ವಿಪಕ್ಷಗಳಿಗೆ ಸೆಡ್ಡು ಹೊಡೆಯಲು ತಂತ್ರ: ಡಿಸೆಂಬರ್ 5ರಂದು ಹಾಸನದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳ ಸಮಾವೇಶ

| Updated By: Ganapathi Sharma

Updated on: Nov 24, 2024 | 12:16 PM

ವಿಪಕ್ಷಗಳ ಹೋರಾಟದಿಂದ ಬೆಂಡಾಗಿದ್ದ ಕಾಂಗ್ರೆಸ್​ಗೆ ಸರ್ಕಾರಕ್ಕೆ ಉಪ ಚುನಾವಣೆಯಲ್ಲಿ ಅಚ್ಚರಿಯ ರೀತಿಯಲ್ಲಿ ಮೂರಕ್ಕೆ ಮೂರು ಸ್ಥಾನ ಗೆದ್ದಿರುವುದು ಹೊಸ ಉತ್ಸಾಹ ತರಿಸಿದೆ. ಇದೀಗ ಸಿದ್ದರಾಮಯ್ಯ ಅಭಿಮಾನಿಗಳ ಹೆಸರಿನಲ್ಲಿ ಸಿಎಂ ಬೆಂಬಲಿಗ ಸಚಿವರು ಹಾಸನದಲ್ಲಿ ಬೃಹತ್ ಸಮಾವೇಶ ನಡೆಸಲು ಮುಂದಾಗಿದ್ದಾರೆ. ಡಿಸೆಂಬರ್ 5 ರಂದು ಪಕ್ಷ, ಸರ್ಕಾರ ಹೊರತುಪಡಿಸಿ ಅಭಿಮಾನಿಗಳಿಂದಲೇ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ.

ವಿಪಕ್ಷಗಳಿಗೆ ಸೆಡ್ಡು ಹೊಡೆಯಲು ತಂತ್ರ: ಡಿಸೆಂಬರ್ 5ರಂದು ಹಾಸನದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳ ಸಮಾವೇಶ
ಸಿದ್ದರಾಮಯ್ಯ
Follow us on

ಹಾಸನ, ನವೆಂಬರ್ 24: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಅಚ್ಚರಿಯ ರೀತಿಯಲ್ಲಿ ಮೂರಕ್ಕೆ ಮೂರು ಸ್ಥಾನ ಗೆದ್ದು ಬೀಗಿರುವ ಕಾಂಗ್ರೆಸ್ ಪಡೆ ಇದೀಗ ಪ್ರತಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಲು, ಜನಾದೇಶವನ್ನೇ ಮುಂದಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಪರ ಸಮಾವೇಶ ನಡೆಸಲು ಮುಂದಾಗಿದೆ.

ವಾಲ್ಮೀಕಿ ನಿಗಮ ಹಗರಣ, ಮುಡಾ ಹಗರಣ, ವಕ್ಫ್ ವಿವಾದ, ರೇಷನ್ ಕಾರ್ಡ್ ರದ್ದು ಜಟಾಪಟಿ, ಅಬಕಾರಿ ಲಂಚ, ಹೀಗೆ ಸಾಲು ಸಾಲು ಆರೋಪ, ವಿಪಕ್ಷಗಳ ಹೋರಾಟದಿಂದ ಬೆಂಡಾಗಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಈಗ ಚುನಾವಣೆ ಫಲಿತಾಂಶ ಹೊಸ ಭರವಸೆ ನೀಡಿದೆ. ಪಕ್ಷಕ್ಕೆ ಹೊಸ ಉತ್ಸಾಹ ದೊರೆತಿರುವ ಈ ಸಂದರ್ಭದಲ್ಲೇ ಸಿದ್ದರಾಮಯ್ಯ ಅಭಿಮಾನಿಗಳ ಹೆಸರಿನಲ್ಲಿ ಅವರ ಬೆಂಬಲಿಗ ಸಚಿವರು ಹಾಸನದಲ್ಲಿ ಬೃಹತ್ ಸಮಾವೇಶ ನಡೆಸಲು ಸಜ್ಜಾಗಿದ್ದಾರೆ. ಡಿಸೆಂಬರ್ 5 ರಂದು ಸರ್ಕಾರ ಹೊರತುಪಡಿಸಿ, ಅಭಿಮಾನಿಗಳಿಂದಲೇ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ. ಹಾಸನದಲ್ಲಿ ಇಂದು ಸಿದ್ದರಾಮಯ್ಯ ಆಪ್ತ ವಲಯದ ನಾಲ್ವರು ಸಚಿವರು, ಅವರ ಪುತ್ರ ಯತೀಂದ್ರ ಸೇರಿ ಹಲವು ಕಾಂಗ್ರೆಸ್ ನಾಯಕರು ಜಂಟಿಯಾಗಿ ಸಭೆ ನಡೆಸಿದ್ದು, ಸಿದ್ದು ಸ್ವಾಭಿಮಾನಿ ಸಮಾವೇಶ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ.

25 ವರ್ಷಗಳ ಹಿಂದೆ ಸಿದ್ದರಾಮಯ್ಯಗೆ ಶಕ್ತಿ ತುಂಬಿದ್ದ ಹಾಸನ

25 ವರ್ಷಗಳ ಹಿಂದೆ ಅಹಿಂದಾ ಸಮಾವೇಶ ನಡೆಸಿ ಸಿದ್ದರಾಮಯ್ಯಗೆ ಶಕ್ತಿ ತುಂಬಿದ್ದ ಹಾಸನದ ನೆಲದಲ್ಲಿ ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಮೈಸೂರು, ಚಿಕ್ಕಮಗಳೂರು ಜಿಲ್ಲೆಯ ಜನರನ್ನು ಸೇರಿಸಿ ‘ಸಿದ್ದು ಸ್ವಾಭಿಮಾನಿ ಸಮಾವೇಶ’ ನಡೆಸಲು ತೀರ್ಮಾನ ಮಾಡಲಾಗಿದೆ. ಹಾಸನದಲ್ಲಿ ಇಂದು ಸಚಿವರಾದ ಎಚ್​ಸಿ ಮಹದೇವಪ್ಪ, ಕೆಎನ್ ರಾಜಣ್ಣ, ಪಿರಿಯಾಪಟ್ಟಣ ವೆಂಕಟೇಶ, ಬೋಸರಾಜು, ಶಾಸಕರಾದ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಸಿದ್ದು ಪುತ್ರ ಯತೀಂದ್ರ ಸಭೆ ನಡೆಸಿ ಸಮಾವೇಶದ ಬಗ್ಗೆ ಘೋಷಣೆ ಮಾಡಿದ್ದಾರೆ.

ಸರ್ಕಾರದ, ಪಕ್ಷದ ಕಾರ್ಯಕ್ರಮವಲ್ಲ!

ಇದು ಸರ್ಕಾರದ ಕಾರ್ಯಕ್ರಮ ಅಲ್ಲ, ಪಕ್ಷದ ಕಾರ್ಯಕ್ರಮವೂ ಅಲ್ಲ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಅಭಿಮಾನಿಗಳು ಬಂದು ಕೇಳಿಕೊಂಡರು. ಹಾಗಾಗಿ ನಾವು ಅವರಿಗೆ ಸಹಾಯ ಮಾಡುತ್ತೇವೆ, 40 ವರ್ಷ ಅತ್ಯಂತ ಕ್ಲೀನ್ ಇಮೆಜ್​ನಿಂದ ರಾಜಕೀಯ ನಡೆಸಿದ ಸಿದ್ದರಾಮಯ್ಯ ಅವರ ಹೆಸರಿಗೆ ಕುಂದು ತರುವ ಕೆಲಸ ನಡೆದಿದ್ದು, ಇದರ ವಿರುದ್ಧ ಅವರ ಅಭಿಮಾನಿಗಳೇ‌ ಸಮಾವೇಶ ನಡೆಸಲು ಮುಂದಾಗಿದ್ದಾರೆ. ಈ ಹಿಂದೆ ಹಾಸನದಲ್ಲಿಯೇ ಅಹಿಂದ ಸಮಾವೇಶ ನಡೆದಿತ್ತು. ಈಗ ಮತ್ತೆ ಸಿದ್ದು ಅಭಿಮಾನಿಗಳು ಸ್ವಾಭಿಮಾನಿ ಸಮಾವೇಶ ನಡೆಸಲಿದ್ದಾರೆ ಎಂದು ಮಹದೇವಪ್ಪ ತಿಳಿಸಿದ್ದಾರೆ.

ಹಾಸನದಲ್ಲಿ ಮಹದೇವಪ್ಪ ಮತ್ತು ರಾಜಣ್ಣ ಸಭೆ

ಹಾಸನದಲ್ಲಿ ಸಮಾವೇಶ ನಡೆಸುವ ಬಗ್ಗೆ ವಾರದ ಹಿಂದೆಯೇ ಬೆಂಗಳೂರಿನಲ್ಲಿ ಘೋಷಣೆ ಮಾಡಿದ್ದ ಸಚಿವ ರಾಜಣ್ಣ, ಇಂದು ಮೂವರು ಸಚಿವರ ಜೊತೆಗೆ ಹಾಸನಕ್ಕೆ ಆಗಮಿಸಿ ಚರ್ಚೆ ನಡೆಸಿದರು. ಬೃಹತ್ ಸಮಾವೇಶ ನಡೆಸಲು ಬೇಕಾದ ಸ್ಥಳ ಪರಿಶೀಲನೆ ನಡೆಸಿ ಚರ್ಚೆ ನಡೆಸಿದರು.

ದೇವೇಗೌಡರ ಕರ್ಮಭೂಮಿಯಲ್ಲೇ ಸಿದ್ದು ಸಮಾವೇಶ

ಸಿದ್ದರಾಮಯ್ಯ ವಿರುದ್ಧ ಸಾಲು ಸಾಲು ಆರೋಪ ಮಾಡಿ ಜೆಡಿಎಸ್, ಬಿಜೆಪಿ ನಡೆಸಿದ ಹೋರಾಟಕ್ಕೆ ತಮ್ಮ ಬೆಂಬಲಿಗರ ಮೂಲಕ ಸೆಡ್ಡು ಹೊಡೆಯಲು ಮುಂದಾಗಿರುವ ಸಿದ್ದರಾಮಯ್ಯ, ಅದಕ್ಕಾಗಿ ಜೆಡಿಎಸ್ ಭದ್ರಕೋಟೆ ಎಂದು ಕರೆಸಿಕೊಳ್ಳುತ್ತಿದ್ದ ಮಾಜಿ ಪ್ರದಾನಿ ದೇವೇಗೌಡರ ಕರ್ಮಭೂಮಿ, ತವರು ಜಿಲ್ಲೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಲಕ್ಷ ಲಕ್ಷ ಬೆಂಬಲಿಗರ ಸಮಾವೇಶ ನಡೆಸುವ ಮೂಲಕ ವಿರೋಧಿಗಳಿಗೆ ಸೆಡ್ಡು ಹೊಡೆಯುವುದರ ಜೊತೆಗೆ, ಪಕ್ಷದೊಳಗಿನ ತಮ್ಮ ವಿರೋಧಿಗಳಿಗೂ ಪರೋಕ್ಷವಾಗಿ ಎಚ್ಚರಿಕೆ ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ: ‘ಕೈ’ ಹಿಡಿದ ಸಿದ್ದರಾಮಯ್ಯ ತಂತ್ರಗಳು ಇವುಗಳೇ ನೋಡಿ!

ಒಟ್ಟಿನಲ್ಲಿ, ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದ ಸಿದ್ದರಾಮಯ್ಯ ಈಗ ಮುಡಾ ಹಗರಣದಲ್ಲಿ ಲೋಕಾಯುಕ್ತ ತನಿಖೆ ಎದುರಿಸಿದ್ದು, ಜಾರಿ ನಿರ್ದೇಶನಾಲಯದಲ್ಲಿಯೂ ಪ್ರಕರಣ ಎದುರಿಸುತ್ತಿದ್ದಾರೆ. ಹೀಗೆ ಹಲವು ಆರೋಪಗಳನ್ನು ಎದುರಿಸುತ್ತಿರುವಾಗಲೇ ತಮ್ಮ ಬೆಂಬಲಿಗರ ಮೂಲಕ ರಾಜಕೀಯ ವಿರೋಧಿಗಳಿಗೆ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ