
ಹಾಸನ, ಅಕ್ಟೋಬರ್ 14: ಪುರಸಭೆಯ ಅಂಗಡಿ ಮಳಿಗೆ ಬಾಡಿಗೆ ವಿಚಾರದಲ್ಲಿ ಅಧಿಕಾರಿಗಳಿಂದ ಕಿರುಕುಳವಾಗಿದೆ ಎಂದು ಆರೋಪಿಸಿ ಡೆತ್ನೋಟ್ ಬರೆದಿಟ್ಟು ಬೇಲೂರಿನ ವರ್ತಕ ನಾಗೇಶ್ ಎ.ಆರ್. ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲೂರು ಶಾಸಕ ಎಚ್.ಕೆ. ಸುರೇಶ್ ಸೇರಿದಂತೆ ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಬೇಲೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಶಾಸಕ ಎಚ್.ಕೆ. ಸುರೇಶ್ ಏಳನೇ ಆರೋಪಿಯಾಗಿದ್ದಾರೆ.
ಬೇಲೂರು ಪುರಸಭೆಗೆ ಸೇರಿದ ಮಳಿಗೆ ಸಂಖ್ಯೆ 3 ಅನ್ನು ಉಮಾ ಎಂಬುವವರು ಹರಾಜಿನಲ್ಲಿ ಪಡೆದಿದ್ದರು. ಅವರ ಪತಿ ಸುರೇಶ್ಬಾಬು ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಉಮಾ ಬೆಂಗಳೂರಿನಲ್ಲಿರುವ ತಮ್ಮ ಮಗಳ ಮನೆಯಲ್ಲಿ ವಾಸವಾಗಿದ್ದರು. ಈ ನಡುವೆ, ಕುಟುಂಬದ ಆತ್ಮೀಯರಾಗಿದ್ದ ನಾಗೇಶ್ ಎ.ಆರ್. ಅವರಿಗೆ ದಿನಸಿ ಅಂಗಡಿ ನಡೆಸಲು ಮಳಿಗೆಯನ್ನು ಲೀಸ್ಗೆ ನೀಡಿದ್ದರು. ಅಂಗಡಿಗಾಗಿ ನಾಗೇಶ್ ಹತ್ತು ಲಕ್ಷ ರೂಪಾಯಿಗೂ ಹೆಚ್ಚು ಬಂಡವಾಳ ಹೂಡಿದ್ದರು. ಈ ನಡುವೆ, ಪುರಸಭೆ ಅಧಿಕಾರಿಗಳು ಮಳಿಗೆಗಳ ಸಾರ್ವಜನಿಕ ಹರಾಜಿಗೆ ಮುಂದಾಗಿದ್ದರು. ಇದನ್ನು ಪ್ರಶ್ನಿಸಿ ಬಾಡಿಗೆದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಮುಂದಿನ ಆದೇಶದವರೆಗೆ ಹಾಗೂ ಸಾರ್ವಜನಿಕ ಬಹಿರಂಗ ಹರಾಜು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮಳಿಗೆಯನ್ನು ಖಾಲಿ ಮಾಡಿಸಬಾರದು ಎಂದು ಹೈಕೋರ್ಟ್ ಆದೇಶಿಸಿತ್ತು.
2026ರ ಜುಲೈ 20ರಂದು ಮಳಿಗೆಯನ್ನು ಖಾಲಿ ಮಾಡುವಂತೆ ಸೂಚಿಸಿ, ಬೇಲೂರು ಪುರಸಭೆಯ ಆರ್ಐ, ಆರ್ಒ, ಆರೋಗ್ಯ ನಿರೀಕ್ಷಕ ಹಾಗೂ ಇತರ ಸಿಬ್ಬಂದಿ ಮಳಿಗೆಗೆ ಬೀಗ ಹಾಕಿದ್ದರು ಎಂದು ಆರೋಪಿಸಲಾಗಿದೆ. ಬಳಿಕ ಮಳಿಗೆ ತೆರೆಯಲು ಅವಕಾಶ ನೀಡುವಂತೆ ನಾಗೇಶ್ ಅಧಿಕಾರಿಗಳನ್ನು ಹಲವು ಬಾರಿ ಭೇಟಿಯಾಗಿ ಮನವಿ ಮಾಡಿದ್ದರು. ಈ ವೇಳೆ ಶಾಸಕರ ಬಳಿ ತೆರಳಿ ಮಾತನಾಡುವಂತೆ ಅಧಿಕಾರಿಗಳು ಸೂಚಿಸಿದ್ದರು. ಅಲ್ಲದೆ, ಒಂದು ಲಕ್ಷ ರೂಪಾಯಿ ನೀಡಿದರೆ ಮಾತ್ರ ಮಳಿಗೆಯ ಕೀ ನೀಡುವುದಾಗಿ ಅಧಿಕಾರಿಗಳು ಹೇಳಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಮಳಿಗೆಗೆ ಬೀಗ ಹಾಕಿದ್ದರಿಂದ ನಾಗೇಶ್ ತೀವ್ರವಾಗಿ ಮನನೊಂದಿದ್ದರು ಎಂದು ಅವರ ಕುಟುಂಬದವರು ದೂರಿದ್ದಾರೆ.
ಸೆಪ್ಟೆಂಬರ್ 12ರಂದು ಮನೆಯಲ್ಲಿ ಒಬ್ಬರೇ ಇದ್ದಾಗ ನಾಗೇಶ್ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಸಾವಿಗೆ ಶಾಸಕ ಎಚ್.ಕೆ. ಸುರೇಶ್ ಅವರು ಮಳಿಗೆ ಸಂಖ್ಯೆ 3ರ ಕೀ ಕೊಡಿಸುವ ವಿಚಾರದಲ್ಲಿ ರಾಜಕೀಯ ಮಾಡಿದ್ದೇ ಕಾರಣ ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. ತಮ್ಮ ಸಾವಿನ ಬಳಿಕವೂ ರಾಜಕೀಯ ಮಾಡದೆ, ಮಳಿಗೆಯ ಕೀಯನ್ನು ಮಕ್ಕಳಿಗೆ ಕೊಡಿಸುವಂತೆ ಅವರು ಮನವಿ ಮಾಡಿದ್ದರು.
ಡೆತ್ನೋಟ್ನಲ್ಲಿನ ಉಲ್ಲೇಖಗಳ ಆಧಾರದ ಮೇಲೆ ಬೇಲೂರು ಪೊಲೀಸರು ಶಾಸಕ ಎಚ್.ಕೆ. ಸುರೇಶ್, ಪುರಸಭೆಯ ಸಿಇಒ, ಆರ್ಐ, ಆರ್ಒ, ಆರೋಗ್ಯ ನಿರೀಕ್ಷಕ ಲೋಹಿತ್, ಬಿಲ್ ಕಲೆಕ್ಟರ್ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಘಟನೆ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ