Hassan News: ನಿವೇಶನಕ್ಕಾಗಿ ನಿಲ್ಲದ ಹೋರಾಟ! 10 ವರ್ಷದಿಂದ ಕಾದು ಮತ್ತೊಮ್ಮೆ ಹೋರಾಟಕ್ಕಿಳಿದ ಗ್ರಾಮಸ್ಥರು

ಅವರೆಲ್ಲರೂ ಒಂದು ನಿವೇಶನಕ್ಕಾಗಿ ದಶಕದ ಹಿಂದೆ ಬೀದಿಗಿಳಿದು ಹೋರಾಟ ಮಾಡಿದ್ರು, ಗ್ರಾಮದಲ್ಲಿ ಒತ್ತುವರಿಯಾಗಿದ್ದ 2.13 ಎಕರೆ ಗ್ರಾಮಠಾಣಾ ಭೂಮಿಯನ್ನ ಗುರ್ತಿಸಿ, ಅದನ್ನ ಖುಲ್ಲಾ ಪಡಿಸೋವರೆಗಿನ ಹೋರಾಟಕ್ಕೂ ಸಾಕ್ಷಿಯಾಗಿದ್ದರು. ಎಲ್ಲವೂ ಆಯ್ತು ನಿವೇಶನ ಇಂದಲ್ಲ ನಾಳೆ ಸಿಗುತ್ತೆ ಎನ್ನೋ ನಿರೀಕ್ಷೆಯೊಂದಿಗೆ ಹತ್ತು ವರ್ಷ ಕಳೆದು ಹೋಯ್ತು. ಆದ್ರೆ, ಯಾವಾಗ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿರೋ ಅಮೂಲ್ಯ ಭೂಮಿಯನ್ನ ಬೇರೆಯ ಉದ್ದೇಶಕ್ಕೆ ಬಳಸಿಕೊಳ್ತಾರೆ ಎನ್ನೋ ಅನುಮಾನ ಮೂಡಿದ್ದು, ಇದೀಗ ಜನರು ಮತ್ತೆ ಹೋರಾಟದ ಅಖಾಡಕ್ಕೆ ಇಳಿದಿದ್ದಾರೆ.

Hassan News: ನಿವೇಶನಕ್ಕಾಗಿ ನಿಲ್ಲದ ಹೋರಾಟ! 10 ವರ್ಷದಿಂದ ಕಾದು ಮತ್ತೊಮ್ಮೆ ಹೋರಾಟಕ್ಕಿಳಿದ ಗ್ರಾಮಸ್ಥರು
ಹಾಸನ
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 31, 2023 | 12:16 PM

ಹಾಸನ: ಖಾಲಿ ಜಾಗದಲ್ಲಿ ಟೆಂಟ್ ಹಾಕಿ ಸೈಟ್​ಗಾಗಿ ಬಡ ಜನರ ಹೋರಾಟ. 10 ವರ್ಷದ ಹಿಂದೆ ತಾವೇ ಖುಲ್ಲಾ ಮಾಡಿಸಿದ ಸರ್ಕಾರಿ ಭೂಮಿಯಲ್ಲಿ ನಿವೇಶನಕ್ಕಾಗಿ ಒತ್ತಾಯ, 64 ಬಡ ಕುಟುಂಬದಿಂದ ನಿವೇಶನದ ಬೇಡಿಕೆ, ಎರಡುವರೆ ಎಕರೆಯಲ್ಲಿ 41 ಕುಟುಂಬಕ್ಕೆ ನಿವೇಶನ ನೀಡಲು ಅಧಿಕಾರಿಗಳ ಪ್ಲಾನ್. ಹೌದು ಇದು ಇಲ್ಲಿಗೆ ಬರೊಬ್ಬರಿ 10 ವರ್ಷದ ಹಿಂದಿನ ಕಥೆ. ಹಾಸನ(Hassan) ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೊಲ್ಲಹಳ್ಳಿ ಗ್ರಾಮದ 64 ಕುಟುಂಬಗಳು ಧೀರೋದ್ದಾತ ಹೋರಾಟ ನಡೆಸಿದ್ರು, ನಿವೇಶನ ಇಲ್ಲದ ಎಲ್ಲ ಕುಟುಂಬಕ್ಕೆ ಸೈಟ್ ಕೊಡಬೇಕೆಂದು ಫೈಟ್ ಮಾಡಿ ತಮ್ಮದೇ ಗ್ರಾಮದ ಗ್ರಾಮಠಾಣಾ ವ್ಯಾಪ್ತಿಯ 2.13 ಎಕರೆ ಭೂಮಿ ಅಕ್ರಮ ಒತ್ತುವರಿಯಾಗಿದೆ ಎಂದು ಗುರುತಿಸಿ, ಅದನ್ನ ಖುಲ್ಲಾಪಡಿಸಲು ಹೋರಾಟ ಮಾಡಿ ಯಶಸ್ವಿಯೂ ಆಗಿದ್ದರು.

ಮತ್ತೊಮ್ಮೆ ಹೋರಾಟದ ಮೊರೆ ಹೋದ ಗ್ರಾಮಸ್ಥರು

ಸರ್ಕಾರಿ ಭೂಮಿ ಖಾಲಿ ಆಗುತ್ತಲೆ ಇಂದಲ್ಲ, ನಾಳೆ ತಮಗೆ ನಿವೇಶನ ಸಿಗುತ್ತೆ ಎಂದು ಬರೊಬ್ಬರಿ ಹತ್ತು ವರ್ಷ ಕಾದಿದ್ದೇ ಬಂತು. ಇಂದು ನಾಳೆ ಎಂದು ಕಾಲಹರಣ ಮಾಡಿದ ಅಧಿಕಾರಿಗಳು ಇನ್ನೂ ನಿವೇಶ ನೀಡಿಲ್ಲ. ಹಾಗಾಗಿಯೇ ರೊಚ್ಚಿಗೆದ್ದಿರೋ ಜನರು ನಾವೇ ಗುರುತಿಸಿ ನಿವೇಶನಕ್ಕಾಗಿ ಪಡೆದ ಭೂಮಿಯನ್ನ ಬೇರೆಯವರಿಗೆ ನೀಡೋಕೆ ಅಧಿಕಾರಿಗಳು ಮುಂದಾಗಿದ್ದಾರೆ. ಮೊದಲು ನಿವೇಶನ ಇಲ್ಲದ ಜನರಿಗೆ ನಿವೇಶ ನೀಡಿ ಎಂದು ಮತ್ತೆ ಹೋರಾಟಕ್ಕೆ ಇಳಿದಿದ್ದಾರೆ. ನಿವೇಶನಕ್ಕಾಗಿ ಮೀಸಲಿಟ್ಟ ಭೂಮಿಯಲ್ಲಿ 64 ಕುಟುಂಬಗಳು ಟೆಂಟ್ ನಿರ್ಮಿಸಿ ನಮಗೆ ನಿವೇಶನ ಕೊಡೋವರೆಗೂ ಇಲ್ಲಿಂದ ಕದಲೋದಿಲ್ಲ ಎಂದು ಪಟ್ಟು ಹಿಡಿದು, ಮಳೆ, ಚಳಿ ಬಿಸಿಲು ಲೆಕ್ಕಿಸದೆ ಹೋರಾಟಕ್ಕೆ ಇಳಿದಿದ್ದು, ಇನ್ನು ಎರಡು ವಾರದಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭವಾಗದಿದ್ದರೆ ಹೋರಾಟ ತೀವೃಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ನಿವೇಶನ ಹಕ್ಕುಪತ್ರಕ್ಕಾಗಿ ಬಡ ಕುಟುಂಬಗಳ ಅಹೋರಾತ್ರಿ ಧರಣಿ! ಲಕ್ಕುಂಡಿ ಗ್ರಾ. ಪಂ. ಅಂಗಳದಲ್ಲಿ ರಾತ್ರಿಯಿಡೀ ಮಲಗುವ ಮೂಲಕ ಮಹಿಳೆಯರ ಪ್ರತಿಭಟನೆ

41 ನಿವೇಶನ ನಿರ್ಮಿಸಲು ಈಗಾಗಲೇ ಪ್ಲಾನ್ ಮತ್ತು ಸ್ಕೆಚ್ ರೆಡಿ

ಅಪ್ಪಟ ಮಲೆನಾಡು ಸಕಲೇಶಪುರದಲ್ಲಿ ಸರ್ಕಾರಿ ಭೂಮಿ ಸಿಗೋದೆ ಹೆಚ್ಚು, ಅಂತಹದರಲ್ಲಿ ಪ್ರಭಾವಿಗಳು ಒತ್ತುವರಿ ಮಾಡಿದ್ದ ಕೊಲ್ಲಹಳ್ಳಿ ಗ್ರಾಮದ ಗ್ರಾಮಠಾಣಾ ಭೂಮಿಯನ್ನ ಗುರುತಿಸಿ, ಅದನ್ನ ತೆರವು ಮಾಡಲು ಕಾನೂನು ಹೋರಾಟ ಮಾಡಿ ಯಶಸ್ವಿಯಾಗಿದ್ದ ಜನರು ಇದೀಗ ತಾವೇ ಹೊರಾಟ ಮಾಡಿ ಪಡೆದ ಭೂಮಿಯನ್ನ, ಇದೀಗ ಸರ್ಕಾರ ಬೇರೆ ಉದ್ದೇಶಕ್ಕೆ ಬಳಕೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ಹೋರಾಟದ ಅಖಾಡಕ್ಕೆ ಇಳಿದಿದ್ದಾರೆ. ಕಳೆದ ಮೂರು ದಿನಗಳಿಂದ ನಿರಂತರ ಹೋರಾಟದಲ್ಲಿ ನಿರತವಾಗಿರುವ 64 ಕುಟುಂಬಗಳು ಎಲ್ಲರಿಗೂ ನಿವೇಶನ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಆದ್ರೆ, ಗ್ರಾಮದ ಗ್ರಾಮಠಾಣಾ ವ್ಯಾಪ್ತಿಯಲ್ಲಿ 2.13 ಎಕರೆ ಸರ್ಕಾರಿ ಭೂಮಿ ಇದೆ. ಇದರಲ್ಲಿ 41 ನಿವೇಶನ ನಿರ್ಮಿಸಲು ಈಗಾಗಲೇ ಪ್ಲಾನ್ ಮತ್ತು ಸ್ಕೆಚ್ ರೆಡಿಯಾಗಿದೆ.

ಹಾಕಿದ 64 ನಿವೇಶನದ ಅರ್ಜಿಯಲ್ಲಿ 41 ಜನರಿಗೆ ಮಾತ್ರ ನಿವೇಶನ ಭಾಗ್ಯ

ಒಟ್ಟು 64 ಜನರು ನಿವೇಶನಕ್ಕಾಗಿ ಅರ್ಜಿ ಹಾಕಿದ್ದಾರೆ. ಆದ್ರೆ, 41 ಜನರಿಗೆ ನಿವೇಶನ ಲಭ್ಯವಿದ್ದು, ಉಳಿದವರಿಗೆ ಏನು ಮಾಡಬೇಕು ಎನ್ನೋ ಚರ್ಚೆ ಕೂಡ ನಡೆಯುತ್ತಿದೆ. ಮೇ.29 ರಂದು, ಜನರು ಹೋರಾಟ ನಿರತವಾಗಿದ್ದ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ತಾಲ್ಲೂಕು ಪಂಚಾಯತಿಯ ಅಧಿಕಾರಿಗಳು, ಗುಡಿಸಲು ತೆರವು ಮಾಡಿ ಎಂದು ಮನವಿ ಮಾಡಿದರು. ಆದ್ರೆ, ಈ ಹಿಂದೇ ಇದೇ ರೀತಿಯಲ್ಲಿ ಹೋರಾಟ ಮಾಡಿದಾಗ ಮೂಗಿಗೆ ತುಪ್ಪಸವರಿ ನಮ್ಮನ್ನ ದಾರಿ ತಪ್ಪಿಸಿದ್ರಿ, ಈ ಬಾರಿ ನಿವೇಶನ ಸಿಗೋವರೆಗೂ ಹೋರಾಟ ನಿಲ್ಲಲ್ಲ ಎಂದು ಜನರು ಎಚ್ಚರಿಸಿದ್ದಾರೆ. ಈಗಾಗಲೇ ಸ್ಕೆಚ್ ಪ್ಲಾನ್ ಎಲ್ಲವೂ ರೆಡಿಯಿದ್ದು, ಇನ್ನು ಕೆಲವೇ ದಿನಗಳಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಹೆಚ್ಚುವರಿಯಾಗಿ ಉಳಿಯೋ ಜನರಿಗೆ ಏನು ಕ್ರಮ ವಹಿಸಬೇಕು ಎಂದು ​ಚರ್ಚಿಸಿ ತೀರ್ಮಾನ ಮಾಡೋದಾಗಿ ತಾಲೂಕು ಪಂಚಾಯತಿ ಇಓ ತಿಳಿಸಿದ್ದಾರೆ.

ಇದನ್ನೂ ಓದಿ:Election Time: ಉಚಿತ ನಿವೇಶನ ಆಫರ್ ಹಿನ್ನೆಲೆ- ಅರ್ಜಿ ಹಾಕಲು ಬಿಸಿಲು ಧೂಳು ಲೆಕ್ಕಿಸದೆ ಮುಗಿಬಿದ್ದ ಚಿಕ್ಕಬಳ್ಳಾಪುರದ ಮಹಿಳೆಯರು!

ಒಟ್ಟಿನಲ್ಲಿ ಇಂದಲ್ಲ ನಾಳೆ ನಿವೇಶನ ಸಿಗುತ್ತೆ ಎಂದು ಹತ್ತು ವರ್ಷಗಳಿಂದ ಮೌನವಾಗಿದ್ದ ಜನರು ಇದೀಗ ಸೈಲೆಂಟಾಗೆ ಹೋರಾಟದ ಅಖಾಡಕ್ಕೆ ಇಳಿದಿದ್ದು, ನಮಗೆ ನಿವೇಶನ ಸಿಗೋವರೆಗೂ ಹೋರಾಟ ನಿಲ್ಲಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ. ದಶಕಗಳಿಂದ ಮನೆಯಿಲ್ಲದೆ ನಿವೇಶನ ಇಲ್ಲದೆ ಬೀದಿ ಬದಿಯಲ್ಲಿ ನೆಲೆ ಕಳೆದುಕೊಂಡ ಹತ್ತಾರು ಕುಟುಂಬಗಳು ಸೈಟ್​ನ ನಿರೀಕ್ಷೆಯಲ್ಲಿದ್ದು, ಇನ್ನಾದ್ರು ಅಧಿಕಾರಿಗಳು ಬಡ ಜನರ ನೆರವಿಗೆ ಬರ್ತಾರಾ ಕಾದು ನೋಡಬೇಕಿದೆ.

ವರದಿ: ಮಂಜುನಾಥ್.ಕೆ.ಬಿ ಟಿವಿ9ಹಾಸನ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ