KSRTC ಅಧಿಕಾರಿ ಸಾವಿಗೆ ಬಿಗ್ ಟ್ವಿಸ್ಟ್: ಆಫೀಸರ್ ಬಲಿಪಡೆದ ಅಕ್ರಮ ಪಡಿತರ ಅಕ್ಕಿ ಸಾಗಾಟ
ಸಮವಸ್ತ್ರ ಧರಿಸಿ ಬೆಳ್ಳಂಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ಕೆಎಸ್ಆರ್ಟಿಸಿ ಅಧಿಕಾರಿ ಭೀಕರ ಅಪಘಾತಕ್ಕೆ ಬಲಿಯಾಗಿರುವಂತಹ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಬಳಿ ಶನಿವಾರ ನಡೆದಿದೆ. ರಸ್ತೆ ದಾಟುವ ವೇಳೆ ಏಕಾಏಕಿ ವೇಗವಾಗಿ ಬಂದ ಲಾರಿಯೊಂದು ಅಧಿಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಚಾಲಕ ಸಿಕ್ಕಿಬೀಳುವ ಭಯದಲ್ಲಿ ಅಪಘಾತವೆಸಗಿರಬಹುದು ಎಂದು ಶಂಕಿಸಲಾಗಿದೆ.

ಹಾಸನ, ಡಿಸೆಂಬರ್ 14: ಕರ್ತವ್ಯ ವೇಳೆ ಲಾರಿ ಡಿಕ್ಕಿಯಾಗಿ (lorry accident) ಕೆಎಸ್ಆರ್ಟಿಸಿ ಚೆಕಿಂಗ್ ಇನ್ಸ್ಪೆಕ್ಟರ್ ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ಶನಿವಾರ ಮುಂಜಾನೆ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಬಳಿ ನಡೆದಿದೆ. ಶಕುನಿಗೌಡ ಮೃತ ಕೆಎಸ್ಆರ್ಟಿಸಿ ಅಧಿಕಾರಿ. ಸದ್ಯ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದು, ಪರಿಶೀಲನೆ ವೇಳೆ ಅಕ್ರಮವಾಗಿ ಪಡಿತರ ಅಕ್ಕಿ ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆ ಆಗಿದೆ. ವಾಹನ ತಪಾಸಣೆ ಮಾಡಿದರೆ ಸಿಕ್ಕಿ ಬೀಳುವ ಆತಂಕದಲ್ಲಿ ವೇಗವಾಗಿ ವಾಹನ ಚಲಾಯಿಸಿರುವ ಶಂಕೆ ವ್ಯಕ್ತವಾಗಿದೆ. ಆಲೂರು ಪೊಲೀಸರು ಪ್ರಕರಣವನ್ನು ಗಂಭೀರವಾಗಿದ್ದ ಪರಿಗಣಿಸಿದ್ದು, ತನಿಖೆ ನಡೆಸಿದ್ದಾರೆ.
ನಡೆದದ್ದೇನು?
ನಿನ್ನೆ ಮುಂಜಾನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಬಳಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಕರ್ತವ್ಯದಲ್ಲಿದ್ದ ಕೆಎಸ್ಆರ್ಟಿಸಿ ಚೆಕಿಂಗ್ ಇನ್ಸ್ಪೆಕ್ಟರ್ ಶಕುನಿಗೌಡ(57) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ಮೂಲದ ಶಕುನಿಗೌಡ, ಕಳೆದ 27 ವರ್ಷಗಳಿಂದ ಕೆಎಸ್ಆರ್ ಟಿಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಎಂದಿನಂತೆ ನಿನ್ನೆ ಕೂಡ ಬೆಳಿಗ್ಗೆ ಟಿಕೆಟ್ ಪರಿಶೀಲನೆಗಾಗಿ ತಮ್ಮ ತಂಡದ ಜೊತೆಗೆ ಆಲೂರು ತಾಲೂಕಿಗೆ ತೆರಳಿದ್ದರು.
ಇದನ್ನೂ ಓದಿ: ಬದುಕಿರುವ ಮಹಿಳೆಗೆ ಡೆತ್ ಸರ್ಟಿಫಿಕೇಟ್: ಆಸ್ತಿಗಾಗಿ ಬದುಕಿರುವ ವೃದ್ಧೆಯನ್ನೇ ಸಾಯಿಸಿದ್ರು!
ಖಾಕಿ ಸಮವಸ್ತ್ರದಲ್ಲಿದ್ದು, ರಸ್ತೆಯಲ್ಲಿ ನಿಂತು ಬಸ್ಗಳಿಗೆ ಕೈಯೊಡ್ಡಿ ಟಿಕೆಟ್ ಚೆಕ್ ಮಾಡಲು ರಸ್ತೆ ದಾಟುವ ವೇಳೆ ಮಂಗಳೂರು ಕಡೆಯಿಂದ ಲಾರಿಯೊಂದು ಬಂದಿದೆ. ಚಾಲಕ ರಸ್ತೆಯಲ್ಲಿರುವ ವ್ಯಕ್ತಿ ಪೊಲೀಸ್ ಎಂದುಕೊಂಡನಾ, ಅಥವಾ ಆರ್ಟಿಓ ಅಧಿಕಾರಿ ಎಂದುಕೊಂಡನಾ ಗೊತ್ತಿಲ್ಲ. ಏಕಾಏಕಿ ವೇಗವಾಗಿ ಬಂದು ಅಧಿಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಶಕುನಿಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಕ್ರಮವಾಗಿ ಪಡಿತರ ಅಕ್ಕಿ ಸಾಗಟ
ಇನ್ನು ಚಾಲಕ ದೇವರಾಜ್ ಲಾರಿ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಇತ್ತ ಲಾರಿಯನ್ನ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿದಾಗ ಲಾರಿಯಲ್ಲಿ ನೂರಾರು ಚೀಲ ಅಕ್ಕಿ ಇರುವುದು ಗೊತ್ತಾಗಿದೆ. ಕೂಡಲೇ ಪೊಲೀಸರು ಅಹಾರ ಇಲಾಖೆ ಹಾಗೂ ತಹಸಿಲ್ದಾರ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಲಾರಿಯಲ್ಲಿ 50 ಕೆಜಿ ತೂಕದ ಸುಮಾರು 123 ಚೀಲ ಪಡಿತರ ಅಕ್ಕಿ ಪತ್ತೆಯಾಗಿದೆ. 80 ಚೀಲ ಕುಚಲಕ್ಕಿ ಜೊತೆಗೆ ಪಡಿತರ ಅಕ್ಕಿಯನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ಆರೋಪ ಕೇಳಿಬಂದಿದ್ದು, ಖಾಕಿ ಡ್ರೆಸ್ನಲ್ಲಿದ್ದ ಅಧಿಕಾರಿಯನ್ನ ತಪ್ಪಾಗಿ ಗ್ರಹಿಸಿ ಇಂತಹ ದುರಂತ ಸಂಭವಿಸಿದೆ. ಇದು ಆಕಸ್ಮಿಕವೋ ಅಥವಾ ಸಿಕ್ಕಿಬೀಳೋ ಆತಂಕದಲ್ಲಿ ನಡೆದ ಕೃತ್ಯವೋ ಈ ಬಗ್ಗೆ ತನಿಖೆಯಲ್ಲಿ ಗೊತ್ತಾಗಬೇಕಿದೆ. ಲಾರಿಯಲ್ಲಿರುವ ಅಕ್ಕಿ ಎಲ್ಲಿಯದು, ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು, ಇದರ ಹಿಂದೆ ಇರುವವರು ಯಾರು ಎನ್ನೋ ಬಗ್ಗೆ ಸಮಗ್ರ ತನಿಖೆ ಆಗಬೇಕು. ಮೃತ ಅಧಿಕಾರಿ ಸಾವಿಗೆ ನ್ಯಾಯ ಸಿಗಬೇಕು ಎಂದು ಸ್ಥಳೀಯರಾದ ಪ್ರದೀಪ್ ಅವರ ಆಗ್ರಹವಾಗಿದೆ.
ಸದ್ಯ ಲಾರಿ ಚಾಲಕ ಎಸ್ಕೇಪ್ ಆಗಿದ್ದು, ಲಾರಿಯ ಮಾಲೀಕನ ಸಂಪರ್ಕ ಮಾಡಿ ದಾಖಲೆಗಳನ್ನ ಪೊಲೀಸರು ಕಲೆ ಹಾಕುತ್ತಿದ್ದಾರೆ. ಇನ್ನೊಂದೆಡೆ ಲಾರಿಯಲ್ಲಿ ಇರುವ ಅಕ್ಕಿ ಮೇಲ್ನೊಟಕ್ಕೆ ಪಡಿತರ ಅಕ್ಕಿ ಎನ್ನೋದು ಕಂಡು ಬಂದಿದೆ. ಸರ್ಕಾರ ಬಡವರಿಗಾಗಿ ಪ್ರತಿ ವ್ಯಕ್ತಿಗೆ ತಲಾ ಹತ್ತು ಕೆಜಿ ಉಚಿತವಾಗಿ ನೀಡುತ್ತಿದೆ. ಹೀಗೆ ಅಕ್ಕಿ ಪಡೆದ ಕೆಲವರು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಆರೋಪ ಒಂದೆಡೆಯಾದರೆ, ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಪಡಿತರ ಅಕ್ಕಿಯ ಸಾಗಾಟದ ಬಗ್ಗೆ ತನಿಖೆ ನಡೆಯಬೇಕಿದೆ.
ಆಹಾರ ಇಲಾಖೆ ನಿರೀಕ್ಷಕರಿಂದ ದೂರು
ಸದ್ಯ ಪಡಿತರ ಅಕ್ಕಿಯನ್ನ ಬೇರೆ ಚೀಲಕ್ಕೆ ತುಂಬಿ ಸಾಗಿಸುತ್ತಿರುವ ಬಗ್ಗೆ ಅನುಮಾನ ಇದೆ ಎನ್ನುವುದನ್ನ ಆಹಾರ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದು, ಅಕ್ರಮ ಸಾಗಾಟದ ಬಗ್ಗೆ ಕಾನೂನು ಕ್ರಮಕೈಗೊಳ್ಳವಂತೆ ಆಹಾರ ಇಲಾಖೆ ನಿರೀಕ್ಷಕ ಮೋಹಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಉದ್ಘಾಟನೆಯಾಗದ ಅರ್ಜುನ ಆನೆಯ ಸ್ಮಾರಕ; ಕಾಡಿನಲ್ಲಿ ಐದು ತಿಂಗಳಿನಿಂದ ಅನಾಥವಾದ ಪುತ್ಥಳಿ
ಒಟ್ಟಿನಲ್ಲಿ ಕರ್ತವ್ಯ ಪಾಲನೆಗೆಂದು ರಸ್ತೆಗಿಳಿದಿದ್ದ ಅಧಿಕಾರಿ ಅಕ್ರಮ ಪಡಿತರ ಅಕ್ಕಿ ಸಾಗಾಟದ ಲಾರಿ ಚಾಲಕನ ಅಜಾಗರೂಕತೆಗೆ ಪ್ರಾಣ ಕಳೆದುಕೊಂಡಿದ್ದಾರೆ. ನಡೆದಿರುವ ಅಪಘಾತ ಆಕಸ್ಮಿಕವೋ ಅಥವಾ ಅಕ್ರಮ ಅಕ್ಕಿ ಸಾಗಾಟದಿಂದ ಸಿಕ್ಕಿಬೀಳುವ ಭಯದಲ್ಲಿ ಆಗಿರುವ ಕೃತ್ಯವೋ, ಪೊಲೀಸರ ತನಿಖೆಯಿಂದ ಸತ್ಯ ಬಯಲಾಗಬೇಕಿದೆ. ಜೊತೆಗೆ ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ ಹೀಗೆ ಕಳ್ಳ ಸಾಗಣೆ ಆಗುತ್ತಿರುವ ಕೃತ್ಯದ ಹಿಂದೆ ಯಾರಿದ್ದಾರೆ ಎನ್ನೋದು ಕೂಡ ಪತ್ತೆಯಾಗಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:59 pm, Sun, 14 December 25



