Heatwave Advisory: ಉಷ್ಣಗಾಳಿಯಿಂದ ರಕ್ಷಿಸಿಕೊಳ್ಳಲು ಏನೇನು ಮಾಡಬೇಕು? ಕರ್ನಾಟಕ ಆರೋಗ್ಯ ಇಲಾಖೆ ಮಾರ್ಗಸೂಚಿ ಇಲ್ಲಿದೆ
ರಾಜ್ಯದಾದ್ಯಂತ ಬೇಸಿಗೆಯ ಬೇಗೆ ಆರಂಭವಾಗಿದೆ. ಬಿಸಿಗಾಳಿಯ ತೀವ್ರತೆ ಹೆಚ್ಚಾಗಲು ಶುರುವಾಗಿದೆ. ಮುಂದಿನ ದಿನಗಳಲ್ಲಿ ಬಿಸಿ ಗಾಳಿ ಹಾಗೂ ಬಿಸಿಲಿನ ತೀವ್ರತೆಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಏನೇನು ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂಬ ಬಗ್ಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರಲ್ಲಿರುವ ಸಲಹೆ ಸೂಚನೆಗಳ ವಿವರ ಇಲ್ಲಿದೆ.
ಬೆಂಗಳೂರು, ಮಾರ್ಚ್ 4: ರಾಜ್ಯದಲ್ಲಿ ಬಿಸಿಲ ತಾಪ ಮತ್ತು ಬಿಸಿ ಗಾಳಿಗೆ (Heatwave) ಸಂಬಂಧಪಟ್ಟಂತೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Health Department) ಸಾರ್ವಜನಿಕ ಆರೋಗ್ಯ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಶಿಶುಗಳು ಮತ್ತು ಚಿಕ್ಕ ಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ಮಾಡುವ ಜನರು, ಮಾನಸಿಕ ಮತ್ತು ದೈಹಿಕ ಕಾಯಿಲೆಗಳು, ವಿಶೇಷವಾಗಿ ಹೃದ್ರೋಗ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ಜನರು ಮತ್ತು ತಂಪಾದ ವಾತಾವರಣದಿಂದ ಬಿಸಿ ವಾತಾವರಣಕ್ಕೆ ಬರುವ ಜನರು ಸೇರಿದಂತೆ ಆರೋಗ್ಯದ ವಿಚಾರದಲ್ಲಿ ದುರ್ಬಲರಾಗಿರುವವರು ಹೆಚ್ಚಿನ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ಮಾರ್ಗಸೂಚಿಯಲ್ಲಿ ಇನ್ನೂ ಏನೇನಿದೆ ಸಲಹೆ?
ದೇಹದಲ್ಲಿ ನೀರಿನ ಅಂಶ ಹೆಚ್ಚಿರುವಂತೆ ನೋಡಿಕೊಳ್ಳಬೇಕು. ಹೊರಾಂಗಣಗಳಲ್ಲಿ ಕೆಲಸ ಮಾಡುವವರು ಒಆರ್ಎಸ್ನಂಥ ಪಾನೀಯಗಳನ್ನು ಸೇವಿಸುವುದು ಉತ್ತಮ. ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ ಅಥವಾ ಲಸ್ಸಿ ಮತ್ತು ಹಣ್ಣಿನ ರಸವನ್ನು ಸ್ವಲ್ಪ ಉಪ್ಪು ಸೇರಿಸಿ ಸೇವಿಸಲು ಸಲಹೆ ನೀಡಲಾಗಿದೆ. ಹೆಚ್ಚಿನ ನೀರಿನ ಅಂಶವಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಸೂಚಿಸಲಾಗಿದೆ. ತಿಳಿ ಬಣ್ಣದ ಸಡಿಲವಾದ ಹತ್ತಿ ಉಡುಪುಗಳನ್ನು ಧರಿಸುವುದರ ಜೊತೆಗೆ, ನೇರ ಸೂರ್ಯನ ಬೆಳಕಿಗೆ ಮೈ ಒಡ್ಡಿಕೊಳ್ಳುವುದನ್ನು ಆದಷ್ಟು ತಪ್ಪಿಸಿ. ಬಿಸಿಲಿನಲ್ಲಿ ಹೋಗಲೇಬೇಕಾದ ಸಂದರ್ಭದಲ್ಲಿ ಜನರು ತಲೆಯನ್ನು ಮುಚ್ಚಿಕೊಳ್ಳಲು ಮತ್ತು ಗಾಳಿಯಾಡುವ ಪಾದರಕ್ಷೆಗಳನ್ನು ಧರಿಸಲು ಸಲಹೆ ನೀಡಲಾಗಿದೆ.
ಹಗಲಿನ ಹೊರಾಂಗಣ ಚಟುವಟಿಕೆಗಳನ್ನು ಸೀಮಿತಗೊಳಿಸುವ ಮೂಲಕ ಜನರು ಒಳಾಂಗಣದಲ್ಲಿ ಮತ್ತು ಚೆನ್ನಾಗಿ ಗಾಳಿ ಬರುವ ಹಾಗೂ ತಂಪಾದ ಸ್ಥಳಗಳಲ್ಲಿ ಉಳಿಯಲು ಸಲಹೆ ನೀಡಲಾಗಿದೆ.
ಒಬ್ಬಂಟಿಯಾಗಿ ವಾಸಿಸುವ ವೃದ್ಧರು ಅಥವಾ ಅನಾರೋಗ್ಯ ಪೀಡಿತರನ್ನು ಮೇಲ್ವಿಚಾರಣೆ ಮಾಡಬೇಕು. ಅಂಥವರ ಆರೋಗ್ಯದ ಬಗ್ಗೆ ಪ್ರತಿದಿನವೂ ಕಾಳಜಿ ವಹಿಸಬೇಕು ಎಂದು ಇಲಾಖೆಯು ಸಂಬಂಧಪಟ್ಟ ಕಾರ್ಯಕರ್ತರಿಗೆ ಸೂಚಿಸಿದೆ.
ಈ ಮಧ್ಯೆ, ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವುದು ಹವಾಮಾನ ಇಲಾಖೆ ವರದಿಯಿಂದ ತಿಳಿದುಬಂದಿದೆ. ಬಾಗಲಕೋಟೆಯಲ್ಲಿ ಅತ್ಯಂತ ಗರಿಷ್ಠ ಉಷ್ಣಾಂಶ 38.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಅತ್ಯಂತ ಗರಿಷ್ಠ ಉಷ್ಣಾಂಶ, ಚಾಮರಾಜನಗರದಲ್ಲಿ ಅತ್ಯಂತ ಕನಿಷ್ಠ ತಾಪಮಾನ ದಾಖಲು
ಮತ್ತೊಂದೆಡೆ, ಬರ ಪರಿಸ್ಥಿತಿಯ ಪರಿಣಾಮ ಬೇಸಗೆ ಆರಂಭದ ವೇಳೆಯೇ ಈ ಬಾರಿ ರಾಜ್ಯದ ಹಲವೆಡೆ ನೀರಿನ ಕೊರತೆ ಉಂಟಾಗಿದೆ. ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಕೆಆರ್ಎಸ್, ಕಬಿನಿ, ಕೃಷ್ಣಾ, ತುಂಗಭದ್ರಾ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:34 am, Mon, 4 March 24