Hasanamba Temple: ಹಾಸನಾಂಬೆ ದರ್ಶನಕ್ಕೆ ಕೌಂಟ್ ಡೌನ್; ವರ್ಷದ ಬಳಿಕ ಬಾಗಿಲು ತೆರೆಯಲಿದೆ ದೇವಸ್ಥಾನ
ಹಾಸನದ ಅಧಿದೇವತೆ ನಾಡಿನ ಶಕ್ತಿ ದೇವತೆ ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಮಾತೆ ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಕಳೆದ ವರ್ಷ ಬಂದ್ ಆಗಿದ್ದ ದೇಗುಲದ ಬಾಗಿಲು ನಿಗದಿತ ಸಮಯದಂತೆ ಗುರುವಾರ ಮಧ್ಯಾಹ್ನ 12 ಗಂಟೆಗೆ ಓಪನ್ ಆಗಲಿದ್ದು, ಈಬಾರಿ ಶಕ್ತಿ ಯೋಜನೆ ಎಫೆಕ್ಟ್ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯೊಂದಿಗೆ ಜಿಲ್ಲಾಡಳಿತ ಸಕಲ ರೀತಿಯ ತಯಾರಿ ಮಾಡಿಕೊಂಡಿದೆ.
ಹಾಸನ, ನ.02: ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ ಅಧಿದೇವತೆ, ನಾಡಿನ ಶಕ್ತಿ ದೇವತೆಯಾದ ಹಾಸನಾಂಬೆ (Hasanamba) ದರ್ಶನಕ್ಕೆ ಕೌಂಟ್ ಡೌನ್ ಶುರುವಾಗಿದೆ. ಕಳೆದ ವರ್ಷ ಅಕ್ಟೋಬರ್ 27ಕ್ಕೆ ಬಂದ್ ಆಗಿದ್ದ ದೇಗುಲದ ಬಾಗಿಲು, ಇಂದು (ನ.02) ತೆರೆಯಲಿದೆ. ಪ್ರತಿ ವರ್ಷ ಅಶ್ವಯುಜ ಮಾಸದ ಮೊದಲ ಗುರುವಾರ ಬಾಗಿಲು ತೆಗೆಯುವುದು ವಾಡಿಕೆ. ಹಾಗಾಗಿಯೇ ನಾಳೆ ಆಧಿಚುಂಚನಗಿರಿ ಮಹಾ ಸಂಸ್ಥಾನ ಪೀಠದ ಪೀಠಾದ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಶ್ರೀಗಳ ಸಾನ್ನಿಧ್ಯದಲ್ಲಿ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಅವರ ಉಪಸ್ಥಿತಿಯಲ್ಲಿ ನಾಳೆ ದೇಗುಲದ ಬಾಗಿಲು ತೆರೆಯಲಿದೆ.
10 ರಿಂದ 12 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ
ಈ ಬಾರಿ ಶಕ್ತಿಯೋಜನೆಯ ಎಫೆಕ್ಟ್ ಕಾರಣದಿಂದ ಮಹಿಳೆಯರಿಗೆ ಸಾರಿಗೆ ಬಸ್ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದರಿಂದ ಅತೀ ಹೆಚ್ಚಿನ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ 10 ರಿಂದ 12 ಲಕ್ಷ ಭಕ್ತರು ಬರಬಹುದು ಎನ್ನುವ ನಿರೀಕ್ಷೆ ಇದ್ದು, ಅದಕ್ಕಾಗಿ ಸಕಲ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಸುಮಾರು 10 ಕಿಲೋಮೀಟರ್ ಉದ್ದದ ಬ್ಯಾರಿಕೇಡ್ ವ್ಯವಸ್ಥೆ, ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ನೆರಳಿನ ವ್ಯವಸ್ಥೆ, ಗಣ್ಯರು ಅತಿ ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ದೇಗುಲಕ್ಕೆ ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ಇಡೀ ದೇಗುಲದ ಆವರಣ ನಳ ನಳಿಸುವಂತೆ ಮಾಡಲಾಗಿದೆ.
ಇದನ್ನೂ ಓದಿ:ಹಾಸನಾಂಬೆ ಜಾತ್ರೆಗೆ ಮುಹೂರ್ತ ನಿಗದಿ: ನವೆಂಬರ್ 2ರಿಂದ 15ರವರೆಗೆ ದಿನದ 24 ಗಂಟೆಯೂ ದರ್ಶನ
ಇಂದು ಹಾಸನಾಂಬೆ ಉತ್ಸವದಲ್ಲಿ ಬಾಗಿಯಾಗಲಿರುವ 200ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಗಳ ಜೊತೆಗೆ ಭಕ್ತರು ಆಗಮನ ದರ್ಶನದ ಬಗ್ಗೆ ಡ್ರೈರನ್ ನಡೆಸಿದ ಜಿಲ್ಲಾಧಿಕಾರಿಯವರು ಭಕ್ತರಿಗೆ ಏನೂ ಸಮಸ್ಯೆ ಆಗಬಾರದು, ಸಾಮಾನ್ಯ ಭಕ್ತರಿಗೆ ಸುಲಭವಾಗಿ ದರ್ಶನಕ್ಕೆ ಅವಕಾಶ ಸಿಗಬೇಕು, ಹಾಗಾಗಿಯೇ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ದೇಗುಲದ ಗರ್ಭಗುಡಿಯಲ್ಲಿ ಯಾರಿಗೂ ವಿಶೇಷ ಪೂಜೆ ಅರ್ಚನೆಗೆ ಅವಕಾಶ ಇರುವುದಿಲ್ಲ. ಗಣ್ಯರು ಗರ್ಭಗುಡಿಗೆ ಹೋದರೂ, ಕೇವಲ ಮಂಗಳಾರತಿ ಪಡೆದು ಹೊರ ಬರಬೇಕು. ಆಗ ಭಕ್ತರಿಗೆ ಸುಲಭವಾಗಿ ದರ್ಶನಕ್ಕೆ ಅವಕಾಶ ಸಿಗಲಿದೆ ಎಂದು ಹೇಳಿದರು.
ಈ ಬಾರಿ ಹಾಸನಾಂಬೆ ಉತ್ಸವವನ್ನು ಜನೋತ್ಸವವಾಗಿ ಆಚರಣೆ ಮಾಡಲಾಗುತ್ತಿದ್ದು, ಆಗಸದಿಂದ ಹಾಸನ ನೋಡುವ ಹೆಲಿ ಟೂರಿಸಂ ವ್ಯವಸ್ಥೆ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಹಾಸನ ಜಿಲ್ಲೆಯ ಐತಿಹಾಸಿಕ ಹಾಗೂ ಪ್ರಾಕೃತಿಕ ತಾಣ ದರ್ಶನಕ್ಕೆ ವಿಶೇಷ ಪ್ಯಾಕೇಜ್ ಟೂರ್, ರಾಜ್ಯ ಹಾಗೂ ಸ್ಥಳೀಯ ಕಲಾವಿದರಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ. ಹೀಗೆ ಹತ್ತು ಹಲವು ವಿಶೇಷತೆಗಳೋಂದಿಗೆ ಉತ್ಸವಕ್ಕೆ ವಿಶೇಷ ಮೆರುಗು ತರುವ ಪ್ರಯತ್ನ ಮಾಡಲಾಗಿದೆ. ನಗರದಲ್ಲಿ ದಸರಾ ಮಾದರಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ನಾಳೆಯಂದ ಇಡೀ ಹಾಸನ ನಗರ ದೀಪಾಲಂಕಾರದಿಂದ ಜಗಮಗಿಸಲಿದೆ.
ಇದನ್ನೂ ಓದಿ:ವಾರಕ್ಕೆ ಮೂರು ದಿನ ಮಾತ್ರ ದರ್ಶನ ನೀಡುವ ಹಾಸನಾಂಬೆ ಸಹೋದರಿಯ ಅದ್ದೂರಿ ಜಾತ್ರೆ
ಪ್ರತೀ ಬಾರಿ ಗಣ್ಯರು ಅತಿಗಣ್ಯರ ಹೆಸರಿನಲ್ಲಿ ಸಾಕಷ್ಟು ಜನರು ದೇವಿ ದರ್ಶನಕ್ಕೆ ನೂಕು ನುಗ್ಗಲು ಮಾಡುತ್ತಿದ್ದರಿಂದ ಈ ಭಾರಿ ವಿಶೇಷ ದರ್ಶನಕ್ಕೆ ಹಣ ನೀಡಿ ವಿಶೇಷ ಪಾಸ್ ಪಡೆಯಬೇಕಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ದಿನದ 24 ಗಂಟೆಯೂ ಕೂಡ ದೇವಿ ದರ್ಶನಕ್ಕೆ ಅವಕಾಶ ಇದ್ದು, ಅದಕ್ಕಾಗಿ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಲು ಪೊಲೀಸರು, ಕಂದಾಯ ಇಲಾಖೆ ಸಿಬ್ಬಂದಿ, ಹಾಗೂ ಸ್ವಯಂ ಸೇವಕರನ್ನು ಸನ್ನದ್ದಗೊಳಿಸಲಾಗಿದೆ.
ನಾಳೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿಲ್ಲ
ಇಂದು ಮಧ್ಯಾಹ್ನ ಬಾಗಿಲು ತೆರೆದರೆ ಮೊದಲ ದಿನ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮರುದಿನ ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ. ನಂತರದ ದಿನಗಳಲ್ಲಿ ಮುಂಜಾನೆ 4 ಗಂಟೆಯಿಂದ ಮದ್ಯಾಹ್ನ 1-30ರ ವರೆಗೆ ಹಾಗೂ ಮತ್ತೆ 3 ಗಂಟೆಯಿಂದ ಮುಂಜಾನೆ 2 ಗಂಟೆವರೆಗೆ ದರ್ಶನ ಇರಲಿದ್ದು, ಮದ್ಯಾಹ್ನ 1-30ರಿಂದ 3 ಹಾಗು ಮುಂಜಾನೆ 2ರಿಂದ 4 ಗಂಟೆವರೆಗೆ ನೈವೇದ್ಯ ನಡೆಯಲಿದೆ. ಒಟ್ಟಿನಲ್ಲಿ ಬೇಡಿದ ವರವ ಕರುಣಿಸುವ, ಇಷ್ಟಾರ್ಥ ಸಿದ್ದಿಸೋ ದೇವಿ ಹಾಸನಾಂಬೆ ಸನ್ನಿದಿಯಲ್ಲಿ ಕಳೆದ ವರ್ಷ ಹಚ್ಚಿಟ್ಟ ದೀಪ ಆರೋದಿಲ್ಲ, ದೇವರ ಮುಡಿಗಿಟ್ಟ ಹೂ ಬಾಡೋದಿಲ್ಲ ಎನ್ನೋ ನಂಬಿಕೆಯ ಕಾರಣದಿಂದಲೇ ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿಯನ್ನ ಕಣ್ತಂಬಿಕೊಳ್ಳಲು ಅತಿ ಹೆಚ್ಚಿನ ಭಕ್ತರು ರಾಜ್ಯವಲ್ಲದೆ ಹೊರ ರಾಜ್ಯದಿಂದಲೂ ಆಗಮಿಸಲಿದ್ದು, ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:14 am, Thu, 2 November 23