ಗದಗ: ನೀರಾವರಿ ಇಲಾಖೆ ನಿರ್ಲಕ್ಷ್ಯ; 14 ವರ್ಷಗಳಿಂದ ಅತಂತ್ರ ಜೀವನ ನಡೆಸುತ್ತಿರೋ ಗೊಮ್ಮಗೋಳ ಗ್ರಾಮಸ್ಥರು
ಅದು ಸಿಂಗಟಾಲೂರ ಏತ ನೀರಾವರಿ ಯೋಜನೆಯಲ್ಲಿ ಮುಳುಗಡೆದ ಗ್ರಾಮ. 3.12 ಟಿಎಂಸಿ ನೀರು ನಿಲ್ಲಿಸಿದ್ರೆ ಇಡೀ ಗ್ರಾಮ ಮುಳುಗಿ ಹೋಗುತ್ತದೆ. ಹೀಗಾಗಿ 15 ವರ್ಷಗಳ ಹಿಂದೆ ಮುಳುಗಡೆ ಪ್ರದೇಶ ಎಂದು ಘೋಷಣೆ ಕೂಡ ಮಾಡಲಾಗಿದೆ. ಆದ್ರೆ, ಆ ಗ್ರಾಮದ ಜನರು ಗ್ರಾಮ ಬಿಡುತ್ತಿಲ್ಲ. ಅಧಿಕಾರಿಗಳ ಯಡವಟ್ಟಿಗೆ ಪ್ರತಿವರ್ಷವೂ ಆತಂಕ, ಭಯದಲ್ಲೇ ಬದುಕುತ್ತಿದ್ದಾರೆ. ಸರ್ಕಾರ ಕೂಡ ಸ್ಥಳಾಂತರ ವಿಷಯ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ ಈ ಯೋಜನೆ ಹಳ್ಳಹಿಡಿದಂತಾಗಿದ್ದು, ಇದಕ್ಕೆ ಸರ್ಕಾರವೇ ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗ, ಆ.29: ಜಿಲ್ಲೆಯ ಮಹತ್ವಾಕಾಂಕ್ಷೆ ಯೋಜನೆ ಈ ಸಿಂಗಟಾಲೂರು ಏತ ನೀರಾವರಿ ಯೋಜನೆ. ಈ ಯೋಜನೆಗಾಗಿ ಸಾಕಷ್ಟು ಜನರು ಮನೆ-ಮಠಗಳನ್ನು ಕಳೆದುಕೊಂಡಿದ್ದಾರೆ. ಆದ್ರೆ, ಏತ ನೀರಾವರಿ ಯೋಜನೆಗೆ ಮುಳುಗಡೆಯಾಗುವ ಗೊಮ್ಮಗೋಳ ಗ್ರಾಮಸ್ಥರು ಮಾತ್ರ ಅತಂತ್ರವಾಗಿದ್ದಾರೆ. ಹೌದು, ಸರ್ಕಾರದ ಯಡವಟ್ಟಿನಿಂದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಗೊಮ್ಮಗೋಳ(gummagol) ಗ್ರಾಮಸ್ಥರು ಗೋಳಾಡುತ್ತಿದ್ದಾರೆ. 3.12 ಟಿಎಂಸಿ ನೀರು ಸಂಗ್ರಹ ಮಾಡುವ ಉದ್ದೇಶ ಈ ಸಿಂಗಟಾಲೂರ ಏತ ನೀರಾವರಿ ಯೋಜನೆ ಹೊಂದಿದೆ. ಆದರೆ, ದಶಕ ಕಳೆದರೂ 3.12 ಟಿಎಂಸಿ ನೀರು ನಿಲ್ಲಿಸುವ ಉದ್ದೇಶ ಸಾಕಾರವಾಗಿಲ್ಲ. ಇದಕ್ಕೆ ಕಾರಣ ಸರ್ಕಾರ, ನೀರಾವರಿ ಇಲಾಖೆ ಎಂದು ಗ್ರಾಮಸ್ಥರು ಕೆಂಡಕಾರಿದ್ದಾರೆ.
ಈ ಹಿಂದೆ ಸರ್ಕಾರ ಗೊಮ್ಮಗೋಳ ಗ್ರಾಮವನ್ನು ಸ್ಥಳಾಂತರ ಮಾಡಬೇಕೆಂದು, ಗ್ರಾಮಸ್ಥರಿಗೆ ಪರಿಹಾರ ನೀಡಿ, ಗೊಮ್ಮಗೋಳ ಗ್ರಾಮದಿಂದ ಸ್ವಲ್ಪ ದೂರದಲ್ಲಿ ಗ್ರಾಮವನ್ನು ಸ್ಥಳಾಂತರಿಸಲು ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ಜಾಗವನ್ನು ಗುರುತಿಸಿ ಅಭಿವೃದ್ಧಿ ಮಾಡಿತ್ತು. ಆದ್ರೆ, ಸಕಾಲದಲ್ಲಿ ಗ್ರಾಮಸ್ಥರಿಗೆ ಸೈಟ್ಗಳು ಹಂಚಿಕೆ ಮಾಡಿಲ್ಲ. ಸುಮಾರು ಆರೇಳು ವರ್ಷ ವಿಳಂಬ ಮಾಡಿದೆ. ಹೀಗಾಗಿ ಹೊಸ ಗ್ರಾಮಕ್ಕೆ ಶಿಫ್ಟ್ ಆಗಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ಅಂದು ಮನೆ ನಿರ್ಮಾಣ ವೆಚ್ಚ ಕಡಿಮೆ ಇತ್ತು. ಈಗ ವೆಚ್ಚ ಹೆಚ್ಚಾಗಿದೆ. ಸರ್ಕಾರದ ವಿಳಂಬದಿಂದ ಮೊದಲು ನೀಡಿದ ಅಲ್ಪ ಪರಿಹಾರ ಖರ್ಚಾಗಿದೆ. ಇದಕ್ಕೆ ಸರ್ಕಾರ, ನೀರಾವರಿ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ. ಇವಾಗ ಗ್ರಾಮಸ್ಥರು ಆ ಜಾಗಕ್ಕೆ ಹೋಗಲು ಒಪ್ಪುತ್ತಿಲ್ಲ, ಸರ್ಕಾರ ನಮಗೆ ಮತ್ತೊಮ್ಮೆ ಪರಿಹಾರ ನೀಡಬೇಕು, ಆಗ ನೀಡಿದ ಪರಿಹಾರದಿಂದ ಈವಾಗ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ:ಗದಗ ಜಿಲ್ಲೆಯಲ್ಲಿ ಹಳ್ಳಹಿಡಿದ ಜಲ ಜೀವನ್ ಯೋಜನೆ: ನೀರು ಬರುವ ಮೊದಲೇ ತುಕ್ಕು ಹಿಡಿದ ಪೈಪ್ಗಳು
ಇನ್ನು ಗೊಮ್ಮಗೋಳ ಗ್ರಾಮಸ್ಥರು ನಮಗೆ ಮತ್ತೊಮ್ಮೆ ಪರಿಹಾರ ನೀಡಿ, ಪುನರ್ವಸತಿ ಸ್ಥಳವನ್ನು ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಆದ್ರೆ, ಜಿಲ್ಲಾಡಳಿತ ಪುನರ್ವಸತಿ ಕೇಂದ್ರ ಅಭಿವೃದ್ಧಿ ಮಾಡುತ್ತೇವೆ, ಮತ್ತೊಮ್ಮೆ ಪರಿಹಾರ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಾಗಿದೆ ಎನ್ನುತ್ತಿದ್ದಾರೆ. ಇನ್ನು ಈ ಕುರಿತು ಕ್ಷೇತ್ರದ ಶಾಸಕ ಡಾ, ಚಂದ್ರು ಲಮಾಣಿ ಹಾಗೂ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ರ ಗಮನಕ್ಕೆ ತರಲಾಗಿದೆ. ಆದ್ರೆ, ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ಇದರ ನಡುವೆ ಈ ಹಿಂದೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪುನರ್ವಸತಿ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ. ದೇವಸ್ಥಾನ, ಸಮುದಾಯ ಭವನ, ರಸ್ತೆ ಶಾಲೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಸರ್ಕಾರದ ಹಣದಿಂದ ನಿರ್ಮಾಣ ಮಾಡಿದ ದೇವಸ್ಥಾನ, ಸಮುದಾಯ ಭವನ ಪಾಳು ಬಿದ್ದಿವೆ. ಸ್ಥಳಾಂತರವಾಗುವ ಗ್ರಾಮದಲ್ಲಿ ರಸ್ತೆ, ಸೇರಿದಂತೆ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಹೀಗಾಗಿ ಕಳೆದ ಹಲವು ವರ್ಷಗಳಿಂದ ನಿರಾಶ್ರಿತರ ಹಾಗೇ ಜೀವನ ನಡೆಸುತ್ತಿದ್ದೇವೆ ಎಂದು ಗ್ರಾಮಸ್ಥರು ಅಳಲು ತೊಡಿಕೊಂಡಿದ್ದಾರೆ. ಈಗ ಮನೆಗಳ ನಿರ್ಮಾಣಕ್ಕೆ 5ಲಕ್ಷ ಪರಿಹಾರ ನೀಡಿದ್ರೆ ಮಾತ್ರ ಗ್ರಾಮ ಬಿಡುತ್ತೇವೆ. ಇಲ್ಲವಾದರೆ ಯಾವುದೇ ಕಾರಣಕ್ಕೂ ಊರು ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ದಶಕ ಕಳೆದರೂ ಯೋಜನೆ ಉದ್ದೇಶ ಸಾಕಾರವಾಗಿಲ್ಲ. ತುಂಗಭದ್ರಾ ನದಿಗೆ ಹೆಚ್ಚಿನ ನೀರು ಬಂದ್ರೆ ಸಿಂಗಟಾಲೂರು ಬ್ಯಾರೇಜ್ ಭರ್ತಿಯಾಗುತ್ತದೆ. ಬ್ಯಾರೇಜ್ ಭರ್ತಿಯಾದ್ರೆ ಗೊಮ್ಮಗೋಳ ಗ್ರಾಮ ಸಂಪೂರ್ಣವಾಗಿ ಮುಳುಗಡೆಯಾಗುತ್ತದೆ. ಹೀಗಾಗಿ ಸರ್ಕಾರ ಕೂಡಲೇ ಸೂಕ್ತವಾದ ಕ್ರಮವನ್ನು ಕೈಗೊಂಡು ಗೊಮ್ಮಗೋಳ ಗ್ರಾಮವನ್ನು ಸ್ಥಳಾಂತರ ಮಾಡಬೇಕಾಗಿದೆ. ಹಳೆ ಗ್ರಾಮದಲ್ಲಿ ವಾಸ ಮಾಡಲು ಆಗುತ್ತಿಲ್ಲ, ಹೊಸ ಗ್ರಾಮಕ್ಕೆ ಹೊಗಲು ಆಗಲ್ಲ. ಹೀಗಾಗಿ ಸರ್ಕಾರ ಗೊಮ್ಮಗೋಳ ಗ್ರಾಮಸ್ಥರ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಲ್ಪಿಸಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ