AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗದ ‘ನಮ್ಮ ಕ್ಲಿನಿಕ್’ನಲ್ಲಿ ಬಡ ರೋಗಿಗಳಿಗೆ ಎಕ್ಸ್‌ಪೈರಿ ಮಾತ್ರೆ: ತಪ್ಪು ಒಪ್ಪಿಕೊಂಡ ವೈದ್ಯೆ

ಗದಗದ ಬೆಟಗೇರಿಯ ನಮ್ಮ ಕ್ಲಿನಿಕ್‌ನಲ್ಲಿ ಅವಧಿ ಮೀರಿದ ಮಾತ್ರೆಗಳನ್ನು ರೋಗಿಗಳಿಗೆ ವಿತರಿಸಲಾಗಿದೆ. ಬಡ ರೋಗಿಗಳ ಆರೋಗ್ಯದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ವೈದ್ಯರು ತಪ್ಪೊಪ್ಪಿಕೊಂಡಿದ್ದು, ಈ ಕುರಿತು ಗದಗ್ ಜಿಲ್ಲಾ ಆರೋಗ್ಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಅವಧಿ ಮೀರಿದ ಔಷಧಗಳನ್ನು ತೆರವುಗೊಳಿಸಿ ಗುಣಮಟ್ಟದ ಸೇವೆ ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗದಗದ ‘ನಮ್ಮ ಕ್ಲಿನಿಕ್’ನಲ್ಲಿ ಬಡ ರೋಗಿಗಳಿಗೆ ಎಕ್ಸ್‌ಪೈರಿ ಮಾತ್ರೆ: ತಪ್ಪು ಒಪ್ಪಿಕೊಂಡ ವೈದ್ಯೆ
ಅವಧಿ ಮೀರಿದ ಔಷಧಿ Image Credit source: Tv9 kannada
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Sep 25, 2026 | 4:19 PM

Share

ಗದಗ, ಸೆ.25: ರಾಜ್ಯ ಸರ್ಕಾರವು ನಗರ ಪ್ರದೇಶಗಳ ಬಡವರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ನಮ್ಮ ಕ್ಲಿನಿಕ್ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿದ್ದು, ಗದಗ ಜಿಲ್ಲೆಯಲ್ಲೂ ಬೆಟಗೇರಿ ಪ್ರದೇಶದಲ್ಲಿ ಇಂತಹ ಒಂದು ಕ್ಲಿನಿಕ್ ಅನ್ನು ಕಳೆದ ವರ್ಷ ಆಗಿನ ಸಚಿವರಾದ ಎಚ್.ಕೆ. ಪಾಟೀಲ್ ಅವರು ಉದ್ಘಾಟಿಸಿದ್ದರು. ಬೆಟಗೇರಿ, ನೇಕಾರ್ ಕಾಲೋನಿ ಮತ್ತು ಆಶ್ರಯ ಕಾಲೋನಿಗಳಂತಹ ಪ್ರದೇಶಗಳು ಬಡ ಜನರ ವಾಸಸ್ಥಾನಗಳಾಗಿದ್ದು, ಅವರಿಗೆ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು ಎಂಬುದು ಈ ಕ್ಲಿನಿಕ್ ಸ್ಥಾಪನೆಯ ಮುಖ್ಯ ಉದ್ದೇಶವಾಗಿತ್ತು. ಆದರೆ, ದುರದೃಷ್ಟವಶಾತ್, ಗದಗ ನಗರದ ಬೆಟಗೇರಿ ನಮ್ಮ ಕ್ಲಿನಿಕ್‌ನ ವೈದ್ಯರು ಮತ್ತು ಸಿಬ್ಬಂದಿ ಮಾಡಿರುವ ಎಡವಟ್ಟುಗಳು ಈಗ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಬಡ ರೋಗಿಗಳ ಜೀವದೊಂದಿಗೆ ಅಧಿಕಾರಿಗಳು ಮತ್ತು ವೈದ್ಯರು ಚೆಲ್ಲಾಟವಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಮ್ಮ ಕ್ಲಿನಿಕ್‌ನಲ್ಲಿ ರೋಗಿಗಳಿಗೆ ಅವಧಿ ಮೀರಿದ ಔಷಧಿಗಳನ್ನು ವಿತರಿಸುತ್ತಿರುವುದು ಈ ಆತಂಕಕ್ಕೆ ಮುಖ್ಯ ಕಾರಣವಾಗಿದೆ.

ಇತ್ತೀಚೆಗೆ ಚಿಕಿತ್ಸೆಗಾಗಿ ಬಂದ ಮಹಿಳೆಯೊಬ್ಬರಿಗೆ ವೈದ್ಯರು ತಪಾಸಣೆ ನಡೆಸಿ ಅವಧಿ ಮುಗಿದ ಮಾತ್ರೆಗಳನ್ನು ನೀಡಿದ್ದಾರೆ. ಈ ಘಟನೆ ಅಲ್ಲಿನ ಬಡವರಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದು ಘಟನೆಯಲ್ಲಿ, ಸುಮಾರು 15 ದಿನಗಳ ಹಿಂದೆ ಕೆಮ್ಮಿನ ಸಮಸ್ಯೆಯಿಂದ ಬಂದ ಮತ್ತೊಬ್ಬ ಮಹಿಳೆಗೂ ಅವಧಿ ಮೀರಿದ ಔಷಧಿಗಳನ್ನು ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಿಷಯ ತಿಳಿದ ಸಾರ್ವಜನಿಕರು ಮತ್ತು ಸ್ಥಳೀಯರು ಕ್ಲಿನಿಕ್‌ನಲ್ಲಿ ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ತೀವ್ರವಾಗಿ ವಾಗ್ವಾದ ನಡೆಸಿದ್ದಾರೆ. ಮಾಧ್ಯಮದ ಎದುರು ವೈದ್ಯೆ ಡಾ. ರಾಣಿ ಅವರು ಈ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ರಾಜ್ಯದಲ್ಲಿ ಸರ್ಕಾರ ನಕಲಿ ಔಷಧಿಗಳ ನಿಯಂತ್ರಣಕ್ಕಾಗಿ ಹರಸಾಹಸ ಮಾಡುತ್ತಿರುವಾಗ, ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಅವಧಿ ಮೀರಿದ ಔಷಧಿಗಳನ್ನು ವಿತರಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಮೂಡಿದೆ. ಆಸ್ಪತ್ರೆಗಳಿಗೆ ಸಮರ್ಪಕವಾಗಿ ಔಷಧಿ ಪೂರೈಕೆಯಾಗುತ್ತಿಲ್ಲವೇ? ಅಥವಾ ಇರುವ ಹಳೆಯ ಔಷಧಿಗಳನ್ನು ಬಡ ರೋಗಿಗಳಿಗೆ ನೀಡಲಾಗುತ್ತಿದೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಬಡ ಮತ್ತು ಹೆಚ್ಚು ವಿದ್ಯಾವಂತರಲ್ಲದ ರೋಗಿಗಳು, ಅವಧಿ ಮುಗಿದ ಔಷಧಿಗಳನ್ನು ಸುಲಭವಾಗಿ ಗುರುತಿಸಲಾರರು. ಅವರು ಈ ಮಾತ್ರೆಗಳನ್ನು ಸೇವಿಸಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೆ ಯಾರು ಹೊಣೆಗಾರರು ಎಂಬ ಪ್ರಶ್ನೆ ಕೇಳಿಬರುತ್ತಿದೆ. ಇಂದಿನ ದುಡಿದು ಇಂದೇ ತಿನ್ನುವ ಸ್ಥಿತಿಯಲ್ಲಿರುವ ಜನರಿಗೆ, ಈ ರೀತಿಯ ನಿರ್ಲಕ್ಷ್ಯವು ಮಾರಣಾಂತಿಕವಾಗಿ ಪರಿಣಮಿಸಬಹುದು.

ಇದನ್ನೂ ಓದಿ: ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲೇ ಆರೋಗ್ಯಾಧಿಕಾರಿಗಳ ಡ್ಯಾನ್ಸ್: ತೆಲುಗು ಹಾಡಿಗೆ ಹೆಜ್ಜೆ ಹಾಕಿದ ವೈದ್ಯರ ವಿಡಿಯೋ ವೈರಲ್

ಈ ಘಟನೆಗಳ ಹಿನ್ನೆಲೆಯಲ್ಲಿ, ಗದಗ ಜಿಲ್ಲಾ ಆರೋಗ್ಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಳ್ಳಬೇಕಿದೆ. ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ನಮ್ಮ ಕ್ಲಿನಿಕ್‌ಗಳಲ್ಲಿನ ಔಷಧ ದಾಸ್ತಾನುಗಳನ್ನು ಪರಿಶೀಲಿಸಿ, ಅವಧಿ ಮೀರಿದ ಔಷಧಿಗಳನ್ನು ತಕ್ಷಣವೇ ತೆಗೆದುಹಾಕಲು ಕ್ರಮ ಕೈಗೊಳ್ಳಬೇಕು. ಬಡ ಜನರಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕು ಎಂಬ ಸರ್ಕಾರದ ಮೂಲ ಉದ್ದೇಶವನ್ನು ಈಡೇರಿಸಿದಾಗ ಮಾತ್ರ ಸರ್ಕಾರಕ್ಕೆ ಉತ್ತಮ ಹೆಸರು ಬರುತ್ತದೆ. ಇಲ್ಲವಾದರೆ, ಇಂತಹ ಘಟನೆಗಳು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುತ್ತವೆ. ಅವಧಿ ಮೀರಿದ ಔಷಧಿಗಳನ್ನು ಸೇವಿಸಿ ಬಡ ರೋಗಿಗಳಿಗೆ ಏನಾದರೂ ಆರೋಗ್ಯ ಸಮಸ್ಯೆ ಎದುರಾದರೆ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ವೈದ್ಯರೇ ಸಂಪೂರ್ಣ ಜವಾಬ್ದಾರರಾಗುತ್ತಾರೆ. ಹೀಗಾಗಿ, ಗದಗ್ ಜಿಲ್ಲೆಯ ಜನತೆಯು ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಮತ್ತು ಔಷಧಿಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಒತ್ತಾಯಿಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಂಜೀವ ಕುಮಾರ್​ ಪಾಂಡ್ರೆ, ಗದಗ
ಸಂಜೀವ ಕುಮಾರ್​ ಪಾಂಡ್ರೆ, ಗದಗ

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More