ಹಾಸನ: ಸಬ್ಸಿಡಿ ಆಸೆ ತೋರಿಸಿ ರೈತರಿಗೆ ಲಕ್ಷಾಂತರ ರೂ. ವಂಚನೆ!

ಕೇಂದ್ರ ಸರ್ಕಾರದ ಪಿಎಂಇಜಿಪಿ ಯೋಜನೆಯಡಿ ಶೇ. 50 ಸಬ್ಸಿಡಿ ಸಾಲ ಕೊಡಿಸುವುದಾಗಿ ನಂಬಿಸಿ ನೂರಾರು ಅಮಾಯಕ ರೈತರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರೋಪಿ ಶಂಕರಪ್ಪ ಎಂಬಾತನನ್ನು ಹಳೆಬೀಡು ಪೊಲೀಸರು ಬಂಧಿಸಿದ್ದಾರೆ. 72ಕ್ಕೂ ಹೆಚ್ಚು ರೈತರು ಸುಮಾರು 92 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ವಂಚಕನ ಆಸ್ತಿ ಮುಟ್ಟುಗೋಲು ಹಾಕಿಕೊಂಡು ತಮಗೆ ನ್ಯಾಯ ಕೊಡಿಸುವಂತೆ ಸಂತ್ರಸ್ತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಹಾಸನ: ಸಬ್ಸಿಡಿ ಆಸೆ ತೋರಿಸಿ ರೈತರಿಗೆ ಲಕ್ಷಾಂತರ ರೂ. ವಂಚನೆ!
ಸಬ್ಸಿಡಿ ಆಸೆ ತೋರಿಸಿ ರೈತರಿಗೆ ಲಕ್ಷಾಂತರ ರೂ. ವಂಚನೆ!
Image Credit source: gettyimages.com
Edited By:

Updated on: Sep 04, 2026 | 7:41 AM

ಮುಖ್ಯಾಂಶಗಳು

  • ಸಬ್ಸಿಡಿ ಸಾಲದ ಹೆಸರಿನಲ್ಲಿ ನೂರಾರು ರೈತರಿಗೆ ಲಕ್ಷಾಂತರ ರೂಪಾಯಿ ವಂಚನೆ.
  • ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಕೋಟಿಗಟ್ಟಲೆ ಹಣ ಸುಲಿಗೆ.
  • ಆರೋಪಿ ಶಂಕರಪ್ಪ ಬಂಧನ; ಹಣ ಕಳೆದುಕೊಂಡ ರೈತರ ಆಕ್ರೋಶ, ಕಂಗಾಲು.

ಹಾಸನ, ಸೆಪ್ಟೆಂಬರ್ 04: ಕೇಂದ್ರ ಸರ್ಕಾರದ ‘ಪಿಎಂಇಜಿಪಿ’ ಯೋಜನೆಯಡಿ ಶೇಕಡಾ 35 ರಿಂದ 50 ರಷ್ಟು ಸಬ್ಸಿಡಿ ಸಾಲ ಕೊಡಿಸುವುದಾಗಿ ನಂಬಿಸಿ ನೂರಾರು ರೈತರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೆಬೀಡು ಭಾಗದಲ್ಲಿ ಬೆಳಕಿಗೆ ಬಂದಿದೆ.ವಂಚನೆ ಎಸಗಿದ ಆರೋಪಿಯನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಶಂಕರಪ್ಪ (44) ಎಂದು ಗುರುತಿಸಲಾಗಿದೆ. ಈತ ತಾನು ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಒಂದೂವರೆ ವರ್ಷದ ಹಿಂದೆ ಹಳೆಬೀಡು ಭಾಗಕ್ಕೆ ಎಂಟ್ರಿ ಕೊಟ್ಟಿದ್ದ.

ನಡೆದಿದ್ದೇನು?

ಸ್ಥಳೀಯ ಮುಖಂಡ ಸೋಮಣ್ಣ ಎಂಬುವವರನ್ನು ಪರಿಚಯ ಮಾಡಿಕೊಂಡ ಶಂಕರಪ್ಪ, ಅವರ ಮೂಲಕ ನೂರಾರು ರೈತರನ್ನು ಸಂಪರ್ಕಿಸಿದ್ದ. 50 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಸಾಲ ಕೊಡಿಸುವುದಾಗಿ ಮತ್ತು ಅದಕ್ಕೆ ಭಾರೀ ಸಬ್ಸಿಡಿ ಸಿಗಲಿದೆ ಎಂದು ಆಸೆ ತೋರಿಸಿದ್ದ. ಸಾಲದ ಆಸೆಯಿಂದ ರೈತರು ತಮ್ಮಲ್ಲಿದ್ದ ಹಸುಗಳನ್ನು ಮಾರಿ ಹಾಗೂ ಕೈಸಾಲ ಮಾಡಿ ಈತನಿಗೆ ಲಕ್ಷಾಂತರ ರೂಪಾಯಿ ಕಮಿಷನ್ ನೀಡಿದ್ದರು.

ಹಣ ವಸೂಲಿ ಮಾಡಿದ ನಂತರ ಆರೋಪಿ ಎಸ್ಕೇಪ್ ಆಗಿದ್ದ. ಸಾಲವೂ ಸಿಗದೆ, ಹಣವೂ ಕೈಸೇರದೆ ತೀವ್ರ ಆಘಾತಕ್ಕೊಳಗಾದ ಸ್ಥಳೀಯ ಮುಖಂಡ ಸೋಮಣ್ಣ ಹಾಗೂ ಈಶ್ವರಪ್ಪ ಎಂಬ ರೈತರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

72 ಜನರಿಂದ ದೂರು

ಹಳೆಬೀಡು ಪೊಲೀಸ್ ಠಾಣೆಯಲ್ಲಿ ಒಟ್ಟು 72 ಜನರು ದೂರು ದಾಖಲಿಸಿದ್ದು, ಸುಮಾರು 92 ಲಕ್ಷ ರೂ. ವಂಚನೆಯಾಗಿದೆ ಎಂದು ಆರೋಪಿಸಿದ್ದಾರೆ. ಮೂರು ವಿಳಾಸಗಳ ಆಧಾರ್ ಕಾರ್ಡ್ ಹೊಂದಿರುವ ಈತನ ವಿರುದ್ಧ ಚಿಕ್ಕಬಳ್ಳಾಪುರದಲ್ಲೂ ಪ್ರಕರಣ ದಾಖಲಾಗಿದೆ. ಪ್ರಸ್ತುತ ಹಳೆಬೀಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ತಮಗೆ ನ್ಯಾಯ ಒದಗಿಸಬೇಕೆಂದು ನೊಂದ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:39 am, Fri, 4 September 26

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us