ಹಾಸನ ಜನರ ಹೃದಯ ಹಿಂಡುತ್ತಿರುವ ಹೃದಯಾಘಾತ: ಕೊನೆಗೂ ಎಚ್ಚೆತ್ತ ಜಿಲ್ಲಾಡಳಿತ

ಹಾಸನ ಜಿಲ್ಲೆಯಲ್ಲಿ 40 ದಿನಗಳಲ್ಲಿ 21 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಜ್ಞರ ಸಮಿತಿ ರಚಿಸಿ, ಸರಣಿ ಸಾವುಗಳ ಕಾರಣಗಳನ್ನು ಪತ್ತೆಹಚ್ಚಲು ಆದೇಶಿಸಿದ್ದಾರೆ. ಸಮಿತಿಯು ಒಂದು ವಾರದೊಳಗೆ ವರದಿ ಸಲ್ಲಿಸಲಿದೆ. ಚಿಕ್ಕ ವಯಸ್ಸಿನವರ ಮರಣಕ್ಕೆ ಕಾರಣಗಳನ್ನು ಪತ್ತೆಹಚ್ಚಲು ಮರಣೋತ್ತರ ಪರೀಕ್ಷೆಗಳು ಮತ್ತು ವಿಸ್ತೃತ ತನಿಖೆ ನಡೆಯಲಿದೆ. ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಲು ತಾಲೂಕು ಆಸ್ಪತ್ರೆಗಳಲ್ಲಿ ಔಷಧಿಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ.

ಹಾಸನ ಜನರ ಹೃದಯ ಹಿಂಡುತ್ತಿರುವ ಹೃದಯಾಘಾತ: ಕೊನೆಗೂ ಎಚ್ಚೆತ್ತ ಜಿಲ್ಲಾಡಳಿತ
ಹಾಸನ ಡಿಸಿ ಕಚೇರಿ
Edited By:

Updated on: Jun 30, 2025 | 10:15 PM

ಹಾಸನ, ಜೂನ್​ 30: ಹಾಸನ (Hassan) ಜಿಲ್ಲೆಯಲ್ಲಿ ಹೃದಯಘಾತದಿಂದ (Heart Attack) ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ 40 ದಿನಗಳ ಅಂತರದಲ್ಲಿ ಬರೋಬ್ಬರಿ 21 ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಹೃದಯಾಘಾತದಿಂದ ಸಾವಿಗೀಡಾಗುವರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿಯವರು ತಜ್ಞರ ಸಮಿತಿ ರಚಿಸಿದ್ದು, ಸರಣಿ ಸಾವುಗಳ ಬಗ್ಗೆ ಅಧ್ಯಯನ ನಡೆಸಿ ಒಂದು ವಾರದಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ.

ಈ ಸಂಬಂಧ ಡಿಸಿ ಲತಾ ಕುಮಾರಿ ಮಾತನಾಡಿ, ಚಿಕ್ಕ ವಯಸ್ಸಿನವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಹಿಮ್ಸ್ ನಿರ್ದೇಶಕರ ಜೊತೆ ಸಭೆ ನಡೆಸಲಾಗಿದೆ. ಸಭೆಯಲ್ಲಿ, ಡಿಎಚ್‌ಓ, ಹಾಸನ ಜಿಲ್ಲಾಸ್ಪತ್ರೆ ನಿರ್ದೇಶಕರು, ವೈದ್ಯಕೀಯ ವಿಭಾಗದ ವೈದ್ಯಾಧಿಕಾರಿಗಳು ಒಳಗೊಂಡಂತೆ ಐದು ಜ‌ನರ ಸಮಿತಿ ರಚಿಸಲಾಗಿದೆ. ಈ ಸಂಬಂಧ ವಿಸ್ತೃತ ವರದಿ ನೀಡುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು.

ಚಿಕ್ಕ ವಯಸ್ಸಿನವರ ಸಾವಿಗೆ ಕಾರಣವೇನು, ಎಲ್ಲಿ ಸಾವಾಗಿದೆ, ಹೇಗೆ ಸಾವಾಗಿದೆ, ಮರಣೋತ್ತರ ಪರೀಕ್ಷೆ ವರದಿ, ಮರಣ ಪ್ರಮಾಣ ಪತ್ರ ಎಲ್ಲವನ್ನೂ ತಿಳಿದುಕೊಳ್ಳಲು ಸೂಚನೆ ನೀಡಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಗ್ಗೆ ಮೊದಲು ಸಮಾಲೋಚನೆ ನಡೆಸಿ ಮಾಹಿತಿ ಕೊಡಬೇಕು. ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದಾರಾ ಎಂಬ ಮಾಹಿತಿ ಕಲೆ‌ ಹಾಕಬೇಕು. ನಿಖರವಾಗಿ ಎಷ್ಟು ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬುವುದು ಗೊತ್ತಾಗಿಲ್ಲ ಎಂದು ಹೇಳಿದರು.

ಇದನ್ನೂ ಓದಿ
ಹಾಸನ ಹೃದಯಾಘಾತಗಳಿಗೆ ಕೋವಿಡ್ ಕಾರಣವಾ?
ಹಾಸನ: ಹೃದಯಾಘಾತಕ್ಕೆ ಒಂದೇ ದಿನ 3 ಬಲಿ, 40 ದಿನಗಳಲ್ಲಿ 22 ಸಾವು
ಡಾ.ಮಂಜುನಾಥ್​ ದಿಟ್ಟ ಹೆಜ್ಜೆ: ರಾಜ್ಯದ ಹೃದಯಾಘಾತ ಕೇಸ್​​ ಮೋದಿ ಅಂಗಳಕ್ಕೆ
ಹಾಸನದ ಮತ್ತಿಬ್ಬರು ಹೃದಯಾಘಾತಕ್ಕೆ ಬಲಿ: ಒಂದೇ ತಿಂಗಳಲ್ಲಿ 14 ಜನ ಸಾವು!

ಇದನ್ನೂ ಓದಿ: ಹಾಸನದಲ್ಲಿ ಹೃದಯಾಘಾತ ಹೆಚ್ಚಳ: ವಿಶೇಷ ಸಮಿತಿ ರಚಿಸಿದ ಸರ್ಕಾರ

ರಕ್ತ ಹೆಪ್ಪುಗಟ್ಟುವಿಕೆ‌ ತಡೆಯಲು ತಾಲೂಕು ಆಸ್ಪತ್ರೆಗಳಲ್ಲಿ ಔಷಧಿ ಸಂಗ್ರಹಿಸಿಟ್ಟುಕೊಳ್ಳಲು ಸೂಚನೆ ನೀಡಲಾಗಿದೆ. ನಮ್ಮ ಜಿಲ್ಲಾ ಆಸ್ಪತ್ರೆಗಳಲ್ಲಿ ಹೃದಯಾಘಾತಕ್ಕೆ ಸಂಬಂಧಪಟ್ಟ ಔಷಧಕ್ಕೆ ಯಾವುದೇ ಕೊರತೆಯಿಲ್ಲ. ಮುಂದಿನ ಸಭೆಯಲ್ಲಿ ಖಾಸಗಿ ಆಸ್ಪತ್ರೆಯ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಹೃದಯಘಾತದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಅಸ್ವಾಭಾವಿಕ ಸಾವಾದರೆ ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆ ನಡೆಯಬೇಕು. ಹಾಸನ ಜಿಲ್ಲೆಯ ಜನರು ಗಾಬರಿ ಆಗುವುದು ಬೇಡ ಎಂದು ಮನವಿ ಮಾಡಿದರು.

ಆರೋಗ್ಯ ಸಚಿವರು ಹೇಳಿದ್ದಿಷ್ಟು

ಇನ್ನು ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸರಣಿ ಸಾವು ಪ್ರಕರಣದ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಕ್ರಿಯಿಸಿದ್ದು, ಯಾಕಿಷ್ಟು ಹೃದಯಾಘಾತವಾಗುತ್ತಿದೆ ಎನ್ನುವುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಆರೋಗ್ಯ ಇಲಾಖೆಯಿಂದ ಪರಿಶೀಲಿಸಿ ವರದಿ ನೀಡಲು ಆದೇಶಿಸಿದ್ದೇನೆ. ಅಧಿಕಾರಿಗಳು ನೀಡುವ ವರದಿ ನೀಡಿ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.

ಸತ್ಯಾಸತ್ಯತೆ ಏನೆಂದು ಅಂಕಿ ಅಂಶಗಳ ಆಧಾರದ ವರದಿ ಮೂಲಕ ತಿಳಿಯುತ್ತೆ. ಈಗಿನ ಜೀವನ ಶೈಲಿ, ಆಹಾರ ಪದ್ಧತಿ, ಮೊಬೈಲ್, ಡಿಜಿಟಲ್ ವ್ಯಸನ, ವ್ಯಸನದಿಂದ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ.ಹಲವರಿಗೆ ಚಿಕ್ಕ ವಯಸ್ಸಿನಲ್ಲೇ ಬಿಪಿ, ಶುಗರ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈಗ ಎಲ್ಲೆಡೆ ವಾಯು, ಆಹಾರ, ನೀರು ಮಾಲಿನ್ಯದಿಂದ ಕೂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಗಾಳಿ ಉಸಿರಾಡಿದರೆ ದುಷ್ಪರಿಣಾಮವಾಗುತ್ತೆ. ಜೀವನ ಶೈಲಿ ನೋಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ