ಆ ಮುದ್ದು ಕಂದಳಿಗೆ ಇನ್ನೂ ಎರಡೂವರೆ ವರ್ಷ.. ಆಕೆಯ ಅಕ್ಕನೂ ಇನ್ನೂ ಆರು ವರ್ಷ ತುಂಬದ ಮುದ್ದು ಮುದ್ದು ಹುಡುಗಿ. ತೊದಲು ನುಡಿ, ಚಿನ್ನಾಟ.. ಹಠ ಮಾಡುತ್ತಾ ಒಬ್ಬಳು ಈಗಷ್ಟೇ ಶಾಲೆ ಮುಖ ನೋಡಿದ್ರೆ ಇನ್ನೊಬ್ಬರಿಗೆ ಇನ್ನೂ ಶಾಲೆಯತ್ತ ಮುಖಮಾಡೋ ವಯಸ್ಸು (Toddler) ಆಗಿಲ್ಲ. ಆದ್ರೆ ಈ ಮುದ್ದು ಸಹೋದರಿಯರ ಸಾಧನೆ ಕೇಳಿದ್ರೆ ನೀವು ನಿಜಕ್ಕೂ ನಿಬ್ಬೆರಗಾಗ್ತೀರಾ. ಹತ್ತಾರು ವರ್ಷದ ಮಕ್ಕಳನ್ನೂ ಮೀರಿಸುವಂತೆ ಜ್ಞಾನ (Knowledge) ಸಂಪಾದಿಸಿಕೊಂಡಿರೋ ಪುಟಾಣಿಗಳು ಹರುಳು ಹುರಿದಂತೆ ಮಾತಾಡ್ತಾರೆ. ಕೇಳಿದ ಪ್ರಶ್ನೆಗಳಿಗೆ ಥಟ್ಟಂತ ಉತ್ತರ ನೀಡುತ್ತಾ ಎಲ್ಲರೂ ಬೆರಗಾಗುವಂತೆ ಮಾಡಿರೋ ಈ ಪುಟಾಣಿ ಸಹೋದರಿಯರ ಸಾಧನೆಯನ್ನು ಈಗ ಇಡೀ ದೇಶವೇ ಕೊಂಡಾಡುವಂತಾಗಿದೆ. ತಮ್ಮ ಅಪಾರ ಜ್ಞಾನ ಸಂಪತ್ತಿನಿಂದ (Little Talent) ಚಿಕ್ಕ ವಯಸ್ಸಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ ನಲ್ಲಿ (India Book of Records) ಸ್ಥಾನ ಪಡೆದುಕೊಂಡಿರೋ ಮುದ್ದು ಮಕ್ಕಳ ಪ್ರತಿಭೆ ಎಂಥಾದ್ದು ಅಂತೀರಾ ಈ ಸ್ಟೋರಿ ನೋಡಿ.
ಭಾರತವನ್ನಾಳಿದ ಪ್ರಧಾನಿಗಳು ಯಾರು?? ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದ ರಾಷ್ಟ್ರಪತಿಗಳು ಯಾರು? ಭೂ ಮಂಡಲದ 195 ದೇಶಗಳು ಯಾವುವು.. ಅವುಗಳ ರಾಜಧಾನಿಗಳು ಯಾವುವು.. ಭಾರತದಲ್ಲಿರುವ ರಾಜ್ಯಗಳೆಷ್ಟು, ಅವುಗಳ ರಾಜಧಾನಿಗಳು ಯಾವುವು, ಅಬ್ಬಾ ಅಬ್ಬಬ್ಬಾ ಒಂದಾ ಎರಡಾ ಏನೇ ಪ್ರಶ್ನೆ ಕೇಳಿ ಈ ಪುಟಾಣಿ ಪೋರಿಯರ ಬಳಿ ಥಟ್ಟಂತಾ ನಿಮಗೆ ಉತ್ತರ ಸಿಕ್ಕಿ ಬಿಡುತ್ತೆ.
ಒಬ್ಬಾಕೆ ಇನ್ನೂ ಎರಡೂವರೆ ವರ್ಷದ ಪೋರಿ. ಆಕೆಯ ಅಕ್ಕನಿಗೆ ಇನ್ನೂ 5.7 ವರ್ಷ ವಯಸ್ಸು. ವಯಸ್ಸು ಇಷ್ಟೇ ಆದರೂ ಇವರಿಗಿರೋ ಜ್ಞಾನ ಮಾತ್ರ ಅಗಾಧ.. ಹರುಳು ಹುರಿದಂತೆ ಪಟ ಪಟನೆ ಎಲ್ಲವನ್ನು ಹೇಳುತ್ತಿದ್ದರೆ ಎದುರಗಿದ್ದವರಿಗೆ ನಿಜಕ್ಕೂ ಅಚ್ಚರಿಯಾಗುತ್ತೆ. ಪುಟ್ಟ ಮಕ್ಕಳಿಗೆ ಇಷ್ಟೊಂದು ಜ್ಞಾಪಕ ಶಕ್ತಿ ಇರುತ್ತಾ? ಪುಟ್ಟ ಕಂದಮ್ಮಗಳು ಇಷ್ಟೆಲ್ಲಾ ಕಲಿಯೋಕೆ ಆಗುತ್ತಾ ಎಂದು ಅಚ್ಚರಿಗೊಳ್ತಾರೆ, ಆದ್ರೆ ಇದು ಅಚ್ಚರಿ ಎನಿಸಿದರೂ ಸತ್ಯ.
ಹಾಸನ (Hassan) ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆ ಸಮೀಪದ ಕಸರನಹಳ್ಳಿ ಗ್ರಾಮದ ಅನಂತ್-ಯಶೋದಾ ದಂಪತಿಯ ಐದು ವರ್ಷ ಏಳು ತಿಂಗಳ ಗಾನ್ವಿತಾ ಹಾಗೂ ಎರಡೂವರೆ ವರ್ಷದ ಚರಿಷಾ ಈಗ ಇಡೀ ದೇಶವೇ ಕೊಂಡಾಡೋ ಸಾಧನೆ ಮಾಡಿದ್ದಾರೆ. ಇನ್ನೂ ಆಡುತ್ತಾ, ನಲಿದಾಡುತ್ತಾ, ತುಂಟಾಟವಾಡುತ್ತಾ ಅಂಬೆಗಾಲಿಡುತ್ತ ಆಟವಾಡೋ ವಯಸ್ಸಲ್ಲಿ ಈ ಪುಟಾಣಿಗಳು ಮಾಡಿರೋ ಸಾಧನೆ ನಿಜಕ್ಕೂ ನಿಬ್ಬೆರಗಾಗುವಂತೆ ಮಾಡಿದೆ.
ವಯಸ್ಸು ಎರಡೂವರೆಯಾದರೂ ಈ ಪುಟಾಣಿ ಚರಿಷಾ 195 ದೇಶಗಳ ಹೆಸರಿನ ಜೊತೆಗೆ ರಾಜಧಾನಿಗಳನ್ನು ಪಟಪಟನೆ ಹೇಳ್ತಾರೆ. ದೇಶದ ಪ್ರಧಾನಿಗಳ ಹೆಸರು, ದೇಶದ ರಾಜ್ಯಗಳು ರಾಜಧಾನಿಗಳ ಹೆಸರನ್ನ ಹರುಳು ಹುರಿದಂತೆ ಹೇಳಿ ಮುಗಿಸುತ್ತಾಳೆ. ಜಗತ್ತಿನ ಪ್ರತಿಷ್ಠಿತ 50 ಸಂಸ್ಥೆಗಳು, ಹಾಗೂ ಅದರ ಸ್ಥಾಪಕರ ಹೆಸರೂ ಈಕೆಯ ತೊದಲ ನುಡಿಯಲ್ಲಿ ಕೇಳೋದೆ ಚಂದ, ಇನ್ನು ಈಕೆಯ ಅಕ್ಕ ಸಹ ಇವಳಿಗಿಂತ ಏನೂ ಕಡಿಮೆಯಿಲ್ಲ.
ಜಗತ್ತಿನ ನಾನಾ ದೇಶಗಳು, ಅವುಗಳ ರಾಜಧಾನಿ, ದೇಶದ ನದಿಗಳು, ಚಿನ್ಹೆಗಳು.. ಹೀಗೆ ಸಾಮಾನ್ಯ ಜ್ಞಾನದ ಬಹುತೇಕ ಎಲ್ಲಾ ಅಂಶಗಳು ಇವರ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿದೆ. ಇನ್ನೂ ಶಾಲೆಯ ಮುಖ ನೋಡದ, ಅಕ್ಷರವನ್ನು ಕಲಿಯದ ಈ ಪುಟ್ಟ ಕಂದನ ಜ್ಞಾನ ಸಂಪತ್ತಿಗೆ ಈಕೆಯ ಹೆಸರು ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಜೊತೆಗೆ ಕರ್ನಾಟಕ ಅಛೀವರ್ಸ್ ಪುಸ್ತಕದಲ್ಲೂ ಇವರು ಮಿಂಚುತ್ತಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯವರೇ ಖುದ್ದು ಬಂದು ಪ್ರಶಸ್ತಿ ಫಲಕ, ಪ್ರಮಾಣ ಪತ್ರ ನೀಡಿ ಗೌರವವನ್ನು ಸಲ್ಲಿಸಿ ಹೋಗಿದ್ದು ಪುಟ್ಟ ಕಂದಮ್ಮಗಳ ಸಾಧನೆಯನ್ನ ಇಡೀ ದೇಶವೇ ಕೊಂಡಾಡುತ್ತಿದೆ. ಮನೆಯಲ್ಲಿ ಆಟವಾಡುತ್ತಾ ಸಮಯ ಕಳೆಯೋ ಮಕ್ಕಳು ಏನಾದರೂ ಸಾಧನೆ ಮಾಡಲಿ ಎಂಬ ಪೋಷಕರ ಸಣ್ಣ ಹಂಬಲ ಇದೀಗ ಮಕ್ಕಳು ದೊಡ್ಡ ಸಾಧನೆ ಮಾಡುವಂತೆ ಮಾಡಿದೆ.
ಮಕ್ಕಳ ಚುರುಕು ಬುದ್ದಿ ಕಂಡು ಬೆರಗಾದ ಪೋಷಕರು ಮಕ್ಕಳಿಗೆ ಮೊಬೈಲ್ ಕೊಡದೆ, ಅವರನ್ನ ಜ್ಞಾನ ಸಂಪಾದನೆ ಕಡೆಗೆ ಆಸಕ್ತಿ ಮೂಡಿಸಿದರು. ದಿನಕ್ಕೆ ಐದೋ ಹತ್ತೋ ವಿಚಾರಗಳನ್ನ ಹೇಳಿ ಕೊಡುತ್ತಾ ಅವರೂ ಎಲ್ಲವನ್ನು ಕಲಿಯುತ್ತಾ ಹೋದಾಗ ಮಕ್ಕಳ ಜ್ಞಾನ ಶಕ್ತಿಯನ್ನ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಸ್ಟೇಟಸ್ ಗ ಹಾಕಿಕೊಂಡು ಖುಷಿ ಪಡ್ತಿದ್ದರು.
ಆದ್ರೆ ಮಕ್ಕಳ ಈ ವಿಶೇಷ ಪ್ರತಿಭೆ ಎಲ್ಲರಿಗೂ ತಿಳಿಯಲಿ ಎಂದು ಕರ್ನಾಟಕ ಅಛೀವರ್ಸ್ ಬುಕ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಗಳಿಗೆ ಮಕ್ಕಳ ಕಲಿಕೆ ಬಗ್ಗೆ ವಿಡಿಯೋ ಮಾಡಿ ಕಳಿಸಿದ್ದಾರೆ. ಕೇವಲ ಐದು ನಿಮಿಷಕ್ಕೆ ಎರಡೂವರೆ ವರ್ಷದ ಚರಿಷಾ 195 ದೇಶಗಳ ಹೆಸರು ಮತ್ತು ರಾಜಧಾನಿ ಹೆಸರು ಹೇಳ್ತಾರೆ, ಇದನ್ನೆ ಗಾನ್ವಿಯಾ 3 ನಿಮಿಷಕ್ಕೆ ಹೇಳಿ ಮುಗಿಸುತ್ತಾಳೆ, ಎಲ್ಲವನ್ನು ತಮ್ಮ ಮೊಬೈಲ್ ನಲ್ಲಿ ದಾಖಲಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಕಳಿಸಿದ್ದಾರೆ.
ಮಕ್ಕಳ ಈ ಮಹಾತ್ ಸಾಧನೆಗೆ ಮೆಚ್ಚಿ ಐದೂವರೆ ವರ್ಷದ ಗಾನ್ವಿತಾಗೆ ಎರಡೆರಡು ಬಾರಿ ಕರ್ನಾಟಕ ಅಛೀವರ್ಸ್ ಬುಕ್ ನಲ್ಲಿ ಸ್ಥಾನ ಸಿಕ್ಕರೆ, ಚರಿಷಾ ಹಾಗು ಗಾನ್ವಿತಾ ಇಬ್ಬರೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮಕ್ಕಳಿಬ್ಬರೂ ಇನ್ನೂ ಆಡಿ ನಲಿಯೋ ವಯಸ್ಸಿನಲ್ಲಿ ದೇಶದ ಗರಿಮೆಯ ಇಂಡಿಯಾ ಬುಕ್ ಆಫ್ ರೆಕಾರ್ಡ ನಲ್ಲಿ ಸ್ಥಾನ ಪಡೆದಿರೋ ಬಗ್ಗೆ ಸಂಭ್ರಮಿಸುತ್ತಿರೊ ಪೋಷಕರು, ಈಗಿನ ಕಾಲಕ್ಕೆ ತಕ್ಕಂತೆ ಮಕ್ಕಳ ಕೈಗೆ ಮೊಬೈಲ್ ಕೊಟ್ಟರೆ ಅವರ ಜ್ಪಾಪಕ ಶಕ್ತಿ ಕುಗ್ಗುತ್ತೆ ಅಷ್ಟೇ. ಅದೇ ಅವರಲ್ಲೂ ಪ್ರತಿಭೆ ಅನ್ನೋದು ಖಂಡಿತಾ ಇರುತ್ತೆ. ಅದನ್ನು ಪೋಷಿಸಲು ಪೋಷಕರಾದ ನಾವು ಸಿದ್ಧವಿರಬೇಕು ಅಷ್ಟೇ ಎನ್ನೋ ಮನೋಭಿಲಾಷೆಯ ಪುಟಾಣಿಗಳ ಪೋಷಕರು ಮಕ್ಕಳು ವಿಶ್ವ ದಾಖಲೆಯನ್ನೂ ಮಾಡಲಿ ಎನ್ನೋ ಕನಸು ಕಾಣ್ತಿದ್ದಾರೆ.
ವರದಿ: ಮಂಜುನಾಥ್ ಕೆ.ಬಿ, ಟಿವಿ9, ಹಾಸನ