ಗದಗ: ಸರ್ಕಾರ ನೀಡಿದರೂ ಮಕ್ಕಳಿಗೆ ಕಲಿಕೆಯ ಭಾಗ್ಯ ಇಲ್ಲ; ವಸತಿ ನಿಲಯದಲ್ಲಿ ಧೂಳು ತಿನ್ನುತ್ತಿದೆ ಕಂಪ್ಯೂಟರ್​ಗಳು

ಗದಗ: ಸರ್ಕಾರ ನೀಡಿದರೂ ಮಕ್ಕಳಿಗೆ ಕಲಿಕೆಯ ಭಾಗ್ಯ ಇಲ್ಲ; ವಸತಿ ನಿಲಯದಲ್ಲಿ ಧೂಳು ತಿನ್ನುತ್ತಿದೆ ಕಂಪ್ಯೂಟರ್​ಗಳು
ಧೂಳು ತಿನ್ನುತ್ತಿರುವ ಕಂಪ್ಯೂಟರ್​ಗಳು

ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದಲ್ಲಿ ಘಟನೆ ನಡೆದಿದೆ. ಅಧಿಕಾರಿಗಳು 5 ವರ್ಷವಾದ್ರೂ ಲ್ಯಾಬ್ ಬಾಗಿಲು ತೆರೆದಿಲ್ಲ. ಹೀಗಾಗಿ, ಇಲಾಖೆಯ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತವಾಗಿದೆ.

TV9kannada Web Team

| Edited By: Ayesha Banu

Dec 29, 2021 | 1:27 PM

ಗದಗ: ಸರ್ಕಾರದ ಯೋಜನೆಯನ್ನು ಅಧಿಕಾರಿಗಳು ಸಂಪೂರ್ಣ ಹಳ್ಳ ಹಿಡಿಸಿದ ಘಟನೆ ಗದಗ ನಗರದ ಸೂರ್ಯನಗರದಲ್ಲಿ ಇರುವ ವಸತಿ ನಿಲಯ ಶಾಲೆಯಲ್ಲಿ ನಡೆದಿದೆ. ಎಸ್​ಸಿ, ಎಸ್​ಟಿ ಮಕ್ಕಳಿಗೆ ಸರ್ಕಾರ ಹೈಟೆಕ್ ಕಂಪ್ಯೂಟರ್ ಲ್ಯಾಬ್ ನೀಡಿತ್ತು. ಸರ್ಕಾರ ಹೈಟೆಕ್​ ಕಂಪ್ಯೂಟರ್​ ಲ್ಯಾಬ್​ ಮಾಡಿದ್ರೂ ವಸತಿ ನಿಲಯದ ಮಕ್ಕಳಿಗೆ ಕಲಿಕೆ ಭಾಗ್ಯ ಇಲ್ಲದಂತಾಗಿದೆ. ಕಂಪ್ಯೂಟರ್​ಗಳು ವಸತಿ ನಿಲಯದಲ್ಲಿ ಧೂಳು ತಿನ್ನುತ್ತಿರುವುದು ಕಂಡುಬಂದಿದೆ.

ಸರ್ಕಾರದ ಯೋಜನೆಗಳು ಹೇಗೆ ಹಳ್ಳ ಹಿಡಿಸಬೇಕು ಅನ್ನೋದು ಗದಗ ಜಿಲ್ಲೆಯ ಅಧಿಕಾರಿಗಳಿಂದ ನೋಡಿ ಕಲಿಯಬೇಕು. ಉತ್ತಮ ಶಿಕ್ಷಣ ಕಲಿತು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬರಲಿ ಅಂತ ಸರ್ಕಾರ ಲಕ್ಷ ಲಕ್ಷ ಖರ್ಚು ಮಾಡಿ ಹೈಟೆಕ್ ಕಂಪ್ಯೂಟರ್ ಲ್ಯಾಬ್ ಮಾಡಿದೆ. ಆದ್ರೆ, ಐದು ವರ್ಷ ಕಳೆದ್ರೂ ಈ ಯೋಜನೆ ಮಾತ್ರ ದಲಿತ ವಿದ್ಯಾರ್ಥಿಗಳಿಗೆ ಗಗನ ಕುಸುಮವಾಗಿದೆ. ಹೈಟೆಕ್ ಕಂಪ್ಯೂಟರ್ ಲ್ಯಾಬ್ ಈಗ ಧೂಳು ತಿನ್ನುತ್ತಿವೆ. ದೇವ್ರು ವರ ಕೊಟ್ರು ಪೂಜಾರಿ ವರ ಕೊಟ್ಟಿಲ್ಲ ಅನ್ನೋ ಸ್ಥಿತಿ ಇಲ್ಲಿನ ವಿದ್ಯಾರ್ಥಿಗಳಿಗೆ ಬಂದೊದಗಿದೆ.

ಸರ್ಕಾರ ದಲಿತ ವಿದ್ಯಾರ್ಥಿಗಳು ಕೂಡ ಎಲ್ಲ ಮಕ್ಕಳಂತೆ ಗುಣಮಟ್ಟ ಶಿಕ್ಷಣ ಕಲಿಯಲಿ ಅಂತ ಕೋಟಿ ಕೋಟಿ ಅನುದಾನ ನೀಡುತ್ತೆ. ಆದ್ರೆ, ಆ ಮಕ್ಕಳಿಗೆ ಸರ್ಕಾರ ಎಷ್ಟು ಯೋಜನೆಗಳು ಮುಟ್ಟುತ್ತವೋ.. ಎಷ್ಟು ಯೋಜನೆಗಳು ಹಳ್ಳ ಹಿಡಿಯುತ್ತಿವೆಯೋ ದೇವರೇ ಬಲ್ಲ. ಅದ್ರಲ್ಲೂ ಗದಗ ಜಿಲ್ಲೆಯಲ್ಲಿ ಎಸ್ಟಿ, ಎಸ್ಟಿ ವಿದ್ಯಾರ್ಥಿಗಳಿಗೆ ಸರ್ಕಾರದ ಯೋಜನೆ ಅನ್ನೋದು ಗಗನ ಕುಸುಮವಾಗಿದೆ. ಹೌದು ಇದು ಗದಗ ನಗರದ ಸೂರ್ಯನಗರದಲ್ಲಿ ಇರೋ ವಸತಿ ನಿಲಯದ ವಿದ್ಯಾರ್ಥಿಗಳ ಗೋಳಿನ ಕಥೆ. ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದಲ್ಲಿ ಸುಮಾರು 50 ಲಕ್ಷ ವೆಚ್ಚದಲ್ಲಿ ಸರ್ಕಾರ ಹೈಟೆಕ್ ಕಂಪ್ಯೂಟರ್ ಲ್ಯಾಬ್ ನಿರ್ಮಾಣ ಮಾಡಿದೆ. ಈ ಲ್ಯಾಬ್ ನಿರ್ಮಾಣ ಮಾಡಿ ಸುಮಾರು ನಾಲ್ಕು ವರ್ಷಗಳು ಕಳೆದಿವೆ. ಆದ್ರೆ, ಇವತ್ತಿನವರೆಗೂ ಈ ಹೈಟೆಕ್ ಕಂಪ್ಯೂಟರ್ ಲ್ಯಾಬ್ ದರ್ಶನವಾಗಿಲ್ಲ ಅಂತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 20 ವಿದ್ಯಾರ್ಥಿಗಳು ಏಕಕಾಲಕ್ಕೆ ಕುಳಿತು ಕಂಪ್ಯೂಟರ್ ಕಲಿಯುವ ವ್ಯವಸ್ಥೆ ಇದೆ. ಆದ್ರೆ, ಈ ದಲಿತ ವಿದ್ಯಾರ್ಥಿಗಳಿಗೆ ಮಾತ್ರ ಕಂಪ್ಯೂಟರ್ ಕಲಿಯುವ ಭಾಗ್ಯವಿಲ್ಲದಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರ ಲಕ್ಷಾಂತರ ಮೌಲ್ಯದ ಯೋಜನೆ ಇಲ್ಲಿ ಧೂಳು ತಿನ್ನುತ್ತಿವೆ ಅಂತ ದಲಿತ ಮುಖಂಡ ಮುತ್ತಣ್ಣ ಚೌಡಣ್ಣವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಎ, ಬಿಕಾಂ, ಬಿಎಸ್ಸಿ, ಡಿಪ್ಲೋಮಾ, ಬಿಬಿಎ ಹೀಗೆ ವಿವಿಧ ಪದವಿ ಕಲಿಯುತ್ತಿರೋ ಸುಮಾರು 120 ವಿದ್ಯಾರ್ಥಿಗಳು ಈ ವಸತಿ ನಿಲಯದಲ್ಲಿ ಇದ್ದಾರೆ. ಈ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಅತ್ಯಗತ್ಯವಾಗಿದೆ. ಹೀಗಾಗಿ ನಾಲ್ಕು ವರ್ಷಗಳ ಹಿಂದೆ ಸುಮಾರು 50 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಬಳಿಕ ಬೀಗ ಜಡಿದು ಅಧಿಕಾರಿಗಳು ಸುಮ್ಮನಾಗಿದ್ದಾರೆ. ವಿದ್ಯಾರ್ಥಿಗಳು ಹಲವಾರು ಬಾರಿ ಕಂಪ್ಯೂಟರ್ ಲ್ಯಾಬ್ ಬಳಕಗೆ ಅವಕಾಶ ನೀಡಿ ಅಂತ ಮನವಿ ಮಾಡಿದ್ರೂ ವಾರ್ಡನ್ ಹಾಗೂ ಅಧಿಕಾರಿಗಳು ಕ್ಯಾರೇ ಎಂದಿಲ್ಲ. ಹೀಗಾಗಿ ಬಡ ವಿದ್ಯಾರ್ಥಿಗಳು ಅನಿವಾರ್ಯವಾಗಿ ಖಾಸಗಿ ಕಂಪ್ಯೂಟರ್ ಸೆಂಟರ್ ನಲ್ಲಿ ಹಣ ಕೊಟ್ಟು ಕಲಿಯುವ ದುಸ್ಥಿತಿ ಅಧಿಕಾರಿಗಳು ನಿರ್ಮಾಣ ಮಾಡಿದ್ದಾರೆ. ಕಂಪ್ಯೂಟರ್ ಮಾತ್ರವಲ್ಲ ಕೆಎಎಸ್ ಸೇರಿದಂತೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು ಇಲ್ಲಿ ಧೂಳು ತಿನ್ನುತ್ತಿವೆ. ಎಸಿಗಳು ಜಾಡು ಹಿಡಿದಿವೆ. ವಿಪರ್ಯಾಸ ಅಂದ್ರೆ, ಯಾವ ಯೋಜನೆಯಲ್ಲಿ ಈ ಕಂಪ್ಯೂಟರ್ ಲ್ಯಾಬ್ ನಿರ್ಮಾಣ ಮಾಡಿದ್ದಾರೆ ಅನ್ನೋದೆ ಅಧಿಕಾರಿಗಳಿಗೆ ಗೋತ್ತಿಲ್ಲ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರಶಾಂತ್ ವರಗಪ್ಪನವರ ಅವ್ರನ್ನು ಕೇಳಿದ್ರೆ, 2019ರಲ್ಲಿ ಲ್ಯಾಬ್ ನಿರ್ಮಾಣ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಲಭ್ಯವಾಗಿಲ್ಲ ಅನ್ನೋ ಗೋತ್ತಾಗಿದೆ. ಶೀಘ್ರವೇ ಕಂಪ್ಯೂಟರ್ ತರಬೇತುದಾರರನ್ನು ನೇಮಕ ಮಾಡಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಬಳಕೆಗೆ ಅವಕಾಶ ನೀಡಲಾಗುತ್ತೆ. ಜೊತೆಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುತ್ತೆ ಅಂತ ಹೇಳಿದ್ದಾರೆ.

ದೇವ್ರು ವರ ಕೊಟ್ರು ಪೂಜಾರಿ ಕೊಡಲಿಲ್ಲ ಅನ್ನೋ ಸ್ಥಿತಿ ಇಲ್ಲಿನ ವಿದ್ಯಾರ್ಥಿಗಳಿಗೆ ಎದುರಾಗಿದೆ. ಸರ್ಕಾರ ಲಕ್ಷ ಲಕ್ಷ ಹಣ ಖರ್ಚು ಮಾಡಿ ಹೈಟೆಕ್ ಕಂಪ್ಯೂಟರ್ ಲ್ಯಾಬ್ ಮಾಡಿದ್ರು ಎಸ್ಸಿ, ಎಸ್ಟಿ ಮಕ್ಕಳಿಗೆ ಸರ್ಕಾರ ಯೋಜನೆ ಲಾಭ ಆಗುತ್ತಿಲ್ಲ. ಲಕ್ಷ ಲಕ್ಷ ಮೌಲ್ಯದ ಕಂಪ್ಯೂಟರ್ಸ್, ಎಸಿ, ಪುಸ್ತಕಗಳು ಧೂಳು ತಿನ್ನುತ್ತಿವೆ. ಈ ಬಗ್ಗೆ ವಿದ್ಯಾರ್ಥಿಗಳನ್ನು ಕೇಳಿದ್ರೆ ಯಾರೂ ಬಾಯಿ ಬಿಡ್ತಾಯಿಲ್ಲ. ಎಲ್ಲ ಅಧಿಕಾರಿಗಳು ನಮಗೆ ಸಮಸ್ಯೆ ಮಾಡ್ತಾರೋ ಅನ್ನೋ ಭಯ ವಿದ್ಯಾರ್ಥಿಗಳದ್ದು. ಇನ್ನಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಯುವ ಭಾಗ್ಯ ಕಲ್ಪಿಸಬೇಕಿದೆ..

ಹಸಿವು ತಾಳಲಾರದೆ ವಿದ್ಯಾರ್ಥಿಗಳ ಪರದಾಟ ಹಸಿವು ತಾಳಲಾರದೆ ವಿದ್ಯಾರ್ಥಿಗಳು ಪರದಾಟ ನಡೆಸಿದ ಘಟನೆ ಗದಗ ಜಿಲ್ಲೆಯ ಸರಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಕೆಲ ದಿನಗಳ ಹಿಂದೆ ನಡೆದಿತ್ತು. ಸಮರ್ಪಕವಾಗಿ ಹಾಸ್ಟೆಲ್ (Hostel) ಸಿಬ್ಬಂದಿಗಳು ಊಟ ನೀಡದೆ ಇರುವುದು ವಿದ್ಯಾರ್ಥಿಗಳ (Students) ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಹಾಸ್ಟೆಲ್ ಸಿಬ್ಬಂದಿಗಳ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿಗಳು ರಾತ್ರೋರಾತ್ರಿ ಜಿಲ್ಲಾಡಳಿತದ ಮೊರೆ ಹೋಗಿದ್ದರು.

120 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಪರದಾಟ ನಡೆಸುತ್ತಿದ್ದು, ರಾತ್ರಿ ಊಟ ಸಿಗದಿದಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಹಾಸ್ಟೆಲ್ ವಾರ್ಡನ್​ ಹಾಗೂ ಸಿಬ್ಬಂದಿಗಳ ಮೇಲೆ‌ ಸೂಕ್ತವಾದ ಕ್ರಮಕ್ಕೆ ಒತ್ತಾಯ ಮಾಡಿದ್ದರು. ಜತೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದರು. ಗದಗ ಜಿಲ್ಲೆಯಲ್ಲಿ ಇಂತಹ ಕೆಲವು ಪ್ರಕರಣಗಳು ಇತ್ತೀಚೆಗೆ ವರದಿ ಆಗಿವೆ. ವಿದ್ಯಾರ್ಥಿಗಳ ಸಮಸ್ಯೆ ಕುರಿತು ಪ್ರತಿಕ್ರಿಯೆಗಳು ಕೇಳಿಬಂದಿವೆ. ಅಧಿಕಾರಿಗಳು ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ನಿರೀಕ್ಷೆ ಎಲ್ಲರದಾಗಿದೆ.

ಇದನ್ನೂ ಓದಿ: ಗದಗ: ವಸತಿ ನಿಲಯದಲ್ಲಿ ಹಸಿವು ತಾಳದೆ ಪರದಾಟ; ರಾತ್ರೋರಾತ್ರಿ ಜಿಲ್ಲಾಡಳಿತದ ಮೊರೆ ಹೋದ ವಿದ್ಯಾರ್ಥಿಗಳು

ಇದನ್ನೂ ಓದಿ: ಗದಗ ತಾಲ್ಲೂಕಿನಲ್ಲಿ ಮಕ್ಕಳು ಶಾಲೆಗೆ ಹೋಗಬೇಕಾದರೆ, ಜೀವದ ಹಂಗು ತೊರೆದು ಪ್ರಯಾಣಿಸಬೇಕು!

Follow us on

Related Stories

Most Read Stories

Click on your DTH Provider to Add TV9 Kannada