AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನ: ಈಜು ಗೊತ್ತಿದ್ದರೂ ಕೆರೆ ನೀರಲ್ಲಿ ಮುಳುಗಿ ಇಬ್ಬರ ಸಾವು

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನಾಪುರದ ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.ರಾಜಸ್ಥಾನ ಮೂಲದ ಯಶ್ವಂತ್ ಸಿಂಗ್ ಮತ್ತು ರೋಹಿತ್ ಮೃತ ದುರ್ದೈವಿಗಳು. ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.ಇನ್ನೊಂದು ಘಟನೆಯಲ್ಲಿ ದಾವಣಗೆರೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಕಾಲುವೆಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದಾರೆ.

ಹಾಸನ: ಈಜು ಗೊತ್ತಿದ್ದರೂ ಕೆರೆ ನೀರಲ್ಲಿ ಮುಳುಗಿ ಇಬ್ಬರ ಸಾವು
ಮೃತ ಯುವಕರು
ಮಂಜುನಾಥ ಕೆಬಿ
| Updated By: ವಿವೇಕ ಬಿರಾದಾರ|

Updated on: Feb 03, 2025 | 12:05 PM

Share

ಹಾಸನ, ಫೆಬ್ರವರಿ 03: ಕೆರೆಯಲ್ಲಿ ಈಜಲು ತೆರಳಿ ಇಬ್ಬರು ಯುವಕರು ಮೃತಲಟ್ಟಿರುವ ಘಟನೆ ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ (Channarayapattana) ತಾಲೂಕಿನ ಜಿನ್ನಾಪುರ ಗ್ರಾಮದಲ್ಲಿ ನಡೆದಿದೆ. ಯಶ್ವಂತ್ ಸಿಂಗ್ ಆಲಿಯಾಸ್ ಗಣೇಶ್(29), ರೋಹಿತ್ (28) ಮೃತ ದುರ್ದೈವಿಗಳು.

ಕೆಲಸ ಮಾಡಿದ್ದ ಸ್ನೇಹಿತರಾದ ಯಶ್ವಂತ್ ಸಿಂಗ್ ಆಲಿಯಾಸ್ ಗಣೇಶ್ ಮತ್ತು ರೋಹಿತ್ ರಾಜಸ್ತಾನ ಮೂಲದವರಾಗಿದ್ದು, ಇಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದರು. ಭಾನುವಾರ (ಫೆ.02) ರಜೆ ಹಿನ್ನೆಲೆಯಲ್ಲಿ ಮದ್ಯಾಹ್ನದವರೆಗೂ ಕೆಲಸ ಮುಗಿಸಿ ಬಿಸಿಲು ಇದ್ದುದರಿಂದ ಈಜಲು ಜಿನ್ನಾಪುರ ಕೆರೆಗೆ ಹೋಗಿದ್ದಾರೆ. ಇಬ್ಬರಿಗೂ ಈಜು ಚನ್ನಾಗಿಯೇ ಗೊತ್ತಿತ್ತು.

ಮೊದಲು ಕೆರೆಗೆ ಇಳಿದ ರೋಹಿತ್ ಈಜುವ ವೇಳೆ ಕೆರೆಯ ಗಿಡಗಂಟಿಗಳ ನಡುವೆ ಸಿಲುಕಿದ್ದಾರೆ. ಮೇಲೆ‌ ಬರಲಾಗದೆ ಕಾಪಾಡಿ‌ ಕಾಪಾಡಿ‌ ಎಂದು ಕೂಗಾಡಿದ್ದಾರೆ. ತಕ್ಷಣ ಕೆರೆಗೆ ಜಿಗಿದ ಗಣೇಶ್ ಕೂಡ ಅಲ್ಲಿನ‌ ಕೆಸರು ಹಾಗೂ ಬಳ್ಳಿಗಳ ನಡುವೆ ಸಿಲುಕಿದ್ದಾರೆ. ಮೇಲೆ ಬರಲು ಏನೆಲ್ಲ ಪ್ರಯತ್ನ ಪಟ್ಟರೂ ಸಾದ್ಯವಾಗದೆ ಇಬ್ಬರು ಗೆಳೆಯರು ಒಟ್ಟಿಗೆ ಜಲ ಸಮಾಧಿಯಾಗಿದ್ದಾರೆ.

ಸಂಜೆಯಾದರೂ ಮನೆಗೆ ಬಾರದಿದ್ದರಿಂದ ಮನೆಯವರು ಹುಡುಕುತ್ತಾ ಕೆರೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಸಮೀಪದ ಶ್ರವಣಬೆಳಗೊಳ‌ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನಿಂದ ಮೃತದೇಹ ಹೊರತೆಗೆದು ಮರಣೊತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.

ವಿದ್ಯಾರ್ಥಿಗಳು ನೀರುಪಾಲು

ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದ ಭದ್ರಾ ಕಾಲುವೆಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ತುರ್ಚಘಟ್ಟದ ಗುರುಕುಲ ಶಾಲೆ ಗಣೇಶ್ (16) ಪಾಂಡು (16) ನೀರು ಪಾಲಾದ ವಿದ್ಯಾರ್ಥಿಗಳು. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಹರಿಹರ ಸನಾವುಲ್ಲಾ ಈಜು ಪರಿಣಿತರ ತಂಡ ಹರಿಯುತ್ತಿರುವ ಕಾಲುವೆಗೆ ಇಳಿದು ಶೋಧ ಕಾರ್ಯ ನಡೆಸುತ್ತಿದ್ದಾರೆ. ಪಾಂಡು ಎಂಬ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಇನ್ನೊಬ್ಬ ವಿದ್ಯಾರ್ಥಿ ಗಣೇಶ್ ಶವಕ್ಕಾಗಿ ಹುಟುಕಾಟ ಮುಂದುವರೆದಿದೆ.

ಕುರ್ಕಿ ಗ್ರಾಮದ ಪಾಂಡು ಹಾಗೂ ಪಕ್ಕದ ತುರ್ಚಘಟ್ಟ ಗ್ರಾಮದ ಗಣೇಶ್ ತುರ್ಚಘಟ್ಟದಲ್ಲಿ ಇರುವ ಗುರುಕುಲ ವಸತಿ ಶಾಲೆಯಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಶಾಲೆಗೆ ರಜೆ ಇದ್ದರಿಂದ ಕಟ್ಟಿಂಗ್ ಮಾಡಿಸಿಕೊಳ್ಳಲು ಇಬ್ಬರು ಕುರ್ಕಿ ಗ್ರಾಮಕ್ಕೆ ಬಂದಿದ್ದಾರೆ.

ಗ್ರಾಮದ ಬಳಿ ಹರಿಯುತ್ತಿರುವ ದೊಡ್ಡದಾದ ಭದ್ರಾ ಕಾಲುವೆಯಲ್ಲಿ ಪಾಂಡು ಮತ್ತು ಯತೀಂದ್ರ ಈಜಲು ಇಳಿದಿದ್ದಾರೆ. ಪಾಂಡುಗೆ ಈಜಲು ಬರುತ್ತಿತ್ತು. ಗಣೇಶ್​ಗೆ ಈಜಲು ಬರುತ್ತಿರಲಿಲ್ಲ. ಮೊದಲು ಪಾಂಡು ಕಾಲುವೆಗೆ ಜಿಗಿದು ಈಜಾಡುತ್ತಿದ್ದ. ನಂತರ ಗಣೇಶ್ ಜಿಗಿದಿದ್ದಾನೆ.

ಈಜು ಬಾರದ ಗಣೇಶ್ ಮುಳುಗಿ ಏಳುತ್ತಿದ್ದಾಗ ಪಾಂಡು ಅವನನ್ನು ರಕ್ಷಣೆ ಮಾಡಲು ಮುಂದಾಗಿದ್ದಾನೆ. ಬಳಿಕ ಇಬ್ಬರೂ ಮುಳುಗಲು ಆರಂಭಿಸಿದ್ದಾರೆ. ಇಲ್ಲಿಯೇ ಬಟ್ಟೆ ತೊಳೆಯುತ್ತಿದ್ದ ಮಹಿಳೆ ಸೀರೆ ಎಸೆದು ಇಬ್ಬರನ್ನೂ ರಕ್ಷಣೆ ಮಾಡಲು ಮುಂದಾಗಿದ್ದಾಳೆ. ಆದರೆ, ಅದು ಸಾದ್ಯವಾಗಿಲ್ಲ.

ಇದನ್ನೂ ಓದಿ: ಉಡುಪಿಯ ಹೆಜಮಾಡಿಯಲ್ಲಿ ಸಮುದ್ರಕ್ಕೆ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ನೀರುಪಾಲು

ಕಾಲುವೆ ಗೇಟ್ ಬಳಿ ಪಾಂಡು ಮೃತದೇಹ ಪತ್ತೆಯಾಗಿದೆ. ಗಣೇಶ್ ಮೃತದೇಹ ಸಿಕ್ಕಿಲ್ಲ. ಘಟನಾ ಸ್ಥಳಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ನೀರು ಪಾಲಾದ ಬಾಲಕರ ಮೃತದೇಹ ಹೊರ ತೆಗೆಯಲು ನುರಿತ ಈಜುಗಾರರನ್ನು ಕರೆಸಿದರು. ನೀರು ಪಾಲಾದ ಪೋಷಕರ ಅಕ್ರಂದನ ಮುಗಿಲು ಮುಟ್ಟಿದ್ದು, ತಂದೆ-ತಾಯಿಯ ರೋಧನೆ ಕಂಡು ಸೇರಿದ್ದ ಜನರು ಕೂಡ ಕಂಬನಿ ಮಿಡಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ