AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ ಯುವಕನ ಕೈಯಲ್ಲಿ ಅರಳಿದ ರಾಮಲಲ್ಲಾ ವಿಗ್ರಹ, ಗಮನ ಸೆಳೆಯುತ್ತಿರೋ ಮಣ್ಣಿನ ಮೂರ್ತಿ ಇಲ್ಲಿದೆ

ಧಾರವಾಡದ ಯುವ ಕಲಾವಿದ ರೋಹಿತ್ ಹಿರೇಮಠ ತನ್ನದೇ ಕಲ್ಪನೆಯಲ್ಲಿ 15 ಇಂಚು ಎತ್ತರದ ರಾಮಲಲ್ಲಾ ವಿಗ್ರಹವನ್ನು ನಿರ್ಮಿಸಿದ್ದಾರೆ. ನನಗೆ ಮೊದಲಿನಿಂದಲೂ ರಾಮ ಮಂದಿರದ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಇದೇ ಕಾರಣಕ್ಕೆ ನನ್ನ ಮನಸ್ಸಿನಲ್ಲಿಯೂ ಐದು ವರ್ಷದ ರಾಮಲಲ್ಲಾನ ಚಿತ್ರಣ ಮೂಡಿತು.

ಧಾರವಾಡ ಯುವಕನ ಕೈಯಲ್ಲಿ ಅರಳಿದ ರಾಮಲಲ್ಲಾ ವಿಗ್ರಹ, ಗಮನ ಸೆಳೆಯುತ್ತಿರೋ ಮಣ್ಣಿನ ಮೂರ್ತಿ ಇಲ್ಲಿದೆ
ಧಾರವಾಡ ಯುವಕನ ಕೈಯಲ್ಲಿ ಅರಳಿದ ರಾಮಲಲ್ಲಾ ವಿಗ್ರಹ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on: Jan 18, 2024 | 12:44 PM

Share

ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಇದೇ ವೇಳೆ ಧಾರವಾಡದ ಯುವ ಕಲಾವಿದನೊಬ್ಬ ತನ್ನದೇ ಕಲ್ಪನೆಯಲ್ಲಿ ಮಣ್ಣಿನಲ್ಲಿ ರಾಮಲಲ್ಲಾ ವಿಗ್ರಹವನ್ನು ತಯಾರಿಸಿದ್ದಾನೆ. ಆ ವಿಗ್ರಹ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಈಗಾಗಲೇ ಬೆಂಗಳೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ರಾಮಲಲ್ಲಾ ವಿಗ್ರಹವೇ ಅಂತಿಮವಾಗಿದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ಇದುವರೆಗೂ ಅದರ ಫೋಟೋ ಮಾತ್ರ ಎಲ್ಲಿಯೂ ಬಂದಿಲ್ಲ. ಅರುಣ್ ತನ್ನದೇ ಕಲ್ಪನೆಯಲ್ಲಿ ವಿಗ್ರಹವನ್ನು ಕೆತ್ತಿದ್ದು, ಅದು ಹೇಗಿದೆಯೋ ಅನ್ನೋ ಕುತೂಹಲ ದೇಶಾದ್ಯಂತ ಮನೆ ಮಾಡಿದೆ. ಇದೇ ವೇಳೆ ಧಾರವಾಡದ ಯುವ ಕಲಾವಿದನೊಬ್ಬ ತನ್ನದೇ ಕಲ್ಪನೆಯಲ್ಲಿ ರಾಮಲಲ್ಲಾನ ವಿಗ್ರಹವನ್ನು ಮಣ್ಣಿಯಲ್ಲಿ ತಯಾರಿಸಿ, ಎಲ್ಲರ ಗಮನ ಸೆಳೆದಿದ್ದಾನೆ.

ಇದೀಗ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯೂ ಆಗಲಿದೆ. ಈ ಸಂದರ್ಭದಲ್ಲಿ ಧಾರವಾಡದ ಯುವ ಕಲಾವಿದ ರೋಹಿತ್ ಹಿರೇಮಠ ತನ್ನದೇ ಕಲ್ಪನೆಯಲ್ಲಿ 15 ಇಂಚು ಎತ್ತರದ ರಾಮಲಲ್ಲಾ ವಿಗ್ರಹವನ್ನು ನಿರ್ಮಿಸಿದ್ದಾರೆ.

ಧಾರವಾಡ ನಗರದ ಕೆಲಗೇರಿ ಬಡಾವಣೆಯ ಯುವ ಕಲಾವಿದ ರೋಹಿತ್ ಹಿರೇಮಠ, ಸರಕಾರಿ ಕಲಾ ಗ್ಯಾಲರಿಯಲ್ಲಿ ಬ್ಯಾಚುಲರ್ ಆಫ್ ವಿಶುವಲ್ ಆರ್ಟ್ಸ್​​​ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ರೋಹಿತ್ ತಂದೆ ಮಂಜುನಾಥ ಹಿರೇಮಠ ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಕರು. ತಂದೆಯಂತೆಯೇ ಮಗನು ಕೂಡ ಕಲಾವಿದನೇ. ಈಗಾಗಲೇ ಅನೇಕ ಕಲಾಕೃತಿ ಮಾಡಿರೋ ರೋಹಿತ್ಗೆ ರಾಮನೆಂದರೆ ತುಂಬಾನೇ ಭಕ್ತಿ. ಇದೇ ಕಾರಣಕ್ಕೆ ಐವತ್ತೊಂದು ಗಂಟೆಗಳ ಕಾಲ ಕೆಲಸ ಮಾಡಿ, 15 ಇಂಚಿನ ರಾಮಲಲ್ಲಾ ವಿಗ್ರಹವನ್ನು ತಯಾರಿಸಿ, ಎಲ್ಲರನ್ನೂ ಚಕಿತಗೊಳಿಸಿದ್ದಾನೆ.

ನಿತ್ಯವೂ ಸುಮಾರು ಎರಡು ಗಂಟೆ ಕಾಲ ಕೆಲಸ ಮಾಡಿ ಈ ವಿಗ್ರಹವನ್ನು ನಿರ್ಮಿಸಿದ್ದಾನೆ. ಈ ರಾಮಲಲ್ಲಾ ವಿಗ್ರಹದ ಯಾವುದೇ ಫೋಟೋ ಎಲ್ಲಿಯೂ ಬಾರದೇ ಇರೋದ್ರಿಮದ ಐದು ವರ್ಷದ ಬಾಲ ರಾಮನ ವಿಗ್ರಹದ ಕಲ್ಪನೆಯನ್ನು ಮಾಡಿಕೊಂಡು ಈ ವಿಗ್ರಹದ ನಿರ್ಮಾಣ ಮಾಡಿದ್ದಾನೆ. ಈ ವಿಗ್ರಹದ ಹಿಂಭಾಗದಲ್ಲಿ ಪ್ರಭಾವಳಿ ಇದ್ದು, ಶ್ರೀರಾಮ ಸೂರ್ಯವಂಶದವನಾಗಿದ್ದರಿಂದ ಅದರಲ್ಲಿ ಸೂರ್ಯನ ಚಿತ್ರಣವಿದೆ. ಇನ್ನು ರಾಮಲಲ್ಲಾ ವಿಗ್ರಹ ಕಮಲದ ಪೀಠದ ಮೇಲೆ ನಿಂತಿದ್ದು, ಈ ಪೀಠವನ್ನು ಆರಂಭಿಸೋವಾಗ ಅದರಲ್ಲಿ ಅಯೋಧ್ಯೆಯ ಅಕ್ಷತೆಯನ್ನು ಹಾಕಲಾಗಿದೆ.

ಈ ಮುಂಚೆ ರೋಹಿತ್ ಹಿರೇಮಠ ಬೇಲೂರಿನ ದರ್ಪಣ ಸುಂದರಿ ಶಿಲಾಬಾಲಕಿ, ಹಂಪೆಯ ಕಲ್ಲಿನ ರಥ ಸೇರಿದಂತೆ ಅನೇಕ ಕಲಾಕೃತಿಗಳನ್ನು ನಿರ್ಮಾಣ ಮಾಡಿದ್ದಾನೆ. ಅವು ಸಾಕಷ್ಟು ಜನಪ್ರಿಯ ಕೂಡ ಆಗಿದ್ದವು. ಇದೀಗ ಅಂಥದ್ದೇ ಮತ್ತೊಂದು ಕಲಾಕೃತಿ ನಿರ್ಮಾಣ ಮಾಡೋ ಮೂಲಕ ಗಮನ ಸೆಳೆದಿದ್ದಾನೆ. ಅದರಲ್ಲೂ ಈ ರಾಮಲಲ್ಲಾ ವಿಗ್ರಹ ತಯಾರಿಸೋದು ಅಷ್ಟು ಸುಲಭವಾಗಿರಲಿಲ್ಲ.ಆದರೂ ತನ್ನದೇ ಕಲ್ಪನೆಯಲ್ಲಿ ಇಂಥದ್ದೊಂದು ವಿಗ್ರಹ ತಯಾರಿಸಿದ್ದು, ಎಲ್ಲರಿಗೂ ಅಚ್ಚರಿ ಜೊತೆಗೆ ಸಂತಸ ಮೂಡಿಸಿದ್ದಂತೂ ಸತ್ಯ.

ಇನ್ನು ಈ ಬಗ್ಗೆ ಟಿವಿ 9 ಡಿಜಿಟಲ್ ಜೊತೆಗೆ ಮಾತನಾಡಿದ ಕಲಾವಿದ ರೋಹಿತ್ ಹಿರೇಮಠ, ನನಗೆ ಮೊದಲಿನಿಂದಲೂ ಈ ರಾಮ ಮಂದಿರದ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಅಲ್ಲದೇ ಅಲ್ಲಿ ಪ್ರತಿಷ್ಠಾಪನೆಗೊಳ್ಳಲಿರೋ ರಾಮನ ವಿಗ್ರಹದ ಬಗ್ಗೆಯೂ ಆಸಕ್ತಿ ಇತ್ತು. ಇದೇ ವೇಳೆ ರಾಮಲಲ್ಲಾ ವಿಗ್ರಹದ ಬಗ್ಗೆಯೂ ಸಾಕಷ್ಟು ಚರ್ಚೆ ನಡೆದಿದ್ದವು. ಇದೇ ಕಾರಣಕ್ಕೆ ನನ್ನ ಮನಸ್ಸಿನಲ್ಲಿಯೂ ಐದು ವರ್ಷದ ರಾಮಲಲ್ಲಾನ ಚಿತ್ರಣ ಮೂಡಿತು.

ಇದನ್ನು ತಂದೆಯವರಿಗೆ ಹೇಳಿದಾಗ ಉತ್ಸಾಹ ತುಂಬಿದರು. ಅಲ್ಲದೇ ಅವರೂ ಕಲಾವಿದರಾಗಿದ್ದರಿಂದ ಕೆಲವು ಸಲಹೆಗಳನ್ನು ನೀಡಿದರು. ಬಳಿಕವಷ್ಟೇ ಸುಮಾರು ಐವತ್ತೊಂದು ಗಂಟೆಗಳ ಕಾಲ ಕೆಲಸ ಮಾಡಿ, ಈ ಮಣ್ಣಿನ ವಿಗ್ರಹವನ್ನು ನಿರ್ಮಿಸಿದ್ದೇನೆ. ಅದನ್ನು ನೋಡಿ ನನಗೆ ಇದೀಗ ಸಾಕಷ್ಟು ಸಮಾಧಾನವಾಗಿದೆ. ಈ ವಿಗ್ರಹದ ಮೂಲಕ ನಾನು ಶ್ರೀರಾಮನನ್ನು ನೆನೆಯುತ್ತೇನೆ ಅನ್ನುತ್ತಾರೆ.

ಇನ್ನು ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ರೋಹಿತ್ ತಂದೆ ಮಂಜುನಾಥ ಹಿರೇಮಠ, ಈಗಾಗಲೇ ಇಂಥ ಹಲವಾರು ಕಲಾಕೃತಿಗಳನ್ನು ನಿರ್ಮಿಸಿದ್ದರೂ ಇದು ಅದ್ಭುತವಾಗಿದೆ. ಏಕೆಂದರೆ ಈ ಕಲಾಕೃತಿಯಲ್ಲಿ ಭಕ್ತಿಯೂ ಸೇರಿದೆ. ಈ ಮುಂಚೆ ಹಂಪೆಯ ಕಲ್ಲಿನ ರಥ, ಬೇಲೂರು ಶಿಲಾಬಾಲಕಿಯ ಕಲಾಕೃತಿಗಳನ್ನು ತಯಾರಿಸಿದ್ದ. ಅವುಗಳಿಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಬಂದಿದ್ದವು.

ಆದರೆ ಬಾಲರಾಮನ ವಿಗ್ರಹ ತಯಾರಿಕೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಅಲ್ಲದೇ ರಾಮಲಲ್ಲಾನನ್ನು ಕಲ್ಪನೆ ಮಾಡಿಕೊಂಡು ತಯಾರಿಸೋದು ಕಷ್ಟಕರ. ಶ್ರೀರಾಮಚಂದ್ರನೇ ಅವನಿಗೆ ಮಾರ್ಗದರ್ಶನ ನೀಡಿ, ತನ್ನ ವಿಗ್ರಹವನ್ನು ತಾನೇ ತಯಾರಿಸಿಕೊಂಡಿದ್ದಾನೆ ಅನ್ನಿಸುತ್ತೆ. ಇದಕ್ಕಿಂತ ದೊಡ್ಡ ಭಾಗ್ಯ ನಮಗೆ ಏನಿದೆ ಹೇಳಿ ಅಂತಾ ಕೇಳುತ್ತಾರೆ.