Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇತಗಾನಹಳ್ಳಿ ಭೂ ಒತ್ತುವರಿ ಆರೋಪ: ನೋಟಿಸ್‌ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಕುಮಾರಸ್ವಾಮಿ

ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹಾಗೂ ಕುಟುಂಬಸ್ಥರು ರಾಮನಗರದ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕೋರ್ಟ್​​ ಒತ್ತುವರಿ ತೆರವು ಮಾಡುವಂತೆ ಸೂಚಿಸಿದೆ. ಅದರಂತೆ ಕಂದಾಯ ಇಲಾಖೆ ಅಧಿಕಾರಿಗಳು ಒತ್ತುವರಿ ಕಾರ್ಯ ತೆರವು ನಡೆಸಿದ್ದು, ಈ ಸಂಬಂಧ ತಹಶೀಲ್ದಾರ್ ನೋಟಿಸ್‌ ಜಾರಿಗೊಳಿಸಿದೆ. ಇದೀಗ ಈ ನೋಟಿಸ್​​ ವಿರುದ್ಧ ಕುಮಾರಸ್ವಾಮಿ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

ಕೇತಗಾನಹಳ್ಳಿ ಭೂ ಒತ್ತುವರಿ ಆರೋಪ: ನೋಟಿಸ್‌ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಕುಮಾರಸ್ವಾಮಿ
Hd Kumaraswamy
Follow us
Ramesha M
| Updated By: ರಮೇಶ್ ಬಿ. ಜವಳಗೇರಾ

Updated on: Mar 24, 2025 | 7:59 PM

ಬೆಂಗಳೂರು, (ಮಾರ್ಚ್​ 24): ಕೇತಗಾನಹಳ್ಳಿಯಲ್ಲಿ (kethaganahalli) ಸರ್ಕಾರಿ ಭೂಮಿ ಒತ್ತುವರಿ ತೆರವು ಸಂಬಂಧ ತಹಶೀಲ್ದಾರ್ ನೀಡಿದ ನೋಟಿಸ್​ ವಿರುದ್ಧ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ (HD Kumaraswamy) ಅವರು ಹೈಕೋರ್ಟ್​​  (Karnataka high Court)ಮೆಟ್ಟಿಲೇರಿದ್ದು, ಕೋರ್ಟ್​​ ತಾತ್ಕಾಲಿಕ ರಿಲೀಫ್ ನೀಡಿದೆ. ಈ ಬಗ್ಗೆ ದಾಖಲೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಎಎಜಿ ಕಿರಣ್ ರೋಣ್ ಮನವಿ ಮಾಡಿದರು. ಬಳಿಕ ಕೋರ್ಟ್​​, ಮಾರ್ಚ್ 27ರವರೆಗೂ ಬಲವಂತದ ಕ್ರಮ ಕೈಗೊಳ್ಳುವುದಿಲ್ಲವೆಂದು ಹೇಳಿಕೆ ದಾಖಲಿಸಿಕೊಂಡು ವಿಚಾರಣೆಯನ್ನು ಮಾರ್ಚ್​​ 27ಕ್ಕೆ ನಿಗದಿಪಡಿಸಿದೆ. ಇದರಿಂದ ಕುಮಾರಸ್ವಾಮಿ ಕೊಂಚ ನಿರಾಳರಾಗಿದ್ದಾರೆ.

6 ಎಕರೆ ಒತ್ತುವರಿ ಸಂಬಂಧ ನೋಟಿಸ್ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ಹೈಕೋರ್ಟ್ ಪೀಠ ವಿಚಾರಣೆ ನಡೆಸಿದ್ದು, ಕುಮಾರಸ್ವಾಮಿ ಪರ ಹಿರಿಯ ವಕೀಲ ಉದಯ್ ಹೊಳ್ಳ ಹಾಗೂ ಎ.ವಿ.ನಿಶಾಂತ್ ವಾದ ಮಂಡಿಸಿದ್ದು, ಅಧಿಕಾರ ವ್ಯಾಪ್ತಿ ಇಲ್ಲದಿದ್ದರೂ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ. 1985ರಲ್ಲಿ ಕ್ರಯಪತ್ರವಾಗಿರುವ ಜಮೀನಿಗೆ ಈಗ ನೋಟಿಸ್ ನೀಡಲಾಗಿದೆ. ಹಾಗೇ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ ಎಂದು ವಾದ ಮಂಡಿಸಿದರು.

ಇದನ್ನೂ ಓದಿ: ಕೇತಗಾನಹಳ್ಳಿ ಭೂ ಒತ್ತುವರಿ ತೆರವು ಕಾರ್ಯಾಚರಣೆ: ಹೆಚ್​ಡಿ ಕುಮಾರಸ್ವಾಮಿ ಮುಂದಿನ ಪ್ಲಾನ್ ಹೀಗಿದೆಯಂತೆ!

ಇನ್ನು ಕುಮಾರಸ್ವಾಮಿ ಪರ ವಕೀಲರ ವಾದಕ್ಕೆ ಎಎಜಿ ಕಿರಣ್ ರೋಣ್ ಆಕ್ಷೇಪ ವ್ಯಕ್ತಪಡಿಸಿದ್ದು, 2025ರ ತಿದ್ದುಪಡಿಯನ್ವಯ ತಹಶೀಲ್ದಾರ್‌ಗೆ ಅಧಿಕಾರವಿದೆ. ಈ ಬಗ್ಗೆ ದಾಖಲೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮನವಿ ಕೋರ್ಟ್​ಗೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಕೋರ್ಟ್​, ಮಾರ್ಚ್ 27ರವರೆಗೂ ಬಲವಂತದ ಕ್ರಮ ಕೈಗೊಳ್ಳುವುದಿಲ್ಲವೆಂದು ಹೇಳಿಕೆ ದಾಖಲಿಸಿ ಮಾರ್ಚ್​ 27ಕ್ಕೆ ವಿಚಾರಣೆ ಮುಂದೂಡಿದೆ.

ಇದನ್ನೂ ಓದಿ
Image
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
Image
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
Image
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
Image
ಕಾನೂನು ಬಾಹಿರವಾಗಿ ಭೂಮಿ ಇದ್ರೆ ವಶಪಡಿಸಿಕೊಳ್ಳಿ: ಕುಮಾರಸ್ವಾಮಿ ಪತ್ರ

ಭೂಮಿ ಒತ್ತುವರಿ ತೆರವಿಗೆ ನೋಟಿಸ್ ನೀಡಿದ್ದ ತಹಶೀಲ್ದಾರ್

ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 104ರಡಿ ಒತ್ತುವರಿ ತೆರವು ನೋಟಿಸ್‌ಗಳನ್ನು ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ 11 ಜನ ಭೂ ಮಾಲೀಕರಿಗೆ ಜಾರಿ ಮಾಡಲಾಗಿದ್ದು, ”ಏಳು ದಿನಗಳ ಗಡುವಿನೊಳಗೆ ಉತ್ತರ ನೀಡಬೇಕು. ಒಂದು ವೇಳೆ ಉತ್ತರ ನೀಡಲು ವಿಫಲರಾದಲ್ಲಿ ಕಾನೂನು ಪ್ರಕಾರ ತೆರವು ಕಾರ್ಯಾಚರಣೆ ಹಾಗೂ ದಂಡ ವಿಧಿಸಲಾಗುವುದು,” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು.

ಕೇತಗಾನಹಳ್ಳಿಯ ಸರ್ವೆ ನಂಬರ್‌ 7, 8, 9, 16/32 ಹಾಗೂ 79ರಲ್ಲಿರುವ ಸರಕಾರಿ ಜಮೀನಿನಲ್ಲಿ ನೀವು ಅನಧಿಕೃತ ಒತ್ತುವರಿ ಮಾಡಿಕೊಂಡಿದ್ದೀರಿ. ಆ ಜಮೀನು ನಿಮ್ಮ ಸ್ವಾಧೀನದಲ್ಲಿರುವುದರಿಂದ ಏಕೆ ನಿಮ್ಮಿಂದ ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ದಂಡವನ್ನು ವಸೂಲಿ ಮಾಡಬಾರದು? ಅಲ್ಲದೆ, ಈ ಜಮೀನಿಗೆ ಅನಧಿಕೃತ ಪ್ರವೇಶಿಸಿ ಒತ್ತುವರಿ ಮಾಡಿರುವುದಕ್ಕೆ ಕ್ರಿಮಿನಲ್‌ ಕೇಸ್‌ ಏಕೆ ದಾಖಲು ಮಾಡಬಾರದು ಎಂಬುದಕ್ಕೆ ಸಮಜಾಯಿಷಿ ನೀಡುವುದರ ಜತೆಗೆ ಅಗತ್ಯ ದಾಖಲೆಗಳಿದ್ದಲ್ಲಿ ಸಲ್ಲಿಸಿ. ಇಲ್ಲವಾದಲ್ಲಿ ಕಾನೂನು ರೀತ್ಯ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ