ಆಪರೇಷನ್ ವಿಕ್ರಾಂತ್ ಸಕ್ಸಸ್: ಚಳ್ಳೆಹಣ್ಣು ತಿನ್ನಿಸುತ್ತಿದ್ದ ಪ್ರಳಯಾಂತಕನನ್ನ ಸೆರೆ ಹಿಡಿದಿದ್ದೆ ರೋಚಕ
ಮೂರು ದಿನಗಳ ಕಾರ್ಯಾಚರಣೆಯ ನಂತರ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ವಿಕ್ರಾಂತ್ ಹೆಸರಿನ ಕಾಡಾನೆಯನ್ನು ಕೊನೆಗೂ ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ. ಏಳು ಸಾಕಾನೆಗಳು ಮತ್ತು 200 ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಅರವಳಿಕೆ ಮದ್ದು ನೀಡಿ ಆನೆಯನ್ನು ಸೆರೆಹಿಡಿಯಲಾಗಿದೆ. ಆ ಮೂಲಕ ಹಾಸನ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಹಾಸನ, ಮಾರ್ಚ್ 20: ಜಿಲ್ಲೆಯ ಮಲೆನಾಡು ಭಾಗದಲ್ಲಿ ಆತಂಕ ಸೃಷ್ಟಿಸಿ ಜನರ ಜೀವ ಬಲಿಪಡೆಯುತ್ತಿರುವ ಕಾಡಾನೆಗಳ (Elephant) ಸೆರೆಗೆ ಕಾರ್ಯಾಚಣೆ ನಡೆಯುತ್ತಿದೆ. ಕಳೆದ ಎರಡು ದಿನದ ಕಾರ್ಯಾಚರಣೆಯಲ್ಲಿ ಆಪರೇಷನ್ ಟೀಂಗೆ ಚಳ್ಳೆಹಣ್ಣು ತಿನ್ನಿಸಿದ್ದ ವಿಕ್ರಾಂತ್ (Vikrant) ಹೆಸರಿನ ಕಾಡಾನೆ ಇಂದು ಕೂನೆಗೂ ಸೆರೆ ಸಿಕ್ಕಿದೆ. ಏಳು ಸಾಕಾನೆ, 200 ಸಿಬ್ಬಂದಿ ಗಳ ನೇತೃತ್ವದಲ್ಲಿ ಸತತ ಆರು ಗಂಟೆಗಳ ಕಾರ್ಯಾಚರಣೆ ನಡೆಸಿ ಬೇಲೂರು ತಾಲ್ಲೂಕಿನ ವಾಟೀಹಳ್ಳಿ ಬಳಿಯ ಕಾಫಿ ತೋಟದಲ್ಲಿ ಅರವಳಿಕೆ ಮದ್ದು ನೀಡಿ ವಿಕ್ರಾಂತ್ನನ್ನು ಸೆರೆಹಿಡಿಯಲಾಗಿದೆ.
ಇಂದು ಮುಂಜಾನೆಯೇ ಆಪರೇಷನ್ ವಿಕ್ರಾಂತ್ ಮೂರನೇ ದಿನದ ಕಾರ್ಯಾಚರಣೆ ಶುರು ಮಾಡಿದ್ದ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ, ವಿಕ್ರಾಂತ್ ಇರುವ ಜಾಗವನ್ನು ಪತ್ತೆ ಮಾಡಿದ್ದರು. ಹೀಗಾಗಿ ಸಾಕಾನೆಗಳೊಂದಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆಗೆ ಮುಂದಾಗಿದ್ದರು. ಕಾರ್ಯಾಚರಣೆಯಲ್ಲಿ ಪ್ರಶಾಂತ, ಕರ್ನಾಟಕ ಭೀಮ, ಧನಂಜಯ, ಕಂಜನ್, ಹರ್ಷ, ಏಕಲವ್ಯ ಮತ್ತು ಮಹೇಂದ್ರ ಸಾಕಾನೆಗಳು ಭಾಗಿಯಾಗಿದ್ದವು. ಮೂರು ದಿನಗಳಿಂದ ಸಿಬ್ಬಂದಿಗಳ ಜೊತೆ ಡಿಎಫ್‌ಓ ಸೌರಭ್‌ಕುಮಾರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಡ್ರೋನ್ ಕಣ್ಣಿಗೂ ಕಾಣಿಸದೆ ಕಳ್ಳಾಟ
ಸಾಕಾನೆಗಳ ಖೆಡ್ಡಾಕ್ಕೆ ಬೀಳದ ವಿಕ್ರಾಂತ್, ಥರ್ಮಲ್ ಡ್ರೋನ್ ಕಣ್ಣಿಗೂ ಕಾಣಿಸದೆ ಕಳ್ಳಾಟವಾಡಿದ್ದ. ಗುಂಪಿನಲ್ಲಿದ್ದುಕೊಂಡು ಎಸ್ಕೇಪ್ ಆಗುವುದು, ಒಂಟಿಯಾಗು ಆಟವಾಡಿಸಿ ಚಳ್ಳೆಹಣ್ಣು ತಿನ್ನಿಸಿ ಸತತ ಎರಡು ದಿನವೂ ಆಪರೇಷನ್ ವಿಕ್ರಾಂತ್ ವಿಫಲವಾಗಿತ್ತು. ಮೊನ್ನೆ ಬೇಲೂರು ತಾಲ್ಲೂಕಿನ ಕಾನನಹಳ್ಳಿ ಭಾಗದ ಕಾಡಿನಲ್ಲಿ ಗುಂಪಿನಲ್ಲಿ ಅಡಗಿದ್ದ ವಿಕ್ರಾಂತ್ ಆನೆಯನ್ನ ಗುಂಪಿನಿಂದ ಬೇರ್ಪಡಿಸಿ ಸೆರೆಹಿಡಿಯಲಾಗದೆ ಕಾರ್ಯಾಚರಣೆ ಯಶ ಕಂಡಿರಲಿಲ್ಲ, ಆದರೆ ನಿನ್ನೆ ಮುಂಜಾನೆಯೇ ವಿಕ್ರಾಂತ್ ನನ್ನ ಗುಂಪಿನಿಂದ ಬೇರ್ಪಡಿಸಿ ಸೆರೆಹಿಡಿಯಲು ಕರ್ನಾಟಕ ಭೀಮ ಮತ್ತು ತಂಡ ಸನ್ನದ್ದವಾಗಿತ್ತು. ಇನ್ನೇನು ಕಾನನಹಳ್ಳಿ ಕಾಡಿನಲ್ಲಿ ವಿಕ್ರಾಂತ್ ಸೆರೆ ಆಗೇ ಬಿಡ್ತು ಎನ್ನುವಷ್ಟರಲ್ಲಿ ಅಲ್ಲಿಂದ ಓಡಿ ಮರೆಯಾದ ವಿಕ್ರಾಂತ್ ಮತ್ತೆ ಕೈಗೆ ಸಿಕ್ಕಿರಲಿಲ್ಲ.
ಇದನ್ನೂ ಓದಿ: ಸತತ ನಾಲ್ಕು ಗಂಟೆಗಳ ಬಳಿಕ ಕಾಡಾನೆ ಸೆರೆ: ಇಲ್ಲಿದೆ ರೋಚಕ ಕಾರ್ಯಾಚರಣೆ ವಿಡಿಯೋ
ಮಧ್ಯಾಹ್ನದ ವೇಳೆಗೆ ಎರಡು ಥರ್ಮಲ್ ಡ್ರೋನ್ ಬಳಕೆ ಮಾಡಿ ಕಾಡಿನಲ್ಲಿ ಶೋಧ ಮಾಡಿದರು ವಿಕ್ರಾಂತ್ ಸುಳಿವಿರಲಿಲ್ಲ. ಏಳು ಸಾಕಾನೆಗಳು, 200 ಸಿಬ್ಬಂದಿಗಳು ಕಾಫಿತೋಟ ಕಾಡು ಎಲ್ಲೆಡೆ ತಡಕಾರಿದರು ಪತ್ತೆಯಾಗದೆ ವಿಕ್ರಾಂತ್ ಎಸ್ಕೇಪ್ ಆದರೆ ಕಾರ್ಯಾಚರಣೆ ಸ್ಥಳಕ್ಕೆ ಕಾಡಾನೆ ಭೀಮನ ದಿಢೀರ್ ಎಂಟ್ರಿ ಇಡೀ ಕಾರ್ಯಾಚರನೆಯ ದಿಕ್ಕೆಡಿಸಿತ್ತು. ಭೀಮನ ಎಂಟ್ರಿಯಿಂದ ಆತಂಕಗೊಂಡ ಸಾಕಾನೆಗಳು ಕೈಚೆಲ್ಲಿ ಕೂತರೆ ಕಾಡಿನಲ್ಲಿ ಮರೆಯಾದ ವಿಕ್ರಾಂತ್ ಎರಡನೇ ದಿನವೂ ಎಸ್ಕೇಪ್ ಆಗಿದ್ದ.
ವಿಕ್ರಾಂತ್ ಸೆರೆಗೆ ಮತ್ತೆ ಅಡ್ಡಿಯಾದ ಕಾಡಾನೆ ಭೀಮಾ
ಭೀಮನ ಭಯಯಿಂದ ವಿಕ್ರಾಂತ್ ಸೆರೆಗೆ ಅಡ್ಡಿ ಉಂಟಾಗಿತ್ತು. ಭೀಮಾ ಕಾಡಾನೆಗೆ ಅರವಳಿಕೆ ಮದ್ದು ನೀಡಿ ಭೀಮನನ್ನ ಬೇರೆಡೆಗೆ ಓಡಿಸಲು ಯತ್ನಿಸಲಾಯಿತು. ಬೇಲೂರು ತಾಲ್ಲೂಕಿನ ವಾಟೀಹಳ್ಳಿ ಕಾಫಿ ಎಸ್ಟೇಟ್ ನಲ್ಲಿ ಭೀಮನಿಗೆ ಆಪರೇಷನ್ ಟೀಂ ಅರವಳಿಕೆ ಮದ್ದು ನೀಡಿದೆ. ಅರವಳಿಕೆ ಮದ್ದು ನೀಡಿದರು ಭೀಮಾ ಪ್ರಜ್ಞೆ ತಪ್ಪಿರಲಿಲ್ಲ. ಒಂದುವರೆ ಗಂಟೆ ಬಳಿಕ ಕೆಳಗೆ ಬಿದ್ದರೂ ಭೀಮಾ ಎಚ್ಚರವಾಗಿದ್ದ.
ಇದನ್ನೂ ಓದಿ: ಮಾನವ-ಕಾಡಾನೆ ಸಂಘರ್ಷಕ್ಕೆ ಕಡಿವಾಣಕ್ಕೆ ಮುಂದಾದ ಹಾಸನ ಜಿಲ್ಲಾಡಳಿತ: ನಾಲ್ಕು ಪುಂಡಾನೆ ಸೆರೆಗೆ ಅನುಮತಿ
ವಿಧಿಯಿಲ್ಲದೆ ವನ್ಯಜೀವಿ ವೈದ್ಯರು ಭೀಮನಿಗೆ ರಿವರ್ಸಲ್ ಇಂಜೆಕ್ಷನ್ ನೀಡಿದರು. ಭೀಮನನ್ನ ಸಾಂಬಾಳಿಸಲು ಕಾರ್ಯಾಚರಣೆ ತಂಡ ಹೈರಾಣಾಯಿತು. ಭೀಮ ಆನೆ ಹಿಮ್ಮೆಟ್ಟಿಸುವ ಯತ್ನದಲ್ಲಿ ಕಾಡಾನೆ ವಿಕ್ರಾಂತ್ ಎಸ್ಕೇಪ್ ಆಗಿತ್ತು. ಹೀಗೆ ಸತತ ಮೂರನೇ ದಿನವೂ ವಿಕ್ರಾಂತ್ ಆನೆ ಸೆರೆಗೆ ಏನೇ ಪ್ರಯತ್ನ ಮಾಡಿದರೂ ಕಾರ್ಯಾಚರಣೆ ತಂಡದ ಕೈಗೆ ಸಿಗದೆ ಪ್ರಳಯಾಂತಕ ವಿಕ್ರಾಂತ್ ಪರಾರಿಯಾಗುತ್ತಿದ್ದ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.