ಗಣಪತಿ ವಿಸರ್ಜನೆ ವೇಳೆ ಅನುಮತಿ ಇಲ್ಲದಿದ್ರೂ ಡಿಜೆ ಬಳಕೆ: ಆಯೋಜಕರು ಸೇರಿ 15 ಜನರ ವಿರುದ್ಧ 4 ಎಫ್‌ಐಆರ್
ಹಾಸನದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಅನುಮತಿ ಇಲ್ಲದೆ ಡಿಜೆ ಬಳಸಿದ ಆರೋಪದ ಮೇಲೆ 15 ಜನರ ವಿರುದ್ಧ 4 ಎಫ್‌ಐಆರ್ ದಾಖಲಾಗಿವೆ. ಸೆಪ್ಟೆಂಬರ್ 23 ರಂದು ವಿಎಚ್‌ಪಿ ಮತ್ತು ಬಜರಂಗದಳದ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಶಬ್ದ ಮಾಲಿನ್ಯ ಉಂಟುಮಾಡಿದ ಹಿನ್ನೆಲೆಯಲ್ಲಿ ಹಾಸನ ನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಹಾಸನ, ಸೆಪ್ಟೆಂಬರ್ 25: ಹಾಸನ ನಗರದಲ್ಲಿ ನಡೆದ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವದ ಮೆರವಣಿಗೆ ವೇಳೆ ಅನುಮತಿ ಇಲ್ಲದಿದ್ದರೂ ಡಿಜೆ ಬಳಸಿದ ಆರೋಪದ ಹಿನ್ನೆಲೆಯಲ್ಲಿ, ಆಯೋಜಕರು ಸೇರಿದಂತೆ ಒಟ್ಟು 15 ಮಂದಿಯ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.
ಅನುಮತಿ ರಹಿತ ಡಿಜೆ ಬಳಕೆ ಹಾಗೂ ಶಬ್ದ ಮಾಲಿನ್ಯ ಆರೋಪ
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಹಾಸನ ನಗರದ ಸಾಹಿತ್ಯ ಪರಿಷತ್ ಭವನದಲ್ಲಿ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಸೆಪ್ಟೆಂಬರ್ 23ರಂದು ನಡೆದ ಗಣಪತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಅನುಮತಿ ಇಲ್ಲದಿದ್ದರೂ ನಾಲ್ಕು ಡಿಜೆಗಳನ್ನು ಬಳಸಲಾಗಿತ್ತು.
ಇದನ್ನೂ ಓದಿ: ನಾಳೆ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ: ಶಿವಮೊಗ್ಗ ಕೇಸರಿಮಯ, ಅರ್ಧ ದಿನ ಶಾಲೆಗಳಿಗೆ ರಜೆ
ಇದರಿಂದ ತೀವ್ರ ಶಬ್ದ ಮಾಲಿನ್ಯ ಉಂಟಾಗಿ, ಸಾರ್ವಜನಿಕರಿಗೆ ಮಾನಸಿಕ ಕಿರಿಕಿರಿ ಉಂಟುಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪೊಲೀಸ್ ಅಧಿಕಾರಿಗಳಿಂದಲೇ ದೂರು
ಹಾಸನ ನಗರ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ಗಳಾದ ಪ್ರಿಯಾಂಕಾ ಮತ್ತು ಸರೋಜಾಬಾಯಿ ಹಾಗೂ ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ಹರೀಶ್ ಮತ್ತು ಲತೇಶ್ ಅವರು ನೀಡಿದ ದೂರುಗಳನ್ನು ಆಧರಿಸಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಕರ್ತವ್ಯದಲ್ಲಿದ್ದ ಪೊಲೀಸರ ದೂರಿನ ಮೇರೆಗೆ ಒಟ್ಟು ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ.
15 ಜನರ ವಿರುದ್ಧ ಕೇಸ್ ಜಡಿದ ಪೊಲೀಸರು
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ದಯಾನಂದ, ಅಭಿಷೇಕ್, ವಿಕ್ಕಿ, ಲೋಕಿ, ದಿನೇಶ್‌ಸಿಂಗ್, ಅನುಪ, ವಿಕಾಸ್, ಶರತ್, ಮಂಜು, ಚಂದನ್, ಮಹಿಪಾಲ್, ನವೀನ್, ಚರಣ್, ಮಧು ಹಾಗೂ ಪವನ್ ಸೇರಿದಂತೆ ಒಟ್ಟು 15 ಜನರ ವಿರುದ್ಧ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಶಿವಮೊಗ್ಗದ ಅಮಿರ್ ಅಹ್ಮದ್ ವೃತ್ತದಲ್ಲಿ ರಾರಾಜಿಸುತ್ತಿದೆ ಅಂಬಾ ಭವಾನಿ-ಶಿವಾಜಿ ಮಹಾರಾಜರ ಬೃಹತ್ ಮೂರ್ತಿ!
ಇವರ ಪೈಕಿ ದಯಾನಂದ, ಅಭಿಷೇಕ್, ವಿಕ್ಕಿ, ಲೋಕಿ, ದಿನೇಶ್‌ಸಿಂಗ್, ಅನುಪ, ವಿಕಾಸ್, ಶರತ್, ಮಂಜು, ಚಂದನ್ ಹಾಗೂ ಮಹಿಪಾಲ್ ಅವರ ವಿರುದ್ಧ ನಾಲ್ಕೂ ಪ್ರಕರಣಗಳು ದಾಖಲಾಗಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




