ಡಿಕೆ ಸುರೇಶ್ ವಿವಾದ: ವ್ಯಕ್ತಿಗತವಾಗಿ ಹೇಳಿರಬಹುದು, ಇದು ಕಾಂಗ್ರೆಸ್ ನಿರ್ಣಯವಲ್ಲ ಎಂದ ದೇವೇಗೌಡ
ದಕ್ಷಿಣದ ರಾಜ್ಯಗಳಿಗೆ ತೆರಿಗೆ ಅನ್ಯಾಯದ ಬಗ್ಗೆ ಮಾತನಾಡುತ್ತಾ, ಇದೇ ರೀತಿ ಅನ್ಯಾಯ ಮುಂದುವರಿದರೆ ಪ್ರತ್ಯೇಕ ರಾಷ್ಟ್ರ ಬೇಡಿಕೆ ಇಡಬೇಕಾಗುತ್ತೆ ಎಂದು ಸಂಸದ ಡಿಕೆ ಸುರೇಶ್ ಹೇಳಿಕೆ ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಸದ್ಯ ಈ ಕುರಿತಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ಡಿ ದೇವೇಗೌಡ ದೆಹಲಿಯಲ್ಲಿ ಮಾತನಾಡಿದ್ದು, ಯಾವ ಉದ್ದೇಶದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ. ಈ ವಿಷಯದಲ್ಲಿ ಮಾತನಾಡುವುದು ನಂಗೆ ಇಷ್ಟ ಇಲ್ಲ ಎಂದಿದ್ದಾರೆ.
ದೆಹಲಿ, ಫೆಬ್ರುವರಿ 2: ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ಅವರು ಪ್ರತ್ಯೇಕ ರಾಷ್ಟ್ರ ಮಾಡುವ ಬಗ್ಗೆ ಮಾತನಾಡಿದ್ದಾರೆ. ಅವರು ವ್ಯಕ್ತಿಗತವಾಗಿ ಹೇಳಿರಬಹುದು, ಅದು ಅವರ ಪಕ್ಷದ ನಿರ್ಣಯ ಅಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ಡಿ ದೇವೇಗೌಡ (HD DeveGowda) ಹೇಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವ ಉದ್ದೇಶದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ. ಈ ವಿಷಯದಲ್ಲಿ ಮಾತನಾಡುವುದು ನಂಗೆ ಇಷ್ಟ ಇಲ್ಲ. ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್. ದೇಶದಲ್ಲಿ ಸರ್ಕಾರ ನಡೆಸಿದೆ. ಅನ್ಯಾಯವಾದರೆ ನ್ಯಾಯ ಬಜೆಟ್ ಚರ್ಚೆ ವೇಳೆ ಮಾತನಾಡುತ್ತೇವೆ. ಅದರಲ್ಲೇನು ಇಲ್ಲ ಎಂದು ಹೇಳಿದ್ದಾರೆ.
ಕೃಷಿ ನೀರಾವರಿ ಬೇರೆ ಕಡೆ ಹೆಚ್ಚು ಅನುದಾನ ಕೊಡಬೇಕು ಅಂತಾ ನಾನು ಮಾತನಾಡಿದ್ದೇನೆ. ಬಹಳಷ್ಟು ಕಠುವಾಗಿ ಮಾತನಾಡಿದ್ದೇನೆ. ಆದರೆ ಪ್ರತ್ಯೇಕ ದೇಶದ ಬಗ್ಗೆ ಮಾತನಾಡಿಲ್ಲ. ಒಂದು ರಾಷ್ಟ್ರೀಯ ಪಕ್ಷದ ಸದಸ್ಯರಾಗಿ ಯಾವ ಆಯಾಮದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಇದಕ್ಕಿಂತ ಹೆಚ್ಚು ನಾನು ಮಾತನಾಡಬಾರದು ಎಂದಿದ್ದಾರೆ.
ಅಖಂಡ ಭಾರತ ಇರಬೇಕು, ಅದರಲ್ಲಿ ಎರಡು ಮಾತಿಲ್ಲ: ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ಅಖಂಡ ಭಾರತ ಇರಬೇಕು, ಅದರಲ್ಲಿ ಎರಡು ಮಾತಿಲ್ಲ. ಡಿ.ಕೆ.ಸುರೇಶ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ದಕ್ಷಿಣ ಭಾರತ ರಾಜ್ಯಗಳಿಗೆ ಸರಿಯಾದ ಅನುದಾನ ಸಿಗುತ್ತಿಲ್ಲ. ಮೋದಿ ಸರ್ಕಾರ ಬಂದಾಗಿನಿಂದ ಈ ತಾರತಮ್ಯ ಆಗುತ್ತಿದೆ. ತಾರತಮ್ಯ ಮಾಡಬಾರದು ಎಂಬರ್ಥದಲ್ಲಿ ಹೇಳಿದ್ದಾರೆ ಎಂದರು.
ಇದನ್ನೂ ಓದಿ: ಇದು ಜನರ ಭಾವನೆ, ತಮ್ಮ ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಂಸದ ಡಿಕೆ ಸುರೇಶ್
ಭಾರತ ದೇಶ ಭವ್ಯ ಇತಿಹಾಸ ಇರುವ ದೇಶ. ಇದು ಒಂದೇ ಆಗಿರಬೇಕು. ಅಶೋಕ್ ಸುಮ್ಮನೇ ಬೀದಿ ಬೀದಿ ಹೋಗಿ ನಮ್ಮ ವಿರುದ್ದ ಮಾತಾಡುತ್ತಾರೆ. ಒಂದು ರೂಪಾಯಿ ಕೇಂದ್ರದಿಂದ ಇವರಿಗೆ ಅನುದಾನ ತರುವುದಕ್ಕೆ ಆಗುತ್ತಿಲ್ಲ. ಒಂದು ನಯಾಪೈಸೆ ಕೊಡೋಕಾಗದೆ ಇದ್ದೋರು ಬಿಜೆಪಿ ಎಂಪಿಗಳಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.
ಭಾರತ್ ಜೋಡೋ ಆಗದಿದ್ರೆ ಭಾರತ್ ತೋಡೋ ಅಂತಾರೆ: ವಿಧಾನಪರಿಷತ್ ಸದಸ್ಯ ರವಿಕುಮಾರ್
ಬಾಗಲಕೋಟೆಯಲ್ಲಿ ವಿಧಾನಪರಿಷತ್ ಸದಸ್ಯ ರವಿಕುಮಾರ್ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಪಕ್ಷದವರಿಗೆ ಬುದ್ಧಿಭ್ರಮಣೆ ಆಗಿದೆಯಾ ಅನಿಸುತ್ತಿದೆ. ಒಂದು ಕಡೆ ರಾಹುಲ್ ಗಾಂಧಿ ಭಾರತ ಜೋಡೋ ಅಂತಾ ಹೇಳುತ್ತಾರೆ. ಇನ್ನೊಂದು ಕಡೆ ಸಂಸದ ಡಿ.ಕೆ.ಸುರೇಶ್ ಭಾರತ್ ತೋಡೋ ಅಂತಾರೆ. ಭಾರತ್ ಜೋಡೋ ಆಗದಿದ್ದರೆ ಭಾರತ್ ತೋಡೋ ಅಂತಾರೆ.
ಇದನ್ನೂ ಓದಿ: ಡಿಕೆ ಸುರೇಶ್ ದೇಶ ವಿಭಜನೆ ಹೇಳಿಕೆ: ಕಲ್ಲು ಒಡೆದುಕೊಂಡಿದ್ದವರನ್ನು ಲೋಕಸಭೆಗೆ ಕಳುಹಿಸಿದರೆ ಇನ್ನೇನಾಗುತ್ತೆ ಎಂದ ಕುಮಾರಸ್ವಾಮಿ
ಭಾರತ್ ತೋಡೋ ಮಾಡಿಲ್ಲ ಅಂತಲ್ಲ ಮಾಡಿದ್ದಾರೆ. ಹಿಂದೂಸ್ತಾನವನ್ನು ಪಾಕಿಸ್ತಾನ ಮಾಡಲು ಹೊರಟಿದ್ದು ಕಾಂಗ್ರೆಸ್. ಕಾಶ್ಮೀರ ದೂರ ಇಟ್ಟಿದ್ಯಾರು?, ಬಾಂಗ್ಲಾದೇಶ ನಿರ್ಮಾಣ ಮಾಡಿದ್ಯಾರು? ಕಾಂಗ್ರೆಸ್ ಅಂದ್ರೆ ತೋಡೋ, ರಾಷ್ಟ್ರ ಒಡೆಯಲು ಹೊರಟಿದ್ಯಾರು ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.