ಎಟಿಎಂಗೆ ಹಾಕಬೇಕಿದ್ದ ಮೂರು ಕೋಟಿ ರೂ. ನಾಪತ್ತೆ! ಆಡಿಟ್ ವೇಳೆ ಸಿಬ್ಬಂದಿಯ ಕಳ್ಳಾಟ ಬಯಲು

ಹಾಸನದಲ್ಲಿ ಎಟಿಎಂಗಳಿಗೆ ಹಣ ತುಂಬುವ ಖಾಸಗಿ ಸಂಸ್ಥೆಯಲ್ಲಿ ಮೂರು ಕೋಟಿಗೂ ಹೆಚ್ಚು ಹಣ ದುರುಪಯೋಗವಾಗಿದೆ. ಆಡಿಟ್ ವೇಳೆ ಈ ಅವ್ಯವಹಾರ ಬಯಲಾಗಿದ್ದು, ಇಬ್ಬರು ಸಿಬ್ಬಂದಿ ವಿರುದ್ಧ ಹಾಸನ ಬಡಾವಣೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೃತಕ ದಾಖಲೆ ಸೃಷ್ಟಿಸಿ 18 ಎಟಿಎಂಗಳಿಗೆ ಹಣ ಜಮಾ ಮಾಡದೆ ವಂಚಿಸಿದ್ದಾರೆ ಎನ್ನಲಾಗಿದೆ. ಇಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಎಟಿಎಂಗೆ ಹಾಕಬೇಕಿದ್ದ ಮೂರು ಕೋಟಿ ರೂ. ನಾಪತ್ತೆ! ಆಡಿಟ್ ವೇಳೆ ಸಿಬ್ಬಂದಿಯ ಕಳ್ಳಾಟ ಬಯಲು
ಎಟಿಎಂಗೆ ಹಾಕಬೇಕಿದ್ದ ಮೂರು ಕೋಟಿ ರೂ. ನಾಪತ್ತೆ!
Edited By:

Updated on: Feb 21, 2026 | 10:50 AM

ಹಾಸನ, ಫೆಬ್ರವರಿ 21: ಜಿಲ್ಲೆಯಲ್ಲಿ ಎಟಿಎಂಗೆ ಹಣ ತುಂಬುವ ಖಾಸಗಿ ಸಂಸ್ಥೆಯಲ್ಲಿ ಭಾರೀ ಹಣ ದುರುಪಯೋಗ ಪ್ರಕರಣ ಬಯಲಾಗಿದ್ದು, ಮೂರು ಕೋಟಿಗೂ ಹೆಚ್ಚು ಹಣ ನಾಪತ್ತೆಯಾಗಿದೆ (ATM Fraud) ಎಂದು ಹೇಳಲಾಗಿದೆ. ಪೆಬ್ರವರಿ 18 ಮತ್ತು 19ರಂದು ಸಂಸ್ಥೆಯಲ್ಲಿ ನಡೆಸಿದ ಮಾಸಿಕ ಆಡಿಟ್ ವೇಳೆ ಈ ಅವ್ಯವಹಾರ ಬೆಳಕಿಗೆ ಬಂದಿದ್ದು, ಹಾಸನ ಬಡಾವಣೆ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿದ್ದ ಸಿಬ್ಬಂದಿ!

ಎಟಿಎಂಗಳಿಗೆ ಹಣ ತುಂಬುವ ಜವಾಬ್ದಾರಿಯಲ್ಲಿದ್ದ ಖಾಸಗಿ ಸಂಸ್ಥೆಯ ಸಿಬ್ಬಂದಿಗಳಾದ ನಂದೀಶ್ ಬಿ.ಎಲ್ ಹಾಗೂ ಮಧುಕುಮಾರ್ ಎಂ.ಪಿ ವಿರುದ್ಧ ಸುಮಾರು 3 ಕೋಟಿ 40 ಲಕ್ಷ 28 ಸಾವಿರ ರೂ. ಲಪಟಾಯಿಸಿದ ಆರೋಪ ಕೇಳಿಬಂದಿದೆ. 11 ಕೆನರಾ ಬ್ಯಾಂಕ್ ಎಟಿಎಂ,3 ಎಸ್ ಬಿ ಐ ಎಟಿಎಂ ಮತ್ತು 1 ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಸೇರಿ ಒಟ್ಟೂ 18 ಎಟಿಎಂಗಳಿಗೆ ಹಣ ಜಮಾ ಮಾಡಿದಂತೆ ಕೃತಕ ದಾಖಲೆ ಸೃಷ್ಟಿಸಿ, ವಾಸ್ತವವಾಗಿ ಹಣ ಜಮಾ ಮಾಡದೆ ದುರುಪಯೋಗ ಮಾಡಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಾಸನ ನಗರ ವ್ಯಾಪ್ತಿಯ ವಿವಿಧ ಎಟಿಎಂ ಗೆ ಹಣವನ್ನೇ ಹಾಕದೆ ಹಣ ಹಾಕಿರೊದಾಗಿ ರೆಸಿಪ್ಟ್ ತೆಗೆದು ವಂಚನೆ ಆರೋಪ ಹಿನ್ನೆಲೆ ಸಿಎಂಎಸ್ ಸಂಸ್ಥೆಯ ಹಾಸನ ಶಾಖೆ ವ್ಯವಸ್ಥಾಪಕ ರಾಜು ಹಾಸನ ಬಡಾವಣೆ ಠಾಣೆಯಲ್ಲಿ ದೂರು ನೀಡಿದ್ದು, ಅದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ ಬೆಂಗಳೂರು: ಎಟಿಎಂಗೆ ಹಾಕಲು ಕೊಟ್ಟಿದ್ದ 1 ಕೋಟಿ ರೂ.ಗೂ ಅಧಿಕ ಹಣದೊಂದಿಗೆ ಸಿಬ್ಬಂದಿಯೇ ಪರಾರಿ!

ಈ ಹಿಂದೆಯೂ ನಡೆದಿತ್ತು ಅವ್ಯವಹಾರ

ಕೆಲ ತಿಂಗಳ ಹಿಂದೆಯಷ್ಟೇ ಸುಮಾರು 7.11 ಕೋಟಿ ರೂಪಾಯಿ ದೋಚಲ್ಪಟ್ಟಿತ್ತು. ಇನ್ನೋವಾ ಕಾರಿನಲ್ಲಿ ಬಂದಿದ್ದ ಗ್ಯಾಂಗ್, ಎಟಿಎಂಗೆ ಹಣ ತುಂಬಲು ತೆರಳುತ್ತಿದ್ದ ವಾಹನವನ್ನು ಜಯದೇವ ಡೇರಿ ಸರ್ಕಲ್ ಸಮೀಪ ತಡೆದು, ನಗದು ಕಸಿದು ಪರಾರಿಯಾಗಿದ್ದರು.ಇದೇ ರೀತಿಯಲ್ಲಿ, ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಟಿಎಂಗಳಿಗೆ ಜಮಾ ಮಾಡಬೇಕಿದ್ದ 1 ಕೋಟಿಗೂ ಅಧಿಕ ಹಣವನ್ನು ಕಂಪನಿ ಸಿಬ್ಬಂದಿಯೇ ದುರುಪಯೋಗ ಮಾಡಿಕೊಂಡ ಘಟನೆ ಜನವರಿಯಲ್ಲಿ ಬೆಳಕಿಗೆ ಬಂದಿತ್ತು.

ಎರಡು ತಂಡಗಳಿಗೆ ಹಂಚಿಕೆ ಮಾಡಲಾಗಿದ್ದ ನಗದುಗಳಲ್ಲಿ ಒಂದು ತಂಡವು ಸುಮಾರು 57 ಲಕ್ಷ ರೂ. ಹಾಗೂ ಮತ್ತೊಂದು ತಂಡವು 80 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿದ್ದರು ಎಂದು ಹೇಳಲಾಗಿತ್ತು. ಎಟಿಎಂಗಳಲ್ಲಿ ಹಣ ಜಮಾ ಆಗದಿರುವುದು ಗೊತ್ತಾದ ನಂತರ ಕಂಪನಿ ಅಧಿಕಾರಿಗಳು ಪರಿಶೀಲನೆ ನಡೆಸಿ ದೂರು ನೀಡಿದ್ದರು. ಈಗ ಮತ್ತೊಮ್ಮೆ ಇಂತದ್ದೇ ಪ್ರಕರಣ ಬಯಲಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:34 am, Sat, 21 February 26