
ಗದಗ, ಅಕ್ಟೋಬರ್ 29: ಗದಗ, ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ಈಗ ರೈತರ ಕಣ್ಣಲ್ಲಿ ಕಣ್ಣೀರು ತರಿಸುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ ₹60ರಿಂದ ₹70ರವರೆಗೆ ಬೆಲೆ ಕಂಡಿದ್ದ ಈರುಳ್ಳಿ ದರ ದಿಢೀರ್ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ. ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ನಾಲ್ಕು ದಿನಗಳ ಹಿಂದೆ ಕ್ವಿಂಟಾಲ್ಗೆ ₹5,000ರಿಂದ ₹6,000ರವರೆಗೆ ಮಾರಾಟವಾಗುತ್ತಿದ್ದ ಈರುಳ್ಳಿ, ಈಗ ₹2,500ರಿಂದ ₹3,500ಕ್ಕೆ ಇಳಿಕೆಯಾಗಿದೆ. ದಿಢೀರ್ ಬೆಲೆ ಕುಸಿತದಿಂದ ಆಕ್ರೋಶಗೊಂಡಿರುವ ರೈತರು, ದಲ್ಲಾಳಿಗಳ ಆಟಕ್ಕೆ ಕಡಿವಾಣ ಹಾಕದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗದಗ ನಗರದ ಎಪಿಎಂಸಿ ಆವರಣದಲ್ಲಿ ಎಲ್ಲಿ ನೋಡಿದರೂ ಈರುಳ್ಳಿ ರಾಶಿಗಳೇ ಕಾಣಿಸುತ್ತಿವೆ. ಭೀಕರ ಬರದ ನಡುವೆಯೂ ಕಷ್ಟಪಟ್ಟು ಈರುಳ್ಳಿ ಬೆಳೆದ ರೈತರು, ಉತ್ತಮ ಇಳುವರಿ ಮತ್ತು ಬಂಪರ್ ಬೆಲೆಯ ನಿರೀಕ್ಷೆಯಲ್ಲಿದ್ದರು. ಆದರೆ, ನಾಲ್ಕು ದಿನಗಳ ಹಿಂದಷ್ಟೇ ₹5,000ರಿಂದ ₹6,000ರವರೆಗೆ ಇದ್ದ ಕ್ವಿಂಟಾಲ್ ಈರುಳ್ಳಿ ದರ ಈಗ ದಿಢೀರ್ ಕುಸಿದಿರುವುದು ರೈತರ ನಿರೀಕ್ಷೆಗಳಿಗೆ ತಣ್ಣೀರೆರಚಿದೆ.
ಈರುಳ್ಳಿ ದರ ಕುಸಿತಕ್ಕೆ ದಲ್ಲಾಳಿಗಳ ಕುತಂತ್ರವೇ ಕಾರಣ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮಗಳ ಕ್ಯಾಮೆರಾಗಳು ಮಾರುಕಟ್ಟೆಗೆ ಬಂದಾಗ ಬೆಲೆ ಹೆಚ್ಚಿಸುವಂತೆ ವರ್ತಿಸುವ ದಲ್ಲಾಳಿಗಳು, ಕ್ಯಾಮೆರಾಗಳು ಹೋದ ಬಳಿಕ ಮತ್ತೆ ದರ ಇಳಿಸುತ್ತಾರೆ ಎಂಬುದು ರೈತರ ಆರೋಪ. ಈ ಆಟದಿಂದ ಈರುಳ್ಳಿ ಬೆಳೆದ ಅನ್ನದಾತರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈರುಳ್ಳಿ ಬಿತ್ತನೆ, ಕೂಲಿ ಕಾರ್ಮಿಕರ ಸಂಬಳ ಸೇರಿದಂತೆ ಬೆಳೆಗೆ ಸಾವಿರಾರು ರೂಪಾಯಿ ಬಂಡವಾಳ ಹೂಡಿರುವ ರೈತರಿಗೆ ಈಗ ಬೆಲೆ ಕುಸಿತದ ಹೊಡೆತ ಬಿದ್ದಿದೆ. ಹಾಕಿದ ಬಂಡವಾಳವನ್ನಾದರೂ ವಾಪಸ್ ಪಡೆಯಲು ಸಾಧ್ಯವಾಗದಿದ್ದರೆ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.
ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಎಪಿಎಂಸಿ ಅಧಿಕಾರಿಗಳು ಮಾರುಕಟ್ಟೆಗೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಕಚೇರಿ ಬಿಟ್ಟು ಹೊರಬಂದು ದಲ್ಲಾಳಿಗಳ ಆಟಕ್ಕೆ ಕಡಿವಾಣ ಹಾಕುತ್ತಿಲ್ಲ. ಜಿಲ್ಲಾಡಳಿತವೂ ರೈತರ ನೆರವಿಗೆ ಧಾವಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈರುಳ್ಳಿ ಬೆಳೆಗಾರರು ಉತ್ಪನ್ನಕ್ಕೆ ನ್ಯಾಯಯುತ ಬೆಲೆ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಕ್ವಿಂಟಾಲ್ ಈರುಳ್ಳಿಗೆ ಕನಿಷ್ಠ ₹6,000 ಬೆಲೆ ನಿಗದಿಪಡಿಸಬೇಕು. ರೈತರ ಹಿತ ಕಾಪಾಡಲು ಎಪಿಎಂಸಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿ, ರೈತರ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಈರುಳ್ಳಿ ಬೆಲೆ ದಿಢೀರ್ ಏರಿಕೆ: ಕಟ್ ಮಾಡದಿದ್ದರೂ ಗ್ರಾಹಕರಲ್ಲಿ ಕಣ್ಣೀರು ತರಿಸಿದ ದರ
ಒಟ್ಟಿನಲ್ಲಿ, ಈರುಳ್ಳಿ ಬೆಲೆ ಏರಿಕೆಯಾದಾಗ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದರೆ, ಬೆಲೆ ಕುಸಿದಾಗ ರೈತರು ನಷ್ಟ ಅನುಭವಿಸುವಂತಾಗಿದೆ. ಮಾರುಕಟ್ಟೆಯಲ್ಲಿನ ದರ ಕುಸಿತದಿಂದ ರೈತರು ಕಂಗಾಲಾಗಿದ್ದು, ಅವರಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಎಪಿಎಂಸಿ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂಬುದು ರೈತರ ಒತ್ತಾಯವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ