ಗದಗ: ನಕಲಿ ಚಿನ್ನ ಅಡ ಇಟ್ಟು 1.5 ಕೋಟಿ ಸಾಲ ಎತ್ತಿ ಸಿಕ್ಕಿಬಿದ್ದ ನಗರಸಭೆ ಮಾಜಿ ಉಪಾಧ್ಯಕ್ಷ ಪುತ್ರನ ಅಸಲಿ ಕತೆ ಇಲ್ಲಿದೆ!

TV9kannada Web Team

TV9kannada Web Team | Edited By: sadhu srinath

Updated on: Nov 04, 2022 | 4:17 PM

ಗದಗನಲ್ಲಿ ದೊಡ್ಡ ನಕಲಿ ಚಿನ್ನದ ಗ್ಯಾಂಗ್ ಠಿಕಾಣಿ ಹೂಡಿದೆ. ಎರಡು ರಾಷ್ಟ್ರೀಯ ಬ್ಯಾಂಕುಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಕೋಟ್ಯಾಂತರ ಸಾಲ ಪಡೆದು ಭಾರಿ ವಂಚನೆ ಮಾಡಿದ್ದಾರೆ. ನಕಲಿ ಚಿನ್ನದ ಅಸಲಿ ಮಾಸ್ಟರ್ ಮೈಂಡ್ ಗದಗ-ಬೆಟಗೇರಿ ನಗರಸಭೆ ಮಾಜಿ ಉಪಾಧ್ಯಕ್ಷನ ಪುತ್ರ ಎಂಬುದು ಗಮನಾರ್ಹ. ವಿಷಯ ತಿಳಿದು ಗದಗ ಪೊಲೀಸರು ಬೆಚ್ಚಿಬಿದ್ದಿದ್ದಾರೆ.

ಗದಗ: ನಕಲಿ ಚಿನ್ನ ಅಡ ಇಟ್ಟು 1.5 ಕೋಟಿ ಸಾಲ ಎತ್ತಿ ಸಿಕ್ಕಿಬಿದ್ದ ನಗರಸಭೆ ಮಾಜಿ ಉಪಾಧ್ಯಕ್ಷ ಪುತ್ರನ ಅಸಲಿ ಕತೆ ಇಲ್ಲಿದೆ!
ನಕಲಿ ಚಿನ್ನ ಅಡ ಇಟ್ಟು 1.5 ಕೋಟಿ ಸಾಲ ಎತ್ತಿ ಸಿಕ್ಕಿಬಿದ್ದ ನಗರಸಭೆ ಅಧ್ಯಕ್ಷೆಯ ಪುತ್ರನ ಅಸಲಿ ಕತೆ ಇಲ್ಲಿದೆ!

ಗದಗನಲ್ಲಿ ದೊಡ್ಡ ನಕಲಿ ಚಿನ್ನದ ಗ್ಯಾಂಗ್ ಠಿಕಾಣಿ ಹೂಡಿದೆ. ಎರಡು ರಾಷ್ಟ್ರೀಯ ಬ್ಯಾಂಕುಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಕೋಟ್ಯಾಂತರ ಸಾಲ ಪಡೆದು ಭಾರಿ ವಂಚನೆ ಮಾಡಿದ್ದಾರೆ. ನಕಲಿ ಚಿನ್ನದ ಅಸಲಿ ಮಾಸ್ಟರ್ ಮೈಂಡ್ ಗದಗ-ಬೆಟಗೇರಿ ನಗರಸಭೆ ಮಾಜಿ ಉಪಾಧ್ಯಕ್ಷನ ಪುತ್ರ ಎಂಬುದು ಗಮನಾರ್ಹ. ಈ ಸುದ್ದಿ ಕೇಳಿ ಪೊಲೀಸ್ ಇಲಾಖೆಯೇ ಬೆಚ್ಚಿಬಿದ್ದಿದೆ. ನಕಲಿ ಚಿನ್ನ ಇಟ್ಟು ಪ್ರತಿ ಬ್ಯಾಂಕ್ ನಲ್ಲಿ ಕೋಟ್ಯಾಂತರ ರೂ ಸಾಲ ಪಡೆದು ದೊಡ್ಡ ಟೋಪಿ ಹಾಕಿದ್ದು, ಬ್ಯಾಂಕ್ ಅಧಿಕಾರಿಗಳು ಪತರಗುಟ್ಟಿ ಹೋಗಿದ್ದಾರೆ.

ನಕಲಿ ಚಿನ್ನದ ಗ್ಯಾಂಗ್ ಗದಗ ನಗರದ ಐಡಿಬಿಐ ಬ್ಯಾಂಕ್ ನಲ್ಲಿ ನಕಲಿ ಚಿನ್ನ ಅಡವಿಟ್ಟು 1 ಕೋಟಿ 43 ಲಕ್ಷ 34 ಸಾವಿರ ರೂಪಾಯಿ ಹಣ ಸಾಲ ಪಡೆದಿದ್ದ ದತ್ತಾತ್ರೇಯ ಬಾಕಳೆ ಸೇರಿದಂತೆ 17 ಜನರ ವಿರುದ್ಧ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಷ್ಟೇ ಅಲ್ಲ ಯೂನಿಯನ್ ಬ್ಯಾಂಕ್ ನಲ್ಲೂ ನಕಲಿ ಚಿನ್ನ ಇಟ್ಟು 1 ಕೋಟಿ 57 ಲಕ್ಷ 66 ಸಾವಿರ ಸಾಲ ಪಡೆದಿದ್ದಾರೆ ಎಂದು ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ.

ತಾಜಾ ಸುದ್ದಿ

ವಂಚನೆಯ ಮಾಸ್ಟರ್ ಮೈಂಡ್ ದತ್ತಾತ್ರೇಯ ಬಾಕಳೆ, ಗದಗ ಬೆಟಗೇರಿ ನಗರಸಭೆ ಮಾಜಿ ಉಪಾಧ್ಯಕ್ಷ ಸುನಂದಾ ಬಾಕಳೆ ಮಗನಾಗಿದ್ದಾನೆ. ಇದೇ ವರ್ಷದ ಏಪ್ರಿಲ್ ತಿಂಗಳಿಂದ ಜೂನ್ ವರೆಗೆ ದತ್ತಾತ್ರೇಯ ಸಹಚರರ ಹೆಸರಲ್ಲಿ ಬ್ಯಾಂಕ್ ನಲ್ಲಿ ನಕಲಿ ಚಿನ್ನದ ಆಭರಣ ಅಡವಿಟ್ಟು ಕೋಟ್ಯಾಂತರ ಸಾಲ ಪಡೆದಿದ್ದಾರೆ. (ವರದಿ: ಸಂಜೀವ ಪಾಂಡ್ರೆ, ಟಿವಿ 9, ಗದಗ)

ಆರೋಪಿ ದತ್ತಾತ್ರೇಯ ಬಾಕಳೆಗೆ ಐಡಿಬಿಐ ಬ್ಯಾಂಕ್ ನಲ್ಲಿ ಚಿನ್ನ ಚೆಕ್ ಮಾಡುವ ಸುರೇಶ್ ರೇವಣಕರ ಸಾಥ್ ನೀಡಿದ್ದಾನೆ. ಈತನ ಸಹಾಯ ಪಡೆದು ಬ್ಯಾಂಕ್ ಗೆ ದೊಡ್ಡ ವಂಚನೆ ಮಾಡಿದ್ದಾನೆ. ದತ್ತಾತ್ರೇಯ ಆ್ಯಂಡ್ ಗ್ಯಾಂಗ್ ತರುತ್ತಿದ್ದ ನಕಲಿ ಚಿನ್ನಕ್ಕೆ 22 ಕ್ಯಾರೆಟ್ ಚಿನ್ನ ಅಂತಾ ಸುರೇಶ್ ಸರ್ಟಿಫಿಕೇಟ್ ಕೊಡ್ತಿದನಂತೆ! ಪ್ರಮಾಣ ಪತ್ರ ಪಡೆದು ಎರಡು ತಿಂಗಳ ಅಂತರದಲ್ಲಿ ಬೇರೆ ಬೇರೆ ಹೆಸರಲ್ಲಿ ಐಡಿಬಿಐ ಬ್ಯಾಂಕ್ ನಲ್ಲಿ ಒಟ್ಟು 4,871.04 ಗ್ರಾಂ ನಕಲಿ ಚಿನ್ನ ಅಡಮಾನವಿಟ್ಟು ಬರೋಬ್ಬರಿ 1 ಕೋಟಿ 43 ಲಕ್ಷ 34 ಸಾವಿರ ರೂಪಾಯಿ ಸಾಲದ ರೂಪದಲ್ಲಿ ಪಡೆದಿದ್ದಾರೆ.

ಯೂನಿಯನ್ ಬ್ಯಾಂಕ್ ಗೂ ಟೋಪಿ

ಗದಗ ನಗರದ ರೋಟರಿ ಸರ್ಕಲ್ ಬಳಿ ಇರೋ ಯೂನಿಯನ್ ಬ್ಯಾಂಕ್ ನಲ್ಲೂ ವಂಚಕರು ನಕಲಿ ಚಿನ್ನ ಅಡವಿಟ್ಟು ಕೋಟ್ಯಾಂತರ ಹಣ ಸಾಲ ಪಡೆದಿದ್ದಾರೆ. 4983.2 ಗ್ರಾಂ ಚಿನ್ನ ಅಡವಿಟ್ಟು 1 ಕೋಟಿ 57 ಲಕ್ಷ 66 ಸಾವಿರ ಸಾಲ ಪಡೆದಿದ್ದಾರೆ. ಚಿನ್ನದ ಅಕ್ಕಸಾಲಿಗನನ್ನು ಬುಕ್ ಮಾಡಿಕೊಂಡಿದ್ದ ಈ ಖತರ್ನಾಕ್ ಗ್ಯಾಂಗ್, ರಾಷ್ಟ್ರಿಕೃತ್ ಬ್ಯಾಂಕ್ ಗೆ ಭಾರಿ ವಂಚನೆ ಮಾಡಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ..?

ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್ ನಲ್ಲಿ ಇರಿಸಲಾಗಿದ್ದ ಚಿನ್ನವನ್ನ ಚೆಕ್ ಮಾಡಲಾಗಿತ್ತು. ತಪಾಸಣೆ ವೇಳೆ ಕೆಲ ಚಿನ್ನಾಭರಣ ನಕಲಿ‌ ಅನ್ನೋದು ಪತ್ತೆಯಾಗಿದೆ. ವಂಚನೆಯಾಗಿರೋ ಬಗ್ಗೆ ಮಾಹಿತಿ ಪಡೆದಿದ್ದ ಬ್ಯಾಂಕ್ ಮ್ಯಾನೇಜರ್ ಪರಶುರಾಮ ರೊಟ್ಟಿಗವಾಡ ಅವರು ಮುಖ್ಯ ಕಚೇರಿಗೆ ಮಾಹಿತಿ ನೀಡಿದ್ರು. ಮೇಲಾಧಿಕಾರಿಗಳ ಅನುಮತಿ ಪಡೆದ ನಂತರ, ಸದ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮುಖ್ಯ ಆರೋಪಿ ಬೆಂಗಳೂರಲ್ಲಿ ಬಂಧನ

ದತ್ತಾತ್ರೇಯ ಬಾಕಳೆ ಕೆಲ ವರ್ಷಗಳಿಂದ ವಿವಿಧ ಫ್ರಾಡ್ ಕೇಸ್ ಗಳಲ್ಲಿ ಭಾಗಿಯಾಗಿದ್ದ. ಬೆಂಗಳೂರಿನಲ್ಲಿ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿನವಾಗಿದ್ದಾನೆ ಅಂತಾ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ 18 ಜನರಿಗಾಗಿ ಈಗಾಗ್ಲೆ ತಲಾಶ್ ನಡೆದಿದೆ.

ಬ್ಯಾಂಕ್ ಅಧಿಕಾರಿಗಳೂ ಶಾಮೀಲು ಶಂಕೆ

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಕಲಿ ಚಿನ್ನವಿಟ್ಟು ಕೋಟ್ಯಾಂತರ ಹಣ ಸಾಲ ನೀಡುವಾಗ ಮೇಲಾಧಿಕಾರಿಗಳು ಖುದ್ದು ಪರಿಶೀಲನೆ ಮಾಡಬೇಕಂತೆ. ಆದ್ರೆ, ಪರಿಶೀಲನೆ ಮಾಡಿದ್ದಾರೋ ಇಲ್ವೋ ಅನ್ನೋ ಬಗ್ಗೆ ತನಿಖೆ ವೇಳೆ ಗೊತ್ತಾಗಲಿದೆ ಅಂತ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ.

ಪ್ರಕರಣ ಸಂಬಂಧ ಬೆಟಗೇರಿ ಬಡಾವಣೆಯಲ್ಲಿ ಕೇಸ್ ದಾಖಲಾಗಿದ್ದು, ವಂಚನೆಗೆ ಸಹಕಾರ ನೀಡಿದ್ದ ಬ್ಯಾಂಕ್ ನ ಚಿನ್ನ ಚೆಕ್ ಮಾಡುತ್ತಿದ್ದ ಸುರೇಶ್ ರೇವಣಕರ, ದತ್ತಾತ್ರೇಯ ಬಾಕಳೆ, ಅರಣ್ ಕುಮಾರ್, ಆದಿಲ್ ನಿಶಾನಿ, ರವಿ ಹತ್ತರಕಲ್, ಗಣೇಶ ಮಾದರ, ಮಾಣಿಕ್ ಲಕ್ಕುಂಡಿ, ದಾನೇಶ್ ಉಮಾದಿ, ರಾಕೇಶ್ ನವಲಗುಂದ, ಮಂಜುನಾಥ ಹೊಸದು, ಸುಚೀತಕುಮಾರ ಹರಿವಾನ, ದುಂಡಪ್ಪ ಕೊಟ್ಟೂರುಶೆಟ್ಟರ್, ಸಿದ್ಧಾರ್ಥ್ ಭರಡಿ, ನಾಗರಾಜ ರಾಮಗಿರಿ, ಅರುಣಕುಮಾರ ಹೂಗಾರ, ಸಚಿನ್ ಹರಿವಾಣ, ಸಂತೋಷ ವೀರಶೆಟ್ಟಿ ಅವರ ವಿರುದ್ಧ ದೂರು ದಾಖಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada