ಅರಸೀಕೆರೆ ನಗರಸಭೆಯಲ್ಲಿ ಆಪರೇಶನ್ ಕಮಲ? ಜೆಡಿಎಸ್ ಸದಸ್ಯರಿಂದ ಬಿಜೆಪಿಗೆ ಒಕ್ಕೊರಲ ಬೆಂಬಲ
31 ಸದಸ್ಯರ ಬಲದ ಹಾಸನ ಜಿಲ್ಲೆಯ ಅರಸೀಕೆರೆ ನಗರಸಭೆಯು ಸದ್ಯ 21 ಜೆಡಿಎಸ್, 6 ಬಿಜೆಪಿ, 3 ಪಕ್ಷೇತರರು, ಕಾಂಗ್ರೆಸ್‌ನ ಓರ್ವ ಸದಸ್ಯರನ್ನು ಹೊಂದಿದೆ. ಮೀಸಲಾತಿ ಬಲದಿಂದ ಬಿಜೆಪಿ ಅಭ್ಯರ್ಥಿ ನಗರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕೋರಂ ಕೊರತೆ ನೀಗಿಸಲು ಬಿಜೆಪಿಯಿಂದ ಆಪರೇಷನ್ ಕಮಲ ಮಾಡಿರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹಾಸನ: ಜಿಲ್ಲೆಯ ಅರಸೀಕೆರೆ ನಗರಸಭೆಯಲ್ಲಿ ಕೋರಂ ಕೊರತೆ ನೀಗಿಸಲು ಆಪರೇಷನ್ ಕಮಲ ಮಾಡಲಾಗಿದೆ ಎಂಬ ಕೂಗು ಕೇಳಿಬಂದಿದೆ. ನಗರಸಭೆಯಲ್ಲಿ ತಮಗೆ ಪ್ರತ್ಯೇಕ ಆಸನ ಮೀಸಲಿಡುವಂತೆ ಪಕ್ಷೇತರರಿಬ್ಬರ ಜತೆ ಜೆಡಿಎಸ್ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಮತ್ತು ಸ್ಥಳೀಯ ಕೆಲವು ಜೆಡಿಎಸ್ ಮುಖಂಡರ ವಿರುದ್ಧ ಅರಸಿಕೆರೆ ನಗರಸಭೆಯ ಜೆಡಿಎಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕ ಕೆ.ಎಂ.ಶಿವಲಿಂಗೇಗೌಡ ಮತ್ತು ಕೆಲವು ಜೆಡಿಎಸ್ ಮುಖಂಡರಿಂದ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಬೇಸತ್ತು ಅವರ ಗುಂಪಿನಿಂದ ಹೊರ ಬಂದಿದ್ದೇವೆ. ನಾವು ಪಕ್ಷ ತೊರೆದಿಲ್ಲ, 3ನೇ ಒಂದು ಭಾಗ ಗುಂಪಾಗಿ ಪ್ರತ್ಯೇಕವಾಗಿದ್ದು ನಗರದ ಅಭಿವೃದ್ಧಿ ದೃಷ್ಟಿಯಿಂದ ನಗರಸಭೆ ಅಧ್ಯಕ್ಷರಿಗೆ ಬೆಂಬಲ ನೀಡುತ್ತೇವೆ ಎಂದು ಜೆಡಿಎಸ್ ಸದಸ್ಯರು ತಿಳಿಸಿದ್ದಾರೆ. ಆದರೆ ಅರಸೀಕೆರೆ ಜೆಡಿಎಸ್ ಸದಸ್ಯರು ಬಿಜೆಪಿಯವರಾಗಿದ್ದು, ಜೆಡಿಎಸ್ ಸದಸ್ಯರು ಬಿಜೆಪಿಗೆ ಬೆಂಬಲ ನೀಡಿದಂತಾಗಿದೆ.
31 ಸದಸ್ಯರ ಬಲದ ಹಾಸನ ಜಿಲ್ಲೆಯ ಅರಸೀಕೆರೆ ನಗರಸಭೆಯು ಸದ್ಯ 21 ಜೆಡಿಎಸ್, 6 ಬಿಜೆಪಿ, 3 ಪಕ್ಷೇತರರು, ಕಾಂಗ್ರೆಸ್‌ನ ಓರ್ವ ಸದಸ್ಯರನ್ನು ಹೊಂದಿದೆ. ಮೀಸಲಾತಿ ಬಲದಿಂದ ಬಿಜೆಪಿ ಅಭ್ಯರ್ಥಿ ನಗರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕೋರಂ ಕೊರತೆ ನೀಗಿಸಲು ಬಿಜೆಪಿಯಿಂದ ಆಪರೇಷನ್ ಕಮಲ ಮಾಡಿರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇತ್ತೀಚಿಗಷ್ಟೇ ಹಾಸನ ನಗರಸಭೆಯೂ ಜೆಡಿಎಸ್ ಕೈಬಿಟ್ಟಿತ್ತು ಇದೇ ಮೊದಲ ಬಾರಿಗೆ ಹಾಸನ ನಗರಸಭೆ ಬಿಜೆಪಿ ತೆಕ್ಕೆಗೆ ಒಲಿದಿದೆ. ಜೆಡಿಎಸ್ ಪಕ್ಷ ಬಹುಮತಕ್ಕೆ ಹತ್ತಿರವಿದ್ದರೂ ಅಧಿಕಾರದಿಂದ ವಂಚಿತವಾಗಿದೆ. 35 ಸದಸ್ಯ ಬಲದ ನಗರಸಭೆಯಲ್ಲಿ 17 ಸ್ಥಾನ ಗೆದ್ದಿದ್ದ ಜೆಡಿಎಸ್ಗೆ ನಿರಾಸೆ ಮೂಡಿದ್ದರೆ 13 ಸ್ಥಾನ ಗೆದ್ದಿದ್ದ ಬಿಜೆಪಿಗೆ ಅಧ್ಯಕ್ಷ ಸ್ಥಾನ ಒಲಿದಿದೆ.
ಜೆಡಿಎಸ್ ಹಾಸನ ನಗರಸಭೆಯಲ್ಲಿ ಓರ್ವ ಪಕ್ಷೇತರ ಸದಸ್ಯನ ನೆರವಿನಿಂದ ಅಧಿಕಾರಕ್ಕೇರುವ ಕನಸು ಕಂಡಿತ್ತು. ಆದರೆ ಮೀಸಲಾತಿ ನೆರವಿನಿಂದ ಬಿಜೆಪಿ ಸದಸ್ಯರು ಅಧಿಕಾರ ಸ್ವೀಕರಿಸಿದ್ದು ಜೆಡಿಎಸ್ನಿಂದ ಹಾಸನ ನಗರ ಸಭೆಯ ಅಧಿಕಾರ ಕೈತಪ್ಪಿದೆ. ಬಿಜೆಪಿ ನಗರಸಭೆ ಸದಸ್ಯರಾದ ಮೋಹನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಉಪಾಧ್ಯಕ್ಷರಾಗಿ ಮಂಗಳಾ ಪ್ರದೀಪ್ ಅಧಿಕಾರ ಸ್ವೀಕರಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಇದ್ದಿದ್ದ ಕಾರಣ ಜೆಡಿಎಸ್ ಕೈಯಿಂದ ಹಾಸನ ನಗರಸಭೆಯ ಅಧ್ಯಕ್ಷ ಸ್ಥಾನ ಕೈಬಿಟ್ಟಿತ್ತು. ಆದರೆ ಜೆಡಿಎಸ್ನಿಂದ ಆಯ್ಕೆಯಾಗಿದ್ದ ನಗರಸಭೆ ಸದಸ್ಯರು ಉಪಾಧ್ಯಕ್ಷ ಸ್ಥಾನಕ್ಕೂ ಮೀಸಲಾತಿ ಇದ್ದ ಕಾರಣದಿಂದಲೇ ಅರ್ಜಿ ಸಲ್ಲಿಸಲಿಲ್ಲ. ಹೀಗಾಗಿ ಉಪಾಧ್ಯಕ್ಷ ಸ್ಥಾನವೂ ಜೆಡಿಎಸ್ ಕೈಬಿಟ್ಟಿದೆ. ಶಾಸಕ ಪ್ರೀತಂಗೌಡ ಸಮ್ಮುಖದಲ್ಲಿ ಮೋಹನ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮಂಗಳಾ ಪ್ರದೀಪ್ ಅಧಿಕಾರ ಸ್ವೀಕರಿಸಿದ್ದಾರೆ. ಕೇವಲ 13 ಸ್ಥಾನ ಗೆದ್ದರೂ ಮೀಸಲಾತಿ ನೆರವಿನಿಂದ ಬಿಜೆಪಿ ಇದೇ ಮೊದಲ ಬಾರಿಗೆ ಹಾಸನ ನಗರಸಭೆಯಲ್ಲಿ ಅಧಿಕಾರ ಪಡೆದಿದೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಒಂದು ಮಗುವಿಗೆ MIS-C ಸೋಂಕಿನ ಲಕ್ಷಣ ಪತ್ತೆ; ಜಿಲ್ಲಾಧಿಕಾರಿಯಿಂದ ಅಧಿಕೃತ ಮಾಹಿತಿ
(Arsikere municipality JDS members supports BJP president likely to operation Kamala)