಧಿಕಾರಿಯೊಬ್ಬರು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಜೊತೆ ಸೇರಿ ಮದ್ಯಪಾನ ಉತ್ತೇಜಿಸುವ ರೀಲ್ಸ್‌ಗಳನ್ನು ಮಾಡಿ ವಿವಾದಕ್ಕೆ ಸಿಲುಕಿದ್ದಾರೆ. ಇದು ಕರ್ನಾಟಕ ಸಿವಿಲ್ ಸರ್ವಿಸ್ ನಿಯಮಗಳ ಉಲ್ಲಂಘನೆಯಾಗಿದ್ದು, ಸಾರ್ವಜನಿಕರು ಅಬಕಾರಿ ಮತ್ತು ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮದ್ಯಪಾನ ಪ್ರಚಾರ ತಡೆಗೆ ಕಾನೂನು ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ.

ಗದಗ, ಡಿಸೆಂಬರ್ 13: ಸೋಷಿಯಲ್ ಮೀಡಿಯಾದಲ್ಲಿ ಮದ್ಯಪಾನ ಪ್ರಚಾರಕ್ಕೆ ಸಂಬಂಧಿಸಿದಂತೆ ಗದಗ (Gadag) ಜಿಲ್ಲೆಯ ರೋಣ ತಾಲೂಕಿನ ಆಹಾರ ಸುರಕ್ಷತಾ ಅಧಿಕಾರಿಯೊಬ್ಬರ ರೀಲ್ಸ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಇನ್ಪ್ಲುಯೆನ್ಸರ್ ಒಬ್ಬರ ಇನ್ಸ್ಟಾಗ್ರಾಂ ಖಾತೆಯಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ವೀಡಿಯೋ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಜೊತೆ ಅಧಿಕಾರಿ ರೀಲ್ಸ್
ಆಹಾರ ಸುರಕ್ಷತಾ ಅಧಿಕಾರಿ ಚೇತನ್ ಎಸ್, ಬಿಯರ್ ಹಾಗೂ ವಿಸ್ಕಿಯೊಂದಿಗೆ ರೀಲ್ಸ್ ಮಾಡಿ ಮದ್ಯಪಾನಕ್ಕೆ ಉತ್ತೇಜನ ನೀಡುತ್ತಿರುವ ಆರೋಪ ಎದುರಿಸುತ್ತಿದ್ದು, ಈ ರೀಲ್ಸ್‌ಗಳನ್ನು ಬಾಗಲಕೋಟೆ ಮೂಲದ ಕಂಟೆಂಟ್ ಕ್ರಿಯೇಟರ್ ಹಾಗೂ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನಾಗರಾಜ್ ನಿಲುಗಲ್ ಅವರೊಂದಿಗೆ ಸೇರಿ ಮಾಡಲಾಗಿದೆ ಎನ್ನಲಾಗಿದೆ. ಲಕ್ಷಾಂತರ ಫಾಲೋವರ್ಸ್ ಹೊಂದಿರುವ ನಾಗರಾಜ್ ನಿಲುಗಲ್ನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವೀಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿದ್ದು, ಖುಷಿಯಾಗಿರೋದಕ್ಕೆ ಬಿಯರ್ ಕಾರಣ ಎಂಬ ಸಂದೇಶವನ್ನು ಪರೋಕ್ಷವಾಗಿ ಬಿಂಬಿಸಲಾಗಿದೆ. ಕುಟುಂಬ ಸಮೇತ ಕುಳಿತು ಮದ್ಯಪಾನ ಮಾಡುವ ರೀತಿಯಲ್ಲಿ ಗ್ಲಾಸ್ ಹಾಗೂ ಬಾಟಲ್‌ಗಳನ್ನು ಪ್ರದರ್ಶಿಸಿ ರೀಲ್ಸ್ ಮಾಡಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ಆದ ರೀಲ್ ಇಲ್ಲಿದೆ
ಇದನ್ನೂ ಓದಿ ಹಾಸ್ಟೆಲ್ನಲ್ಲಿ BAMS ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಕಾಲೇಜ್ ವಿರುದ್ಧ ಕೊಲೆ, ಸಾಕ್ಷಿ ನಾಶ ಆರೋಪ
ಸರ್ಕಾರಿ ಅಧಿಕಾರಿ ಹುದ್ದೆಯಲ್ಲಿದ್ದುಕೊಂಡೇ ಈ ರೀತಿಯ ವರ್ತನೆ ತೋರಿರುವುದು ಕರ್ನಾಟಕ ಸಿವಿಲ್ ಸರ್ವಿಸ್ ರೂಲ್ಸ್‌ಗೆ ವಿರುದ್ಧವಾಗಿದ್ದು, ಅಧಿಕಾರಿಯ ಜವಾಬ್ದಾರಿಯ ಮೇಲೆಯೇ ಪ್ರಶ್ನೆಗಳನ್ನು ಎದ್ದಿವೆ. ಟಿವಿ ಮತ್ತು ಸಿನಿಮಾ ಮಾಧ್ಯಮಗಳಿಗೆ ಇರುವ ಮದ್ಯಪಾನ ಜಾಹೀರಾತು ನಿಯಮಗಳು ಸೋಷಿಯಲ್ ಮೀಡಿಯಾದಲ್ಲಿ ಕಟ್ಟುನಿಟ್ಟಾಗಿ ಜಾರಿಯಾಗದಿರುವುದೇ ಇಂತಹ ರೀಲ್ಸ್‌ಗಳಿಗೆ ಅವಕಾಶ ಮಾಡಿಕೊಡುತ್ತಿದೆ ಎನ್ನಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



