ದಸರಾ ಆನೆ ಅರ್ಜುನ ಸಮಾಧಿ ವಿರೂಪ ಆರೋಪ ಪ್ರಕರಣ; ಎಫ್ಐಆರ್ ದಾಖಲು
ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತು ನಾಡ ದೇವತೆ ತಾಯಿ ಚಾಮುಂಡೇಶ್ವರಿಯನ್ನು ಕೋಟಿ ಕೋಟಿ ಜನರೆದುರು ಮೆರವಣಿಗೆ ಮಾಡಿದ್ದ ಹಾಗೂ ತನ್ನ ಗಾಂಭೀರ್ಯದ ನಡೆ ಮೂಲಕ ಎಲ್ಲರ ಗಮನ ಸೆಳೆದಿದ್ದ ಅರ್ಜುನನ ಸಮಾಧಿ ಪ್ರಕರಣ ದಿನಕ್ಕೊಂದು ವಿವಾದ ಪಡೆಯುತ್ತಿದೆ. ಇದೀಗ ಅತಿಕ್ರಮ ಪ್ರವೇಶ ಹಾಗೂ ಸಮಾಧಿ ಬಗೆದ ಆರೋಪದಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಹಾಸನ, ಮೇ.28: ದಸರಾ ಆನೆ ಅರ್ಜುನ(Dasara Elephant Arjun) ಸಮಾಧಿ ವಿರೂಪ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡೆಗೂ ಅತಿಕ್ರಮ ಪ್ರವೇಶ ಹಾಗೂ ಸಮಾಧಿ ಬಗೆದ ಆರೋಪದಲ್ಲಿ ಕೇಸ್ ದಾಖಲು ಮಾಡಲಾಗಿದೆ. ಸಕಲೇಶಪುರ ತಾಲ್ಲೂಕಿನ ಯಸಳೂರು ವಲಯ ಅರಣ್ಯಾಧಿಕಾರಿ ಎಚ್ಡಿ ಕೋಟೆಯ ನವೀನ್ ವಿರುದ್ದ ಎಫ್ಐಆರ್ (FIR) ದಾಖಲಿಸಿದ್ದಾರೆ. ತಾವು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡು ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದ ನವೀನ್ ಮತ್ತು ಇತರರು, ಮೀಸಲು ಅರಣ್ಯದೊಳಗೆ ಅತಿಕ್ರಮವಾಗಿ ಪ್ರವೇಶ ಮಾಡಿ ಸಮಾಧಿಯ ಮಣ್ಣು ಬಗೆದಿದ್ದರು.
‘ಸ್ಮಾರಕ ನಿರ್ಮಾಣಕ್ಕೆ ದರ್ಶನ್ ಕಲ್ಲು ಕಳಿಸಿದ್ದಾರೆಂದು ಹೇಳಿ ವೀಡಿಯೋ ಮಾಡಿ ಅಭಿಮಾನಿಗಳು ಹಂಚಿಕೊಂಡಿದ್ದರು. ಸರ್ಕಾರ, ಅರಣ್ಯ ಇಲಾಖೆ ಅನುಮತಿ ಇಲ್ಲದೆ ಸ್ಮಾರಕ ನಿರ್ಮಾಣಕ್ಕೆ ಯತ್ನಿಸಿದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಅನಧಿಕೃತವಾಗಿ ಜನರಿಂದ ಹಣ ಸುಲಿಗೆ ಮಾಡಿ ಸಮಾಧಿ ಬಗೆದು ವಿರೂಪಗೊಳಿಸಿದ್ದಾರೆ ಎಂದು ಜನರು ಆರೋಪಿಸಿದ್ದರು. ಈ ಹಿನ್ನಲೆ ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷೆನ್ 33 ಹಾಗೂ ಕರ್ನಾಟಕ ಅರಣ್ಯ ನಿಯಮ 1969 ರ ನಿಯಮ 25-43ರ ಅಡಿ ಕೇಸ್ ದಾಖಲಿಸಲಾಗಿದೆ.
ಇದನ್ನೂ ಓದಿ:ಅರ್ಜುನ ಆನೆ ಹೆಸರಿನಲ್ಲಿ ಲಕ್ಷಾಂತರ ಹಣ ಸಂಗ್ರಹಿಸಿದ ಖದೀಮ: ನಟ ದರ್ಶನಗೂ ಮೋಸ?
ಅರ್ಜುನ ಸ್ಮಾರಕಕ್ಕಾಗಿ ಹಣ ಸಂಗ್ರಹಿಸಿ ಪೇಚಿಗೆ ಸಿಲುಕಿದ ಯುವಕರು
ಮೈಸೂರು: ದಸರಾ ಆನೆ ಅರ್ಜುನ ಸ್ಮಾರಕ ನಿರ್ಮಾಣ ವಿವಾದಕ್ಕೆ ಸಂಬಂಧಿಸಿ ಅರ್ಜುನ ಪಡೆ ವಾಟ್ಸಪ್ ಗ್ರೂಪ್ ಅಡ್ಮಿನ್ ಎಚ್.ಎನ್.ನವೀನ್ ಸ್ಪಷ್ಟನೆ ನೀಡಿದ್ದಾರೆ. ‘ನಾವು ಅರ್ಜುನ ಆನೆ ಅಭಿಮಾನಿಗಳು. ಮಳೆಗಾಲದ ಆರಂಭದಲ್ಲೇ ಸ್ಮಾರಕ ಆಗಬೇಕು ಎಂಬುದು ನಮ್ಮ ಉದ್ದೇಶ ಆಗಿತ್ತು. ಅದಕ್ಕಾಗಿ ವಾಟ್ಸಪ್‌ನಲ್ಲಿ ಮೇ 1ರಂದು ‘ಅರ್ಜುನ ಪಡೆ’ ಗ್ರೂಪ್ ಕ್ರಿಯೇಟ್ ಮಾಡಿದೆವು. ಸುಮಾರು 900 ಮೆಂಬರ್ ಆಗಿದ್ದಾರೆ. ಇದೇ ವೇಳೆ ನಟ ದರ್ಶನ್ ಅವರು ಸ್ಮಾರಕ ನಿರ್ಮಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು.
‘ನಾನು ಯಾರ ಬಳಿಯೂ ದುಡ್ಡು ಕೇಳಿಲ್ಲ. ಅರ್ಜುನನ ಮೇಲಿನ ಅಭಿಮಾನಕ್ಕೆ ಅರ್ಜುನ ಪಡೆ ವಾಟ್ಸಪ್ ಗ್ರೂಪ್‌ನಲ್ಲಿರುವವರು ನನ್ನ ಅಕೌಂಟ್‌ಗೆ ಹಣ ಹಾಕಿದ್ದಾರೆ. ಸುಮಾರು 50 ಸಾವಿರ ರೂ. ಕಲೆಕ್ಟ್ ಆಗಿದೆ. ನಟ ದರ್ಶನ್ ಕಡೆಯವರಾದ ಸಂಪತ್ ಎಂಬುವವರು ಕಲ್ಲು ಕೊಡಿಸಿದರು. ತಾತ್ಕಾಲಿಕವಾಗಿ ಸ್ಮಾರಕ ನಿರ್ಮಿಸಲು ಎಸಿಎಫ್ ಮೌಖಿಕವಾಗಿ ಅನುಮತಿ ಕೊಟ್ಟಿದ್ದರು. ಕೆಲಸ ಮಾಡಲು ಹೋದಾಗ ಆರ್‌ಎಫ್‌ಒ ತಡೆದರು. ಡಿಸಿಎಫ್ ಜತೆ ಮಾತನಾಡಿದ ಅರಣ್ಯ ಇಲಾಖೆಯೇ ಸ್ಮಾರಕ ನಿರ್ಮಿಸುತ್ತೆ, ಕಲ್ಲು ವಾಪಸ್ ತೆಗೆದುಕೊಂಡು ಹೋಗಿ ಎಂದು ಹೇಳಿದರು.
ಇದನ್ನೂ ಓದಿ:ಅರ್ಜುನ ಆನೆಯ ಸಮಾಧಿ ವಿಚಾರ: ಅರಣ್ಯಾಧಿಕಾರಿಗಳ ನಡೆಗೆ ದರ್ಶನ್ ಆಪ್ತರು ಗರಂ
‘ನಾನು ಅರ್ಜುನನ ಅಭಿಮಾನಿಗಳು, ಕಳ್ಳ ಅಲ್ಲ-ನವೀನ್
ಸಾಮಾಜಿಕ ಜಾಲತಾಣದಲ್ಲಿ ವಿವಾದವಾದ ಬಳಿಕ ಅರಣ್ಯ ಇಲಾಖೆಯವರು ತರಾತುರಿಯಲ್ಲಿ ತಾತ್ಕಾಲಿಕವಾಗಿ ಸ್ಮಾರಕ ನಿರ್ಮಿಸಿದ್ದಾರೆ. ಆರ್‌ಎಫ್‌ಒ 30 ಸಾವಿರ ರೂ. ಕಲ್ಲಿನ ಹಣವನ್ನು ನನ್ನ ಅಕೌಂಟ್‌ಗೆ ಹಾಕಿದ್ದಾರೆ. ನಾವು ನಟ ದರ್ಶನ್, ಅರ್ಜುನ ಆನೆ ಹೆಸರು ಬಳಸಿಕೊಂಡು ಹಣ ವಸೂಲಿ ಮಾಡಿಲ್ಲ. ಮಲೆನಾಡು ರಕ್ಷಣಾ ವೇದಿಕೆಯ ಸಾಗರ್ ಪ್ರಚಾರಕ್ಕಾಗಿ ವಿಡಿಯೋದಲ್ಲಿ ಏನೇನೋ ಮಾತನಾಡಿದ್ದಾರೆ. ನಾನು ಅರ್ಜುನನ ಅಭಿಮಾನಿಗಳು, ಕಳ್ಳ ಅಲ್ಲ ಎಂದರು.
ಅರಣ್ಯಧಿಕಾರಿಗಳೆ ಅನುಮತಿ ಕೊಟ್ಟು ಇದೀಗಾ ಉಲ್ಟಾ ಹೊಡೆದ್ರಾ..?
ಅರ್ಜುನ ತಾತ್ಕಾಲಿಕ ಸ್ಮಾರಕ ನಿರ್ಮಾಣ ಮಾಡಲು ಮುಂದಾದ ಯುವಕರ ಮೇಲೆ ಎಫ್ ಐ ಆರ್ ವಿಚಾರ, ‘ಅರಣ್ಯಧಿಕಾರಿಗಳೆ ಅನುಮತಿ ಕೊಟ್ಟು ಇದೀಗಾ ಉಲ್ಟಾ ಹೊಡೆದ್ರಾ? ಎಂಬ ಪ್ರಶ್ನೆ ಮೂಡಿದೆ. ಮೌಖಿಕವಾಗಿ ಅರಣ್ಯಧಿಕಾರಿಗಳು ಅನುಮತಿ ಕೊಟ್ಟಿದ್ರಾ. ಈ ಬಗ್ಗೆ ವೀಡಿಯೋ ಸಾಕ್ಷಿ ಇಟ್ಟುಕೊಂಡಿರುವ ಯುವಕರು, ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದ್ದರು. ಪೋನ್ ಮೂಲಕ ನೇಹಾ ಮತ್ತು ಎಸಿಎಫ್ ಮಹದೇವ್ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ, ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವೇಳೆ ಆಡಿಯೋ ಸಂಭಾಷಣೆಯಲ್ಲಿ ಸಿಮೆಂಟ್ ಬಳಸದೆ ಕಲ್ಲಿನಲ್ಲಿ ಕಟ್ಟಲು ಅನುಮತಿ ಕೊಟ್ಟಿರುವುದಾಗಿ ಇದೆ. ಈ ಬಗ್ಗೆ ಇಬ್ಬರು ಅಧಿಕಾರಿ ಜೊತೆ ಮಾತನಾಡಿರುವ ನವೀನ್, ಇದಕ್ಕೂ ಮುನ್ನ ಯುವಕರು ತಾತ್ಕಾಲಿಕ ಸ್ಮಾರಕ ನಿರ್ಮಾಣಕ್ಕೆ ಅರ್ಜುನ ಪಡೆ ಕರ್ನಾಟಕ ಹೆಸರಿನಲ್ಲಿ ಹಾಸನದ ಯಳಸೂರು ವಲಯ ಅರಣ್ಯಧಿಕಾರಿಗೆ ಮನವಿ ಪತ್ರ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ