ಚುನಾವಣಾ ಹೊತ್ತಲ್ಲಿ ಕಾಫಿನಾಡಲ್ಲಿ ಮತ್ತೆ ಮುನ್ನೆಲೆಗೆ ಬಂದ ಧರ್ಮ ದಂಗಲ್
ಮಂಗಳೂರು ಮಳಲಿ ದೇವಸ್ಥಾನ ವಿವಾದ. ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಗಲಾಟೆ ಬಳಿಕ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಫಿನಾಡಲ್ಲಿ ಮತ್ತೆ ಧರ್ಮ ದಂಗಲ್ ಮುನ್ನೆಲೆಗೆ ಬಂದಿದೆ.
ಚಿಕ್ಕಮಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಕಾಫಿನಾಡು ಚಿಕ್ಕಮಗಳೂರು( Chikkamagaluru) ಮತ್ತೆ ಧರ್ಮ ದಂಗಲ್ ಮುನ್ನೆಲೆಗೆ ಬಂದಿದೆ. ಶೃಂಗೇರಿ ತಾಲೂಕಿನ ಕಿಗ್ಗಾ ಋಷ್ಯಶೃಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ(sringeri kigga rishya shrungeshwara fair) ಅನ್ಯ ಕೋಮಿನ ವ್ಯಾಪಾರಸ್ಥರಿಗೆ ನಿರ್ಬಂಧ ಹೇರುವಂತೆ ಹಿಂದೂ ಸಂಘಟನೆಗಳು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿವೆ. ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಕಿಗ್ಗಾ ಋಷ್ಯಶೃಂಗೇಶ್ವರ ದೇವಾಲಯದಲ್ಲಿ ಇದೇ ಮಾರ್ಚ್ 19ರಂದು ಜಾತ್ರಾ ಮಹೋತ್ಸವ ನಡೆಯಲಿದೆ. ಅನ್ಯ ಕೋಮಿನವರು ಹೈಕೋರ್ಟ್ ಆದೇಶದ ಬಳಿಕವೂ ರಾಜ್ಯದಲ್ಲಿ ಬಂದ್ ಮಾಡಿ ಈ ಮಣ್ಣಿನ ಕಾನೂನಿಗೆ ಬೆಲೆ ಇಲ್ಲದಂತೆ ಮಾಡಿದ ಹಿನ್ನೆಲೆಯಲ್ಲಿ ಅನುಮತಿ ನೀಡಬಾರದು ಎಂದು ಮನವಿ ಮಾಡಿದೆ.
ಹಿಂದೂಗಳ ಜಾತ್ರೆ-ಸಭೆ, ಸಮಾರಂಭದಲ್ಲಿನ ವ್ಯಾಪಾರದಲ್ಲಿ ಬಂದ ಲಾಭವನ್ನು ದೇಶವಿರೋಧಿ ಚಟುವಟಿಕೆ ಬಳಸುತ್ತಾರೆಂಬ ಸಂದೇಹವಿದೆ. ಜೊತೆಗೆ ದೇವಾಲಯ ಹಾಗೂ ಹಳ್ಳಿಯ ಸೂಕ್ಷ್ಮ ವಿಚಾರಗನ್ನು ಗಮನಿಸುತ್ತಾರೆ. ಹಾಗಾಗಿ ನಮ್ಮ ಜಾತ್ರೆಗೆ ಅವರು ವ್ಯಾಪಾರಕ್ಕೆ ಬರುವುದು ಬೇಡವೆಂದು ನಿರ್ಬಂಧಿಸುವಂತೆ ಜಾಗೃತ ಹಿಂದೂ ಭಾಂದವರ ಹೆಸರಿನಲ್ಲಿ ಹಿಂದೂ ಸಂಘಟನೆ ಮುಖಂಡರು ತಹಶೀಲ್ದಾರ್‌ಗೆ ಮನವಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಪ್ರಮೋದ ಮುತಾಲಿಕ್ ಪ್ರತಿಕ್ರಿಯಿಸಿ, ಚೀನಿ ವಸ್ತು ಖರೀದಿ ಮಾಡಬೇಡಿ. ದೇಶಿ ವಸ್ತು ಖರೀದಿ ಮಾಡಿ. ಪಾಕಿಸ್ತಾನಕ್ಕಿಂತ ಚೀನಾ ಡೆಂಜರಸ್. ಹಿಂದುಗಳ ಜೊತೆ ವ್ಯವಹಾರ, ವ್ಯಾಪಾರ ಮಾಡಿ . ಗೋ ಹಂತಕರು ಸಂವಿಧಾನ ಕಾನೂನು ಉಲ್ಲಂಘಿಸಿ ಅಲ್ಲಾ ಅಂತ ಉದ್ಧಟತನ ಮೆರಿತಾರೆ ಅವರ ಜೊತೆ ವ್ಯವಹಾರ ಮಾಡಬೇಡಿ ಎಂದು ಕರೆ ನೀಡಿದರು.
ವಿವಾದ ಹುಟ್ಟುಹಾಕಿದ ದೇಗುಲ ಆಕಾರದ ದರ್ಗಾ..!
ಚಿಕ್ಕಮಗಳೂರು ತಾಲೂಕಿನ ಕಟ್ಟೆಗದ್ದೆ ಗ್ರಾಮದಲ್ಲಿರುವ ಹಜರತ್ ಸೈಯದ್ ಬೂದ್ ಶಾ ದರ್ಗಾ ಈ ಹಿಂದೆ ದೇವಾಲಯವಾಗಿತ್ತು ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಇಲ್ಲಿರುವುದು ಚಂದ್ರಮೌಳೇಶ್ವರ ದೇವಾಲಯ ಎಂದು ಹಿಂದೂಗಳು ಹೇಳುತ್ತಿದ್ದಾರೆ. ಇದಕ್ಕೆ ನೂರಾರು ವರ್ಷಗಳ ಪುರಾತನ ಇತಿಹಾಸವಿದೆ. ದೇವಾಲಯದ ಒಳಗೆ ಹಿಂದೂ ದೇವಾಲಯದ ಕುರುಹುಗಳು ಇವೆ. ದರ್ಗಾದ ಕಲ್ಲು ಕಂಬಗಳಲ್ಲಿ ಹೂವಿನ ಚಿತ್ರ ಇದೆ. ದರ್ಗಾ ಕೂಡ ದೇವಾಲಯದ ಮಾದರಿಯಲ್ಲೇ ಇದೆ. ಇದು ಹೇಗೆ ದರ್ಗಾವಾಗುತ್ತೆ ಎಂದು ಹಿಂದೂ ಸಂಘಟನೆಗಳು ಪ್ರಶ್ನೆ ಮಾಡಿವೆ. ಇದನ್ನು ಹಿಂದೂಗಳಿಗೆ ಮರಳಿಸಬೇಕೆಂದು ಆಗ್ರಹಿಸಿವೆ.
ಕಟ್ಟೆಗದ್ದೆ ಗ್ರಾಮದಲ್ಲಿ ಐದು ಶಿವನ ದೇವಾಲಯಗಳಿವೆ. ಆ ಐದರಲ್ಲಿ 4 ದೇವಾಲಯಗಳು ಪತ್ತೆಯಾಗಿವೆ. ಇನ್ನೊಂದು ಸಿಕ್ಕಿಲ್ಲ. ಅದೇ ಈ ಚಂದ್ರಮೌಳೇಶ್ವರ ದೇವಾಲಯ. ಆದ್ರೆ, ಅದನ್ನ ದರ್ಗಾ ಆಗಿ ಬದಲಾವಣೆ ಮಾಡಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಪ್ರಸ್ತುತ ವಕ್ಫ್ ಬೋರ್ಡ್ ಅದೀನದಲ್ಲಿರುವ ದರ್ಗಾದ ನವೀಕರಣಕ್ಕೆ ಸರ್ಕಾರದಿಂದ 8 ಲಕ್ಷ ಹಣ ಬಿಡುಗಡೆಯಾಗಿದೆ. ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಹಿಂದೂ ಸಂಘಟನೆಗಳು ಜಿಲ್ಲಾಡಳಿತಕ್ಕೆ ಆಗ್ರಹಿಸಿವೆ. ಹಿಂದೂ ಸಂಘಟನೆಗಳ ಎಚ್ಚರಿಕೆ ಬೆನ್ನಲ್ಲೇ ದರ್ಗಾದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ವಿವಾದದ ಶುರುವಾಗಿದ್ರಿಂದ ದರ್ಗಾ ಕಮಿಟಿ ಸಭೆ ನಡೆಸಿದ್ದು, ದಾಖಲೆ ಇದ್ರೆ ನೀಡಲಿ ಅಂತ ಮುಸ್ಲಿಂ ಸಮುದಾಯದ ಮುಖಂಡರು ಹೇಳಿದ್ದಾರೆ.