3,600 ರೂ. ದರ ಕೊಡಲೇಬೇಕು, ಬಿಡುವ ಪ್ರಶ್ನೆ ಇಲ್ಲ: ಕಾರ್ಖಾನೆ ಮಾಲೀಕರ ಮೊಂಡುತನಕ್ಕೆ ಹಾವೇರಿ ಡಿಸಿ ಕಚೇರಿ ಎದುರು ರೈತರ ಕಿಡಿ

ಹಾವೇರಿ ಕಬ್ಬು ಬೆಳೆಗಾರರು ಟನ್‌ಗೆ 3,600 ರೂ. ದರ ನೀಡುವಂತೆ ಒತ್ತಾಯಿಸಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕರು ಕಡಿಮೆ ದರಕ್ಕೆ ಸೀಮಿತವಾಗಿರುವುದರಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ ವಿಫಲವಾಗಿದೆ. ರೊಚ್ಚಿಗೆದ್ದ ರೈತರು ಬೃಹತ್ ಪ್ರತಿಭಟನೆಗೆ ಸಿದ್ಧರಾಗಿದ್ದು, ಡಿಸಿ ಕಚೇರಿ ಮುಂದೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ರೈತ ಮುಖಂಡರು ದರ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

3,600 ರೂ. ದರ ಕೊಡಲೇಬೇಕು, ಬಿಡುವ ಪ್ರಶ್ನೆ ಇಲ್ಲ: ಕಾರ್ಖಾನೆ ಮಾಲೀಕರ ಮೊಂಡುತನಕ್ಕೆ ಹಾವೇರಿ ಡಿಸಿ ಕಚೇರಿ ಎದುರು ರೈತರ ಕಿಡಿ
ಕಬ್ಬು ಬೆಳೆಗಾರರು

Updated on: Nov 23, 2026 | 5:28 PM

ಹಾವೇರಿ, ನ.23: ಪ್ರತಿ ಟನ್ ಕಬ್ಬಿಗೆ 3,600 ರೂ. ದರ ನೀಡುವಂತೆ ಒತ್ತಾಯಿಸಿ ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಹಾವೇರಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಕಬ್ಬಿನ ದರ ನಿಗದಿ ಸಂಬಂಧ ನಡೆದ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಒಮ್ಮತಕ್ಕೆ ಬಾರದ ಹಿನ್ನೆಲೆಯಲ್ಲಿ ಸಭೆ ವಿಫಲವಾಗಿದ್ದು, ಇದರಿಂದ ರೊಚ್ಚಿಗೆದ್ದ ರೈತರು ಡಿಸಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಜಿಲ್ಲಾಧಿಕಾರಿ ಕಚೇರಿಯ ಗೇಟ್ ಲಾಕ್ ಮಾಡಿದ್ದಾರೆ.

ಇನ್ನು ಕಬ್ಬಿನ ದರ ನಿಗದಿ ಸಂಬಂಧ ಹಾವೇರಿಯಲ್ಲಿ ನಡೆದ ಸಭೆಯಲ್ಲಿ ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ಯಾವುದೇ ಒಮ್ಮತ ಮೂಡದ ಕಾರಣ ಸಭೆ ವಿಫಲವಾಗಿದೆ. ರೈತರು ಪ್ರತಿ ಟನ್ ಕಬ್ಬಿಗೆ ಕನಿಷ್ಠ 3,600 ರೂ. ದರ ನಿಗದಿಪಡಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ, ಕಾರ್ಖಾನೆ ಮಾಲೀಕರು 3,000 ರೂ. ರಿಂದ 3,100 ರೂ. ದರಕ್ಕೆ ಮಾತ್ರ ಸೀಮಿತವಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Loading...

“ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆ ಇಲ್ಲ”: ಚೂನಪ್ಪ ಪೂಜಾರಿ

ಹಾವೇರಿಯಲ್ಲಿ ಮಾತನಾಡಿದ ರೈತ ಮುಖಂಡ ಚೂನಪ್ಪ ಪೂಜಾರಿ ಅವರು ಸರ್ಕಾರ ಮತ್ತು ಕಾರ್ಖಾನೆ ಮಾಲೀಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಮೊದಲ ಕಂತಿನಲ್ಲಿ 3,500 ರೂ.ಮತ್ತು ನಂತರ 100 ರೂ. ಸೇರಿ ಒಟ್ಟು 3,600 ರೂ. ದರ ಕೊಡಲು ಹೇಳಿದ್ದೇವೆ. ಈ ದರವನ್ನು ಕೊಡಲೇಬೇಕು. ಅದಕ್ಕೆ ನಾವು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆ ಇಲ್ಲ” ಎಂದು ಚೂನಪ್ಪ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಬಾರದಹಳ್ಳಿ, ಮಾಕೋನಹಳ್ಳಿ ಬಳಿ ಬೀಡುಬಿಟ್ಟ 38 ಕಾಡಾನೆಗಳು: 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಿಷೇಧಾಜ್ಞೆ

ಬೃಹತ್ ಪ್ರತಿಭಟನೆಗೆ ಸಿದ್ಧತೆ

ದರ ನಿಗದಿಯಾಗದ ಕಾರಣ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜಮಾವಣೆಗೊಳ್ಳುತ್ತಿದ್ದಾರೆ. ಪ್ರತಿಭಟನೆಯ ಸಲುವಾಗಿ ಡಿಸಿ ಕಚೇರಿ ಮುಂಭಾಗದಲ್ಲೇ ಬೃಹತ್ ಶಾಮಿಯಾನ ಅಳವಡಿಸಲಾಗುತ್ತಿದೆ. ರೈತರ ಆಕ್ರೋಶ ಮತ್ತು ದರದ ಗೊಂದಲದಿಂದಾಗಿ ಡಿಸಿ ಕಚೇರಿ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆಯು ಜಿಲ್ಲಾಧಿಕಾರಿ ಕಚೇರಿಯ ಗೇಟ್‌ಗಳನ್ನು ಲಾಕ್ ಮಾಡಿ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಮುತ್ತಿಗೆ ಹಾಕಿರುವ ರೈತರನ್ನು ಸಮಾಧಾನಪಡಿಸಿ, ನ್ಯಾಯಯುತ ದರ ಕೊಡಿಸುವ ಪ್ರಯತ್ನಗಳು ನಡೆಯುತ್ತಿವೆ.

ವರದಿ; ಅಣ್ಣಪ್ಪ ಬಾರ್ಕಿ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us